ಪ್ರೀತಿ ಎಂಬುದು ಒಂದು ಸುಂದರ ಮಾಯೆ,
ಕೈಬೀಸಿ ಕರೆಯಿತು ಕಡಲಿನ ಮೋಹಕ ಛಾಯೆ.
ಕಾಲಿಟ್ಟೆ ಸುಮ್ಮನೆ ಕುರುಡಾಗಿ, ಈಜು ಬರದೆ,
ಕೊಚ್ಚಿಹೋದೆ ಅಲೆಗಳ ಅಗಾಧ ಸೆಳೆತಕೆ.
ಸೂರ್ಯನ ಬೆಳಕಿನ ತಿಳಿ ಅಲೆಯ ನಡುವಲ್ಲಿ,
ಬಣ್ಣದ ಮೀನುಗಳ ಸುಂದರ ಸ್ನೇಹದಲ್ಲಿ.
ಕುಣಿದಾಡಿತು ಮನ ತೇಲಿ ಖುಷಿಯಾಗಿ,
ಮರೆತೆ ಎಲ್ಲ ಚಿಂತೆಯ ನಲಿಯುತಲಿ.
ಮುಳುಗಿದೆ ಇನ್ನಷ್ಟು ಕಡಲ ಆಳದ ದೂರ,
ಕವಿದಿತ್ತು ಎಲ್ಲೆಲ್ಲೂ ಭಯದ ಕತ್ತಲೆ ಪೂರಾ.
ಒಬ್ಬನೇ ನಡೆದ ಕಗ್ಗತ್ತಲಲಿ ದಾರಿ ತಪ್ಪಿ,
ಕಾಪಾಡುವರೇ ನನ್ನ ಕೈಹಿಡಿದು ಯಾರೂ ಇಲ್ಲಿ?
ದೂರದಲ್ಲೊಂದು ಬೆಳಕಿನ ಮಿಂಚು ಹೊಳೆಯುತ್ತಿತ್ತು,
ಹಿಂಬಾಲಿಸಿ ಹೋದೆ ನೋಡಲು ಏನೆಂದು.
ಮಲಗಿತ್ತು ಚಿಪ್ಪಲ್ಲಿ ಬೆಳ್ಳನೆ ಒಂದು ಮುತ್ತು,
ಬೆರಗಾದೆ ನೋಡಿ,ಹೊಳಪಿಗೆ ಸೋತು.
ಪಡೆದುಕೊಳ್ಳುವ ಆಸೆ, ಆದರೂ ಬರಲಿಲ್ಲ ಮನಸ್ಸು,
ಹೇಗೆ ತಾನೇ ಎಚ್ಚರಿಸಲಿ, ಇರಲಿ ಹಾಗೆ ಎಂದೆನಿಸಿತು.
ತೆರೆದಿದ್ದ ಚಿಪ್ಪನು ಮುಚ್ಚಿದೆ ಚಳಿಯಾಗದಿರಲಿ ಎಂದು,
ಮಾಯವಾದರೂ ಬೆಳಕು ಖುಷಿಯಾಯಿತು, ಇರಲಿಲ್ಲ ನೋವು.
ಪ್ರೀತಿಯ ಮುತ್ತೊಂದು ಕೊಟ್ಟೆ ಮುಚ್ಚಿದ ಚಿಪ್ಪಿಗೆ,
ಕಣ್ತೆರೆದು ನೋಡಲು ಸೇರಿಸಿತ್ತದು ನನ್ನನು ಸಾಗರದ ದಡಕ್ಕೆ!
ಹೃದಯದಲ್ಲಿ ತುಂಬಿತ್ತು ಮುತ್ತಿನ ಹೊಳಪ ಛಾಯೆ,
ಪ್ರೀತಿ ಎನಿಸಿತು ನಿಜಕ್ಕೂ ಒಂದು ಸುಂದರ ಮಾಯೆ.
- ಶ್ರೀಕಾಂತ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!