ಮಲ್ಲಾಡಿಹಳ್ಳಿಯ 'ತಿರುಕ' ಮತ್ತು ಅವರ ಅಮೂಲ್ಯ 'ಪ್ರಾಣಾಯಾಮ' ಪುಸ್ತಕ

Malladihalli-Pranayama.jpg

ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು 'ಸ್ವಾಮೀಜಿ' ಅನ್ನಿಸಿದ್ದು ಕಡಿಮೆ, ಎಲ್ಲರಿಗೂ 'ಗೆಳೆಯ’ರಾಗಿದ್ದು ಹೆಚ್ಚು ಎಂಬ ಮಾತು ಕೇಳಿಬರುತ್ತದೆ. 'ತಿರುಕ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಯೋಗ, ಪ್ರಾಣಾಯಾಮ, ಆಯುರ್ವೇದ ಮುಂತಾದ ವಿಷಯಗಳನ್ನು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.

ಒಮ್ಮೆ ಒಂದು ಪ್ರದರ್ಶನ (Exhibition) ನಡೆದಿತ್ತು. ಅಲ್ಲಿ 'ಅನಾಥ ಸೇವಾಶ್ರಮ'ದ ಪುಸ್ತಕಗಳನ್ನು ಒಂದು ಸ್ಟಾಲಿನಲ್ಲಿ ಇಟ್ಟಿದ್ದರು. ನನ್ನ ಜೊತೆ ಹೊರದೇಶದಿಂದ ಬಂದಿದ್ದ ಅತಿಥಿಯೊಬ್ಬರು ಸ್ಟಾಲ್‌ಗಳನ್ನು ನೋಡಲು ಬಂದಿದ್ದರು. ನಾವು ಅನಾಥ ಸೇವಾಶ್ರಮದ ಸ್ಟಾಲಿಗೆ ಬಂದಾಗ, ಅಲ್ಲಿದ್ದ ಪುಸ್ತಕಗಳ ಬೆಲೆಯನ್ನು ನೋಡಿ ಆ ವಿದೇಶಿ ಅತಿಥಿ ಒಂದು ಕ್ಷಣ ದಂಗಾದರು!

"ಇದೇನಿದು? ಹತ್ತು ರೂಪಾಯಿ, ಏಳು ರೂಪಾಯಿ, ಮೂರು ರೂಪಾಯಿ ಎಂದೆಲ್ಲ ಇದೆ? ಈ ಕಾಲದಲ್ಲೂ ಇಷ್ಟು ಕಡಿಮೆ ಬೆಲೆಗೆ ಪುಸ್ತಕಗಳು ಸಿಗುತ್ತವೆಯೇ? ಇಷ್ಟು ಕಡಿಮೆ ಬೆಲೆಯ ಪುಸ್ತಕ ಕೊಂಡುಕೊಳ್ಳಲು ನನ್ನ ಹತ್ತಿರ ಇರುವ ಹಣವನ್ನು ಇವರಿಗೆ ಹೇಗೆ ಕೊಡುವುದು? ನಾನು ಹೆಚ್ಚು ಪುಸ್ತಕಗಳನ್ನು ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ. ಕನಿಷ್ಠ ಒಂದು ನೂರು ರೂಪಾಯಿಯ ಪುಸ್ತಕವಾದರೂ ತೆಗೆದುಕೊಳ್ಳೋಣ ಎಂದರೆ ಈಗ ಆಗದು!” ಎಂದರು.

ಆ ಕ್ಷಣ ನನಗೆ ಮಲ್ಲಾಡಿಹಳ್ಳಿ ಸ್ವಾಮೀಜಿಗಳ ದೂರದೃಷ್ಟಿ, ಅವರ ಕೆಲಸದ ಅಗಾಧ ವ್ಯಾಪ್ತಿ ಮತ್ತು ಬಡವರ ಕುರಿತು ಅವರಿಗಿದ್ದ ಕಾಳಜಿ—ಇದೆಲ್ಲವನ್ನೂ ಸಂಕ್ಷಿಪ್ತವಾಗಿ ಆ ವಿದೇಶಿಗರಿಗೆ ವಿವರಿಸುವುದು ಕಷ್ಟವಾಗಿಬಿಟ್ಟಿತ್ತು. ಮಲ್ಲಾಡಿಹಳ್ಳಿಯ ತಿರುಕರ ಬಗ್ಗೆ ಎಲ್ಲರಿಗೂ ಸುಲಭವಾಗಿ ಹೇಳಿ ಮುಗಿಸಲು ಸಾಧ್ಯವಿಲ್ಲ.

ಅವರು ನಮಗೂ ಗುರುಗಳೇ. ನನ್ನ ಅಮ್ಮ ಅವರ ಬಳಿ ಯೋಗ ಕಲಿತವರು. ಒಮ್ಮೆ ಅಮ್ಮನಿಗೆ ತೀರ ಹುಷಾರಿಲ್ಲದಿದ್ದಾಗ ಮಲ್ಲಾಡಿಹಳ್ಳಿ ಸ್ವಾಮೀಜಿಯವರ ಬಳಿ ಹೋಗಿದ್ದರಂತೆ. ಅವರು ನೋಡಲು ಸ್ವಾಮೀಜಿಯಂತೆ ಕಂಡಿದ್ದು ಕಡಿಮೆ, ತೀರಾ ಸಾಧಾರಣ ಮನುಷ್ಯನಂತೆ ಇದ್ದರು. ಅವರ ಸುತ್ತಮುತ್ತಲಿನ ಪರಿಸರವೂ ಹಾಗೇ ಇತ್ತಂತೆ. ಅಮ್ಮನಿಗೆ ಅವರು ಧೈರ್ಯ ತುಂಬುತ್ತಾ:

"ನೋಡಮ್ಮಾ, ಆ ಯಮರಾಜನೇ ಬಂದು ನಿನ್ನನ್ನು ಕರೆದರೂ, 'ನನಗೆ ಇನ್ನೂ ಹೋಗಲು ಸಮಯವಾಗಿಲ್ಲ' ಎಂದು ಹೇಳು. ನಿನಗೆ ಏನೂ ಆಗುವುದಿಲ್ಲ, ಗಟ್ಟಿಯಾಗಿರು, ಔಷಧಿ ಕೊಡುತ್ತೇನೆ" ಎಂದು ಹೇಳಿ ಔಷಧಿ ಕೊಟ್ಟು ಕಳಿಸಿದರಂತೆ.

ಅವರು ಬರೆದಿರುವ 'ಪ್ರಾಣಾಯಾಮ' ಪುಸ್ತಕವು ಸಂಕ್ಷಿಪ್ತವಾಗಿ, ಸವಿವರವಾಗಿ, ಎಲ್ಲವನ್ನೂ ತಿಳಿದ ಅನುಭವಸ್ಥರು ಅಮೂಲ್ಯವಾದ ಮಾತುಗಳನ್ನಾಡಿ ನಮ್ಮ ಹಿತ ಬಯಸುವ ವೈಖರಿಯಲ್ಲಿ ಮೂಡಿಬಂದಿದೆ. ಈ ಪುಸ್ತಕದ ಬೆಲೆ ಕೇವಲ ಎಂಟೇ ರೂಪಾಯಿ! 1973ರಲ್ಲಿ ಬರೆದ ಈ ಪುಸ್ತಕ, ಇವತ್ತಿಗೂ ಸಮರ್ಪಕವಾಗಿ ಪ್ರಾಣಾಯಾಮದ ಪರಿಚಯವನ್ನು ನಮ್ಮೆಲ್ಲರಿಗೂ ಮಾಡಿಕೊಡುತ್ತದೆ. ಇಷ್ಟು ವರ್ಷಗಳಲ್ಲಿ ಇದು ಅದೆಷ್ಟೋ ಬಾರಿ ಮುದ್ರಣವಾಗಿರಬೇಕು. ನನ್ನ ಬಳಿ ಇನ್ನೂ ಮೊದಲ ಕೆಲವು ಮುದ್ರಣಗಳ ಪುಸ್ತಕಗಳಿವೆ - ಅದನ್ನು ಅಮೂಲ್ಯವಾದ ಸ್ವತ್ತಿನಂತೆ ಇಟ್ಟುಕೊಂಡಿರುವೆ.

ಒಮ್ಮೆ ಪುಸ್ತಕ ಮುದ್ರಿಸುವಾಗ ಸ್ವಾಮೀಜಿಯವರಿಗೆ ಹಲವು ತೊಂದರೆಗಳಾಗಿದ್ದವಂತೆ. ಹೀಗಾಗಿ ತೃತೀಯ ಮುದ್ರಣಕ್ಕೆ ಅವರು ಬರೆದ ಟಿಪ್ಪಣಿಯಲ್ಲಿ: "ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂಬ ಹಳೆಯ ಜಾಣ್ಣುಡಿಯ ಜೊತೆಗೆ, "ಪುಸ್ತಕ ಅಚ್ಚು ಹಾಕಿಸಿ ನೋಡು" ಎಂಬುದು ನನ್ನ ಸ್ವಾನುಭವ ಎಂದು ಬರೆದಿದ್ದಾರೆ. ‘ತಿರುಕ’ರಿಗೆ ಶ್ರೀ ಶ್ರೀ ಪಳನಿ ಸ್ವಾಮೀಜಿಯವರು ಗುರುಗಳಾಗಿದ್ದರು, ಹಾಗಾಗಿ ಈ ಪುಸ್ತಕವನ್ನು ಅವರಿಗೆ ಸಮರ್ಪಿಸಿದ್ದಾರೆ. ಪುಸ್ತಕದ ಮುನ್ನುಡಿಯು "ತೊಟ್ಟಿಲ ಕೂಸಿಗೆ ಬಾಲಗ್ರಹ ಪೀಡೆ" ಎಂಬ ವಿಷಯದ ಪ್ರಸ್ತಾಪದೊಂದಿಗೆ ಪ್ರಾರಂಭವಾಗುತ್ತದೆ.

ಈಗ ನಮ್ಮಲ್ಲಿ ಹಲವರಿಗೆ ದಿನನಿತ್ಯದ ಕೆಲಸದಲ್ಲಿ ಆರೋಗ್ಯವೇ ದೊಡ್ಡ ಅಡೆತಡೆ ಉಂಟುಮಾಡುತ್ತದೆ. 'ಹೀಗಾಗಿ ಸಮಸ್ಯೆಗೆ ಪರಿಹಾರ ಏನು?' ಎಂದು ಆಲೋಚಿಸುವಾಗ, ಬಹಳಷ್ಟು ವರ್ಷಗಳಿಂದ ನನಗೂ ಹೊಳೆಯದಿದ್ದ ವಿಷಯ ಏನಪ್ಪಾ ಎಂದರೆ ಅದು ಪ್ರಾಣಾಯಾಮ. ಪ್ರತಿನಿತ್ಯ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ದೂರ ನಿಲ್ಲುತ್ತವೆ. ಆದರೆ ಈ ಜಾಣ್ಮೆ ನನ್ನಲ್ಲಿ ಬರುವಷ್ಟರಲ್ಲಿ ಎಷ್ಟೋ ವರ್ಷಗಳು ಕಳೆದಿದ್ದವು.

ನಾನು ಸಣ್ಣವನಿದ್ದಾಗಲೇ ಅಮ್ಮ ನನಗೆ ಪ್ರಾಣಾಯಾಮ, ಯೋಗ ಎಲ್ಲವನ್ನೂ ಹೇಳಿಕೊಟ್ಟಿದ್ದರು. ಅವರು ಕಲಿತದ್ದು ಮಲ್ಲಾಡಿಹಳ್ಳಿಯ ಸ್ವಾಮೀಜಿಗಳಾದ ‘ತಿರುಕ’ರಿಂದ. ಆದರೆ ಪ್ರಾಣಾಯಾಮದ ಪರಿಚಯ ಇಷ್ಟು ಸುಲಭವಾಗಿ ಅರ್ಥವಾಗುವಂತೆ ನನಗೆ ಓದಲು ಸಿಕ್ಕಿದ್ದು ಇದೇ ಪುಸ್ತಕದಲ್ಲಿ. ನನ್ನ ಮನೆಯಲ್ಲಿ ಯೋಗ ಮತ್ತು ಪ್ರಾಣಾಯಾಮದ ಹಲವು ಪುಸ್ತಕಗಳಿವೆ. ಪ್ರಾಣಾಯಾಮವನ್ನು ಇಷ್ಟು ಸುಲಭವಾಗಿ ತಿಳಿಸುವ ಪುಸ್ತಕವನ್ನು ನಾನು ಓದಿಲ್ಲ. ನೀವೇ ಒಮ್ಮೆ ಈ ಪುಸ್ತಕವನ್ನು ಕೊಂಡು ಓದಿ ನೋಡಿ.

ಸಾಧ್ಯವಾದರೆ ಮಲ್ಲಾಡಿಹಳ್ಳಿಗೂ ಒಮ್ಮೆ ಭೇಟಿ ಕೊಡಿ. ಮುಂಚಿನ ಮಲ್ಲಾಡಿಹಳ್ಳಿ ಈಗ ಇಲ್ಲದಿರಬಹುದು, ನಾನು ಕೂಡ ಇತ್ತೀಚೆಗೆ ಹೋಗಿಲ್ಲ. ಆದರೆ ಅಂದು ಇದ್ದ ಕಳೆ ಅಕಸ್ಮಾತ್ ಈಗ ಇಲ್ಲದಿದ್ದರೂ, ಅಲ್ಲಿ ಅವರ ಪುಸ್ತಕಗಳಂತೂ ನಿಮಗೆ ಸಿಗಬಹುದು.

ಮುನ್ನುಡಿಯ ಕೊನೆಯಲ್ಲಿ ಪುಸ್ತಕದ ವಿಚಾರವಾಗಿ ಮಲ್ಲಾಡಿಹಳ್ಳಿ ಸ್ವಾಮೀಜಿಯವರು, "ನಾನು ಎಲ್ಲಿ ಎಡವಿದ್ದೇನೋ ನನಗೆ ಗೊತ್ತಿಲ್ಲ, ಆದರೆ ಆತ್ಮೀಯ ಗುರುಗಳಾದ ಹಿರಿಯ ಸಾಹಿತಿ ಪ್ರೊಫೆಸರ್ ವೆಂಕಟರಾಮಪ್ಪನವರು, ಪ್ರೊಫೆಸರ್ ತಳಕು ಶ್ಯಾಮರಾಯರು, ಪ್ರೊಫೆಸರ್ ಸತ್ಯನಾರಾಯಣರವರು ಮೊದಲಾದ ಗಣ್ಯರು ಅದನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ಹೇಳುತ್ತಾರೆ. ನಿಮಗೆ ತಿಳಿದಿರಬಹುದು, ಪ್ರೊಫೆಸರ್ ತಳಕು ಶ್ಯಾಮರಾಯರು ಜಿ. ಎಸ್. ಶಿವರುದ್ರಪ್ಪನವರಿಗೂ ಗುರುಗಳಾಗಿದ್ದವರು.

ಚಿತ್ರದುರ್ಗದ ಸುತ್ತಮುತ್ತ ಬೆಳೆದ ನಮ್ಮಂತವರಿಗೆ ಮಲ್ಲಾಡಿಹಳ್ಳಿ ಒಂದು ಸ್ವರ್ಗವೇ ಆಗಿತ್ತು. ಒಂದೊಮ್ಮೆ ಯಾವುದೋ ಪುಸ್ತಕದಲ್ಲಿ ಮಲ್ಲಾಡಿಹಳ್ಳಿಯ ಆಗಿನ ಚಿತ್ರಣವನ್ನು ಹೊರದೇಶದವರೊಬ್ಬರು ಬರೆದಿಟ್ಟಿದ್ದನ್ನು ಓದಿದ್ದೆ. ಆಗ ಅದು ಯೋಗ ಕಲಿಯಲು ಜಗತ್ಪ್ರಸಿದ್ಧ ತಾಣವಾಗಿತ್ತು. ಜಗತ್ತಿನ ವಿವಿಧ ಎಡೆಗಳಿಂದ ಜನ ಬಂದು ಇಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ಈಗ ‘ಇಶಾ’ ಸಂಸ್ಥೆಯ ಜನಪ್ರಿಯ ಗುರುಗಳಾದ ಜಗ್ಗಿ ವಾಸುದೇವ (ಸದ್ಗುರು) ಕೂಡ ಮಲ್ಲಾಡಿಹಳ್ಳಿಯಲ್ಲಿಯೇ ಯೋಗಾಭ್ಯಾಸ ಮಾಡಿದವರು. ಮಲ್ಲಾಡಿಹಳ್ಳಿ ಸ್ವಾಮೀಜಿ ‘ಸದ್ಗುರು’ವಿಗೂ ಗುರುಗಳಾಗಿದ್ದವರು.

ತಿರುಕರ ಪುಸ್ತಕಗಳು ನಿಜಕ್ಕೂ ಮುತ್ತು-ರತ್ನಗಳು. ಎಲ್ಲರ ಮನೆಯಲ್ಲೂ ಇರಲೇಬೇಕಾದ ಪುಸ್ತಕಗಳಿವು. ನಿಮಗೆ 'ಪ್ರಾಣಾಯಾಮ' ಪುಸ್ತಕ ಇಷ್ಟವಾದರೆ ಅವರ ಇನ್ನುಳಿದ ಪುಸ್ತಕಗಳನ್ನೂ ಕೊಂಡು ಓದಿ. ವಿಶೇಷವಾಗಿ ಅವರ 'ಸ್ವಯಂ ವೈದ್ಯ' ಎಂಬ ಪುಸ್ತಕ ಪ್ರತಿಯೊಬ್ಬರ ಮನೆಯಲ್ಲೂ ಇಟ್ಟುಕೊಳ್ಳಲೇಬೇಕಾದ ಅದ್ಭುತ ಕೈಪಿಡಿ. ಅದನ್ನು ಖಂಡಿತವಾಗಿ ಕೊಂಡು ಓದಿ.