ಸೈಲೆಂಟ್ ಸ್ಪ್ರಿಂಗ್ (Silent Spring — "ಮೂಕ ವಸಂತ") ೧೯೬೨ರಲ್ಲಿ ಪ್ರಕಟವಾದ ಪುಸ್ತಕ. ಇದನ್ನು ಬರೆದವರು ಅಮೆರಿಕದ ಮರೀನ್-ಜೀವಶಾಸ್ತ್ರಜ್ಞೆ ಹಾಗೂ ಲೇಖಕಿ ರೇಚಲ್ ಕಾರ್ಸನ್ (Rachel Carson, 1907–1964). ಸಮುದ್ರ ಜೀವನದ ಕುರಿತ ಅವರ ಹಿಂದಿನ ಕೃತಿಗಳಿಂದ (The Sea Around Us) ಈಗಾಗಲೇ ಪ್ರಸಿದ್ಧರಾಗಿದ್ದ ಕಾರ್ಸನ್, ಈ ಪುಸ್ತಕದಲ್ಲಿ ರಾಸಾಯನಿಕ ಕೀಟನಾಶಕಗಳು — ಮುಖ್ಯವಾಗಿ ಡಿಡಿಟಿ (DDT) ಮತ್ತು ಅದರಂಥ ವಿಷಗಳು — ಪ್ರಕೃತಿಗೂ, ಪ್ರಾಣಿ-ಪಕ್ಷಿಗಳಿಗೂ, ಮನುಷ್ಯನಿಗೂ ಮಾಡುತ್ತಿರುವ ಹಾನಿಯನ್ನು ವೈಜ್ಞಾನಿಕ ಆಧಾರಗಳೊಂದಿಗೆ ಬಿಚ್ಚಿಟ್ಟಿದ್ದಾರೆ.
ಈ ಪುಸ್ತಕ ಆಧುನಿಕ ಪರಿಸರ ಚಳವಳಿಯ ಬೀಜವೊಂದನ್ನು ಹುಟ್ಟುಹಾಕಿತು ಎಂದರೆ ತಪ್ಪಾಗಲಾರದು. ಇದರ ಪರಿಣಾಮವಾಗಿ ಅಮೆರಿಕದಲ್ಲಿ ಡಿಡಿಟಿ ನಿಷೇಧವಾಯಿತು; ಪರಿಸರ ರಕ್ಷಣಾ ಸಂಸ್ಥೆ (EPA) ಸ್ಥಾಪನೆಗೆ ಎಡೆ ಮಾಡಿಕೊಟ್ಟಿತು. ರಾಸಾಯನಿಕಗಳ ಉದ್ಯಮ ಕಾರ್ಸನ್ರ ಮೇಲೆ ತೀವ್ರ ದಾಳಿ ನಡೆಸಿತಾದರೂ, ಅವರ ಸಂಶೋಧನೆ ಗಟ್ಟಿಯಾಗಿ ನಿಂತಿತು. ಅರವತ್ತು ವರ್ಷಗಳ ನಂತರವೂ, ಇಂದಿನ ನಮ್ಮ ಹೊಲ-ತೋಟ-ತಟ್ಟೆಗಳ ವಿಷದ ಕಥೆಗೆ ಈ ಪುಸ್ತಕ ಹಿಡಿದ ಕನ್ನಡಿ ಇನ್ನೂ ಪ್ರಸ್ತುತವಾಗಿದೆ.
ಕಾರ್ಸನ್ ತಮ್ಮ ಪುಸ್ತಕವನ್ನು ಆಲ್ಬರ್ಟ್ ಶ್ವೈಟ್ಜರ್ಗೆ — ಈ ಕೆಳಗಿನ ಮಾತಿನೊಂದಿಗೆ ಅರ್ಪಿಸಿದ್ದಾರೆ:
Man has lost the capacity to foresee and to forestall. He will end by destroying the earth."
("ಮುಂದೆ ಏನಾಗುತ್ತದೆ ಎಂದು ಮುನ್ನೋಡುವ, ಅದನ್ನು ತಡೆಯುವ ಶಕ್ತಿಯನ್ನೇ ಮನುಷ್ಯ ಕಳೆದುಕೊಂಡಿದ್ದಾನೆ. ಕೊನೆಗೆ ಅವನು ಭೂಮಿಯನ್ನೇ ನಾಶ ಮಾಡಿ ಮುಗಿಸುತ್ತಾನೆ.")
ಈ ಪುಸ್ತಕದ ತಿರುಳು ಸರಳವಾದರೂ ಆಳವಾದದ್ದು: ಪ್ರಕೃತಿಯಲ್ಲಿ ಯಾವುದೂ ಏಕಾಂತದಲ್ಲಿ ಬದುಕುವುದಿಲ್ಲ. ಮಣ್ಣು, ನೀರು, ಗಿಡ, ಹುಳ, ಹಕ್ಕಿ, ಪ್ರಾಣಿ, ಮನುಷ್ಯ — ಎಲ್ಲವೂ "ಜೀವಜಾಲ"ದ (web of life) ಎಳೆಗಳು. ಒಂದೆಡೆ ಸಿಂಪಡಿಸಿದ ವಿಷ ಅಲ್ಲಿಗೇ ನಿಲ್ಲುವುದಿಲ್ಲ; ಅದು ಮಣ್ಣಿನಲ್ಲಿ ಬಹುಕಾಲ ಉಳಿದು, ನೀರಿನಲ್ಲಿ ಹರಿದು, ಜೀವಿಯಿಂದ ಜೀವಿಗೆ ಸಾಗಿ, ಕೊನೆಗೆ ನಮ್ಮ ಎಲುಬು-ಮಾಂಸಗಳನ್ನೂ ಸೇರುತ್ತದೆ.
ಕಾರ್ಸನ್ರ ಮತ್ತೊಂದು ಪ್ರಮುಖ ವಿಷಯವನ್ನಿಟ್ಟುಕೊಂಡು ನಮ್ಮನ್ನು ಎಚ್ಚರಿಸುತ್ತಾರೆ — ಕೀಟನಾಶಕಗಳು ಕೀಟಗಳನ್ನು ಪೂರ್ಣ ನಾಶ ಮಾಡುವುದಿಲ್ಲ; ಬದಲಿಗೆ ಅವುಗಳಲ್ಲಿ ಪ್ರತಿರೋಧ ಶಕ್ತಿ (resistance) ಬೆಳೆಸುತ್ತವೆ. ದುರ್ಬಲ ಕೀಟಗಳಷ್ಟೇ ಸಾಯುತ್ತವೆ; ಬಲಿಷ್ಠವಾದವು ಉಳಿದು ಮತ್ತಷ್ಟು ಸಂತಾನ ಬೆಳೆಸುತ್ತವೆ. ಹೀಗಾಗಿ ರೈತ ಮತ್ತೆ ಮತ್ತೆ, ಹೆಚ್ಚು ಹೆಚ್ಚು ವಿಷ ಸುರಿಯಬೇಕಾಗುತ್ತದೆ — ಇದೊಂದು ಕೊನೆಯಿಲ್ಲದ, ಅಪಾಯಕಾರಿ ಸುಳಿ.
ಗಮನಿಸಿ - ಕಾರ್ಸನ್ ಎಲ್ಲ ಕೀಟನಾಶಕಗಳನ್ನು ನಿಷೇಧಿಸಿ ಎಂದು ಹೇಳಿಲ್ಲ. ಅವರು ಹೇಳುವುದು — ವಿವೇಚನೆಯಿಲ್ಲದ, ಕುರುಡಾದ, ಪ್ರಮಾಣ ಮೀರಿದ ಬಳಕೆ ಅಪಾಯಕಾರಿ. ಅಂದರೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಹೊಯ್ಯುತ್ತಿರುವುದು ಗಂಡಾಂತರಕ್ಕೆ ಎಡೆ ಮಾಡಿಕೊಡುತ್ತದೆ ಎಂಬರ್ಥದಲ್ಲಿ. "ಪ್ರಕೃತಿಯ ನಿಯಂತ್ರಣ" ಎಂಬ ಪದವನ್ನೇ ಅವರು ಪ್ರಶ್ನಿಸುತ್ತಾರೆ:
The 'control of nature' is a phrase conceived in arrogance, born of the Neanderthal age of biology and philosophy, when it was supposed that nature exists for the convenience of man."
("'ಪ್ರಕೃತಿಯ ನಿಯಂತ್ರಣ' ಎಂಬ ಮಾತೇ ದುರಹಂಕಾರದಿಂದ ಹುಟ್ಟಿದ್ದು — ಇದು ಪ್ರಕೃತಿ ಮನುಷ್ಯನ ಅನುಕೂಲಕ್ಕಾಗಿಯೇ ಇದೆ ಎಂದು ಭಾವಿಸಿದ್ದ ಜೀವವಿಜ್ಞಾನ ಹಾಗೂ ತತ್ವಜ್ಞಾನದ ಅನಾಗರಿಕ ಕಾಲವೊಂದರ ಪಳೆಯುಳಿಕೆ.")
ಪುಸ್ತಕದಲ್ಲಿ ಒಟ್ಟು ೧೭ ಅಧ್ಯಾಯಗಳಿವೆ:
ನಾಳೆಗೊಂದು ನೀತಿಕಥೆ (A Fable for Tomorrow) — ವಸಂತ ಬಂದರೂ ಹಕ್ಕಿಗಳ ಹಾಡು ಕೇಳದ, ಮೂಕವಾದ ಒಂದು ಕಾಲ್ಪನಿಕ ಊರಿನ ಚಿತ್ರಣ.
ಸಹಿಸಿಕೊಳ್ಳುವ ಅನಿವಾರ್ಯತೆ (The Obligation to Endure) — ಮನುಷ್ಯ ಸೃಷ್ಟಿಸಿದ ವಿಷದ ಜೊತೆ ಬದುಕುವುದರ ಹೊರೆ.
ಮೃತ್ಯು ತರುವ ‘ಔಷಧ’ಗಳು (Elixirs of Death) — ಡಿಡಿಟಿ ಮತ್ತಿತರ ರಾಸಾಯನಿಕಗಳ ವಿವರ.
ಮೇಲ್ಮೈ ನೀರು ಮತ್ತು ಭೂಗತ ಸಾಗರಗಳು (Surface Waters and Underground Seas) — ನೀರು ಹೇಗೆ ವಿಷಪೂರಿತವಾಗುತ್ತದೆ ಎಂಬುದರ ಬಗ್ಗೆ.
ಮಣ್ಣಿನ ಸಾಮ್ರಾಜ್ಯ (Realms of the Soil) — ಮಣ್ಣಿನ ಜೀವಜಗತ್ತಿನ ನಾಶ ಆಗುತ್ತಿರುವ ಕುರಿತು.
ಭೂಮಿಯ ಹಸಿರು ಹೊದಿಕೆ (Earth's Green Mantle) — ಕಳೆನಾಶಕಗಳ ಅಡ್ಡ ಪರಿಣಾಮ.
ಅನಗತ್ಯ ಗೊಂದಲ/ವಿನಾಶ (Needless Havoc) — ವನ್ಯಜೀವಿಗಳ ಸಾವು.
ಅಲ್ಲದೆ, ಹಕ್ಕಿಗಳು ಹಾಡುವುದಿಲ್ಲ (And No Birds Sing) — ಪಕ್ಷಿ ಸಂಕುಲದ ಅಳಿವು.
ಮೃತ್ಯು ತರುವ ನದಿಗಳು (Rivers of Death) — ಮೀನು ಮತ್ತು ಜಲಚರಗಳ ಸಾವು.
ಆಕಾಶದಿಂದ, ವಿವೇಚನೆಯಿಲ್ಲದೆ (Indiscriminately from the Skies) — ವಿಮಾನಗಳಿಂದ ಸಾಮೂಹಿಕ ಸಿಂಪಡಣೆ.
ಬೋರ್ಜಿಯಾಗಳ ಕನಸುಗಳನ್ನು ಮೀರಿ (Beyond the Dreams of the Borgias) — ದೈನಂದಿನ ಜೀವನದಲ್ಲಿ ಹರಡಿರುವ ವಿಷ.
ಮನುಷ್ಯ ತೆರುವ ಬೆಲೆ (The Human Price) — ಮಾನವ ಆರೋಗ್ಯದ ಮೇಲಿನ ಪರಿಣಾಮ.
ಇಕ್ಕಟ್ಟಾದ ಕಿಟಕಿಯ ಮೂಲಕ (Through a Narrow Window) — ಜೀವಕೋಶ ಮಟ್ಟದ ಹಾನಿ.
ಪ್ರತಿ ನಾಲ್ವರಲ್ಲಿ ಒಬ್ಬರು (One in Every Four) — ಕ್ಯಾನ್ಸರ್ ಮತ್ತು ರಾಸಾಯನಿಕಗಳ ನಂಟು.
ಪ್ರಕೃತಿ ಪ್ರತಿರೋಧಿಸುತ್ತದೆ (Nature Fights Back) — ಕೀಟಗಳ ಪ್ರತಿರೋಧ ಶಕ್ತಿ.
ಹಿಮಪಾತದ ಮೊರೆತ (The Rumblings of an Avalanche) — ಬರಲಿರುವ ದೊಡ್ಡ ಅಪಾಯದ ಸೂಚನೆ.
ಇನ್ನೊಂದು ದಾರಿ (The Other Road) — ವಿಷವಿಲ್ಲದ, ಜೈವಿಕ ಪರ್ಯಾಯ ಮಾರ್ಗಗಳು.
ಕಾರ್ಸನ್ ಪುಸ್ತಕದಿಂದ ನಾವೇನು ಕಲಿಯಬಹುದು?
ವಿಷ ಎಲ್ಲಿಯೂ ನಿಲ್ಲುವುದಿಲ್ಲ: ಹೊಲಕ್ಕೆ ಹೊಡೆದ ಕೀಟನಾಶಕ ಆ ಹೊಲಕ್ಕೇ ಸೀಮಿತವಾಗುವುದಿಲ್ಲ. ಅದು ಮಣ್ಣಿನಲ್ಲಿ ವರ್ಷಗಟ್ಟಲೆ ಉಳಿಯುತ್ತದೆ, ಮಳೆನೀರಿನೊಂದಿಗೆ ಹಳ್ಳ-ಬಾವಿ-ಅಂತರ್ಜಲ ಸೇರುತ್ತದೆ, ಗಿಡದ ಬೇರಿನಿಂದ ಎಲೆ-ಕಾಳಿಗೆ ಏರುತ್ತದೆ. ರೈತ ಒಂದೆಡೆ ಹೊಡೆದ ವಿಷ ಊರಿನ ಇನ್ನೊಂದು ತುದಿಯ ನೀರಿನಲ್ಲಿ, ಮತ್ತೊಬ್ಬರ ತಟ್ಟೆಯಲ್ಲಿ ಕಾಣಿಸಿಕೊಳ್ಳಬಹುದು.
ಆಹಾರ ಸರಪಳಿಯಲ್ಲಿ ವಿಷ ಗಟ್ಟಿಯಾಗುತ್ತಾ ಹೋಗುತ್ತದೆ: ಡಿಡಿಟಿಯಂಥ ವಿಷ ಶರೀರದಿಂದ ಸುಲಭವಾಗಿ ಹೊರಹೋಗುವುದಿಲ್ಲ — ಕೊಬ್ಬಿನಲ್ಲಿ ಶೇಖರವಾಗುತ್ತದೆ. ಸಣ್ಣ ಜೀವಿಯಿಂದ ದೊಡ್ಡ ಜೀವಿಗೆ ಸಾಗುತ್ತಾ, ಪ್ರತಿ ಹಂತದಲ್ಲೂ ಪ್ರಮಾಣ ಹೆಚ್ಚುತ್ತದೆ (biomagnification). ಸರಪಳಿಯ ತುದಿಯಲ್ಲಿರುವ ಹದ್ದು, ಪ್ರಾಣಿ ಮತ್ತು ಮನುಷ್ಯನಿಗೆ ಅತಿ ಹೆಚ್ಚು ಹೊಡೆತ.
ಹೆಚ್ಚು ಹೊಡೆದಷ್ಟೂ ಕೀಟ ಬಲಿಷ್ಠ: ಮೊದಲ ಬಾರಿ ಪರಿಣಾಮ ಬೀರಿದ ಕೀಟನಾಶಕ ಎರಡನೇ, ಮೂರನೇ ಬಾರಿಗೆ ದುರ್ಬಲವಾಗುತ್ತದೆ. ಕಾರಣ — ಬದುಕುಳಿದ ಪ್ರಬಲ ಕೀಟಗಳ ವಂಶವಾಹಿ ಬದಲಾಗಿ ಪ್ರತಿರೋಧ ಶಕ್ತಿ ಬೆಳೆಯುತ್ತದೆ. ಪರಿಣಾಮ: ಹೆಚ್ಚು ಖರ್ಚು, ಹೆಚ್ಚು ವಿಷ, ಹೆಚ್ಚು ಹಾನಿ — ಆದರೆ ಕೀಟ ಮಾತ್ರ ಸಾಯುವುದಿಲ್ಲ.
ಮಣ್ಣಿನಲ್ಲಿರುವ ಜೀವಜಗತ್ತಿನ ನಾಶ: ಮಣ್ಣಿನಲ್ಲಿ ಕೋಟ್ಯಂತರ ಸೂಕ್ಷ್ಮಜೀವಿಗಳು, ಎರೆಹುಳುಗಳು — ಇವೇ ಮೊದಲಾದವು ಮಣ್ಣನ್ನು ಫಲವತ್ತಾಗಿ ಇಡುತ್ತವೆ. ರಾಸಾಯನಿಕ ವಿಷ ಈ ಜೀವಿಗಳನ್ನೂ ಕೊಲ್ಲುತ್ತದೆ. ಫಲವತ್ತಾದ ಮಣ್ಣು ನಿರ್ಜೀವ ಮಣ್ಣಾಗುತ್ತದೆ — ಇದು ರೈತನಿಗೆ ದೀರ್ಘಕಾಲದ ನಷ್ಟ.
"ನಿರುಪದ್ರವಿ" ಜೀವಿಗಳೂ ಬಲಿ: ಕೀಟನಾಶಕ ಗುರಿಯಿಟ್ಟ ಕೀಟವನ್ನಷ್ಟೇ ಕೊಲ್ಲುವುದಿಲ್ಲ. ಜೇನುನೊಣ, ಚಿಟ್ಟೆ, ಪರಾಗಸ್ಪರ್ಶ ಮಾಡುವ ಕೀಟಗಳು, ಹಕ್ಕಿಗಳು, ಮೀನುಗಳು, ಮೊಲ, ನವಿಲು — ಎಲ್ಲವೂ ಬಲಿಯಾಗುತ್ತವೆ. ಜೇನುನೊಣ ಸತ್ತರೆ ಪರಾಗಸ್ಪರ್ಶವಿಲ್ಲ, ಫಸಲಿಲ್ಲ — ರೈತನಿಗೇ ನಷ್ಟ.
ಕ್ಯಾನ್ಸರ್ನ ಕರಾಳ ನೆರಳು: "ಪ್ರತಿ ನಾಲ್ವರಲ್ಲಿ ಒಬ್ಬರು" ಅಧ್ಯಾಯದಲ್ಲಿ ಕಾರ್ಸನ್ ರಾಸಾಯನಿಕಗಳ ಮತ್ತು ಕ್ಯಾನ್ಸರ್ನ ನಂಟನ್ನು ವಿವರಿಸುತ್ತಾರೆ. ಆ ಕಾಲದಲ್ಲೇ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಡಿಡಿಟಿ ಕ್ಯಾನ್ಸರ್ ತರಬಲ್ಲದು ಎಂದು ಗೊತ್ತಾಗಿತ್ತು; ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಡಾ. ಡಬ್ಲ್ಯೂ. ಸಿ. ಹ್ಯೂಪರ್ರಂಥ ತಜ್ಞರು ಸ್ಪಷ್ಟವಾಗಿ ಎಚ್ಚರಿಸಿದ್ದರು. ಆದರೂ ಬಳಕೆ ನಿಲ್ಲಲಿಲ್ಲ. ಈಗಿನ ಕಾಲದಲ್ಲಿ ಕಳೆನಾಶಕಗಳು ಕ್ಯಾನ್ಸರ್ ತರುತ್ತವೆ ಎಂಬ ಗಂಭೀರ ಎಚ್ಚರಿಕೆಗಳು ಇದ್ದರೂ ಅವುಗಳ ಬಳಕೆ ನಿಂತಿಲ್ಲ!
ದಾರಿ ಯಾವುದು? ಕೊನೆಯ ಅಧ್ಯಾಯದಲ್ಲಿ ಕಾರ್ಸನ್ ಪರ್ಯಾಯ ಮಾರ್ಗವನ್ನು ತೋರಿಸುತ್ತಾರೆ — ಜೈವಿಕ ನಿಯಂತ್ರಣ. ಕೀಟದ ನೈಸರ್ಗಿಕ ಶತ್ರುಗಳನ್ನು ಬಳಸುವುದು, ಬೆಳೆ ವೈವಿಧ್ಯವನ್ನು ಕಾಪಾಡುವುದು, ಪ್ರಕೃತಿಯ ಸಮತೋಲನವನ್ನೇ ಆಯುಧವನ್ನಾಗಿಸಿಕೊಳ್ಳುವುದು. ವಿಷದ ಮೇಲೆ ಸಂಪೂರ್ಣ ಅವಲಂಬನೆ ಬೇಕಿಲ್ಲ ಎಂಬುದು ಪುಸ್ತಕದ ಆಶಾವಾದಿ ಸಂದೇಶ.
ಈ ಪುಸ್ತಕ ಇಂದಿಗೂ ಪ್ರಸ್ತುತ!
'ಸೈಲೆಂಟ್ ಸ್ಪ್ರಿಂಗ್' ಪುಸ್ತಕವನ್ನು ಕಾರ್ಸನ್ ಬರೆದು ಅರವತ್ತು ವರ್ಷಗಳೇ ಕಳೆದಿವೆ. ಡಿಡಿಟಿ ಬಹುತೇಕ ದೇಶಗಳಲ್ಲಿ ನಿಷೇಧವಾಗಿದೆ. ಆದರೆ ಕಾರ್ಸನ್ ಎತ್ತಿದ ಮೂಲ ಪ್ರಶ್ನೆ ಇಂದಿಗೂ ಜೀವಂತ — ಡಿಡಿಟಿ ಒಂದೇ ಇತ್ತು ಆಗ; ಇಂದು ನೂರಾರು ಕೀಟನಾಶಕಗಳು ನಮ್ಮ ಹೊಲ, ಸೊಪ್ಪು, ಹಣ್ಣು, ಧಾನ್ಯಗಳ ಮೇಲೆ ಸಿಂಪಡಿಸಲಾಗುತ್ತಿವೆ. ಅಮೆರಿಕದ ಹೊಲಗಳಲ್ಲಿ ಮೊದಲು ಮೂಕವಾದ ವಸಂತದಿಂದ ಹಿಡಿದು ಇಂದು ಬೆಂಗಳೂರು ಗ್ರಾಮಾಂತರದ ಗುಬ್ಬಚ್ಚಿ-ನವಿಲುಗಳ ಮೌನದ ತನಕ — ಪ್ರಕೃತಿ ಕಳೆದುಕೊಳ್ಳುತ್ತಿರುವ ದನಿಗೆ ಈ ಪುಸ್ತಕ ಈಗಲೂ ಸಾಕ್ಷಿ.
ಕಾರ್ಸನ್ ನಮಗೆ ಹೇಳುವ ಪಾಠ — ಪ್ರಕೃತಿಯನ್ನು "ಗೆಲ್ಲುವ" ಅಹಂಕಾರ ಬಿಟ್ಟು, ಅದರೊಂದಿಗೆ ಹೊಂದಿಕೊಂಡು ಬದುಕುವ ವಿನಯ ರೂಢಿಸಿಕೊಳ್ಳಿ ಎಂಬುದು. ರೈತ, ಗ್ರಾಹಕ, ವಿದ್ಯಾರ್ಥಿ, ಪಾಲಿಸಿ ಮೇಕರ್ಸ್ — ಎಲ್ಲರೂ ಓದಲೇಬೇಕಾದ, ಎಲ್ಲರನ್ನೂ ಎಚ್ಚರಿಸುವ ಕೃತಿ ಇದು. ನಮ್ಮ ಆಹಾರ, ಮಣ್ಣು, ನೀರು ಮತ್ತು ಮಕ್ಕಳ ಭವಿಷ್ಯ ವಿಷಮಯವಾಗುವ ಮುನ್ನ ಕಣ್ತೆರೆಸುವ ಗಂಟೆ.
————————
ಗ್ರಂಥದ ವಿವರ:
ಶೀರ್ಷಿಕೆ: Silent Spring (ಸೈಲೆಂಟ್ ಸ್ಪ್ರಿಂಗ್ / ಮೂಕ ವಸಂತ)
ಲೇಖಕರು: ರೇಚಲ್ ಕಾರ್ಸನ್ (Rachel Carson, 1907–1964)
ಮೊದಲ ಪ್ರಕಟಣೆ: ೧೯೬೨ (ಕೆಲವು ಭಾಗಗಳು ಮೊದಲು The New Yorker ಪತ್ರಿಕೆಯಲ್ಲಿ ಸರಣಿಯಾಗಿ ಪ್ರಕಟ)
ಅಧ್ಯಾಯಗಳು: ೧೭
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!