ಇವತ್ತು ನನಗೆ ಮೃತ್ಯು ಕೈ ಹಿಡಿದು ಜೊತೆಗೆ ಕರೆದುಯ್ಯುತ್ತೆ ಎನ್ನುವ ಯೋಚನೆ ಇರಲಿಲ್ಲ. ನಾನು ಎಲ್ಲರ ಸಂಭ್ರಮದ ಕ್ಷಣಗಳನ್ನು ಕ್ಲಿಕ್ಕಿಸಿ ಅವರಿಗೆ ಮನಸ್ಸಿಗೆ ಖುಷಿಯನ್ನು ಉಂಟು ಮಾಡುವ ಫೋಟೋಗ್ರಾಫರ್. ಬದುಕು ಕಟ್ಟಿಕೊಳ್ಳುವುದಕ್ಕೆ ಆರಂಭಿಸಿದ್ದೇನೆ ಅಷ್ಟೇ ಇದೇ ತಿಂಗಳಲ್ಲಿ ಇನ್ನೊಂದಷ್ಟು ಕಾರ್ಯಕ್ರಮಗಳ ಪಟ್ಟಿ ಬಾಕಿ ಇತ್ತು. ಮನೆಯ ಸಾಲ, ತಂಗಿ ಮದುವೆ, ಗಾಡಿ ಸಾಲ ಒಂದಿಷ್ಟು ಜವಾಬ್ದಾರಿಗಳು ಎಲ್ಲವನ್ನು ನಿಭಾಯಿಸುತ್ತೇನೆ ಎನ್ನುವ ಧೈರ್ಯವು ಇತ್ತು. ಕೆಲಸ ಕೊಟ್ಟವರಿಗೆ ತುಂಬಾ ಶ್ರಮವಹಿಸಿ ಕೆಲಸ ನಿರ್ವಹಿಸಿದ ಕಾರಣ ಇನ್ನೊಂದಷ್ಟು ಹೆಚ್ಚು ಕೆಲಸಗಳು ಹುಡುಕಿಕೊಂಡು ಬರ್ತಾ ಇತ್ತು. ಆದರೆ ಇಷ್ಟೆಲ್ಲಾ ಆಗ್ತಾ ಇರುವಾಗ ಸಾವು ನನ್ನನ್ನು ಇಷ್ಟು ಬೇಗ ಕರೆಯುತ್ತೆ ಅಂತ ನಾನು ಯೋಚಿಸಿಯೂ ಇರಲಿಲ್ಲ. ನನಗೆ ಬದುಕನ್ನು ಯೋಚಿಸಲಿಕ್ಕಾಗದಷ್ಟು ವೇಗದಲ್ಲಿ ಯಮರಾಯ ಕೈಹಿಡಿದು ಕರೆದು ಒಯ್ದು ಬಿಟ್ಟಿದ್ದ. ನನ್ನ ಬದುಕು ಅವನಿಗೆ ಯಾಕೆ ಪ್ರಿಯವಾಯಿತೋ ನನ್ನ ಕನಸುಗಳೆಲ್ಲವನ್ನು ನಾಶ ಮಾಡುವ ಯೋಚನೆ ಅವನಿಗೆ ಯಾಕೆ ಬಂತೋ ಒಂದು ಅರ್ಥವಾಗ್ತಾ ಇಲ್ಲ. ಎಲ್ಲವನ್ನ ಬಿಟ್ಟು ಅವನೊಂದಿಗೆ ಪಯಣ ಬೆಳೆಸಿದ್ದೇನೆ. ಹಲವು ಆಸೆಗಳ ಪಟ್ಟಿ ಹಾಗೆ ಉಳಿದುಬಿಟ್ಟಿದೆ .ಹಾಗೆ ಈ ಕ್ಷಣವನ್ನು ಅನುಭವಿಸಿ ಬಿಡಿ ಮುಂದೆ ಏನಾಗುತ್ತೆ ಅನ್ನೋದರ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ