





ಸ್ವೀಡನ್ ದೇಶದ ಸ್ಟಾಕ್ ಹೋಂ ಗೆ ನಮ್ಮದು ಕೆಲವು ಬಾರಿ ಭೇಟಿಯಾಗಿತ್ತು. ಸ್ಟಾಕ್ ಹೋಮ್ ನಗರವನ್ನೆಲ್ಲಾ ತಿರುಗಾಡಿಯಾಗಿತ್ತು. ಈಗಂತೂ ಎಲ್ಲಾ ನಗರಗಳು ಏಕತಾನತೆಯತ್ತ ಮುಖ ಮಾಡಿವೆ. ಎಲ್ಲರೂ, ಒಂದು ಹೊರ ಪ್ರವಾಸ ಹೋದ್ರೆ ಹೇಗೆಂಬ ಆಲೋಚನೆ, ಮಗಳದ್ದು. ಮೊಮ್ಮಗನಿಗೆ ಬೇಸಿಗೆ ರಜೆ ಕೂಡ. ಒಂದು ದ್ವೀಪಕ್ಕೆ ಭೇಟಿ ಕೊಟ್ಟರೆ ಹೇಗಾಗಬಹುದು , ಅಂತ ಮಗಳ ಐಡಿಯಾ. ನಮಗಂತೂ ದ್ವೀಪದ ಬಗ್ಗೆ ಗಂಧಗಾಳಿಯಿಲ್ಲ, ನಮ್ಮೂರ ಬಳಿ ಶರಾವತಿ ಹಿನ್ನೀರಿನ ಹೊನ್ನೆಮರಡು, ಉಡುಪಿ ಸಮೀಪದ ಸೇಂಟ್ ಮೇರಿಸ್ ದ್ವೀಪ ಕೇಳಿ ಗೊತ್ತು, ಇನ್ನೂ ನೋಡಿಲ್ಲ. ನಾವೇನೋ ಹೂಂ ಅಂದೆವು. ಆದರೆ ಒಂದು ವಾರದ ಟ್ರಿಪ್ ಅಂದಾಗ ನಮಗೇನು ಮನಸ್ಸಿರಲಿಲ್ಲ.
ಅಂತರ್ ಜಾಲದಲ್ಲಿ ದ್ವೀಪಗಳ ಬಗ್ಗೆ ಹುಡುಕಿದಾಗ, ಸ್ವೀಡನ್ ದೇಶದಲ್ಲಿ ಬಹುಶಃ ಲಕ್ಷಕ್ಕೂ ಹೆಚ್ಚು ದ್ವೀಪಗಳಿವೆ, ಅದರಲ್ಲಿ ಹೆಚ್ಚಿನ ದ್ವೀಪಗಳಲ್ಲಿ ಜನವಸತಿಯೇ ಇಲ್ಲವೆಂದು ತಿಳಿಯಿತು. ಕೆಲವು ದ್ವೀಪದಲ್ಲಿ ಒಂದು ಸಾವಿರಕ್ಕೂ ಕಡಿಮೆ ಜನಸಂಖ್ಯೆಯಂತೆ. ಹಿಮಯುಗದಲ್ಲಿ ಹಿಮ ಕರಗಿದಾಗ, ಇಲ್ಲಿರುವ ದೊಡ್ಡ ಬಂಡೆಗಳ ಎಡೆಯಿಂದ ಹರಿದ ನೀರಿದು. ಈ ನೀರು ಬಾಲ್ಟಿಕ್ ಸಮುದ್ರಕ್ಕೆ ಸೇರಿಕೊಂಡೇ ಇದೆ. ಹಾಗಾಗಿ ಇಲ್ಲಿ ತೆರೆಗಳು ತೀರಾ ಕಡಿಮೆ. ಇವನ್ನೆಲ್ಲಾ ತಿಳಿದಾಗ, ದ್ವೀಪಕ್ಕೆ ಹೋಗುವ ಮನಸ್ಸಾಯಿತು.
ನಾವು ಪ್ರವಾಸ ಕೈಗೊಂಡ ದ್ವೀಪ ಪುಟ್ಟದು, ಹೆಸರು ದೊಡ್ಡದು, “ ಯೀಸ್ಟಹೋಲ್ ಮನ್ “ ಅಂತ. ಇಲ್ಲಿ ಜನವಸತಿಯೇ ಇಲ್ಲ, ಒಂದು ಕಂಪೆನಿಯವರು ಪ್ರವಾಸಿಗರಿಗಾಗಿ ೨೦ ಕುಟೀರಗಳನ್ನು ನಿರ್ಮಿಸಿ ನಡೆಸುತ್ತಿದ್ದಾರೆ. ಸುಮಾರು 1.5 ಚದರ ಕಿಲೋಮೀಟರ್ ವಿಸ್ತೀರ್ಣವಿರುವ ದ್ವೀಪ. ಸ್ಟಾಕ್ ಹೋಮ್ ನಗರದಿಂದ ಸ್ವಲ್ಪ ದೊಡ್ಡ ದ್ವೀಪವಾದ ಇಂಗ್ ಮಾರ್ಷ ಕ್ಕೆ ಹೋಗುವ ಐದಾರು ಫೇರೀಬೋಟ್ಗಳು ಈ ದ್ವೀಪದಲ್ಲಿಯೂ ನಿಲ್ಲುತ್ತವೆ. ಪ್ರಯಾಣಿಕರು ಇಳಿಯುವವರಿದ್ದರೆ ನಿಲ್ಲಿಸುತ್ತಾರೆ. ಈ ದ್ವೀಪದಿಂದ ಪ್ರಯಾಣಿಸಲಿಚ್ಛಿಸುವವರು, ತಮ್ಮ ಕೋರಿಕೆಯನ್ನು ಆ ದಡದಲ್ಲಿರುವ ಕಂಭದ ಸಂಕೇತದ ಮೂಲಕ ತಿಳಿಯಪಡಿಸಬೇಕು. ಸುಮಾರು ಮೂರು ಗಂಟೆ ಪ್ರಯಾಣ. ಇಂತಹ ದ್ವೀಪಗಳಲ್ಲಿ ನಿಲುಗಡೆ ಕೇವಲ ಮೂರ್ನಾಲ್ಕು ನಿಮಿಷ ಮಾತ್ರ.
ಫೆರ್ರಿ ಬೋಟ್ನಿಂದ ಇಳಿದು, ಒಳ ಬರುತ್ತಿದಂತೆಯೇ ಎಡಕ್ಕೆ ಸಮುದ್ರದ ದಂಡೆ., ಅಲ್ಲಿ ಕೂಡ ಕುಳಿತುಕೊಳ್ಳಲು ಮುರ್ನಾಲ್ಕು ಟೇಬಲ್ ಮತ್ತು ಬೆಂಚುಗಳಿವೆ. ದಂಡೆಗೆ ತಾಗಿ, ಕೆಲವು ಹಾಯಿ ದೋಣಿಗಳಿವೆ. ಮೋಟಾರ್ ಬೋಟ್ಗಳಿವೆ..ಕೆಲವರು ಹಾಯಿ ದೋಣಿಯಲ್ಲಿ ಹೋಗಿ ಬರ್ತಾರೆ. ಮೋಟಾರ್ ಬೋಟ್ ಉಪಯೋಗಿಸಲು ಅವಕಾಶವಿದೆ. ಬಲಕ್ಕೆ ವಿಶ್ರಾಂತಿ ಪಡೆಯಲು ಮರದ ಛಾವಣಿ ಇದೆ. ಅಲ್ಲಿ ಕುಳಿತು ತಿನಿಸನ್ನು, ಬಿಸಿ ಮಾಡಿ ತಿನ್ನಬಹುದು. ಮಕ್ಕಳು ಆಟ ಆಡಲು ಒಂದು ಎತ್ತರದ ಮರಕ್ಕೆ ಜೋಕಾಲಿ ಕೂಡ ಇದೆ. ನೀರಿನ ಗುಂಟ ತಿರುಗಾಡಬಹುದು. ಮೀನು ಹಿಡಿಯುವ ಆಸಕ್ತಿ ಇದ್ದರೆ, ಮೀನು ಹಿಡಿಯಲು , ಮೀನಿನ ಬಲೆಗಳಿವೆ. ಇವೆನ್ನೆಲ್ಲಾ ನೋಡುತ್ತಿದ್ದಂತೆಯೇ ನಮಗೆ ವಿಶಿಷ್ಟ ಅನುಭವ ಉಂಟಾಗುತ್ತದೆ.
ಇವುಗಳನ್ನು ಗಮನಿಸುತ್ತಿದ್ದಂತೆಯೇ, ಕೇರ್ ಟೇಕರ್ ಬಂದು, ನಮ್ಮ ಕುಟೀರಕ್ಕಿರುವ ಕಾಲು ದಾರಿ ತೋರಿಸಿ, ನಮ್ಮ ದೊಡ್ಡ ಸಾಮಾನಿರುವ ಸೂಟ್ ಕೇಸ್ ಗಳನ್ನು ಮೋಟಾರ್ ಬೈಕ್ ನಲ್ಲಿ ನಮ್ಮ ಕಾಟೇಜ್ಗೆ ತಲುಪಿಸಿದರು.
ಇಲ್ಲಿಯ ಕುಟೀರಗಳ ವಿಶೇಷವೇನೆಂದರೆ, ಗೋಡೆ, ಬಾಗಿಲು, ನೆಲ ಎಲ್ಲದಕ್ಕೂ ಮರವನ್ನೇ ಉಪಯೋಗಿಸಿದ್ದಾರೆ. ಪ್ರತಿಯೊಂದು ಕುಟೀರವೂ ಎತ್ತರದ ಕಲ್ಲಿನ ಮೇಲೆಯೇ ಇದೆ. ಇನ್ನೂರು ಅಡಿ ದೂರದಲ್ಲಿ ನೀರಿದೆ. ಎಲ್ಲಾ ಕಡೆಯಿಂದಲೂ ನೀರಿಗಿಳಿಯಲು ಸಾಧ್ಯವಿಲ್ಲ, ಕಾರಣ ಕುಟೀರ ಹಿಂಭಾಗದಿಂದ ನೀರಿಗೂ ಕಡಿದಾದ ಕಲ್ಲು ಬಂಡೆಗಳಿವೆ. ಕುಟೀರಗಳು ಒಂದಕ್ಕೊಂದು ೫೦- ೧೦೦ ಮೀಟರ್ ಅಂತರದಲ್ಲಿದೆ. ಮರದ ಕುಟೀರವನ್ನು ಒಂದು ಹತ್ತು ಹನ್ನೆರಡು ಸಿಮೆಂಟ್ ಕಂಭದ ಮೇಲೆ ಕೂರಿಸಿದ್ದಾರೆ. ಕುಟೀರದ ವಿಸ್ತಾರ ಸುಮಾರು 250 ಚದರ ಅಡಿಯಿದೆ. ಹೊರಗಡೆ ಕುಳಿತು ಸಮುದ್ರ ತೀರ, ಗಿಡ ಮರಗಳನ್ನು ವೀಕ್ಷಿಸಲು, ಹಕ್ಕಿಗಳ ಚಿಲಿಪಿಲಿ ಕೇಳಲು
ಮನೆಯ ಎದುರು ಒಂದು ಸಣ್ಣ ಸಿಟ್ ಔಟ್ , ಟೇಬಲ್, ಕುರ್ಚಿ ಎಲ್ಲಾ ಇವೆ. ಮನೆಯ ಒಳಗಡೆ ಚಿಕ್ಕದಾದ ಹಾಲ್ , ಅಲ್ಲಿಯೇ ಅಡುಗೆ ಕಟ್ಟೆ, ಕರೆಂಟ್ ಸ್ಟೋವ್, ಫ್ರಿಜ್, ಮೈಕ್ರೋಒವನ್, ಟೇಬಲ್, ಕುರ್ಚಿ, ಒಂದು ದಿವಾನ ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿದ್ದಾರೆ. ಪಕ್ಕದಲ್ಲಿಯೇ ಮಲಗುವ ಕೋಣೆ, ಟಾಯ್ಲೆಟ್ , ಸ್ನಾನದ ಕೋಣೆ ಇದೆ. ಎರಡು ಮೂರು ಜನ ಮಲಗುವಂತಹ ಪುಟ್ಟ ಅಟ್ಟವೂ ಇದೆ. ರಾತ್ರಿ ಮಲಗುವ ಮುನ್ನ ನಮ್ಮ ಕಾಟೇಜಿನ ಕಿಟಕಿಯಿಂದ ಶಾಂತ ಬಾಲ್ಟಿಕ್ ಸಮುದ್ರದ ನೀರನ್ನು ನೋಡುವುದೇ ಮಹದಾನಂದ.
ಇಲ್ಲಿ ಯಾವುದೇ ಹೊಟೇಲ್ ಅಥವಾ ಅಂಗಡಿಗಳಿಲ್ಲ. ಅಗತ್ಯವಾದ ದಿನಸಿ, ಹಾಲು, ತರಕಾರಿ ಹಣ್ಣಿನ ಸಂಗ್ರಹ ನಮ್ಮಲ್ಲಿತ್ತು. ಮಧ್ಯೆ ಸರಕುಗಳು ಖಾಲಿಯಾಗಿದರೆ, ಫೆರ್ರೀ ಬೋಟ್ನಲ್ಲಿ ಪ್ರಯಾಣಿಸಿ, ಹತ್ತಿರದ ದೊಡ್ಡ ದ್ವೀಪವಾದ ಸದ್ರಾ ಇಂಗಮರ್ಷಾದಿಂದ ಸಾಮಾನುಗಳನ್ನು ತರಬಹುದಾಗಿತ್ತು.
ಅಡುಗೆಮನೆಯಲ್ಲಿ ತಕ್ಕ ಮಟ್ಟಿಗೆ ಪಾತ್ರೆಗಳಿವೆ. ನಾವು ನಾಲ್ಕು ಜನ ದೊಡ್ಡವರು, ಎರಡು ಮಕ್ಕಳು. ನಾವು ಇಲ್ಲಿಯೇ ದಾಲ್, ಅನ್ನ, ಆಮ್ಲೆಟ್ ಮಾಡಿಕೊಳ್ಳುತ್ತಿದ್ದೆವು. ನಮಗರಿವಿಲ್ಲದಂತೆಯೇ, ಸಣ್ಣ ಜಾಗದಲ್ಲಿ ಒಂದು ವಾರ, ಆರು ಜನವೂ ಹೊಂದಿಕೊಂಡು ಹೋಗುವ ಮನಸ್ಥಿತಿಯನ್ನು ಬೆಳೆಸಿಕೊಂಡೆವು. ಆಹಾರದಲ್ಲಿಯೂ ಇತಿಮಿತಿಯನ್ನು ನೋಡಿ, ಊಟ ತಿಂಡಿ ತಯಾರು ಮಾಡುತ್ತಿದ್ದೆವು. ಎಲ್ಲರೂ ಪಾಕದಲ್ಲಿಯೂ , ಪಾತ್ರೆ ತೊಳೆಯುವುದರಲ್ಲೂ ಅನುಭವಸ್ಥರೇ , ಹಾಗಾಗಿ ಎಲ್ಲವೂ ಸುಲಲಿತವಾಗಿ ನಡೆಯುತ್ತಿತ್ತು.
ಕುಟೀರದ ಹೊರಗಡೆ ಸಾಕಷ್ಟು ಮರಗಳಿವೆ. ಅದರಾಚೆ ನೀರು..ಮರಗಳ ಮಧ್ಯೆ ಮಧ್ಯೆ ರಾಸ್ ಬೇರ್ರಿ ಹಣ್ಣಿನ ಗಿಡಗಳಿವೆ. ಮಕ್ಕಳ ಕೈಗೆಟುಕುವಷ್ಟು ಎತ್ತರದ ಗಿಡ. ಕೆಂಪು ಹಣ್ಣು , ಸಿಹಿ, ಸಿಹಿ. ಸಾಕಷ್ಟು ಹಣ್ಣುಗಳು ಸಿಗುತ್ತಿದ್ದವು..,
ಮರುದಿನ ನೋಡುತ್ತಿದ್ದಂತೆಯೇ ಬ್ಲೂಬೆರ್ರಿ ಹಣ್ಣುಗಳು ಕಾಣ ಸಿಕ್ಕವ್ವು. ಅವು ಬಹಳ ಸಣ್ಣ ಗಿಡಗಳು ನೆಲದಿಂದ ಅರ್ಧ ಅಡಿ ಎತ್ತರದವು. ತುಂಬಾ ಸಿಹಿ. ಇವು ಸಾಕಷ್ಟು ಗಿಡಗಳು ಇದ್ದವು. ಮಕ್ಕಳಿಗೆ ಕೊಯ್ದು ತಿನ್ನುವುದು ಖುಷಿಯ ಕೆಲಸ. ನಮಗೂ ಮಕ್ಕಳ ಜೊತೆ ಖುಷಿಯೇ.
ನಮ್ಮ ಕಾಟೇಜ್ ಸಮೀಪದಲ್ಲಿ ಒಂದು ಸರ್ವೀಸ್ ಹಾಲ್ ಇದೆ, ಇದನ್ನು ಎಲ್ಲಾ ಕಾಟೇಜಿನ ನಿವಾಸಿಗಳು ಬಳಸಬಹುದು. ಮೀಟಿಂಗ್ ನಡೆಸಬಹುದು, ಊಟ ತಿಂಡಿ ಮಾಡಬಹುದು, ಕುಳಿತು ಹರಟಬಹುದು, ಟೇಬಲ್ ಟಿನ್ನಿಸ್ ಕೋರ್ಟ್ ಕೂಡ ಇದೆ. ಪಕ್ಕದಲ್ಲಿಯೇ ಊಟತಿಂಡಿ ತಯಾರು ಮಾಡಲು , ಕಾಮನ್ ಅಡುಗೆ ಮನೆ , ಫ್ರಿಜ್, ಡಿಶ್ ವಾಷರ್ ಇವೆ. ದಿನಾ ಸಾಯಂಕಾಲ , ನಾವೆಲ್ಲರೂ ಸೇರಿ ಟೇಬಲ್ ಟೆನಿಸ್, ಹಾವು ಏಣಿ ಆಟ, ಇಸ್ಪೀಟ್ ಆಟ, ಜೊತೆಗೆ ವ್ಯಾಯಾಮ, ಪ್ರಾಣಾಯಾಮದಲ್ಲಿ ಟೈಮ್ ಕಳೆಯುತ್ತಿದ್ದೆವು.
ಪೂರ್ವಕ್ಕೆ ಹೋದರೆ ನೀರಿಗಿಳಿದು ಈಜಲು ಅವಕಾಶವಿದೆ. ಈಜು ಬಾರದವರೂ ನಾಲ್ಕೈದು ಮೆಟ್ಟಿಲು ಇಳಿದು ನೀರಿಗಿಳಿದು ತಣ್ಣನೆಯ ನೀರಿನ ಅನುಭವ ಪಡೆಯಬಹುದು..ನಂತರ ಅಲ್ಲಿಯೇ ಬಿಸಿಲಿಗೆ ಮೈ ಒಡ್ಡಿ..ಬಿಸಿಲನ್ನೇ ಆಸ್ವಾದಿಸುತ್ತಾ ಮಲಗಬಹುದು. ಇಲ್ಲಿ ಸ್ತ್ರೀಪುರುಷರೆನ್ನುವ ಬೇಧವಿಲ್ಲದೆ, ಕನಿಷ್ಠ ಒಳ ಉಡುಪಿನಲ್ಲಿ ನೀರಿಗಿಳಿಯುತ್ತಾರೆ, ಸೂರ್ಯನ ಕಿರಣಗಳಲ್ಲಿ ಸಿಗುವ ವಿಟಾಮಿನ್ ಡಿ ತೆಗೆದುಕೊಳ್ಳಲು, ತೆರೆದ ಜಾಗದಲ್ಲಿ ಮಲಗಬಹುದು.
ಈಜಿ ತುಂಬಾ ಛಳಿಯಾದರೆ, ಅಲ್ಲಿ ಸ್ನಾನದ ಮನೆಯಿದೆ. ಅಲ್ಲಿ ಹೋಗುವ ಮುನ್ನ ಬಿಸಿ ಅಥವಾ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ, ಒಂದು ಬಿಸಿ ಹಬೆಯ ಕೋಣೆಯಲ್ಲಿ ಕುಳಿತುಕೊಂಡು, ಬಿಸಿ ಹಬೆ ಅನುಭವಿಸಿ, ಮೈಕೈ ನೋವಿಗೆ ವಿದಾಯ ಹೇಳಬಹುದು. ಮೊದಲು ಆ ಕೋಣೆಯನ್ನು ಬಿಸಿ ಮಾಡಿಕೊಳ್ಳಬೇಕು. ನಂತರ ಒಳಗಡೆ ಒಂದು ಅಗ್ಗಿಷ್ಟಿಕೆ ಯಲ್ಲಿ ಕಾಯುವ ಕಲ್ಲನ್ನು ಇಟ್ಟಿರುತ್ತಾರೆ.. ಹೆಚ್ಚಿನ ಬಿಸಿ ಬೇಕೆಂದಾಗ ಆ ಕಲ್ಲುಗಳ ಮೇಲೆ ಸ್ವಲ್ಪ ನೀರು ಹಾಕಿದರೆ, ಹಬೆ ಬಿಸಿ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಗೆ ‘ಬಾಸ್ತು’ ಎಂದು ಕರೆಯುತ್ತಾರೆ. ದಿನಾ ಬೆಳಿಗ್ಗೆ ಈಜು ಬಲ್ಲವರು ಈಜಿ, ನಂತರ ಬಾಸ್ತು ವಿನಲ್ಲಿ ಕುಳಿತುಕೊಳ್ಳುವುದು. ಈಜು ಬಾರದವರು ತಣ್ಣೀರಿನಲ್ಲಿ ಸ್ನಾನ ಮಾಡಿ, ಬಾಸ್ತುವಿನಲ್ಲಿ ಕುಳಿತು ಬಿಸಿ ಹಬೆ ಅನುಭವಿಸಿದೆವು. ಇದೊಂದು ಅಪೂರ್ವ ಅನುಭವವೆನ್ನಬಹುದು.
ಈ ಅನುಭವಗಳು, ಚಿಕ್ಕಂದಿನಲ್ಲಿ ಹಳ್ಳಿಯ ಅಜ್ಜನ ಮನೇಲಿ ಅಜ್ಜನೊಂದಿಗೆ ಕುಳಿತು ದೊಡ್ಡ ಕಡಾಯಿಯಲ್ಲಿ ಕಾದ ಬಿಸಿನೀರಿನಲ್ಲಿ ಕುಳಿತು ಮಾಡಿದ ಅಭ್ಯಂಗದ ನೆನಪನ್ನು ಮರುಕಳಿಸಿದವು. ಕೆಲವು ದಿನ ಮಧ್ಯಾಹ್ನ ದ್ವೀಪದ ದ್ವಾರದ ಸಮುದ್ರ ತೀರದಲ್ಲಿ ಕುಳಿತು , ಊಟ ಮಾಡಿದೆವು. ಇಲ್ಲವಾದರೆ ಸಾಯಂಕಾಲ ಟೀ, ಲಘು ಉಪಾಹಾರ (snacks) ತೆಗೆದುಕೊಳ್ಳುವುದು ನಮ್ಮ ದಿನಚರಿಯಾಯ್ತು.
ಸಾಯಂಕಾಲ ಒಂದೊಂದು ದಿಕ್ಕಿನಲ್ಲಿ ವಾಕಿಂಗ್ ಹೋಗುವುದು, ಮೊಮ್ಮಗನೊಂದಿಗೆ ಅಪರೂಪದ ರಾಸ್ ಬೆರ್ರಿ, ಬ್ಲೂಬೆರ್ರಿ ಕೊಯ್ದು ತಿನ್ನುವುದೇ ಒಂದು ಮಜಾ. ನಮ್ಮಂತೆಯೇ ಐದಾರು ಕುಟುಂಬಗಳು ಬಂದಿದ್ದರು. ಜರ್ಮನಿ, ಸ್ವಿರ್ಸಲೆಂಡ್, ಸ್ವೀಡನ್ನಿನವರಾಗಿದ್ದರು. ಇಂಗ್ಲಿಷ್ ಬಲ್ಲವರು ಕೆಲವರು ಮಾತ್ರ. ಹಾಗಾಗಿ ಮುಗುಳ್ನಗೆ ಅಥವಾ ಹಾಯ್ ಎನ್ನುವುದರಲ್ಲಿಯೇ ಸಂಭಾಷಣೆ ಮುಕ್ತಾಯವಾಗುತ್ತಿತ್ತು. ಜೂನ್ ನಿಂದ ಸೆಪ್ಟೆಂಬರ್ ರದವರೆಗೆ ನಗರದ ಜಂಝಟದಿಂದ ಮುಕ್ತರಾಗಿ, ಪ್ರಕೃತಿಯೊಂದಿಗೆ ಕಾಲ ಕಳೆಯುವರಿಗೆ ಒಳ್ಳೇ ಸ್ಥಳ. ಈಜುವರಿಗೂ, ಹಾಯಿ ದೋಣಿ, ! ಮೋಟಾರ್ ಬೋಟ್ ಒಂದು ಸ್ವರ್ಗ..
-ಪ್ರಕಾಶ ಎನ್, ಮಂಗಳೂರು
![]()
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!