ನಮ್ಮ ಪೂರ್ವಜರು ಕೇವಲ ಮರಗಳನ್ನು ನೆಡುತ್ತಿರಲಿಲ್ಲ — ಅವರು ಯಾವ ಮರವನ್ನು, ಯಾವ ದಿಕ್ಕಿನಲ್ಲಿ, ಯಾವ ಮಣ್ಣಿನಲ್ಲಿ ನೆಡಬೇಕು ಎಂಬುದನ್ನು ಸೂಕ್ಷ್ಮವಾಗಿ ಚಿಂತಿಸಿ ನಿರ್ಧರಿಸುತ್ತಿದ್ದರು. ಸುಮಾರು ಸಾವಿರ ವರ್ಷಗಳ ಹಿಂದೆ ಬರೆದದ್ದು ಎನ್ನಲಾಗುವ ಸುರಪಾಲ ಮಹರ್ಷಿಯ "ವೃಕ್ಷಾಯುರ್ವೇದ" ಎಂಬ ಗ್ರಂಥ ಇದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸುಮಾರು ೩೨೫ ಶ್ಲೋಕಗಳಲ್ಲಿ ನಮಗೆ ಸಿಕ್ಕಿರುವ ಈ ಪ್ರಾಚೀನ ಪಠ್ಯ, ಭಾರತೀಯ ಕೃಷಿಯ ಮತ್ತು ಉದ್ಯಾನವಿಜ್ಞಾನದ ಮೂಲ ಸ್ತಂಭಗಳಲ್ಲಿ ಒಂದು.

ಈ ಲೇಖನದಲ್ಲಿ, ವೃಕ್ಷಾಯುರ್ವೇದದಲ್ಲಿ ಪ್ರಸ್ತಾಪಿಸಿರುವ — ದಿಕ್ಕು, ಭೂಮಿ ಮತ್ತು ಪರಂಪರೆಯ ಪ್ರಕಾರ ಸಸ್ಯಗಳನ್ನು ಆಯ್ಕೆ ಮಾಡಿ ನೆಡುವ ವಿಧಾನವನ್ನು — ಸರಳ ಭಾಷೆಯಲ್ಲಿ ಪರಿಚಯಿಸುವ ಪ್ರಯತ್ನವನ್ನು ಮಾಡಿರುವೆ.

(ಮತ್ತೊಮ್ಮೆ) ಒಂದು ಮರ — ಹತ್ತು ಸಾವಿರ ಬಾವಿಗಳಿಗೆ ಸಮ

ಗ್ರಂಥದ ಆರಂಭದಲ್ಲಿಯೇ ಸುರಪಾಲ ಒಂದು ಅದ್ಭುತ ಶ್ಲೋಕವನ್ನು ಉಚ್ಚರಿಸುತ್ತಾರೆ —

दशकूप समा वापी दशवापी समो ह्रदः ।

दशह्रद समः पुत्रो दशपुत्र समो द्रुमः ॥

ಇದರ ಅರ್ಥ —

  • ಹತ್ತು ಬಾವಿಗಳು ಒಂದು ವಾಪಿಗೆ (ಪುಷ್ಕರಿಣಿ) ಸಮ

  • ಹತ್ತು ವಾಪಿಗಳು ಒಂದು ಕೆರೆಗೆ ಸಮ

  • ಹತ್ತು ಕೆರೆಗಳು ಒಬ್ಬ ಮಗನಿಗೆ ಸಮ

  • ಹತ್ತು ಮಕ್ಕಳು ಒಂದು ಮರಕ್ಕೆ ಸಮ

ಗಣಿಸಿದರೆ — ಒಂದು ಮರ ನೆಡುವುದು ಹತ್ತು ಸಾವಿರ ಬಾವಿಗಳನ್ನು ತೋಡುವಷ್ಟು ಪುಣ್ಯ ಕಾರ್ಯ. ಪ್ರಾಚೀನ ಭಾರತದಲ್ಲಿ ಮರಗಳ ಮಹತ್ವದ ಬಗ್ಗೆ ಇಷ್ಟು ಸ್ಪಷ್ಟವಾದ ಮಾತು ಇನ್ನೆಲ್ಲಿಯೂ ಸಿಗದು. ಇಂದು ಜಾಗತಿಕ ತಾಪಮಾನ, ಜಲಸಂಕಷ್ಟ ಮತ್ತು ಜೀವವೈವಿಧ್ಯದ ನಾಶದ ಕಾಲದಲ್ಲಿ — ಈ ಮಾತು ಎಷ್ಟು ಸಮಯೋಚಿತ! (ಇದೇ ಶ್ಲೋಕದ ಬಗ್ಗೆ ನಾನು ಹಿಂದಿನ ಲೇಖನದಲ್ಲಿ ಬರೆದಿದ್ದರೂ ಕೂಡ ಮತ್ತೊಮ್ಮೆ ಇದರ ಬಗ್ಗೆ ಬರೆಯುವುದು ಸಮಯೋಚಿತವೆನಿಸಿತು).

ದಿಕ್ಕು ಏಕೆ ಮುಖ್ಯ?

ಮನೆಯ ಸುತ್ತ ಮರಗಳನ್ನು ನೆಡುವಾಗ ದಿಕ್ಕನ್ನು ಗಮನಿಸುವುದು ಕೇವಲ ಶಾಸ್ತ್ರೀಯ ಆಚಾರವಲ್ಲ — ಇದರ ಹಿಂದೆ ವೈಜ್ಞಾನಿಕ ತತ್ತ್ವವೂ ಇದೆ. ಸೂರ್ಯ ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗುತ್ತಾನೆ; ಗಾಳಿ ನೈಋತ್ಯದಿಂದ ಬೀಸುತ್ತದೆ; ಮಳೆ ಸಾಮಾನ್ಯವಾಗಿ ಪಶ್ಚಿಮದಿಂದ ಬರುತ್ತದೆ. ತೋಟದ ಮನೆಗೆ ಎಷ್ಟು ಬೆಳಕು, ಗಾಳಿ, ತಂಪು ಬೇಕು — ಇದನ್ನು ಗಮನದಲ್ಲಿಟ್ಟು ಮರಗಳನ್ನು ನೆಡಬೇಕು. ರೈತನೊಬ್ಬನು ತೋಟಕ್ಕೆ ಸಿಗುವ ಒಟ್ಟಾರೆ ಸೂರ್ಯನ ಕಿರಣಗಳನ್ನು ಕೂಡ ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲ ಮರಗಳಿಗೂ ಸಮನಾದ ಗಾಳಿ ಬೇಕು, ಆದರೆ ಅತಿಯಾದ ಗಾಳಿಯನ್ನು ತಡೆಯಬೇಕು. ಉಷ್ಣತೆ ಹಾಗೂ ತಂಪು - ಇವೆರಡೂ ಸರಿಯಾಗಿ ಕಾಲ ಕಾಲಕ್ಕೆ ತಕ್ಕಂತೆ ಅತಿಯಾಗದಂತೆ ಇದ್ದಲ್ಲಿ ಗಿಡ ಮರಗಳು ಸೊಂಪಾಗಿ ಬೆಳೆಯುತ್ತವೆ.

ಸುರಪಾಲ ನಾಲ್ಕು ದಿಕ್ಕುಗಳಲ್ಲಿ ಯಾವ ಮರಗಳನ್ನು ನೆಡಬೇಕು ಎಂಬುದನ್ನು ನಿರ್ದಿಷ್ಟವಾಗಿ ಹೇಳುತ್ತಾರೆ —

(ತೋಟದ) ಮನೆಯ ಸುತ್ತಲಿನ ಪವಿತ್ರ ಮರಗಳು

  • ಪೂರ್ವ ದಿಕ್ಕು — ವಟ / ನ್ಯಗ್ರೋಧ (ಆಲದ ಮರ)

  • ದಕ್ಷಿಣ ದಿಕ್ಕು — ಉದುಂಬರ (ಅತ್ತಿ ಮರ)

  • ಪಶ್ಚಿಮ ದಿಕ್ಕು — ಅಶ್ವತ್ಥ / ಪಿಪ್ಪಲ (ಅರಳಿ)

  • ಉತ್ತರ ದಿಕ್ಕು — ಪ್ಲಕ್ಷ (ಬಸರಿ / ಬಸಿರೆ ಮರ — Java fig)

ಈ ನಾಲ್ಕು ಮರಗಳು — ಎಲ್ಲವೂ ಫೈಕಸ್ ಕುಟುಂಬದವು.

ಆಲ, ಅತ್ತಿ, ಅರಳಿ, ಬಸರಿ — ನಮ್ಮ ಪರಂಪರೆಯಲ್ಲಿ ಪವಿತ್ರ ವೃಕ್ಷಗಳೆಂದು ಪರಿಗಣಿಸಲ್ಪಟ್ಟವು. ಇವು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತವೆ, ಆಮ್ಲಜನಕ ಬಿಡುತ್ತವೆ, ಬೇಸಿಗೆಯಲ್ಲಿ ತಂಪು ನೆರಳು ನೀಡುತ್ತವೆ, ಪಕ್ಷಿ-ಪ್ರಾಣಿಗಳಿಗೆ ಆಶ್ರಯ ಕೊಡುತ್ತವೆ. ಮನೆಯ ಚೌಕಟ್ಟಿನಲ್ಲಿ ಈ ನಾಲ್ಕು ಇದ್ದರೆ — ಸ್ವಾಭಾವಿಕ ಜೈವಿಕ ಕವಚ ಸಿದ್ಧ.

ಇದು ಅತಿ ಮುಖ್ಯವಾದ ಅಂಶ - ಗಮನಿಸಿ, ಫೈಕಸ್ ಕುಟುಂಬದ ಮರಗಳನ್ನು ಆಧುನಿಕ ಜ್ಞಾನದ ಮಟ್ಟದಲ್ಲಿ, ವೈಜ್ಞಾನಿಕವಾಗಿ ಕಿಸ್ಟೋನ್ ಸ್ಪಿಶಿಸ್ (keystone species) ಇಂದು ಕರೆಯುತ್ತಾರೆ.  ಇವೆಲ್ಲ ಮರಗಳು ವರ್ಷದಾದ್ಯಂತೆ ಜೀವಜಂತುಗಳಿಗೆ ಆಹಾರವನ್ನು ಒದಗಿಸುವ, ಪ್ರಾದೇಶಿಕ ಜೀವ ವೈವಿಧ್ಯವನ್ನು ಹೆಚ್ಚಿಸುವ ಮರಗಳು. ಬಹುತೇಕ ರೈತರು ಕೀಟಗಳ ಭಾದೆಯಿಂದ ತಪ್ಪಿಸಿಕೊಳ್ಳುವುದರಲ್ಲಿ ಹೈರಾಣಾಗಿ ಹೋಗುತ್ತಾರೆ. ಏನೆಲ್ಲ ತಂದು ಸಿಂಪಡಿಸಬೇಕಾಗುತ್ತದೆ. ಆದರೆ ನಮ್ಮ ಪ್ರಾಚೀನ ಪರಂಪರೆಯಲ್ಲಿ ಇವೆಲ್ಲದಕ್ಕೆ ಸುಲಭದ ಪರಿಹಾರವಿತ್ತು - ಅದೇನೆಂದರೆ ಆಲ, ಅತ್ತಿ, ಅರಳಿ, ಬಸರಿ (ಬಸರೆ ಎಂದು ಕೂಡ ಕರೆಯುತ್ತಾರೆ) - ಇವೆಲ್ಲ ಮರಗಳನ್ನು ನೆಡುವುದು! ಈ ಮರಗಳನ್ನು ನೆಡುವುದರಿಂದ ಹಕ್ಕಿಗಳು ರೈತರ ಬೆಳೆಗೆ ಲಗ್ಗೆ ಇಡುವುದು ಕಡಿಮೆಯಾಗುತ್ತಿತ್ತಲ್ಲದೆ ಕೀಟಗಳ ಬಾಧೆ ಕೂಡ ವರ್ಷವಿಡೀ ಕಡಿಮೆಯಾಗುತ್ತಿತ್ತು! ಮಣ್ಣಿನ ಫಲವತ್ತತೆ ಎಲೆಗಳಿಂದಾಗಿ ವೃದ್ಧಿಯಾಗುತ್ತಿತ್ತಲ್ಲದೆ ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಹೆಚ್ಚಾಗುತ್ತಿತ್ತು.

ಎಚ್ಚರ — ಎಲ್ಲೆಲ್ಲೋ  ನೆಡಬೇಡಿ

ಈ ನಾಲ್ಕು ಮರಗಳನ್ನು ತಪ್ಪು ದಿಕ್ಕಿನಲ್ಲಿ ನೆಡುವುದು ಶಾಸ್ತ್ರಪ್ರಕಾರ ಅಶುಭ ಎನ್ನುತ್ತಾರೆ ಸುರಪಾಲ — (ನಿಮ್ಮ  ತೋಟದ ಮನೆಗೆ ಹೊಂದಿಕೊಂಡಂತೆ ಅಥವ ಬೇಲಿಯೊಳಗೆ):

  • ಅರಳಿಯನ್ನು ಪೂರ್ವದಲ್ಲಿ ನೆಡಬಾರದು

  • ಬಸರಿಯನ್ನು ದಕ್ಷಿಣದಲ್ಲಿ ನೆಡಬಾರದು

  • ಆಲದ ಮರವನ್ನು ಪಶ್ಚಿಮದಲ್ಲಿ ನೆಡಬಾರದು

  • ಅತ್ತಿಯನ್ನು ಉತ್ತರದಲ್ಲಿ ನೆಡಬಾರದು

ಮನೆಯ ಆವರಣದಲ್ಲಿ ಯಾವ ಮರ ಬೇಡ?

ಸುರಪಾಲ ಸ್ಪಷ್ಟವಾಗಿ ಹೇಳುತ್ತಾರೆ — ಕೆಲವು ಮರಗಳು ಮನೆಯ ಆವರಣದಲ್ಲಿ ಸುಖಪ್ರದವಲ್ಲ. ಇದರ ಹಿಂದೆ ಆಚರಣಾತ್ಮಕ ತಾರ್ಕಿಕತೆಯೂ ಇದೆ.

ನಿಷೇಧಿತ ಫಲವೃಕ್ಷಗಳು

  • ಬದರೀ — ಎಲಚಿ

  • ಕದಲೀ — ಬಾಳೆ

  • ದಾಡಿಮ — ದಾಳಿಂಬೆ

  • ಬೀಜಪೂರಕ — ಮಾದಲ / ಬೀಜೋರ ನಿಂಬೆ

ಈ ಫಲವೃಕ್ಷಗಳು ತುಂಬಾ ಆಕರ್ಷಣೀಯ ಫಲ ನೀಡುತ್ತವೆ. ಆದರೆ ಸುರಪಾಲ ಹೇಳುತ್ತಾರೆ — ಫಲ ಸಿಗುತ್ತದೆ ಎಂದು ಮನೆಯ ಸಮೀಪ ನೆಟ್ಟರೆ, ಹಣ್ಣು ಬಿಳಿಸಿದಾಗ ಪಕ್ಷಿಗಳ ಗದ್ದಲ, ಕೋತಿಗಳ ದಾಂದಲೆ, ಮಕ್ಕಳ ಜಗಳ, ನೆರೆಯವರ ತಂಟೆ — ಎಲ್ಲವೂ ಮನೆಯ ಶಾಂತಿಯನ್ನು ಕದಡುತ್ತದೆ ಎಂದು. ಪ್ರಾಕ್ಟಿಕಲ್ ದೃಷ್ಟಿಯಿಂದಲೂ ಇದು ಸಮಂಜಸ.

ನಿಷೇಧಿತ ಇತರ ಮರಗಳು

  • ಏರಂಡ — ಔಡಲ (ಹರಳು)

  • ಪಲಾಶ — ಮುತ್ತುಗ

  • ಕಾಂಚನಾರ — ಬಸವನ ಪಾದ / ಮಂದಾರ

  • ಅಶ್ವತ್ಥ — ಅರಳಿ

  • ಶ್ಲೇಷ್ಮಾತಕ — ಚಲ್ಲೆ ಮರ

  • ಅರ್ಜುನ — ಮತ್ತಿ

  • ಕರಂಜ — ಹೊಂಗೆ

ಸುರಪಾಲ ಒಂದು ಮಹತ್ವದ ತತ್ತ್ವ ಹೇಳುತ್ತಾರೆ — ಮುಳ್ಳಿನ/ಕಂಟಕ ಮರಗಳು ಮನೆಗೆ ಹಾನಿಕರ. ಧನನಾಶ ಮಾಡುತ್ತವೆ. ಹಾಗೆಯೇ ಹಾಲು/ಲ್ಯಾಟೆಕ್ಸ್ ಬಿಡುವ ಮರಗಳು (ಕ್ಷೀರಿಣಿ) ಸಂತತಿಗೆ ಹಾನಿಕರ. ಈ ಮಾತುಗಳಿಗೆ ಆಧುನಿಕ ತರ್ಕವೂ ಇದೆ — ಲ್ಯಾಟೆಕ್ಸ್ ಬಿಡುವ ಮರಗಳ ರಸ ಚರ್ಮಕ್ಕೆ, ಕಣ್ಣಿಗೆ ಅಪಾಯಕಾರಿ.

ಮನೆಯೊಳಗೆ ನೆಡಬಾರದ ಗಿಡಗಳು:

  • ನೀಲೀ (Indigofera tinctoria — ನೀಲಿ ಗಿಡ)

  • ಹರಿದ್ರಾ (Curcuma longa — ಅರಿಶಿನ)

ಗಮನಿಸಬೇಕಾದದ್ದು — ಇಂದು ನಾವು ಅಲಂಕಾರಕ್ಕಾಗಿ ಒಳಾಂಗಣ ಗಿಡಗಳನ್ನು ಬೆಳೆಸುತ್ತೇವೆ. ಸುರಪಾಲ ಈ ಬಗ್ಗೆ ಎಚ್ಚರಿಕೆ ನೀಡಿರುವುದು — ಮನೆಯೊಳಗೆ ಬೆಳೆಸಿದ ಸಸ್ಯಗಳು ಸಾಕಷ್ಟು ಬೆಳಕು ಪಡೆಯದೆ, ಮಣ್ಣಿನ ತೇವದಲ್ಲಿ ಶಿಲೀಂಧ್ರ ಬೆಳೆದು, ಆರೋಗ್ಯಕ್ಕೆ ಹಾನಿ ತರಬಹುದು.

ತೋಟ ಎಲ್ಲಿ ಇರಬೇಕು?

ಮನೆಯ ತೋಟ (ವಾಟಿಕಾ) ಯಾವ ದಿಕ್ಕಿನಲ್ಲಿ ಇರಬೇಕು ಎಂಬುದನ್ನೂ ಸುರಪಾಲ ಸ್ಪಷ್ಟಪಡಿಸುತ್ತಾರೆ —

  • ಶುಭ: ಮನೆಯ ಪೂರ್ವ ಮತ್ತು ಪಶ್ಚಿಮ ದಿಕ್ಕು

  • ಅಶುಭ: ಮನೆಯ ದಕ್ಷಿಣ, ನೈಋತ್ಯ (ದಕ್ಷಿಣ-ಪಶ್ಚಿಮ), ಈಶಾನ್ಯ (ಉತ್ತರ-ಪೂರ್ವ) — ಇಲ್ಲಿ ತೋಟ ಮಾಡಿದರೆ ಕಲಹ, ಉದ್ವೇಗ, ಕಷ್ಟ ಬರುತ್ತದೆ ಎಂದು ವೃಕ್ಷಾಯುರ್ವೇದ ಹೇಳುತ್ತದೆ.

ಇದರ ಹಿಂದಿನ ತಾರ್ಕಿಕತೆ — ಪೂರ್ವ-ಪಶ್ಚಿಮ ತೋಟಗಳಿಗೆ ಸೂರ್ಯನ ಬೆಳಕು ಚೆನ್ನಾಗಿ ಸಿಗುತ್ತದೆ; ದಕ್ಷಿಣ-ನೈಋತ್ಯದಲ್ಲಿ ತೋಟವಿದ್ದರೆ ಮನೆಗೆ ಬೆಳಕು-ಗಾಳಿ ಕಡಿಮೆ.

ತೋಟದಲ್ಲಿ ದಿಕ್ಕಿನ ಪ್ರಕಾರ ಫಲವೃಕ್ಷಗಳು

  • ಪೂರ್ವ ದಿಕ್ಕು —

    • ಕರಮರ್ದಕ (ಕವಳೆ / ಕವಲೀ ಹಣ್ಣು)

    • ವಂಶ (ಬಿದಿರು)

  • ದಕ್ಷಿಣ ದಿಕ್ಕು —

    • ಪಾರಾವತ / ಪಾರೂಷಕ (ಫಲಸಾ)

    • ಬದರ (ಎಲಚಿ / ಬೋರೆ)

    • ಕಪಿತ್ಥ (ಬೇಲ — Wood apple)

  • ಪಶ್ಚಿಮ ದಿಕ್ಕು —

    • ಧಾತ್ರೀ (ಬೆಟ್ಟದ ನೆಲ್ಲಿ)

ತೋಟದ ಮಧ್ಯಭಾಗದಲ್ಲಿ — ಫಲ-ಪುಷ್ಪ ನೀಡುವ ಪ್ರಮುಖ ಮರಗಳನ್ನು (ಮಾವು, ಸಂಪಿಗೆ, ಪಾರಿಜಾತ ಮುಂತಾದವು) ಜೋಡಿಯಾಗಿ ನೆಡಬೇಕು (ಗಮನಿಸಿ - ಇದರಿಂದ ಪರಾಗ ಸ್ಪರ್ಶ ಹೆಚ್ಚಿಸುವ ಕೀಟಗಳು ಬರುವುವು). ಪ್ರತಿಯೊಂದರ ಸುತ್ತ ಕಲ್ಲಿನ ಪರಿಖೆ (ಬೇಸಿನ್) ಇರಲಿ — ನೀರು ತಡೆಯಲು ಮತ್ತು ಬೇರಿಗೆ ಗಾಳಿ ಸಿಗಲು.

ಪಂಚ ಮಾಂಗಲ್ಯ ವೃಕ್ಷಗಳು — ಮೊದಲು ನೆಡಬೇಕಾದ ಐದು

ಯಾವುದೇ ಹೊಸ ತೋಟ, ತೋಪು ಅಥವಾ ಕೃಷಿಕ್ಷೇತ್ರ ಆರಂಭಿಸುವಾಗ — ಸುರಪಾಲ ಈ ಐದು ಮರಗಳನ್ನು ಮೊದಲು ನೆಡಲು ಶಿಫಾರಸು ಮಾಡುತ್ತಾರೆ. ಇವು ಪ್ರಕೃತಿಯ ಆಶೀರ್ವಾದದ ಪ್ರತೀಕ ಮತ್ತು ರೋಗ ನಿರೋಧಕ ಸಸ್ಯಗಳು —

  • ಫಲಿನೀ — ಪ್ರಿಯಂಗು

  • ಅಶೋಕ — ಅಶೋಕ

  • ಪುನ್ನಾಗ — ಸುರಹೊನ್ನೆ / ಹೊನ್ನೆ

  • ಶಿರೀಷ — ಬಾಗೆ ಮರ

  • ನಿಂಬ — ಬೇವು

ಗಮನಿಸಿ — ಈ ಐದರಲ್ಲಿ ಮೂರು (ಅಶೋಕ, ಶಿರೀಷ, ಬೇವು) ಅತ್ಯುತ್ತಮ ಔಷಧೀಯ ಮರಗಳು. ಬೇವು ಎಂದರೆ ಭಾರತೀಯ ಆಯುರ್ವೇದದ ಸ್ತಂಭ. ಶಿರೀಷ ಚರ್ಮರೋಗಗಳ ರಾಜೌಷಧ. ಅಶೋಕ ಸ್ತ್ರೀಯರಿಗೆ ಪ್ರಸಿದ್ಧ ಔಷಧ. ಹೊನ್ನೆಯಿಂದ ಎಣ್ಣೆ — ಗಾಯಗಳ ಮೇಲೆ ಪರಿಣಾಮಕಾರಿ. ಪ್ರಿಯಂಗು — ರಕ್ತಸ್ತಂಭಕ ಗಿಡಮೂಲಿಕೆ.

ಪ್ರತಿ ಮನೆಯಲ್ಲಿ ಈ ಐದು ಮರಗಳಿದ್ದರೆ — ಪ್ರಕೃತಿಯೇ ನಮ್ಮ ವೈದ್ಯ/ಧನ್ವಂತರಿ. ವಿಷ್ಣು ಅಲ್ಲಿ ವಾಸ ಮಾಡುತ್ತಾನೆ! ವಿಷಣ್ ಎಂಬ ಪದದ ಅರ್ಥವು ಕೂಡ ಅದೇ ಅಲ್ಲವೇ?

ಭೂಮಿಯ ಪ್ರಕಾರ ಸಸ್ಯಗಳು

ದಿಕ್ಕು ಮಾತ್ರವಲ್ಲ — ಭೂಮಿಯ ಸ್ವಭಾವವೂ ಮುಖ್ಯ. ಸುರಪಾಲ ಭೂಮಿಯನ್ನು ಮೂರು ವಿಧಗಳಲ್ಲಿ ವಿಂಗಡಿಸುತ್ತಾರೆ.

ಆನೂಪ ಭೂಮಿ (ತೇವ/ಜೌಗು ಪ್ರದೇಶ)

ಕರಾವಳಿ, ನದಿತೀರ, ಮಲೆನಾಡು — ಇಲ್ಲಿ ಬೆಳೆಸಬೇಕಾದ ಸಸ್ಯಗಳು:

ಹಲಸು (ಪನಸ), ತೆಂಗು (ನಾರಿಕೇಲ), ಬಾಳೆ (ಕದಲೀ), ಅಡಿಕೆ (ಪೂಗ), ಮಾವು (ಆಮ್ರ), ಬಿದಿರು (ವಂಶ), ತಾಳೆ (ತಾಲ), ನೇರಳೆ (ಜಂಬೂ), ಆಲ (ವಟ), ಕಡಬ (ಕದಂಬ), ಖರ್ಜೂರ, ದ್ರಾಕ್ಷಿ, ಕೇದಗೆ, ನಿಂಬೆ, ಕಾಡು ಹಲಸು (ಲಕುಚ).

ಜಾಂಗಲ ಭೂಮಿ (ಒಣ/ಶುಷ್ಕ ಪ್ರದೇಶ)

ಬಯಲುಸೀಮೆ, ಬಯಲು ಸೀಮಾ ಜಿಲ್ಲೆಗಳು — ಇಲ್ಲಿ ಬೆಳೆಸಬೇಕಾದ ಸಸ್ಯಗಳು:

ನುಗ್ಗೆ (ಶೋಭಾಂಜನ), ಬಿಲ್ವ (ಶ್ರೀಫಲ), ಬೇವು (ನಿಂಬ), ಬನ್ನಿ (ಶಮೀ), ಅಶೋಕ, ಪಾರಿಜಾತ (ಶೆಫಾಲಿಕಾ), ಎಲಚಿ (ಬದರೀ), ರಂಜಲ/ರೆಂಜೆ (ಬಕುಳ), ಸಪ್ತಪರ್ಣಿ/ಎಳಲೆಪಾಲೆ (ಸಪ್ತಪರ್ಣ), ಕರೀರ.

ಗಮನಿಸಿ — ಬೇವು, ನುಗ್ಗೆ, ಬಿಲ್ವ, ಬನ್ನಿ ಎಲ್ಲವೂ ಬಯಲುಸೀಮೆಯಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಪ್ರಾಚೀನ ರೈತರು ಸ್ಥಳೀಯ ಸಸ್ಯಗಳಿಗೆ ಆದ್ಯತೆ ನೀಡುತ್ತಿದ್ದರು — ಇಂದಿನ ಸುಸ್ಥಿರ ಕೃಷಿಯ ಮೂಲತತ್ತ್ವವೇ ಇದು.

ಸಾಧಾರಣ ಭೂಮಿ (ಸಮತೋಲನ)

ಎರಡೂ ಲಕ್ಷಣ ಹೊಂದಿರುವ ಭೂಮಿ — ಬಹುಪಾಲು ಕರ್ನಾಟಕದ ಒಳನಾಡು. ಇಲ್ಲಿ ಚೆನ್ನಾಗಿ ಬೆಳೆಯುವ ಸಸ್ಯಗಳು:

ನಿಂಬೆ (ಬೀಜಪೂರಕ), ಸುರಹೊನ್ನೆ (ಪುನ್ನಾಗ), ಸಂಪಿಗೆ (ಚಂಪಕ), ಮಾವು (ಆಮ್ರ), ದಾಳಿಂಬೆ (ದಾಡಿಮ), ಪ್ರಿಯಂಗು.

ಮರ ನೆಡುವಾಗ ಸುರಪಾಲನ ಮಂತ್ರ

ಸುರಪಾಲ ಕೇವಲ ಶಾಸ್ತ್ರಜ್ಞರಲ್ಲ — ಭಾವುಕ ಕವಿಯೂ ಹೌದು. ಮರ ನೆಡುವಾಗ ಪ್ರತಿಯೊಬ್ಬ ರೈತನೂ/ತೋಟಗಾರನೂ ಹೇಳಬೇಕಾದ ಮಂತ್ರವನ್ನು ಅವರು ಕೊಡುತ್ತಾರೆ —

"ಎಲೈ ವೃಕ್ಷವೇ, ನಾನು ನಿನ್ನನ್ನು ಈ ಸ್ಥಳದಿಂದ ಉತ್ತಮ ಸ್ಥಳಕ್ಕೆ ತಂದು ನೆಡುತ್ತೇನೆ. ನಿನಗೆ ಸದಾ ತೃಪ್ತಿ ಸಿಗುವಂತೆ ನೀರು ಕೊಡುತ್ತೇನೆ. ನೀನು ಬೆಳೆದು ಫಲ ಕೊಡಬೇಕು. ನಿನಗೆ ಯಾವುದೇ ಬಿರುಗಾಳಿ, ಸಿಡಿಲು ಅಥವಾ ವಿಪತ್ತಿನ ಭಯವಿಲ್ಲ. ನಾನು ನಿನ್ನನ್ನು ನನ್ನ ಸ್ವಂತ ಮಗನಂತೆ ಪಾಲಿಸುತ್ತೇನೆ."

ಮರವನ್ನು ಸ್ವಂತ ಮಗನಂತೆ ನೋಡಿಕೊಳ್ಳುವ ಈ ತತ್ತ್ವ — ಸಸ್ಯವಿಜ್ಞಾನವನ್ನು ಪ್ರೀತಿಯ ಪರಿಭಾಷೆಗೆ ಬದಲಾಯಿಸುತ್ತದೆ. ಇಂದಿನ ಆಧುನಿಕ ಕೃಷಿ ಕಾಂಟ್ರಾಕ್ಟ್ ಫಾರ್ಮಿಂಗ್, ಮಂಡಿಯ ದರ, ಎಕರೆಗೆ ಇಳುವರಿಯಂತಹ ಆರ್ಥಿಕ ಲೆಕ್ಕಾಚಾರಗಳಲ್ಲಿ ಮುಳುಗಿರುವಾಗ — ಸುರಪಾಲನ ಈ ಮಾತು ನಮ್ಮನ್ನು ಬೇರೆ ದಿಕ್ಕಿಗೆ ಎಳೆಯುತ್ತದೆ. ಮರ ನೆಡುವುದು ಆರ್ಥಿಕ ಕಾರ್ಯ ಮಾತ್ರವಲ್ಲ — ಒಂದು ಸಂಬಂಧ.

ಪರಂಪರೆಯ ಪಾಠಗಳು — ಇಂದಿನ ಪ್ರಸ್ತುತತೆ

ಈ ನಿಯಮಗಳನ್ನು ಕೇವಲ ಧಾರ್ಮಿಕ ನಂಬಿಕೆಯೆಂದು ಬದಿಗಿಡಬೇಕೆ? ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ — ಪ್ರತಿಯೊಂದು ನಿಯಮದ ಹಿಂದೆ ವೈಜ್ಞಾನಿಕ ಚಿಂತನೆ ಇದೆ —

೧. ದಿಕ್ಕಿನ ಆಧಾರದಲ್ಲಿ ಮರಗಳು — ಸೂರ್ಯ, ಗಾಳಿ, ಮಳೆಯ ಪರಿಗಣನೆ.

೨. ನಿಷೇಧಿತ ಮರಗಳ ಪಟ್ಟಿ — ಬೇರಿನ ಆಕ್ರಮಣ, ಫಲದ ಕಸ, ಲ್ಯಾಟೆಕ್ಸ್ ಅಪಾಯ — ಇವೆಲ್ಲವೂ ಪ್ರಾಕ್ಟಿಕಲ್ ಆದ ಎಚ್ಚರಿಕೆಗಳು.

೩. ಭೂಮಿಯ ಪ್ರಕಾರ ಸಸ್ಯಗಳು — Agro-climatic zoning ಎಂಬ ಆಧುನಿಕ ಪರಿಕಲ್ಪನೆಯ ಪ್ರಾಚೀನ ರೂಪ.

೪. ಪಂಚ ಮಾಂಗಲ್ಯ ಮರಗಳು — ಔಷಧೀಯ ಮತ್ತು ಪರಿಸರ ಸ್ನೇಹಿ ಸಸ್ಯಗಳ ಸಮಗ್ರ ಆಯ್ಕೆ.

೫. ಮಂತ್ರೋಚ್ಚಾರಣೆ — ಮಾನವ-ಪ್ರಕೃತಿ ಸಂಬಂಧದ ಭಾವನಾತ್ಮಕ ತಿಳುವಳಿಕೆ.

ಆಧುನಿಕ ಪರ್ಮಾಕಲ್ಚರ್, ಸಾವಯವ ಕೃಷಿ, ಜೈವಿಕ ವೈವಿಧ್ಯ ಸಂರಕ್ಷಣೆ — ಇವೆಲ್ಲವೂ ಸುರಪಾಲನ ಗ್ರಂಥದಲ್ಲಿ ಸಾವಿರ ವರ್ಷಗಳ ಹಿಂದೆಯೇ ಇದ್ದವು. ನಾವು ಮರೆತಿದ್ದೇವೆ, ಅಷ್ಟೇ.

ಕೊನೆಯ ಮಾತು

ಒಂದು ಸಣ್ಣ ಪ್ರಯೋಗ ಮಾಡಿ ನೋಡಿ — ನಿಮ್ಮ ಮನೆಯ ಸುತ್ತ ಗಮನಿಸಿ. ಎಷ್ಟು ಮರಗಳಿವೆ? ಯಾವ ದಿಕ್ಕಿನಲ್ಲಿವೆ? ಆಲ-ಅತ್ತಿ-ಅರಳಿ-ಬಸರಿ — ಈ ನಾಲ್ಕರಲ್ಲಿ ಯಾವುದಾದರೂ ಇದೆಯೇ? ಬೇವು, ಬಾಗೆ, ಅಶೋಕ ಎಲ್ಲಿಯಾದರೂ ಕಾಣುತ್ತಿವೆಯೇ?

ಇಲ್ಲದಿದ್ದರೆ — ಈ ಮಳೆಗಾಲದಲ್ಲಿ ಒಂದು ಸಸಿ ನೆಡಿ. ಸುರಪಾಲನ ಮಂತ್ರವನ್ನು ಪಠಿಸಿ. ಆ ಮರವನ್ನು ನಿಮ್ಮ ಸ್ವಂತ ಮಗನಂತೆ ಆರೈಕೆ ಮಾಡಿ.

ಒಂದು ಮರ — ಹತ್ತು ಸಾವಿರ ಬಾವಿಗಳ ಪುಣ್ಯ.