"ಸಾವಯವ ಕೃಷಿ ಏಕೆ? ಹೇಗೆ?" — ಡಾ. ಜಿ.ಕೆ. ವೀರೇಶ್ (ಡಾ. ಗೊದ್ದು ವೀರೇಶ್) ಅವರು ೩೫–೪೦ ವರ್ಷಗಳ ಕೃಷಿ ವಿಜ್ಞಾನಿಯ ಅನುಭವದಿಂದ ಬರೆದಿರುವ ಪುಸ್ತಕ. ಇದನ್ನು ಸಾವಯವ ಕೃಷಿ ಉತ್ತೇಜಕ ಸಂಘ (APOF), ಬೆಂಗಳೂರು ಸಂಸ್ಥೆಯ ಅಡಿ ಪ್ರಕಟಿಸಲಾಗಿದೆ. ಒಟ್ಟು ೧೬ ಅಧ್ಯಾಯಗಳು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಯಾಗಿ, ಭಾರತೀಯ ಕೃಷಿ ಸಂಶೋಧನೆಯ ಉನ್ನತ ಸ್ಥಾನಗಳಲ್ಲಿ ಕೆಲಸ ಮಾಡಿದ ಡಾ. ವೀರೇಶ್ ರವರಿಗೆ ಕೃಷಿ ಬದುಕಿನ ಮೇಲಿದ್ದ ಪ್ರೀತಿ ಅಪಾರ. ಅದು ಈ ಪುಸ್ತಕದ ಪ್ರತಿಯೊಂದು ಪುಟದಲ್ಲಿಯೂ ಕಾಣಸಿಗುತ್ತದೆ.
ಇದು ಆಧುನಿಕ ವಿಜ್ಞಾನದ ಭಾಷೆಯಲ್ಲಿ, ರೈತನ ಕನ್ನಡದಲ್ಲಿ, ಸಾವಯವ ಕೃಷಿಯನ್ನು ವಿವರಿಸುವ ಒಂದು ಸಮಗ್ರ ಕೈಪಿಡಿ. ಪರಂಪರೆ ಮತ್ತು ಮಣ್ಣಿನ ಸೂಕ್ಷ್ಮಜೀವಿಗಳ ಕುರಿತಾದ ವಿಜ್ಞಾನ — ಇವೆರಡನ್ನೂ ಸೇರಿಸಿ ಬರೆದ ಅಪೂರ್ವ ಪುಸ್ತಕವೆಂದೇ ಹೇಳಬಹುದು.
"ಹಸಿರು ಕ್ರಾಂತಿ ಒಂದು ರಾಮಬಾಣವಾಗಿ ಪ್ರಚಲಿತಕ್ಕೆ ಬಂದು, ಒಂದು ಶತಮಾನದ ನಂತರ ಬಳಸಲಾಗದ ಪೆನಿಸಿಲಿನ್ ಆಗಿ ಪರಿಣಮಿಸಿತು." - ಎಷ್ಟು ಪ್ರಭಾವಕಾರಿ ಮಾತು ಇದು! ಜೀವಿಗಳಲ್ಲಿ ಪೆನಿಸಿಲಿನ್ ಪ್ರತಿರೋಧ ಬಂದಂತೆ, ಭೂಮಿ ಮತ್ತು ಕೀಟಗಳಲ್ಲೂ ರಾಸಾಯನಿಕಗಳಿಗೆ ಪ್ರತಿರೋಧ ಬೆಳೆದು ಬಂದಿದೆ. ಸಾವಯವ ಕೃಷಿ ಮಾಡಲು ಹೊರಟ ಎಲ್ಲರಿಗೂ ಇದು ಮಹತ್ವದ ವಿಷಯ. ನಾವು ಮೊದಲು ಸಾವಯವ ಕೃಷಿ ಮಾಡಲು ಹೊರಡುವುದೇ ನಮ್ಮ ಹಾಗೂ ನಮ್ಮ ಕುಟುಂಬದ ಉತ್ತಮ ಸ್ವಾಸ್ಥ್ಯಕ್ಕಾಗಿ, ಅಲ್ಲವೇ?
ಪುಸ್ತಕ ಸಾವಯವ ಕೃಷಿ ಏಕೆ? ಸಾವಯವ ಕೃಷಿ ಹೇಗೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ನೀಡುತ್ತ ರಸಗೊಬ್ಬರ ಮತ್ತು ರಾಸಾಯನಿಕ ಔಷಧಿಗಳ ಉಗಮ ಮತ್ತು ಬಳಕೆಯ ಬಗ್ಗೆ ನಿಮಗೆ ತಿಳಿಸುತ್ತ ಹೋಗುತ್ತದೆ.
ನಂತರ ಮಣ್ಣು — ಸಜೀವ ಮಣ್ಣು, ಸೂಕ್ಷ್ಮಜೀವಿಗಳು, ಮಣ್ಣು ಜೀವಿಗಳು, ಮಣ್ಣಿನ ಫಲವತ್ತತೆಗೆ ಸಾವಯವ ವಸ್ತುವಿನ ಮಹತ್ವ, ಸಾವಯವ ಗೊಬ್ಬರ — ದನದ ಗೊಬ್ಬರ, ಹಸಿರೆಲೆ ಗೊಬ್ಬರ ಇವೆಲ್ಲದರ ಕುರಿತು ಉಪಯುಕ್ತ ಮಾಹಿತಿ ಇದೆ.
ಕಾಂಪೋಸ್ಟ್ ಮಾಡುವ ವಿಧಾನಗಳು (ಒಟ್ಟು ೧೪ ವಿಧಾನಗಳನ್ನು ಕಲೆ ಹಾಕಿದ್ದಾರೆ - ಬೆಂಗಳೂರು, ಇಂಡೋರ್, NADEP, ನಾಗಪುರ, ಜಪಾನ್, ವರ್ಮಿ ಕಾಂಪೋಸ್ಟ್, ಫಾಸ್ಪೋ-ಕಾಂಪೋಸ್ಟ್, ಬಯೋಡೈನಾಮಿಕ್, ಪಂಚಗವ್ಯ, ದ್ರವ್ಯರೂಪ, ಅಗ್ನಿಹೋತ್ರ).
ಇನ್ನು ಜೈವಿಕ ಗೊಬ್ಬರಗಳು — ರೈಜೋಬಿಯಂ, ಅಜೋಟೋಬ್ಯಾಕ್ಟರ್, ಅಜೋಸ್ಪಿರಿಲ್ಲಂ, ಅಸಿಟೊಬ್ಯಾಕ್ಟರ್, ಮೈಕೊರೈಜಾ, ಮಣ್ಣಿನ ಫಲವತ್ತತೆಯನ್ನು ಪೋಷಿಸುವ ವಿಧಾನ, ಸಾವಯವ ಕೃಷಿಯಲ್ಲಿ ಮಣ್ಣು ಸಂರಕ್ಷಣೆ - ಇವೆಲ್ಲದರ ಕುರಿತು ಬರೆದಿದ್ದಾರೆ.
ಕರ್ನಾಟಕದಲ್ಲಿ ಸಾವಯವ ಕೃಷಿ, ಸಾವಯವ ಕೃಷಿ ನೀತಿ ನಿಯಮಗಳು (Codex Alimentarius, NSOP) ಮುಂತಾದವುಗಳ ಬಗ್ಗೆಯೂ ಲೇಖಕರು ಬರೆದಿದ್ದಾರೆ. ಇದಲ್ಲದೆ, ಸುಸ್ಥಿರ ಕೃಷಿ ಮತ್ತು ಸಾವಯವ ಕೃಷಿಯ ಬಗ್ಗೆ ಬರೆಯುತ್ತ ಸಾವಯವ ಕೃಷಿಕರಿಗೆ ಗಮನಕ್ಕೆ ತರಲೆಂದು ಕೆಲವು ವಿಷಯಗಳನ್ನು ಬರೆದಿದ್ದಾರೆ. ಮಾಹಿತಿ ಮೂಲಗಳ ಉಲ್ಲೇಖ ಕೂಡ ಇದೆ.
ನನಗೆ ಸ್ವತಃ ಇವರ ಪುಸ್ತಕದಲ್ಲಿ ತುಂಬ ಉಪಯುಕ್ತವಾದದ್ದು ಹಸಿರೆಲೆ ಗೊಬ್ಬರ ಮಾಡುವ ಹಲವು ವಿಧಾನಗಳು. ನಾವು ಇವರ ಪುಸ್ತಕದಿಂದಲೇ ದ್ರವ್ಯ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರ ಮಾಡುವ ವಿಧಾನಗಳನ್ನು ಓದಿ, ಅದನ್ನೇ ಹಲವು ವರ್ಷಗಳಿಂದ ತಯಾರು ಮಾಡುತ್ತ ಬಂದಿರುವೆವು. ಇವೆರಡೂ ಕೂಡ ನನಗೆ ಸ್ವತಃ ತುಂಬ ಉಪಯುಕ್ತವಾಗಿ ಹೊರಹೊಮ್ಮಿವೆ. ಇದಲ್ಲದೆ ಪಂಚಗವ್ಯ ಹಾಗೂ ಬೀಜಾಮೃತ ಸಿದ್ಧತೆಗಳ ಮಾದರಿಯ ಬಗ್ಗೆ ಕೂಡ ಬರೆದಿದ್ದಾರೆ.
ರಾಸಾಯನಿಕ ಭೂಮಿಯನ್ನು ಒಮ್ಮೆಲೆ ಸಾವಯವಕ್ಕೆ ಪರಿವರ್ತಿಸಿದರೆ — ಒಂದೆರಡು ವರ್ಷ ಇಳುವರಿ ಕುಸಿಯುತ್ತದೆ - ಅದಕ್ಕೆ ನೀವು ತಯಾರಿರಬೇಕು ಎಂದು ವೀರೇಶ್ ಎಚ್ಚರಿಸುತ್ತಾರೆ. ಪರಿವರ್ತನಾ ಅವಧಿ (Conversion Period) ೩ ವರ್ಷಗಳು - ಇದಕ್ಕೆ ನೀವು ಮನಸ್ಸಿನಲ್ಲಿಯೇ ತಯಾರಿರಬೇಕು. ಈ ಅವಧಿಯಲ್ಲಿ ಸಾವಯವ ವಸ್ತುವನ್ನು ನಿರಂತರ ಸೇರಿಸುತ್ತಾ ಇದ್ದಲ್ಲಿ, ಮಣ್ಣಿನ ಜೀವಜಾಲ ಮರು-ಜನ್ಮ ಪಡೆಯುತ್ತದೆ ಎಂದು ಬರೆಯುತ್ತಾರೆ.
ಆದರೆ ರೈತನು ಪೂರ್ಣ ಸಾವಯವಕ್ಕೆ ತಕ್ಷಣ ಜಿಗಿಯಬೇಕಿಲ್ಲ — LEISA (Low External Input Sustainable Agriculture) ಮಾದರಿ ಇದೆ. ಇದರಲ್ಲಿ ಹೊರಗಿನ ಇನ್ಪುಟ್ ಗಳನ್ನು ಕ್ರಮೇಣ ಕಡಿಮೆ ಮಾಡುತ್ತಾ ಬರುವುದು ಸಾಧ್ಯವಿದೆ ಎಂದು ಬರೆಯುತ್ತಾರೆ.
"ವಿಜ್ಞಾನವಿಲ್ಲದ ಕೃಷಿ ಕುಂಟು, ಕೃಷಿಯಿಲ್ಲದ ವಿಜ್ಞಾನ ಕುರುಡು." ಎನ್ನುತ್ತ ಡಾ. ವೀರೇಶ್ ನಮ್ಮಂತಹ ಸಾವಯವ ಕೃಷಿ ಆಸಕ್ತರಿಗೆ ಸಾಂಪ್ರದಾಯಿಕ ಅರಿವಿನೊಂದಿಗೆ ವೈಜ್ಞಾನಿಕ ದಾರಿಯನ್ನು ಕೂಡ ಕಂಡುಕೊಳ್ಳುವ ಅವಕಾಶವನ್ನು ಈ ಪುಸ್ತಕದಿಂದ ಕಲ್ಪಿಸಿದ್ದಾರೆ.
ಪ್ರತಿಕ್ರಿಯೆ (3)
ಉತ್ತಮ ಮಾಹಿತಿ, ಪುಸ್ತಕ ಬೇಕು ಸರ್
ಸಾವಯವ ಕೃಷಿ ಬಗ್ಗೆ ಮಾಹಿತಿ ತಿಳಿಯಲು ಪುಸ್ತಕ ಬೇಕು ಆನ್ ಲೈನ್ ಮೂಲಕ ತರಿಸಿಕೊಳ್ಳಲು ಸಾಧ್ಯವೇ? ಗವಿಸಿದ್ದಯ್ಯ ಹಿರೇಮಠ c/o ಸಾವಿತ್ರಿ ನಿಲಯ ಹಿರೇಮಸೀದಿ ಹತ್ತಿರ ಕಿನ್ನಾಳ ತಾ// ಜಿ// ಕೊಪ್ಪಳ 583230
ಪುಸ್ತಕ ಬೇಕು