ಯೌವನಕ್ಕೆ ಬಂದಾಗ ಸಂಗಾತಿಯ ಬಯಕೆ ಸಾಮಾನ್ಯ. ವೈವಾಹಿಕ ಜೀವನದ ಕನಸು ಕಾಣುತ್ತೇವೆ. ನಂತರ ನಮ್ಮ ಮತ್ತು/ಅಥವಾ ಪೋಷಕರ ಅಯ್ಕೆಯ ಮೇರೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಾರೆ. ಅಥವಾ ಈಗಿನ ಶೈಲಿಯಾದ ರಿಲೇಷನ್ಷಿಪ್ ನಲ್ಲಿಯೂ ಇರಬಹುದು. ದಾಂಪತ್ಯ ಜೀವನದಲ್ಲಿ ಅಥವಾ ರಿಲೇಷನ್ ಷಿಪ್ ನಲ್ಲಿ ಸುಖ ಸಂತೋಷಕ್ಕಾಗಿ ಪರದಾಡುತ್ತಾರೆ. ಸಂಗಾತಿಯಿಂದ ಏನನ್ನೋ ಬಯಸುತ್ತಿರುತ್ತೇವೆ, ಏನೆಂಬುದೇ ಸ್ಪಷ್ಟತೆಯಿರುವುದಿಲ್ಲ. ಹಾಗಾಗಿ ದಾಂಪತ್ಯದಲ್ಲಿ ಸಂಘರ್ಷ ಸಾಮಾನ್ಯ.
ಆರೋಗ್ಯಕರ ಮತ್ತು ಸಂತೋಷದ ದಾಂಪತ್ಯ ಜೀವನಕ್ಕೆ ಮೂರು ಹಂತಗಳ ಪ್ರಕ್ರಿಯೆ ನೋಡೋಣ. (1) ಸಂಘರ್ಷ ನ್ಯಾಯೋಚಿತವಾಗಿರಲಿ (Fighting Fairly), (2) ನಿಮ್ಮನ್ನು ನೀವು ಬಲಪಡಿಸಿಕೊಳ್ಳಿ ಮತ್ತು (3) ನಿಮ್ಮ ಸಂಬಂಧವನ್ನು ಬಲಗೊಳಿಸಿ.
ಭಿನ್ನಾಭಿಪ್ರಾಯ (Fighting fairly) : ಸಂಬಂಧಗಳಲ್ಲಿ ಮನಸ್ತಾಪ ಅಥವಾ ಸಂಘರ್ಷಗಳು ಬರುವುದು ಸಹಜ ಮತ್ತು ನಿರೀಕ್ಷಿತ ಅಥವಾ ಅನಿರೀಕ್ಷಿತವೂ ಇರಬಹುದು. ಆದರೆ ಸಂಬಂಧಕ್ಕೆ ಹಾನಿಯಾಗದಂತೆ ಆ ಸಂಘರ್ಷವನ್ನು ಬಗೆಹರಿಸಿಕೊಳ್ಳುವುದು ಮುಖ್ಯ. ನ್ಯಾಯಯುತವಾಗಿ ಚರ್ಚಿಸಲು ಇಲ್ಲಿ ಎರಡು ವಿಭಿನ್ನ ಹಂತಗಳಿವೆ.
ಸಂಘರ್ಷ ಎದುರಾದಾಗ ಮೊದಲು, ನೀವು ಎಂದಾದರೂ ಸಂಘರ್ಷವನ್ನು ಹೇಗೆ ನಿಭಾಯಿಸಿದ್ದೀರಾ ನೆನಪಿಸಿಕೊಳ್ಳಿ. ಅದು ಯಶಸ್ವಿಯಾಗಿತ್ತಾ? ಅದನ್ನೇ ಅನುಸರಿಸಿ ಬಗೆಹರಿಸಿಕೊಳ್ಳಿ. ಇಲ್ಲವಾದಲ್ಲಿ, ಬೇರೆ ತಂತ್ರಗಳನ್ನು ಕಲಿಯುವುದಗತ್ಯ.
ಸಂಘರ್ಷ ಏತಕ್ಕಾಯಿತು ಪರಿಶೀಲಿಸಿ. ಸಂಗಾತಿಯನ್ನು ಯಾವುದಕ್ಕೋ ಒಪ್ಪಿಸುವುದು ಅಥವಾ ಬಲವಂತಪಡಿಸುವುದು ಇನ್ನೊಬ್ಬ ಸಂಗಾತಿಯ ಗುರಿಯಾಗಿರಬಾರದು. ನಿಮ್ಮ ಗುರಿ ಎರಡು ವಿಷಯಗಳಿದ್ದರೆ ಉತ್ತಮ. ಮೊದಲನೆಯದಾಗಿ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಆಲಿಸುವುದು, ಎರಡನೇಯದಾಗಿ ನಿಮಗೆ ಅರ್ಥವಾಗುವಂತೆ ಮಾತನಾಡುವುದು. ನಿಮ್ಮ ಸಂಗಾತಿಯನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ನಿಮ್ಮ ಸಂಗಾತಿ ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ನೀವು ಸಂಘರ್ಷದಿಂದ ಹೊರಬರಲು ಸಾಧ್ಯ.
ಭಿನ್ನಾಭಿಪ್ರಾಯ ವ್ಯಕ್ತ ಪಡಿಸುವಾಗ ಹದವಾಗಿ ಆರಂಭಸಿ. ಈ ಕೆಳಗಿನ ಹೋಲಿಕೆಗಳಲ್ಲಿನ ವ್ಯತ್ಯಾಸವನ್ನು ಗಮನಿಸಿ: "ನಿನ್ನ ಅಡುಗೆ ತುಂಬಾ ಬೋರ್ ಹೊಡೆಯುತ್ತದೆ.""ನನಗೆ ಥಾಯ್ ಆಹಾರ ಎಂದರೆ ತುಂಬಾ ಇಷ್ಟ. ನಾವು ಅಡುಗೆಮನೆಯಲ್ಲಿ ಪ್ರಯೋಗ ಮಾಡಿ ಆ ರುಚಿಯನ್ನು ಸೇರಿಸಬಹುದೇ?"
ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಶಾಂತಗೊಳಿಸುವ ಪ್ರಯತ್ನ ಮಾಡಿರಿ. ವಾದದಲ್ಲಿ ಕೋಪ ಉಂಟಾಗುತ್ತಿದೆಯೇ? ಅದು ಸ್ವಾಭಾವಿಕ ಪ್ರತಿಕ್ರಿಯೆ, ಆದರೆ ಆ ಸ್ಥಿತಿಯನ್ನು ಉತ್ತಮವಾಗಿ ಆಲಿಸುವುದರಿಂದ ಪರಿಹರಿಸಬಹುದು. ಚರ್ಚೆ ಹೆಚ್ಚು ಕಾವೇರಿದರೆ, ಸಣ್ಣ ವಿರಾಮ ತೆಗೆದುಕೊಳ್ಳಿ, ಆಳವಾಗಿ ಉಸಿರಾಡಿ ಮತ್ತು ಇಬ್ಬರೂ ಶಾಂತವಾದಾಗ ಮತ್ತೆ ಚರ್ಚೆಗೆ ಬನ್ನಿ. ಮುಂದಿನ ಸಂಚಿಕೆಯಲ್ಲಿ ಉಳಿದ ಸೂತ್ರದ ಬಗ್ಗೆ ಗಮನ ಹರಿಸೋಣ.
-ಪ್ರಕಾಶ ಎನ್ , ಮಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!