ಬಹಳ ಖೇದಕರ ಸಂಗತಿಯೆಂದರೆ, ಇತ್ತೀಚಿನ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ೨೨ ಲಕ್ಷ ಜನ ವಿದ್ಯಾರ್ಥಿಗಳಿಗೆ ಅತೀವ ತೊಂದರೆಯಾಯ್ತ. ಮಾತ್ರವಲ್ಲ, ಆಘಾತವನ್ನು ತಾಳಲಾರದೆ, ೨೦ ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದರು. ಈ ಆಘಾತಗಳಿಗೆ ಹೊಣೆಹೊತ್ತು, ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನರು ರಾಜೀನಾಮೆ ಕೊಡಬೇಕೆಂದು, ವಿಜ್ಞಾನಿ ಮತ್ತು ಪರಿಸರವಾದಿ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಯಿತು. ಅವರ ಉಪವಾಸ ಮುಷ್ಕರವು ೧೯ ನೇ ದಿನಗಳನ್ನು ತಲುಪುವಾಗ, ಸೋನಮ್ ವಾಂಗ್ ಚುಕ್ ರ ಆರೋಗ್ಯ ಬಿಗಡಾಯಿಸಿತು. ಆದರೆ ಸರಕಾರ ಕ್ಯಾರೇ ಎನ್ನಲಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ, ದೆಹಲಿ ಹೈಕೋರ್ಟ್ ಸೋನಮ ಅವರ ಆರೋಗ್ಯದ ಬಗ್ಗೆ ಗಮನ ಕೊಡಬೇಕೆಂದು, ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಆದೇಶ ನೀಡಿತು. ಇದರ ಫಲವಾಗಿ ದೆಹಲಿ ಪೋಲೀಸರು ಅವರನ್ನು ಮುಷ್ಕರ ಸ್ಥಳದಿಂದ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದರು. ಸತ್ಯಾಗ್ರಹದ ಮುಂದಿನ ನಡೆಯಾಗಿದ್ದ ಪಾರ್ಲಿಮೆಂಟ್ ಚಲೋ ಅಭಿಯಾನ ಇಂದಿತ್ತು. ದೇಶದ ಹಲವಾರು ಪ್ರದೇಶಗಳಿಂದ ಯುವಕರು, ಯುವತಿಯರು ದೆಹಲಿಯಲ್ಲಿ ಜಮಾವಣೆಯಾದರು. ಶಾಂತಿಯುತ ಮೆರವಣಿಗೆ ನಡೆದಿತ್ತು. ಆದರೆ ದೆಹಲಿ ಪೋಲಿಸರು ಹಲವು ಸತ್ಯಾಗ್ರಹಿಗಳ ಮೇಲೆ ಲಾಠಿ ಚಾರ್ಝ ಮಾಡಿದರು. ಪೋಲಿಸರು ಸತ್ಯಾಗ್ರಹಿಗಳಿಗೆ ಮನಸೇಚ್ಛೆ ಲಾಠಿಯಿಂದ ಹೊಡೆದಿದ್ದಾರೆ. ಹಲವರಿಗೆ ಗಾಯವಾಯಿತು. ಸರಕಾರ ೫-೬ ಸ್ಟೇಷನ್ ನಲ್ಲಿ ಮೆಟ್ರೋ ನಿಲುಗಡೆ ಮಾಡಿತು. ಅಂತರಜಾಲ ಸಂಪರ್ಕವನ್ನು ಕಡಿತಗೊಳಿಸಿದರು. ಒಟ್ಟಾರೆ ಈ ಹಿಂಸೆಗೆ ಸರ್ಕಾರವೇ ನಾಂದಿ ಹಾಡಿದಂತಾಗಲಿಲ್ಲವೇ?

ವಿದ್ಯಾರ್ಥಿಗಳ ನ್ಯಾಯಯುತವಾದ ಬೇಡಿಕೆಗೆ, ಸರ್ಕಾರದ ಉತ್ತರ ಮೌನವ್ರತ. ಈ ಬಗ್ಗೆ ಹಲವು ಪ್ರಶ್ನೆಗಳೇಳುತ್ತವೆ. ಸರ್ಕಾರವು ಉಪವಾಸ ಸತ್ಯಾಗ್ರಹಿ ಸೋನಮ್ ವಾಂಗಚುಕ್ ರನ್ನು ಮಾತುಕತೆಗೆ ಏಕೆ ಆಹ್ವಾನಿಸಲಿಲ್ಲ? ಸರಕಾರಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆಯು ಗಂಭೀರವಾದ ವಿಷಯವಲ್ಲವೇ? ಅಥವಾ ಸರಕಾರ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಪಟ್ಟವರನ್ನು ರಕ್ಷಿಸುತ್ತಿದೆಯಾ? ಸರಕಾರಕ್ಕೆ ೨೦ ವಿದ್ಯಾರ್ಥಿಗಳ ಸಾವು ಸಾವಲ್ಲವೇ?

ಸಾಮಾನ್ಯವಾಗಿ, ಯಾವುದೇ ಸರಕಾರಿ ಸಂಸ್ಥೆಗಳಲ್ಲಿ ಯಾವುದೇ ಅಕ್ರಮವಾದಾಗ, ಅಲ್ಲಿಯ ಅಧಿಕಾರಿಗಳನ್ನು ಅಮಾನತ್ ನಲ್ಲಿಡುತ್ತಾರೆ ಅಥವಾ ವರ್ಗಾಯಿಸುತ್ತಾರೆ. ಹಾಗಿರುವಾಗ 22 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಚೆಲ್ಲಾಟ ನಡೆದಾಗ, ೨೦ ಜನರ ಸಾವಾದಾಗ, ಶಿಕ್ಷಣ ಸಚಿವರನ್ನ ಬದಲಾಯಿಸಬೇಕಿತ್ತು. ಅಥವಾ ಸತ್ಯಾಗ್ರಹಿಗಳ ಜೊತೆ ಮಾತುಕತೆ ನಡೆಸಬಹುದಿತ್ತು. ಸರಕಾರದ ದಿವ್ಯ ನಿರ್ಲಕ್ಷ್ಯ.

ಈ ವಿಷಯವನ್ನು ಸರ್ಕಾರವು ಸ್ವಪ್ರತಿಷ್ಠೆಯನ್ನಾಗಿ ಪರಿಗಣಿಸಿದೆಯೇ? ಸರ್ಕಾರ ಚುನಾಯಿತರಾಗಿರುವುದು ಜನರಿಂದ, ಜನರಿಗಾಗಿಯೇ. ಹಾಗಿರುವಾಗ ಸರ್ಕಾರವು ನೊಂದವರೊಂದಿಗೆ ಮಾತುಕತೆ ನಡೆಯಿಸುವುದು ಸರ್ಕಾರದ ಕರ್ತವ್ಯವಲ್ಲವೇ ಅಥವಾ ಸ್ವಪ್ರತಿಷ್ಠೆಯ ಪ್ರದರ್ಶನವೇ ಮುಖ್ಯವೇ?

ಅಥವಾ ಸತ್ಯಾಗ್ರಹಿಗಳ ಒಗ್ಗಟ್ಟು, ಶಾಂತಿಯುತವಾದ, ಅಹಿಂಸಾ ಮಾರ್ಗವು, ಸರ್ಕಾರದಲ್ಲಿ ಅವ್ಯಕ್ತವಾದ ಭಯವನ್ನು ಹುಟ್ಟುಹಾಕಿದೆಯಾ?

ಸತ್ಯಾಗ್ರಹದ ಆರಂಭದಲ್ಲೇ, ಒಮ್ಮೆ ಸೋನಮ್ ವಾಂಗಚುಕ್ ರ ಮಾತುಕತೆ ನಡೆಸಿದ್ದರೆ, ಇಂದಿನ ಹಿಂಸೆಯನ್ನು ತಡೆಯಬಹುದಿತ್ತು. ಕಡೆಯ ಪ್ರಶ್ನೆ, ಬಹುಮತವಿರುವ ಸರಕಾರವು ತನ್ನ ಶೌರ್ಯವನ್ನು ತೋರಿಸಿತಾ ಅಥವಾ ತನ್ನ ದೌರ್ಬಲ್ಯವನ್ನು ಪ್ರದರ್ಶಿಸಿತಾ?

-ಪ್ರಕಾಶ ಎನ್. ಮಂಗಳೂರು