ಹಾರುವ ಹಕ್ಕಿಯ ರಕ್ಷಿಸಲು, ಹಿಡಿದು ಕೂಡಿಟ್ಟೆ ಪಂಜರದಲಿ.
ಕಲಿಸಿದೆ ಶಿಸ್ತಿನ ಪಾಠ, ಇರಲು ಸುಖ-ಸಂತೋಷದಿ.
ಸಿಗುತಿತ್ತು ಎಲ್ಲ ಸಂಪತ್ತು  ಅಲ್ಲೇ , ಏನನ್ನೂ ಮಾಡಬೇಕಾಗಿರಲಿಲ್ಲ ಮುಂದೆ.
ಆದರೂ ಅಳುತಿತ್ತು ಯಾಕೋ, ನೋವೇನೆಂದು ತಿಳಿಸದೆ.

ಹಾರಿ ಹೋಗುವುದೇ ಎಂದು ಪರೀಕ್ಷಿಸಲು, ತೆರೆದೆ ನಾ ಪಂಜರದ ಬಾಗಿಲು.
ಹೋಯಿತು ಹಾರಿ ತಕ್ಷಣ, ತಿರುಗಿ ನೋಡಲಿಲ್ಲ ಮರಳಿ.
ಕಂಡೆ ಅದರ ನೋಟದಲ್ಲಿ ಹೊಸ ಚೈತನ್ಯ, ಹಾರುವ ಸ್ವಾತಂತ್ರ್ಯ.
ಎಲ್ಲವೂ ಸಿಕ್ಕಂತೆ ಹಾರಿತು ಮುಗಿಲಲಿ ಸಂತೋಷದಿ.

ಹಾರಲು ಆಕಾಶದಿ ದೂರ, ಸಿಲುಕಿತು ಸಿಡಿಲಿನ ಹೊಡೆತಕೆ ದುರ್ದೈವದಿ.
ಜೀವ ಉಳಿಸಲು ಕರೆದೆ ಕೈಚಾಚಿ, ಬರುವುದೆನೋ ಎಂದು ಮರಳಿ.
ಸರಿಯಿತು ದೂರ, ಒಪ್ಪದೇ ಕೊನೆ ಕ್ಷಣದಲ್ಲೂ ಬರಲು ಹಿಂತಿರುಗಿ,
ಎಳೆಯಿತು ಕೊನೆ ಉಸಿರು ನೆಮ್ಮದಿಯಿಂದ, ಅನುಭವಿಸಿ ಸ್ವಾತಂತ್ರ್ಯ ಪೂರ್ತಿ.
- ಶ್ರೀಕಾಂತ್