ಓದುಗರೊಂದಿಗೆ, ಕೆಲವು ಸ್ವಾನುಭವ ಹಂಚಿಕೊಳ್ಳೋಣವೆಂದು ಅನ್ನಿಸ್ತಾ ಇದೆ.

ನನಗೆ ಶುಷ್ಕ ವಾತಾವರಣದಿಂದ ಚರ್ಮಕ್ಕೆ ತೊಂದರೆಯಾಗ್ತಾ ಇತ್ತು. ವೈದ್ಯರ ಸಲಹೆ ಮೇರೆಗೆ ಒಂದು ಮುಲಾಮನ್ನು ಬಳಸುತ್ತಿದ್ದೆ. ಆ ಕಂಪೆನಿಯ ಮುಲಾಮು ವರ್ಷಕ್ಕೆರಡು ಅಥವಾ ಮೂರು ಬಾರಿಯೋ ದರ ಹೆಚ್ಚಾಗ್ತಿತ್ತು. ಆ ಮುಲಾಮು ಅರ್ಧ ಖಾಲಿಯಾಗುವಷ್ಟರಲ್ಲಿ, ಕೆಲವಡೆ ಟ್ಯೂಬ್ ಒಡೆದು ಮಧ್ಯದಲ್ಲಿ ಮುಲಾಮು ಸೋರ್ತಿತ್ತು. ಹೀಗೆ ಮೂರು- ನಾಲ್ಕು ಬಾರಿ ತೊಂದರೆಯನ್ನು ಅನುಭವಿಸಿದೆ. ಮುಲಾಮು ಬಳಕೆ ನನಗೆ ಅನಿವಾರ್ಯವಾಗಿತ್ತು, ಆದರೂ ತೊಂದರೆ ಸಹಿಸ್ತಾ ಇದ್ದೆ.

ಇದಕ್ಕೇನು ಉಪಾಯ? ಒಮ್ಮೆ ಆ ಒಡೆದ ಟ್ಯೂಬಿನ ಫೋಟೊ ತೆಗೆದು, ಬ್ಯಾಚ್ ನಂ, ತಯಾರಿಸಿದ ತಾರೀಖು ವಿವರಗಳನ್ನು, ಆಗುವ ತೊಂದರೆಯನ್ನು ವಿವರಿಸಿ, ದರವನ್ನು ವರ್ಷದಲ್ಲಿ ೧೦-೧೫% ಏರಿಸ್ತಾ ಇದ್ದೀರಿ, ಈ ತೊಂದರೆ ಬಗ್ಗೆ ಗಮನ ಕೊಡಿ, ಇಲ್ಲದಿದ್ದರೆ, ವೈದ್ಯರಿಂದ ಸಲಹೆ ಪಡೆದು ಬೇರೆ ಕಂಪೆನಿಯ ಔಷಧಿ ಖರೀದಿಸುತ್ತೇನೆ ಮತ್ತು ಡ್ರಗ್ ಕಂಟ್ರೋಲರ್ ಗೆ ದೂರು ಕೊಡುತ್ತೇನೆಂದು ಪತ್ರ ಬರೆದೆ. ಕಂಪೆನಿಯವರು ಉತ್ತರ ಬರೆದು, ಮತ್ತೊಮ್ಮೆ ಅದರ ಫೋಟೊ ಕಳಿಸಿರೆಂದು ತಿಳಿಸಿದರು. ಮತ್ತೊಮ್ಮೆ ಎರಡು / ಮೂರೋ ಬೇರೆ ಬೇರೆ ಕೋನದಿಂದ ಫೋಟೊ ತೆಗೆದು ಕಳಿಸಿದೆ.

ನಂತರ ಎರಡು ವಾರದಲ್ಲಿ, ಮಂಗಳೂರಿನ ಕಂಪೆನಿಯ ಪ್ರತಿನಿಧಿಯು ನನ್ನನ್ನು ಸಂಪರ್ಕಿಸುತ್ತಾರೆಂದು ನನಗೆ ಈಮೇಲ್ ಬಂತು. ಕಂಪೆನಿಯ ಪ್ರತಿನಿಧಿಯು ನನ್ನನ್ನು ಸಂಪರ್ಕಿಸಿ, ನನಗೆ ಎರಡು ಹೊಸ ಟ್ಯೂಬ್ ನ್ನು ದಯಪಾಲಿಸಿ, ಹಳೇ ಟ್ಯೂಬ್ ನ್ನು ಪರೀಕ್ಷೆಗೆ ತೆಗೆದುಕೊಂಡು ಹೋದರು.

ನಮಗೆ ತೊಂದರೆ, ಅನ್ಯಾಯ ಆದಾಗ, ನಾವು ಗೊಣಗುತ್ತೇವೆ ಅಥವಾ ಸಂಬಂಧಪಟ್ಟ ವ್ಯಕ್ತಿಯನ್ನು ಶಪಿಸಿ, ಆ ವಿಷಯ ಮರೆಯುತ್ತೇವೆ. ಬದಲಾಗಿ, ನಾವು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ವಿಷಯ ಸತ್ಯವಾಗಿರಬೇಕು, ದಾಖಲೆಗಳು ಸ್ಪಷ್ಟವಾಗಿರಬೇಕು. ಅಲ್ಪ ಸ್ವಲ್ಪ ಕಾನೂನನ್ನು ತಿಳಿದುಕೊಂಡರೆ ನಿಮ್ಮ ಕೆಲಸ ಸುಲಭವಾಗುತ್ತದೆ.

-ಪ್ರಕಾಶ ಎನ್, ಮಂಗಳೂರು.