ಕೆಲವು ವ್ಯಾಪಾರಿ ಕ್ಷೇತ್ರಗಳಲ್ಲಿ ಸೇವೆ ಮುಖ್ಯ. ಮುಖ್ಯವಾದದ್ದು ಬ್ಯಾಂಕ್. ಬ್ಯಾಂಕಿಗೆ ಸಂಬಂಧಪಟ್ಟಿದ್ದು ಒಂದು ಕೇಸ್ ನೋಡೋಣ. ಐಸಿಐಸಿಐ ಬ್ಯಾಂಕಿನಲ್ಲಿ ನಮ್ಮದೊಂದು ಖಾತೆಯಿತ್ತು. ಮೂರು ರೀತಿಯ ಖಾತೆ, ಒಂದು ಡಿಮ್ಯಾಟ್, ಒಂದು ಬ್ಯಾಂಕ್ ಖಾತೆ, ಇನ್ನೊಂದು ಷೇರ್ ಟ್ರೇಡಿಂಗ್ ಖಾತೆ. ಕೆವೈಸಿ (know your customer) ಆಗಿಲ್ಲವೆಂದು ನಮ್ಮ ಖಾತೆ ಫ್ರೀಸ್ ಮಾಡಿದ್ದರು. ಕೆವೈಸಿ ಮೂರು ಖಾತೆಗೂ ಅನ್ವಯಿಸುತ್ತಿತ್ತು. ಮೂರು / ಐದು ವರ್ಷಕ್ಕೊಮ್ಮೆ ವಿಳಾಸ ಬದಲಾವಣೆ ಆಗಿರುವ ಸಂಭವವಿರುತ್ತದೆಯೆಂದು, ಪುನಃ ಕೆವೈಸಿ ಮಾಡುವ ಪದ್ಧತಿ. ಬಹುಶಃ ನಮ್ಮದು ಆಗಿರಲಿಲ್ಲ. ಒಪ್ಪುವಂತದ್ದೇ.
ಕೋವಿಡ್ ನಂತರ ನಮ್ಮ ಡಿಮ್ಯಾಟಿನಲ್ಲಿರುವ ಮೂರೋ ಕಂಪೆನಿಯ ಷೇರ್ ಮಾರಬೇಕೆಂದು ಪ್ರಯತ್ನಿಸಿದೆ. ಆಗಲಿಲ್ಲ, ಕಾರಣ ಮೂರು ಖಾತೆಗಳನ್ನು ಫ್ರೀಸ್ ಮಾಡಿದ್ದರು. ನಂತರ ಎರಡು ಮೂರೋ ತಿರುಗಾಟದ ನಂತರ ಮಂಗಳೂರಿನ ಶಾಖೆಯಲ್ಲಿ ಸರಿಪಡಿಸಿದರು. ಕಾನೂನು ಏನೆಂದರೆ ಖಾತೆಗೆ ಫ್ರೀಸ್ ಮಾಡುವ ಮುನ್ನ ನೋಟೀಸ್ ಕೊಡಬೇಕೆಂದು. ನನಗೆ ನೋಟಿಸ್ ಬಂದಿರಲಿಲ್ಲ. ಬ್ಯಾಂಕ್ ಖಾತೆಯಲ್ಲಿ ನಮ್ಮ ಮಂಗಳೂರು ವಿಳಾಸವಿತ್ತು, ಅಲ್ಲಿಗೊಂದು ಪತ್ರ ಬರೆಯಬಹುದಿತ್ತು, ಫೋನ್ ಮಾಡಬಹುದಿತ್ತು. ಯಾವುದು ಇಲ್ಲದೆ ಖಾತೆಯನ್ನು ಫ್ರೀಸ್ ಮಾಡಿದ್ದು ಸರಿಯಾದ ಕ್ರಮವಾಗಿರಲಿಲ್ಲ. ನನಗೆ ಮಾರ್ಕೆಟ್ ಏರಿದಾಗ, ಷೇರ್ ನ್ನು ಮಾರಲಾಗಲಿಲ್ಲ ಎಂದು ನನಗೆ ಕೋಪವಿತ್ತು. ಈ ವಿಷಯವಾಗಿ ಬ್ಯಾಂಕ್ ಗೂ ನನಗೂ ಪತ್ರ ವ್ಯವಹಾರವಾಯ್ತು. ನನಗೆ ಸಮಾಧಾನಕರ ಉತ್ತರ ಸಿಗಲಿಲ್ಲ. ಒಮ್ಮೆಯೂ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ನಾನು ಬ್ಯಾಂಕಿನ ಒಂಬುಡಸ್ಮನ್ನಲ್ಲಿ ನನ್ನ ಅಹವಾಲು ಮಂಡಿಸಿದೆ. ಇವೆಲ್ಲವೂ ನೆಟ್ ಮೂಲಕ ನಡೆದಿತ್ತು. ಇಲ್ಲಿಯೂ ನನಗೆ ಸಮಾಧಾನದ ಉತ್ತರ ಸಿಗಲಿಲ್ಲ. ನಂತರ ಬ್ಯಾಂಕಿಗೊಂದು ಪತ್ರ ಬರೆದು, ಅಲ್ಲಿಗೆ ಆ ವಿಚಾರ ಕೈ ಬಿಟ್ಟೆ. ಕಾರಣ ಬಹಳ ದೊಡ್ಡ ತೊಂದರೆ ಆಗಿರಲಿಲ್ಲ. ಆದರೆ ಆ ಬ್ಯಾಂಕಿನಲ್ಲಿ ನನ್ನ ವ್ಯವಹಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ.
ಕಳೆದ ವರ್ಷ ನಾನು ಆದಾಯ ತೆರಿಗೆ 40000 ಕ್ಕೂ ಮೇಲ್ಪಟ್ಟು ಕಟ್ಟುವುದು ಬಾಕಿಯಿತ್ತು. ಯೂನಿಯನ್ ಬ್ಯಾಂಕಿನ ನೆಟ್ ಬ್ಯಾಂಕಿನಿಂದ ಕಟ್ಟುವ ಪ್ರಯತ್ನ ಮಾಡಿದೆ. ನನ್ನ ಖಾತೆಯಿಂದ ಹಣ ವರ್ಗಾವಣೆಯಾಯಿತು, ಆದರೆ ನನಗೆ ಆದಾಯ ತೆರಿಗೆ ಇಲಾಖೆಗೆ ಸಂದಾಯವಾದ ನಂತರ ಒಂದು CIN ಸಂಖ್ಯೆ ನನಗೆ ಸಿಗಲಿಲ್ಲ. ಆ ಸಂಖ್ಯೆಯಿಲ್ಲದೆ ನಾನು ತೆರಿಗೆ ಕಟ್ಟಿದ್ದಕ್ಕೆ ಪ್ರೂಫ್ ಇರಲ್ಲ. ಸಾಮಾನ್ಯವಾಗಿ ಒಂದು ವ್ಯವಹಾರ ಸರಿಯಾಗದಿದ್ದರೆ, ಬ್ಯಾಂಕಿನ ಸಿಸ್ಟಮ್ ಪ್ರಕಾರ ಹಣ ನಮ್ಮ ಖಾತೆಗೆ ಮರುಪಾವತಿಯಾಗುತ್ತದೆ. ನಾನು ಬಹುಶಃ ಒಂದು ವಾರದಲ್ಲಿ ಸರಿಯಾಗುತ್ತದೆಯೆಂದು ಮತ್ತೊಂದು ವ್ಯವಹಾರ ಮಾಡಿ, ತೆರಿಗೆ ಪಾವತಿ ಮಾಡಿದೆ.
ಆದರೆ ಒಂದು ವಾರದ ನಂತರವೂ ಆದಾಯ ತೆರಿಗೆ ಇಲಾಖೆಗೆ ಸರಿಯಾಗಿ ತಲುಪದ ಹಣ, ಬ್ಯಾಂಕಿನವರು ನನ್ನ ಖಾತೆಗೆ ಮರುಪಾವತಿ ಮಾಡಲಿಲ್ಲ. ಅದರ ಸಂಬಂಧವಾಗಿ ಈಮೇಲ್ ನಲ್ಲಿ ಪತ್ರ ಬರೆದೆ. ಮಾಡುತ್ತೇವೆಂಬ ಸ್ವಯಂಚಾಲಿತ ಸಂದೇಶ ಬಂತು. ಎರಡು ವಾರಕ್ಕೂ ಸರಿಯಾಗಲಿಲ್ಲ. ಆಗ ಎರಡು ದಿನಕ್ಕೊಮ್ಮೆ ಬ್ಯಾಂಕಿನ ಸಹಾಯವಾಣಿಗೆ ದೂರವಾಣಿಯಲ್ಲಿ ಮಾತನಾಡಿದೆ. ನನ್ನ ಕತೆ ಕೇಳಿ, ಇನ್ನೆರಡು ದಿನ ಸರಿಯಾಗುತ್ತದೆ ಆಶ್ವಾಸನೆಯಿತ್ತರೂ, ಕೆಲಸ ಆಗಲಿಲ್ಲ. ಒಂದು ದಿನ ಸಹಾಯವಾಣಿ ಕರೆಯಲ್ಲಿ, ನಿಮ್ಮ ಮೇಲಿನ ಅಧಿಕಾರಿಗಳಿಗೆ ಫೋನ್ ವರ್ಗಾಯಿಸಿ, ಎಂದೆ. ಆ ದಿನವೂ ಕೆಲಸ ವಾಗಲಿಲ್ಲ. ಸುಮಾರು ಒಂದು ತಿಂಗಳಾಗಿತ್ತು. ಮತ್ತೊಂದು ದಿನ ಫೋನ್ ಮಾಡಿ, ನನ್ನ ಕೇಸಿನ ವಿವರವನ್ನು ವಿಸ್ತಾರವಾಗಿ ತಿಳಿಸಿ, ನೀವು ಇನ್ನೆರಡು ದಿನದಲ್ಲಿ ನನ್ನ ಖಾತೆಗೆ ಹಣ ಮರುಪಾವತಿ ಮಾಡಲಿಲ್ಲವೆಂದರೆ, ನನಗಾಗಿರುವ ತೊಂದರೆ ಕುರಿತು, ಸೈಬರ್ ಅಪರಾಧವಿರಬಹುದೆಂದು ಶಂಕಿಸಿ, ಪೋಲಿಸ್ ರಲ್ಲಿ ದೂರು ಕೊಡುವುದು ಅನಿವಾರ್ಯವಾಗುತ್ತದೆ, ಈ ವಿಷಯ ಮೇಲಧಿಕಾರಿಗೆ ತಿಳಿಸಿರೆಂದು ಮನವಿ ಮಾಡಿದೆ. ಈದಾದ ಎರಡು ದಿನಗಳಲ್ಲಿ, ನನ್ನ ಕೇಸನ್ನು ಕೂಲಂಕುಷವಾಗಿ ನೋಡಿ, ಅದು ಆದಾಯ ಇಲಾಖೆ ತಲುಪಿದೆ, ಸಂಬಂಧಿಸಿದ CIN ಸಂಖ್ಯೆಯು , ಆದಾಯ ತೆರಿಗೆ ಇಲಾಖೆಯ ನನ್ನ ಪಾನ್ ಮೂಲಕ ಲಾಗಿನ್ ಆದರೆ CIN ನಂಬರ್ ಸಿಗುವುದೆಂದು ತಿಳಿಸಿದರು. ಮತ್ತೆರಡು ದಿನದಲ್ಲಿ ಪ್ರಾದೇಶಿಕ ಕಛೇರಿಯಿಂದ ಫೋನ್ ಮಾಡಿ ನನ್ನ ಸಮಸ್ಯೆಗೆ ಒದಗಿದ ಪರಿಹಾರದ ಸರಿಯಿದೆಯೇ ಎಂದು ವಿಚಾರಿಸಿದರು. ಪೋಲೀಸ್ ಇಲಾಖೆಗೆ ಸೈಬರ್ ಅಪರಾಧವಿದೆಯೆಂದು ತಿಳಿಸುವೆನು ಎಂದು ಹೇಳಿದ್ದರಿಂದ, ಬ್ಯಾಂಕಿನ ಹೆಲ್ಪ್ ಲೈನ್ ನವರು ಜಾಗೃತಗೊಂಡರು.
ನಮಗಾದ ತೊಂದರೆ, ಸೇವೆಯಲ್ಲಿನ ನ್ಯೂನತೆಯ ಅಗಾಧತೆ, ಕಾಲ ವಿಳಂಬ, ವ್ಯವಹಾರದಲ್ಲಿ ಒಳಗೊಂಡಿರುವ ಹಣದ ಮೊತ್ತ, ನಮಗಾಗುವ ಖರ್ಚು ಇವೆಲ್ಲವನ್ನು ಆಧರಿಸಿ, ನಾವು ಆ ಸಂಸ್ಥೆಯೊಂದಿಗೆ ವ್ಯವಹಾರದಲ್ಲಿನ ಪ್ರಾಡಕ್ಟ್ ಮತ್ತು ಸೇವೆಯ ನ್ಯೂನತೆಯನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡುವೊದೊಳಿತು. ಮೊದಲು ಮುಖತಃ ಮಾತುಕತೆ ಅಥವಾ ಫೋನ್ ಮತ್ತು ಈಮೇಲ್ ಅಥವಾ ಪತ್ರ ಮುಖಾಂತರ, ನಮ್ಮ ಪ್ರಯತ್ನ ಆರಂಭವಾಗಬೇಕು. ಇದಾವುದೂ ಸಾಧ್ಯವಾಗದಾಗ ಕಾನೂನು ರೀತಿ ಮುಂದುವರಿಯುವುದು ಅನಿವಾರ್ಯ.
-ಪ್ರಕಾಶ ಎನ್, ಮಂಗಳೂರು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!