ಸ್ಟಾಕ್ ಹೋಂ ವಾರಾಂತ್ಯ ಸಿಗ್ಟೂನಾವೆಂಬ ಚಿಕ್ಕ ಊರಿಗೆ ಹೋದೆವು. ವೈಕಿಂಗ್ ಕಾಲದ ಇತಿಹಾಸವುಳ್ಳ ಊರು. ೧೭೨೪ ರ ಮುನಿಸಿಪಾಲಿಟಿಯ ಹಳೇ ಕಟ್ಟಡವಿದೆ. ಇದಕ್ಕೆ Radhouset ಎನ್ನುತ್ತಾರೆ. ಅದೇ ಸಾಲಿನಲ್ಲಿ ಪ್ರವಾಸಿಗರು ಭೇಟಿ ನೀಡುವ ಅಂಗಡಿಗಳ, ಕಾಫೀಹೌಸ್ ಗಳ ಸಾಲು. ಕಡೆಯಲ್ಲೊಂದು ಯಾರ ಮೇಲುಸ್ತುವಾರಿಯಿಲ್ಲದ ಪುಸ್ತಕದ ಗೂಡು. ಇಲ್ಲಿಂದ ಪುಸ್ತಕ ಎರವಲು ಪಡೆಯಬಹುದು. ಅಗತ್ಯವಿಲ್ಲದ ಪುಸ್ತಕಗಳನ್ನು ದಾನವಾಗಿ ಕೊಡಬಹುದು. ಈ ರೀತಿಯ ಪುಸ್ತಕದ ಗೂಡುಗಳನ್ನು ಸ್ಟಾಕ್ ಹೋಂ ನಲ್ಲೂ ಕಾಣಬಹುದು.

ಬುಕ್ಷ್.jpg

ಸ್ವಲ್ಪ ಕೆಳಗೆ ಇನ್ನೊಂದು ಮಾರ್ಗ. ಮಾರ್ಗದ ಪಕ್ಕ ಹೊಂದಿಕೊಂಡೇ ಬಾಲ್ಟಿಕ್ ಸಮುದ್ರ. ಕುಳಿತು ವಿಹಂಗಮ ನೋಟ ವೀಕ್ಷಿಸಲು ಮರದ ಹಲಗೆಯ ಆಸನಗಳ ವ್ಯವಸ್ಥೆಯಿದೆ. ಶಾಂತಿಪ್ರಿಯರು, ನಿಸರ್ಗಪ್ರೇಮಿಗಳು, ನವಪ್ರೇಮಿಗಳು, ವಿರಕ್ತರು ಕೂಡ ಈ ನೋಟದ ಸೊಬಗನ್ನು ಸವಿಯಬಹುದು.‌ ಬಸ್ ಸ್ಡ್ಯಾಂಡ್ ಪಕ್ಕದಲ್ಲೊಂದು ICA ಸೂಪರ್ ಬಝಾರ್, ಪ್ರೆಸ್ ಬ್ರಿಯಾನ್ ಚೈನ್ ಶಾಪ್ ಇವೆ.‌

ಸೇವ.jpg

ಪುರಾತನಕಾಲದ ಕಲ್ಲಿನ ಕಟ್ಟಡ ಶಿಥಿಲಗೊಂಡಿರುವುದು ನೋಡಬಹುದು. ಪಕ್ಕದಲ್ಲಿ‌ ಸ್ಮಶಾನ, ಚರ್ಚ್ ಇವೆ. ಸಾಕಷ್ಟು ಬೃಹತ್ ಮರಗಳ ಸಂಖ್ಯೆ ಈ ಊರಿನ ಅಂದವನ್ನು ಹೆಚ್ಚಿಸಿದೆ. ಇಲ್ಲಿಗೆ ಏರ್ ಪೋರ್ಟ ಕಡೆಯಿಂದ ಸಾಕಷ್ಟು ಬಸ್ ಗಳು ಓಡಾಡುತ್ತವೆ.  ಇಲ್ಲಿಯ ಥಾಯ್ ಹೋಟೆಲಿನಲ್ಲಿ,  ತೆಂಗಿನಕಾಯಿ ತುರಿ, ತರಕಾರಿ, ತೋಪುಗಳ ಪದಾರ್ಥ, ಅನ್ನ, ಸ್ಪ್ರಿಂಗ್ ರೋಲ್ ಗಳ ಹೊಸರುಚಿಯ ಊಟವನ್ನು ಸವಿದು, ಸ್ಟಾಕ್ ಹೋಂ ನ ಬಸ್ ಹತ್ತಿದೆವು.

-ಪ್ರಕಾಶ ಎನ್, ಮಂಗಳೂರು