ಕೆಲವು ವ್ಯಾಪಾರೀ ಸಂಸ್ಥೆಗಳು ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವ ಮನೋಭಾವನೆಯುಳ್ಳವರು. ಅಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಶೀಘ್ರ. ಇನ್ನು ಕೆಲವು ಸಂದರ್ಭದಲ್ಲಿ, ವ್ಯಾಪಾರೀ ಸಂಸ್ಥೆಗಳು ತಮ್ಮ ಸೇವೆಯ ಅಥವಾ ಪ್ರಾಡಕ್ಟಿನ ನ್ಯೂನತೆಯನ್ನು ಒಪ್ಪಿಕೊಳ್ಳುವುದಿಲ್ಲ. ಕೆಲವೊಮ್ಮೆ ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಳ್ಳುತ್ತಾರೆ.
ನಾನು ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುತ್ತೇನೆ. ನಾವು ಪ್ರಾದೇಶಿಕ ಕಛೇರಿಗೆ ತೆರಳಿ, ಅಲ್ಲಿಯ ಸಿಬ್ಬಂದಿಗಳಿಗೆ ತರಬೇತಿ ಕೊಡುವ ಕ್ರಮವಿತ್ತು. ಆ ಪ್ರಕ್ರಿಯೆಗೆ ಸುಲಭವಾಗಬೇಕೆಂದು, ನಾನೊಂದು ಲೆನೊವೊ ಕಂಪೆನಿಯ ಟ್ಯಾಬನ್ನು ಆನ್ ಲೈನಿನಲ್ಲಿ ಫ್ಲಿಪ್ ಕಾರ್ಟಿನಲ್ಲಿ ಖರೀದಿಸಿದೆ. ಒಂದು ವರ್ಷದ ವಾರೆಂಟಿಯಿತ್ತು. ಮೂರು ತಿಂಗಳ ಟ್ಯಾಬಿನ ಉಪಯೋಗ ಚೆನ್ನಾಗಾಯ್ತು. ನನಗೆ ಬೇಕಾದ ಟ್ರೇನಿಂಗ್ ಮೆಟೇರಿಯಲ್ ಅದರಲ್ಲಿಯೇ ತಯಾರಿಮಾಡಿಟ್ಟಿದ್ದೆ. ಆದರೆ ದುರದೃಷ್ಟವಶಾತ್, ಮಂಗಳೂರಿನಲ್ಲಿದ್ದಾಗಲೇ ಒಂದು ದಿನ ಟ್ಯಾಬ್ ತೆರೆಯಲೇ ಇಲ್ಲ. ಬೇರೆ ಟ್ರೇನಿಂಗ್ ಕ್ಯಾಂಪ್ ಗೆ ಹೋಗಿದ್ದಾಗ , ಟ್ಯಾಬ್ ಕೈ ಕೊಟ್ಟಿದ್ದರೇ, ನನಗೆ ಫಜೀತಿಯಾಗ್ತಿತ್ತು. ಸದ್ಯಕ್ಕೆ ಟ್ರೇನಿಂಗ್ ಮೆಟೇರಿಯಲ್ ಆಫೀಸ್ ಕಂಪ್ಯೂಟರ್ ನಲ್ಲಿದ್ದವು. ಆದ್ದರಿಂದ ಸದ್ಯ ಬಚಾವಾದೆ.
ನಾನು ಫ್ಲಿಪ್ ಕಾರ್ಟಿನವರಿಗೆ ಈಮೇಲ್ ಮೂಲಕ ಸಂಪರ್ಕಿಸಿದೆ. ಎರಡು ದಿನದ ನಂತರವೂ ಉತ್ತರವಿರಲಿಲ್ಲ, ಅವರನ್ನು ಸಹಾಯವಾಣಿ ಮೂಲಕ ಸಂಪರ್ಕಿಸಿದೆ. ಅವರ ಬಳಿ ಚಾಟ್ ಮಾಡಿದೆ. ಹಲವು ಸಹಾಯಕರು ಚಾಟ್ ನಲ್ಲಿ ಆಶ್ವಾಸನೆ ಕೊಟ್ಟರು, ಆದರೆ ಪರಿಹಾರ ಮಾತ್ರ ಇಲ್ಲವಾಯಿತು. ಹದಿನೈದು ಸಾವಿರ ಕೊಟ್ಟು ಖರೀದಿ ಮಾಡಿದ ಟ್ಯಾಬ್, ಮೂರು ತಿಂಗಳಲ್ಲಿ ಸ್ಟಾರ್ಟ್ ಆಗ್ತಾ ಇಲ್ಲ ಎಂದರೇನು ಮಾಡೋದು? ಲೆನೊವೊ ಕಂಪೆನಿಯ ಆಫೀಸ್ ಗೆ ಒಪ್ಪಿಸಿ, ಫ್ಲಿಪ್ ಕಾರ್ಟ್ ನಲ್ಲಿ ತೆಗೆದುಕೊಂಡಿದ್ದೆಂದೆ. ಅವರು ಅದರ ಪರೀಕ್ಷೆ ಮಾಡಿ, ಮದರ್ ಬೋರ್ಡ್ ಹೋಗಿದೆಯೆಂದರು. ನಾನು ಸ್ಥಳೀಯ ಲೆನೊವೋ ಕಂಪೆನಿ ಸಂಪರ್ಕಿಸಿದೆ. ಲೆನೊವೊ ಇದು ಒರಿಜನಲ್ ಹೌದಾ ಅಥವಾ ಉಪಯೋಗಿಸಿದ್ದು ಕೆಲವೊಮ್ಮೆ ಆನ್ಲೈನ್ ಬರತ್ತೆ ಎಂದರು. ಒಂದು ವಾರ ತಪಾಸಣೆ ಮಾಡಿ, ವಾರೆಂಟಿ ಎಲ್ಲಾ ತೋರಿಸಿದ ನಂತರ ಮದರ್ ಬೋರ್ಡ ಬದಲಾಯಿಸಿ ಕೊಟ್ಟರು. ಒಟ್ಟಾರೆ ಒಂದು ತಿಂಗಳ ಸಮಯ ತೆಗೆದುಕೊಂಡಿತ್ತು. ಫ್ಲಿಪ್ ಕಾರ್ಟ್ ಸುಳ್ಳು ಆಶ್ವಾಸನೆ ಕೊಟ್ಟು, ನನ್ನಂತಹ ಓದು ಬರಹ, ವ್ಯವಹಾರ ಗೊತ್ತಿದ್ದವನಿಗೆ ಇವರ ಸರ್ವೀಸ್ ಹೀಗಿದ್ದರೆ, ಗ್ರಾಮೀಣ ಜನ ಹಾಗೂ ಮಹಿಳೆಯರ ಸ್ಥಿತಿ ಏನಾಗಬಹುದೆಂದು ಆಲೋಚಿಸಿ, ಇವರ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದೆ.
ಅವರ ಬೆಂಗಳೂರಿನ ಆಫೀಸ್ ಪತ್ತೆ ಹಚ್ಚಿ, ಅವರಿಗೆ ಲಿಖಿತ ದೂರು ಸಲ್ಲಿಸಿದೆ. ಅವರ ಉತ್ತರ ಹೇಗಿತ್ತೆಂದರೆ, " ಫ್ಲಿಪ್ ಕಾರ್ಟ್, ಒಂದು ಆನ್ ಲೈನ್ ಮಾರುಕಟ್ಟೆ, ನಾವು ಜವಾಬ್ದಾರರಲ್ಲ. ಗ್ರಾಹಕ ಮತ್ತು ಮಾರಾಟಗಾರರಿಗೆ ಸಂಬಂಧಿಸಿದ್ದು". ನಮ್ಮ ಬ್ಯಾಂಕ್ ತರಬೇತಿಯಲ್ಲಿ ಕೂಡ ಗ್ರಾಹಕ ರಕ್ಷಣಾ ಕಾಯಿದೆ ಬಗ್ಗೆ ನಮ್ಮ ಶಿಬಿರಾರ್ಥಿಗಳಿಗೆ ಪಾಠ ಮಾಡುತ್ತಿದ್ದೆವು. ಇದರ ಪ್ರಯೋಗ ಮಾಡುವ ಮನಸ್ಸಾಯಿತು. ಆನ್ ಲೈನಿನಲ್ಲಿ ಖರೀದಿಯಲ್ಲಿ ಕೇಸನ್ನು ಫೈಲ್ ಮಾಡಿದವರು ತುಂಬಾ ಕಡಿಮೆಯಂತೆ. ಆದರೂ ನಾನೇ ಖುದ್ದಾಗಿ ಕನ್ಶೂಮರ್ ಕೋರ್ಟಿನಲ್ಲಿ ಒಂದು ದಾವೆ ಹೂಡಿದೆ. ಶುಲ್ಕ ನೂರು ರೂಪಾಯಿ ಬ್ಯಾಂಕ್ ಡ್ರಾಫ್ಟ್ ರೂಪದಲ್ಲಿ. ನಂತರ ಎರಡು ಮೂರು ತಿಂಗಳಾಯಿತು. ಕೋರ್ಟ್ ನಿಂದ ಸುದ್ದಿಯಿಲ್ಲ. ಹೋಗಿ ವಿಚಾರಿಸಿದೆ. ಅವರು ನಮಗೆ ಯಾವುದೇ ರೀತಿ ಮಾಹಿತಿ ಕೊಡಲ್ಲವಂತೆ, ನಾವೇ ಅವರ ಪುಸ್ತಕದಲ್ಲಿ ಹಿಯರಿಂಗ್ ಯಾವಾಗ ಇದೆಯೆಂದು ತಿಳಿದುಕೊಂಡು ಆ ದಿನ ಹಾಜರಾಗಬೇಕಂತೆ. ನಾನು ಹೋಗಿಲ್ಲವಾದ್ದರಿಂದ ನನ್ನ ಕೇಸ್ ಡಿಸ್ ಮಿಸ್ ಆಗಿತ್ತು. ಆದರೆ ಆಫೀಸಿನ ಮಹಿಳಾಮಣಿಯವರೊಬ್ಬರು ನನಗೆ ಉತ್ತಮ ಮಾರ್ಗದರ್ಶನ ಮಾಡಿದರು. ನೀವು ಮತ್ತೊಮ್ಮೆ ಕೇಸ್ ಫೈಲ್ ಮಾಡಿ, ವಿನಂತಿ ಮಾಡಿಕೊಳ್ಳಿ, ಜಡ್ಜ್ ಒಪ್ಪುತ್ತಾರೆಂದರು. ಅದೇ ರೀತಿ ಮಾಡಿದೆ. ಕೇಸ್ ನಡೀತಾ ಇತ್ತು, ಕಾಯಿದೆ ಪ್ರಕಾರ 180 ದಿನದೊಳಗೆ ತೀರ್ಮಾನವಾಗಬೇಕೆಂದರೂ ಆಗಲಿಲ್ಲ. ಮಧ್ಯೆ ಫ್ಲಿಪ್ ಕಾರ್ಟಿನವರು ರೂಪಾಯಿ ಮೂರು ಸಾವಿರ ರಾಜಿಗೆ ಬಂದರು. ನಾನು ಸಾರಾಸಗಟಾಗಿ ತಿರಸ್ಕರಿಸಿದೆ.
ಹಿಯರಿಂಗ್ ಹೋಗುವುದು ಕಷ್ಟವಾಗತೊಡಗಿತು. ಯಾವುದೇ ಬೆಳವಣಿಗೆಯೂ ಇರಲಿಲ್ಲ. ಆದ್ದರಿಂದ ಒಬ್ಬ ವಕೀರನ್ನು ಗೊತ್ತು ಪಡಿಸಿದೆ. ತಾವು ಆನ್ ಲೈನ್ ಕೇಸ್ ಗಳಲ್ಲಿ ಫೈಲ್ ಮಾಡಿಲ್ಲವೆಂದು ವಕೀಲರು ತಿಳಿಸಿದರು. ಆದರೂ ಪ್ರಯತ್ಮ ಮಾಡುತ್ತೇನೆಂದರು. ಫ್ಲಿಪ್ ಕಾರ್ಟ್ ತಾವು ಜವಾಬ್ದಾರರಾಗುವುದಿಲ್ಲವೆಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಂತರ ನಾನು ಎರಡನೇ ಪಾರ್ಟಿ ಲೆನೊವೊ ಕಂಪೆನಿಯನ್ನು ಸೇರಿಸೋಣವೆಂದೆ, ವಕೀಲರು ಅವರನ್ನು ಸೇರಿಸಿದರು. ಒಂದು ವರ್ಷದ ನಂತರ ತೀರ್ಪು ಬಂದು, ಎರಡು ಕಂಪೆನಿಯವರು ಸೇರಿ, ನನಗೆ ₹ ಹದಿನೈದು ಸಾವಿರ ಕೊಡಬೇಕೆಂದಾಯಿತು. ಜಯ ನನ್ನದಾಗಿತ್ತು. ಲೆನೊವೊದವರೇ ನನಗೆ ಹಣ ಕಳುಹಿಸಿದರು. ಈತನ್ಮಧ್ಯೆ, ಫ್ಲಿಪ್ ಕಾರ್ಟಿನವರು ತೀರ್ಪನ್ನು ನೋಡಿ, ರಾಜ್ಯ ಮಟ್ಟದ ಗ್ರಾಹಕರ ವೇದಿಕೆಗೆ ಅಪೀಲ್ ಗೆ ಅರ್ಜಿ ಹಾಕಿದರು. ನನಗೆ ರಾಜ್ಯದ ಗ್ರಾಹಕ ಕೋರ್ಟಿಂದ ನೋಟೀಸ್ ಬಂತು. ನಮ್ಮ ಕೇಸ್ ಮುಗಿದಿದೆಯೆಂದು ನಾನು ತಿಳಿಸಿ ಕೈ ಮುಗಿದೆ. ನನಗೆ ಸಮಾಧಾನವಾಗಿತ್ತು. ಅಲ್ಲಿ ಫ್ಲಿಪ್ ಕಾರ್ಟನವರು ಅಪೀಲ್ ಫೈಲ್ ಮಾಡುವ ಮೊದಲು ಶುಲ್ಕ ರೂಪಾಯಿ ಹತ್ತು ಸಾವಿರ ಕಟ್ಟಬೇಕಾಗಿತ್ತು, ಬಹುಶಃ ಅವರು ಕಟ್ಟಿರುತ್ತಾರೆ.
ಆನ್ ಲೈನಿನಲ್ಲಿ ಖರೀದಿಸುವಾಗ , ಆ ಕಂಪೆನಿಯ ಸೈಟ್, ಮಾರಾಟಗಾರನ ರಾಂಕಿಂಗ್ ನೋಡಿ, ಪ್ರಾಡಕ್ಟನ ವಿವರಗಳನ್ನು ಡೌನಲೋಡ್ ಮಾಡಿಟ್ಟಕೊಳ್ಳಿ. ಕಂಪೆನಿಯವರು ಪ್ರತ್ಯೇಕವಾಗಿ invoice / ಬಿಲ್ ಕಳಿಸುವುದಿಲ್ಲ.
ಯಾವ ಬ್ಯಾಂಕಿಂದ, ಮೊಬೈಲ್ ಬ್ಯಾಂಕ್ / ಪೇಟಿಮ್ / ಗೂಗಲ್, / ಡೆಬಿಟ್ ಕಾರ್ಡಿಂದ, ನೆಟ್ ಬ್ಯಾಂಕಿಂದ ಪಾವತಿ ಮಾಡಿದ ವಿವರವೂ ನಿಮ್ಮ ಬಳಿಯಿರಲಿ. ಮಾರಾಟಗಾರನ ಮತ್ತು ಯಾವ ಸೈಟಿಂದ ಉದಾಹರಣೆಗೆ ಫ್ಲಿಪ್ ಕಾರ್ಟ / ಅಮೆಝಾನ್ ವಿಳಾಸವನ್ನು ಕೋರ್ಟಿನಲ್ಲಿ ಫೈಲ್ ಮಾಡುವಾಗ ನಾವೇ ಒದಗಿಸಬೇಕು. ವಕೀಲರ ಮೂಲಕ ಅಥವಾ ಕಕ್ಷದಾರನೇ ನೇರವಾಗಿ ದಾವೆಯನ್ನು ಹೂಡಿ, ನಡೆಸಬಹುದು.
-ಪ್ರಕಾಶ ಎನ್, ಮಂಗಳೂರು.
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!