ಸಾಮಾನ್ಯವಾಗಿ, ಒಂದು ಪ್ರೇಮ ಸಂಬಂಧದ ಪ್ರಾರಂಭದಲ್ಲಿ,  ನಿಮ್ಮ ಸಂಗಾತಿಯು  ಮಾಡುವ ಪ್ರತಿಯೊಂದೂ ನಿಮಗೆ ಅದ್ಭುತವಾಗಿ ಕಾಣಿಸುತ್ತದೆ! ಹಾಗೇನೆಯೇ, ಹೆಚ್ಚಿನ ದಂಪತಿಗಳು  ಆರಂಭದಲ್ಲಿ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಪ್ರಾರಂಭದಲ್ಲಿ, ಅವರು ಫೋನ್ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾರೆ, ದಿನವಿಡೀ ಸಂದೇಶ ಕಳುಹಿಸುತ್ತಾರೆ ಮತ್ತು ತಡರಾತ್ರಿಯವರೆಗೂ ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಅವರ  ಪರಸ್ಪರ ಬಾಲ್ಯದ ಕಹಿಸಿಹಿಯನ್ನು  ನೆನಪಿಸಿಕೊಳ್ಳುತ್ತಾ, ಭವಿಷ್ಯದ ಕನಸನ್ನು ಕಟ್ಟುತ್ತಾರೆ. ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ "ಹನಿಮೂನ್ ಹಂತ" ಮುಗಿಯುತ್ತಿದ್ದಂತೆ, ಸಂಬಂಧ ಹಳೆಯದಾಗುತ್ತಿದ್ದಂತೆ, ದಂಪತಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಬದಲಿಗೆ ದೈನಂದಿನ ಕೆಲಸಗಳ ಬಗ್ಗೆ ಮಾತ್ರ ಮಾತನಾಡಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ,  "ನೀವು ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರುತ್ತೀರಾ?", "ಈ ಸಾಮಾನುಗಳನ್ನು ತರಲೇ ಬೇಕು", " ಬಹಳಷ್ಟು ಕೆಲಸ ಹಾಗೇ ಉಳಿದಿದೆ, ಯಾರು ಮಾಡುವುದು". ಆಗ ಸಂಬಂಧದಲ್ಲಿ ಏಕತಾನತೆ ಉಂಟಾಗುತ್ತದೆ. 

ಈ ದಿನಚರಿಯಲ್ಲಾಗುವ  ಕಿರಿಕಿರಿ ಉಂಟುಮಾಡುವ ಸಂಗಾತಿಯ  ನಡವಳಿಕೆ ಮತ್ತು ವ್ಯಕ್ತಿತ್ವದ ಮೇಲೆಯೇ  ಹೆಚ್ಚು ಗಮನ ನೀವು  ಹರಿಸುತ್ತೀರಿ ಮತ್ತು ಅವರಲ್ಲಿರುವ ಒಳ್ಳೆಯ ಗುಣಗಳು ನೆನಪಾಗುವುದಿಲ್ಲ.‌  ಸಮಯ ಕಳೆದಂತೆ, ಇದು ತಿರಸ್ಕಾರಕ್ಕೆ ದಾರಿ ಮಾಡಿಕೊಡಬಹುದು.  

ಇದಕ್ಕೇನು ಉಪಾಯ?‍ ಒಟ್ಟಿಗೆ ಜೀವನ ನಡೆಸುವ ನಡುವೆ, ಕಥೆಗಳನ್ನು ಹಂಚಿಕೊಳ್ಳಲು ಸಮಯ ಮಾಡಿಕೊಳ್ಳಿ. ವ್ಯಕ್ತಿಗಳಾಗಿ ನಾವು ಬೆಳೆಯುತ್ತಾ ಮತ್ತು ಬದಲಾಗುತ್ತಾ ಸಾಗುತ್ತೇವೆ. ಅದರೊಟ್ಟಿಗೆ  ನಿಮ್ಮ ಸಂಗಾತಿಯು  ಬೆಳೆಯುತ್ತಿದ್ದಾರೆ  ಎಂಬುದನ್ನು ಖಚಿತಪಡಿಸಿಕೊಳ್ಳಿ.  

ಸಂಬಂಧದಲ್ಲಿ ಆಟ ಹಾಗೂ ತಮಾಷೆಯಿರಲಿ ಮತ್ತು ಪರಸ್ಪರರ ಆಸಕ್ತಿಗಳನ್ನು ಬೆಂಬಲಿಸಿ. ಒಟ್ಟಿಗೆ ತಮಾಷೆಯಾಗಿ ನಗುವ ದಂಪತಿಗಳು ಯಾವಾಗಲೂ ಒಂದಾಗಿರುತ್ತಾರೆ. ಹೊಂದಾಣಿಕೆ ಬಹಳ ಮುಖ್ಯ, ನಿಮ್ಮ ಸಂಗಾತಿಗೆ ಇಷ್ಟವೆನಿಸುವ ಕಾರಣಕ್ಕಾಗಿ ನಿಮಗಿಷ್ಟವಿಲ್ಲದ ಚಟುವಟಿಕೆಗಳಲ್ಲೂ ನೀವು ಭಾಗವಹಿಸಬೇಕಾಗಬಹುದು. ನಿಮ್ಮ ಸಂಬಂಧವನ್ನು ಗಟ್ಟಿಮಾಡಿಕೊಳ್ಳಲು ನೀವು ಕಂಫರ್ಟ್ ಝೋನ್‌ನಿಂದ ಹೊರಬರುವುದು ಮುಖ್ಯ. ಇವೆಲ್ಲವಕ್ಕೂ  ಪ್ರಯತ್ನ ಬೇಕು. 

ತೆರೆದ ಮನಸ್ಸಿನಿಂದ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಮಾಡಿಕೊಳ್ಳಿ. ದಿನದ 15-20 ನಿಮಿಷವಾದರೂ, ದಿನಚರಿಯ ಹೊರತು ಪಡಿಸಿ, ಬೇರೆ ಏನ್ನನಾದಾರೂ ಮಾತನಾಡಿ. ನಿಮ್ಮ ಜೀವನದ ಅತ್ಯಂತ ಮುಜುಗರದ ಅಥವಾ ಮನರಂಜನೆಯ ಘಟನೆಗಳ ಬಗ್ಗೆ ಕಥೆಗಳನ್ನು ಹೇಳಿ. ವಾರಾಂತ್ಯದಲ್ಲಿ ಒಟ್ಟಿಗೆ ಅಡುಗೆಯನ್ನು ಯೋಜಿಸಿ ಮತ್ತು ಸ್ನೇಹಿತರನ್ನು ಆಹ್ವಾನಿಸಿ. ಪರಸ್ಪರರ ಒಳ್ಳೇ ಗುಣಗಳನ್ನು ಮುಕ್ತವಾಗಿ ಪ್ರಶಂಸಿಸಿ.  

-ಪ್ರಕಾಶ್ ಎನ್, ಮಂಗಳೂರು.