ವ್ಯಾಪಾರೀ ಸಂಸ್ಥೆಗಳಿಂದ ನಮಗೆ ಗುಣಮಟ್ಟದ ಪ್ರಾಡಕ್ಟ್ಸ್ ಅಥವಾ ಸೇವೆಗಳಲ್ಲಿ ಕೊರತೆಯಿದ್ದಾಗ, ನೇರವಾಗಿ ಸಂಸ್ಥೆಗೆ ಅಥವಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಪ್ರಯತ್ನ ಮಾಡಬಹುದು. ದಿನ ನಿತ್ಯವೂ ಸರಕಾರಿ ಕಛೇರಿಯಲ್ಲಿ ಕಷ್ಟ ಅನುಭವಿಸುವುದಕ್ಕೆ, ಒಂದು ಕೇಸ್ ನೋಡೋಣ.  

ಇಲ್ಲಿ ಮಿತ್ರರೊಬ್ಬರ ಸರಕಾರಿ ಕಛೇರಿಯ ಅನುಭವ ಹಂಚಿಕೊಳ್ಳುತ್ತೇನೆ. ಹೆಸರು ವಿಕಾಸ ( ಹೆಸರು ಬದಲಾಯಿಸಿಲಾಗಿದೆ). ಪಟ್ಟಣದಲ್ಲಿ ಮನೆ ಕಟ್ಟಲು ನಿರ್ಧರಿಸಿದರು. ಆದರೆ  ನಿವೇಶನವು ಪೇಟೆಯ ಸಮೀಪದ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿತ್ತು. ಮನೆ ಕಟ್ಟಲು ಅಗತ್ಯವಿರುವ ಪರವಾನಗಿ ( ಲೈಸೆನ್ಸ್ ) ಯನ್ನು ಗ್ರಾಮ ಪಂಚಾಯತಿಯು ಮಂಜೂರು ಮಾಡಬೇಕಿತ್ತು. ಇವರು ಅಗತ್ಯವಿರುವ ಎಲ್ಲಾ ದಾಖಲೆಗಳ ಜೊತೆ, ಅರ್ಜಿ ಹಾಕಿದರು. ನಂತರ ವಿಕಾಸರು ಎರಡು ಬಾರಿ ಆಫೀಸ್ ಗೆ ಭೇಟಿಯಿತ್ತರು. ಕಾರ್ಯದರ್ಶಿಯಲ್ಲಿ ವಿಚಾರಿಸಿದರೆ, ಹಾರಿಕೆ ಉತ್ತರ "ನೋಡ್ತೇವೆ",  PDO ಊರಲ್ಲಿಲ್ಲ ಎಂಬ ಉತ್ತರ ಸಿದ್ಧವಿರುತ್ತಿತ್ತು.  

ಕಛೇರಿಯಲ್ಲಿ ಮುಖ್ಯ ಅಧಿಕಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ( PDO ) ಯಾಗಿರುತ್ತಾರೆ. ಉಳಿದ ಕಾರ್ಯಕಲಾಪಕ್ಕೆ ಕಾರ್ಯದರ್ಶಿ, ಒಂದೆರಡು ಸಹಾಯಕರು ಇರ್ತಾರೆ. PDO ಸಿಗುವುದು ಕಷ್ಟ. ಕಾರ್ಯದರ್ಶಿಯವರದೇ ಮೇಲುಗೈ ಜನ ಸಂಪರ್ಕದಲ್ಲಿ.  

ಮಿತ್ರರು ಸೌಮ್ಯ ಸ್ವಭಾವದವರು. ಗಟ್ಟಿಯಾಗಿ ಕೇಳಲು ಹಿಂಜರಿಕೆ, ಮತ್ತೇನಾದರೂ ಕೊಕ್ಕೆ ಹಾಕಿದ್ರೆ ಅಂತ. ಆದರೂ ಒಮ್ಮೆ ಸಿಟ್ಟು ಬಂದು, ಈಮೇಲ್ ಮುಖಾಂತರ ನೆನಪೋಲೆ (Reminder) ಕಳಿಸಿದರು. ನಂತರ ಒಮ್ಮೆ ಅವರ ಆಫೀಸಿಗೆ ಹೋದಾಗ, ಆಫೀಸ್ ನಲ್ಲಿ ಯಾರು ಇರಲಿಲ್ಲ, ಬಾಗಿಲು ಹಾಕಿತ್ತು. ಇದನ್ನೇ ಅವರು ಕಾರ್ಯದರ್ಶಿಗಳಿಗೆ  " ಕಾರ್ಯಾಲಯದ ವೇಳೆಯಲ್ಲಿ, ನಿಮ್ಮ ಆಫೀಸ್ ಬಾಗಿಲು ಹಾಕಿತ್ತು, ಯಾರೂ ಇರಲಿಲ್ಲವೆಂದು " ಈಮೇಲ್  ಹಾಕಿ ಮತ್ತು ಫೊನ್ ಮಾಡಿ  ಹೇಳಿದರು. ಕಾರ್ಯದರ್ಶಿ ಸ್ವಲ್ಪ ಗರಂ ಆದರು. ಕಡೆಗೊಂದು ದಿನ ಲೈಸೆನ್ಸ್ ಮಂಜೂರಾಗಿದೆಯೆಂದರು. ಶುಲ್ಕವನ್ನು ಪಾವತಿಸಿ, ಲೈಸೆನ್ಸ್ ತೆಗೆದುಕೊಂಡು ಹೋಗಿ ಎಂದರು. ಪ್ರತಿ ತಿಂಗಳು ಗ್ರಾಮ ಪಂಚಾಯತಿಯಲ್ಲಿ ಹಲವಾರು ಅರ್ಜಿಗಳು ಬಂದಿರುತ್ತವೆ. ಮನೆ ಕಟ್ಟುವುದು, ಖಾತೆ ಬದಲಾವಣೆ, ಗ್ರಾಮದ ಯೋಜನೆಗಳ ಬಗ್ಗೆ  ಹೀಗೆ, ಇವನ್ನು ತಿಂಗಳ ಪಂಚಾಯತಿಯ ಸದಸ್ಯರ, ಅಧ್ಯಕ್ಷರ ಸಭೆಯಲ್ಲಿ  ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆದು ತೀರ್ಮಾನಿಸಲಾಗುತ್ತದೆ. ಸರಿಯಿಲ್ಲದಿದ್ದಲ್ಲಿ, ಅರ್ಜಿದಾರರಿಗೆ ತಿಳಿಸಬೇಕು. ಕಾಲಮಿತಿ ಇರುತ್ತದೆ.  

ವಿಕಾಸ ಲೈಸೆನ್ಸ್ ಗೆ ಶುಲ್ಕ ಕಟ್ಟಲು ಹೋದಾಗ, ಎರಡು ಗಂಟೆ ಕಾದ ನಂತರ  ₹ 36,290.00 ಶುಲ್ಕ ಪಾವತಿ ಮಾಡಿಯೆಂದರು. ಆಫೀಸ್ ಎದುರಿಗಿರುವ ಸರ್ಕಾರಿ ಬ್ಯಾಂಕಿನಲ್ಲಿಯೇ ಪಂಚಾಯತಿ ಖಾತೆಯಿತ್ತು.  ಶುಲ್ಕ ನಗದು ರೂಪದಲ್ಲಿಯೇ ಕೊಡಿ, ನಾವು ಮರುದಿನ ಕಟ್ಟಿ ನಿಮಗೆ ರಸೀದಿ ಕೊಡ್ತೇವೆಯೆಂದರು, ಬ್ಯಾಂಕಿಗೆ ಬೆಳಿಗ್ಗೆ ಹಣ ಕಟ್ಟಿದ್ದೇವೆ, ಇಂದು ಉಳಿದ ನಗದು ಕಟ್ಟುವುದು ಸಾಧ್ಯವಿಲ್ಲವೆಂದರು. ವಿಕಾಸ ಎದುರಿನ ಬ್ಯಾಂಕಿನ ಸಿಬ್ಬಂದಿಯೊಬ್ಬರಲ್ಲಿ ವಿಚಾರಿಸಿದರು. ಹೌದು ನಗದು ತೆಗೆದುಕೊಳ್ಳಲು ಸಾಧ್ಯವಿಲ್ಲ, ನೀವು ನೆಟ್ ಬ್ಯಾಂಕಿಂದ ಹಣ ಪಾವತಿ ಮಾಡಬಹುದೆಂದರು. ವಿಕಾಸರು ನೆಟ್ ಬ್ಯಾಂಕಿಂದ ಪಾವತಿ ಮಾಡಿದರು. PDO ಗೆ ಬ್ಯಾಂಕಿಂದ ಮೆಸೇಜ್ ಬಂದು, ಅವರು ಲೈಸೆನ್ಸ್ ಪ್ರತಿಯನ್ನು ವಿಕಾಸರಿಗೆ ಕೊಟ್ಟರು. ಆದರೆ ವಿಕಾಸರಿಗೆ ದೊರಕಿದ ರಸೀದಿಯಲ್ಲಿ ₹ 25,000 ಕಟ್ಟಡ ಕಾರ್ಮಿಕರ ನಿಧಿಗೆ, ಉಳಿದ ₹7೦90 ಲೈಸನ್ಸ್ ಶುಲ್ಕವಾಗಿತ್ತು. (ಈಗ ಕಟ್ಟಡ ಕಾರ್ಮಿಕರಿಗೆ ಎಷ್ಟೋ ಜನರಿಗೆ ಈ ವಿಷಯ ಗೊತ್ತಿಲ್ಲ. ಅವರ ಕುಟುಂಬದ ಕಲ್ಯಾಣಕ್ಕಾಗಿ ಮೀಸಲಾದ ಹಣವಿದು.) ವಿಕಾಸರು ಅವಸರದಲ್ಲಿ ಇದನ್ನು ಗಮನಿಸಲಿಲ್ಲ. ಕಡೆಯಲ್ಲಿ ಪರಿಶೀಲಿಸಿದಾಗ ₹4200 ಗೆ ರಸೀದಿಯಿರಲಿಲ್ಲ.   

ಕೆಲವು ದಿನಗಳ ನಂತರ PDO ಆಫೀಸ್ ಲ್ಲಿ ವಿಚಾರಿಸಲು ಹೋದಾಗ, ಪಿಡಿಒ ಯವರು ಬೇರೆ ಪಂಚಾಯತಿಗೆ ವರ್ಗವಾಗಿದ್ದರು. ಹೊಸ ಪಿಡಿಒ ಬಂದವರು, ನೀವು ಹೆಚ್ಚಿನ ಹಣ ಪಾವತಿಸಿದ್ದರೆ ವಾಪಸ್ ಕೊಡ್ತೇವೆ, ಆದರೆ ಒಮ್ಮೆ ಮೊದಲಿನ ಪಿಡಿಒ ಗೆ ವಿಚಾರಿಸಿಯೆಂದರು. ವಿಕಾಸರು ಅವರಿಗೆ ಫೋನ್ ಮಾಡಿದಾಗ, ಫೋನ್ ಸ್ವೀಕರಿಸಲಿಲ್ಲ. ವಿಕಾಸ ನನ್ನ ಸಲಹೆ ಕೇಳಿದರು. ನಾನು ನೀವು ಮೊದಲಿನ ಪಿಡಿಒ ಗೆ ಎಲ್ಲಾ ವಿಷಯ ಬರೆದು ₹ 4200 ಹಣವನ್ನೇಕೆ ಕಟ್ಟಿಸಿಕೊಂಡಿರಿ ಎಂದು ಫ್ರಶ್ನಿಸಿ ಎಂದೆ, ಅವರು ಹಾಗೇಯೆ ಮಾಡಿದರು. ವಾಟ್ಸಪ್ ಮೆಸೇಜ್ ಸಿಕ್ಕಿದ ಕೂಡಲೇ, ಮೊದಲಿನ ಪಿಡಿಒ ಕೂಡಲೇ ಫೋನ್ ಮಾಡಿ ಏನೆಂದು ವಿಚಾರಿಸಿದರು.‌ ವಿಕಾಸ ಎಲ್ಲವನ್ನು ತಿಳಿಸಿದಾಗ್ಯೂ, ಆ ಪಿಡಿಒ , ನೀವು ನಮ್ಮನ್ನು ಅಂದೆ ವಿಚಾರಿಸಬೇಕಿತ್ತು, ನಿಮಗೆ ಹೆಚ್ಚಿನ ಹಣ ತುಂಬಿದ್ದು ವಾಪಸ್ ಸಿಗಲ್ಲ, ನೀವು ಆಫೀಸಲ್ಲಿ ವಿಚಾರಿಸಿ ಎಂದು ಕೈ ಚೆಲ್ಲಿದರು.  

ನಂತರ ವಿಕಾಸ ಹೊಸ ಪಿಡಿಒ ಗೆ ವಿಷಯ ತಿಳಿಸಿ, ವಿಷಯ ವಿವರಿಸಿ, ಅರ್ಜಿ ಹಾಕಿ, ಹತ್ತು ಬಾರಿ ಫೋನ್ ಮಾಡಿದ ನಂತರ, ನನ್ನ ಮಿತ್ರರಿಗೆ ₹ 4200 ಹಣ ಚೆಕ್ ಮುಖೇನ ಮರುಪಾವತಿಯಾಯ್ತು. ಇಲ್ಲಿ ಪಿಡಿಒ ಯಾಕೆ ಹೆಚ್ಚು ಹಣ ಕಟ್ಟಿಸಿಕೊಂಡರು ಅನ್ನೋದು ಅರ್ಥವಾಗಲಿಲ್ಲ. ಓದುಗರ ಊಹೆಗೆ ಬಿಟ್ಟದ್ದು.

ಇಲ್ಲಿ ನಾವು ಅವರ ನ್ಯೂನತೆಯನ್ನು ಕಂಡುಹಿಡಿದಾಗ, ಸ್ವಲ್ಪ ಮಟ್ಟಿಗಾದರೂ ನಮ್ಮ ಮಾತನ್ನು ಆಲಿಸುತ್ತಾರೆ. ಸ್ಪಷ್ಟ ದಾಖಲೆಗಳನ್ನು ಒದಗಿಸುವುದು, ಲಿಖಿತವಾಗಿ ಪತ್ರ ಕೊಡುವುದು  ಮತ್ತು ಅವರ ಕಾರ್ಯ ವೈಖರಿಯನ್ನು ತಿಳಿದರೆ, ನಮ್ಮ ಕೆಲಸ ಸಾಧಿಸಿಕೊಳ್ಳಬಹುದು.  

ಸಾರ್ವಜನಿಕರು ಸರ್ಕಾರಿ ಆಫೀಸ್ ಗಳಲ್ಲಿ ಪ್ರಶ್ನೆ ಕೇಳುವ ಧೈರ್ಯ ಮಾಡುವುದಿಲ್ಲ. ವಿಷಯದ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ, ದಾಖಲೆಗಳು ಸರಿಯಿಲ್ಲದೆಯೂ ಇರಬಹುದು. ಈ ಕಾರಣಗಳಿಂದ ನಮಗೆ ಸತಾಯಿಸ್ತಾರೆ. ನೆನಪೋಲೆಗಳನ್ನು ಬರೆಯಬೇಕು, ಅಂದರೆ ಎಡಬಿಡದ ಪ್ರಯತ್ನದಿಂದ ಸರ್ಕಾರಿ ಆಫೀಸ್ ಗಳಿಂದ ಸೇವೆ ಪಡೆಯಲು ಸಾಧ್ಯ.  

-ಪ್ರಕಾಶ ಎನ್, ಮಂಗಳೂರು