ಕೈಚಾಚಿ ಕರೆದನು ಹೂಗಾರ, ಕೊಂಡಾಡಿ ನನ್ನ ಅಂದವ;
ಮಾರಿದನು ಮರುದಿನ ದುಡ್ಡಿಗೆ, ಕೇಳದೆ ನನ್ನ ಮನವ.

ಕೊಂಡನು ಬಣ್ಣ ನೋಡಿ, ಎಷ್ಟು ಅಮೋಘವೆಂದು ಒಬ್ಬ ಭಕ್ತ;
ಅರ್ಪಿಸಿದನು ಕಣ್ಮುಚ್ಚಿ ಕಲ್ಲಿಗೆ , ಕುರುಡನಾಗಿ ತಿರುಗಿ ನೋಡದೆ ಎನ್ನ.

ಪ್ರೀತಿಸುವೆ ಎಂದು ಬೇಡಿದನು, ನನ್ನ ಚೆಲುವಿಗೆ ಸೋತು;
ಮುಡಿಸಿದನು ತನ್ನ ಪ್ರೇಯಸಿಯ ಮುಡಿಗೆ,ಮರೆತು ತಾನು ಕೊಟ್ಟ ಮಾತು.

ಯಾಕಿಷ್ಟು ಸುಲಭವಾದೆ ಪ್ರೀತಿಯ ಹೆಸರಲ್ಲಿ ನಾನು?
ನನ್ನ ಹೃದಯದ ಆಸೆ ತಿಳಿಯಲಿಲ್ಲವೇ ಯಾರೂ?

ಕಲ್ಲಾಗಿಸಿ ಮನಸ್ಸು,ಮುದುಡಿರುವೆ ನೊಂದು ನಾನು;
ಅರಳುವೆ ಪ್ರೀತಿಗೆ ಶರಣಾಗಿ, ಮೆಟ್ಟಿ ಬಂದರೆ ಸ್ವಾರ್ಥದ ಮುಳ್ಳು.

- ಶ್ರೀಕಾಂತ್