ನಿಮಗಿಂತ ಫಸ್ಟ್ ಬಂದಿರ್ತೀನಿ ಸಾರ್!
ನಾನು ಬಸ್ ನಿಲ್ದಾಣದಲ್ಲಿ ಶಾಲೆಗೆ ಹೊರಡಲು ಒಂಬತ್ತು ಗಂಟೆಯ ಬಸ್ಗಾಗಿ ಕಾಯುತ್ತ ನಿಂತಿದ್ದೆ. ಆಗ ಅಲ್ಲಿಗೆ ಬಂದ ಎಂಟನೆ ತರಗತಿಯ ರಮೇಶನ ತಂದೆ ಮುನಿಬಸಪ್ಪ 'ನಮಸ್ತೆ ಸಾರ್. ನನ್ನ ಮಗ ರಮೇಶನ ಮ್ಯಾಲೆ ಬೆಟ್ಟದಷ್ಟು ಆಸೆ ಇಟ್ಕೊಂಡಿದೀನಿ. ಆದ್ರೆ ಓದೋದ್ರಲ್ಲಿ ಅಷ್ಟಕಷ್ಟೆ, ನೀವು ಏನಾರ ಮಾಡಿ ಅವನಲ್ಲಿ ಓದೋ ಕಿಚ್ಚು ಹಚ್ಚಿ. ನಿಮಗೆ ಪುಣ್ಯ ಬರುತ್ತೆ' ಅಂತೆಲ್ಲ ಹೇಳಿ ಹೋದ. ನಾನು ತರಗತಿಗೆ ಹೋದಾಗ 'ರಮೇಶ ಇನ್ನುಂದೆ ನೀನು ಇಡೀ ಕ್ಲಾಸಿಗೆ ಫಸ್ಟ್ ಬರಬೇಕು ತಿಳೀತಾ?' ಅಂತ ಅಂದದ್ದಕ್ಕೆ. ರಮೇಶ 'ಆಯ್ತು ಸರ್ ಇನ್ಮುಂದೆ ನಿಮಗಿಂತ ಫಸ್ಟ್ ಬಂದಿರ್ತೀನಿ ಸಾರ್' ಎಂದು ಉತ್ತರಿಸಿದ!
-ಮಲ್ಲಿಕಾರ್ಜುನ, ಸುರಧೇನುಪುರ
***
ವೇದಿಕೆಯಲ್ಲಿ ಹಾವು
ಇತ್ತೀಚೆಗೆ ಮಲೆನಾಡಿನ ಮನೆಯೊಂದರ ಹೊರಗೆ ಧೋ ಎಂದು ಸುರಿಯುವ ಮಳೆ ಒಳಗೆ ರಾಮಾಯಣದ ಪಾದುಕಾ ಪ್ರದಾನ ಪ್ರಸಂಗದ ತಾಳಮದ್ದಲೆ. ವನವಾಸಕ್ಕೆ ತೆರಳಿದ ರಾಮ ಚಿತ್ರ ಕೂಟದಲ್ಲಿದ್ದಾಗ ಅಯೋಧ್ಯೆಯ ಪಟ್ಟವನ್ನೇರಲು ಒಪ್ಪದ ಭರತ ರಾಮನನ್ನು ಅಯೋಧ್ಯೆಗೆ ವಾಪಸ್ ಆಗುವಂತೆ ಬೇಡುವ ನನ್ನಿವೇಶ. ಅದೇ ಸಮಯಕ್ಕೆ ವೇದಿಕೆಯಲ್ಲಿ ರಾಮನ ಪಾತ್ರಧಾರಿಯ ಪಕ್ಕ ಸಣ್ಣ ಹಾವೊಂದು ಎದುರಿಗೆ ಕುಳಿತ ಭರತ ಪಾತ್ರಧಾರಿಗೆ ಕಾಣಿಸಿತು. ಅಲ್ಲಿ ಹಾವಿದೆ ಎಂದು ಸಂಘಟಕರಿಗೆ ಕೈಸನ್ನೆ ಮೂಲಕ ತಿಳಿಸಿ. ಹಾವಿನತ್ತ ಕೈ ತೋರಿಸಿ 'ಅಣ್ಣಾ ರಾಮಾ. ಈ ಕಾನನದಲ್ಲಿ ಇಂತಹ ಹಾವು. ಕ್ರೂರಮೃಗಗಳ ಮಧ್ಯೆ ನೀನು ವಾಸ ಮಾಡುವುದು ಬೇಡ, ಅಯೋಧ್ಯೆಗೆ ವಾಪಸ್ ಆಗಿ ರಾಜ್ಯಭಾರ ಮಾಡು' ಎಂದು ಪರಿಪರಿಯಾಗಿ ಬೇಡಿದ. ಮಾತು ಸಾಂದರ್ಭಿಕವಾಗಿದ್ದರೂ, ಪ್ರಕರಣ ಸುರಳೀತವಾದ ಮೇಲೆಯೆ ಎಲ್ಲರೂ ನಕ್ಕಿದ್ದು.
-ಜಯಪ್ರಕಾಶ ತಲವಾಟ, ಸಾಗರ
***
ಸಾಕೇತನ ಸಖತ್ ಮಾತು
ಸಂಕ್ರಾಂತಿಗೆ ಸಂಬಂಧಿಕರೆಲ್ಲ ಸೇರಿ ಅಣ್ಣನ ಫಾರ್ಮ್ ಹೌಸಿಗೆ ಹೋಗಿದ್ದಾರೆ. ನನ್ನ ಮೊಮ್ಮಗ ಸಾಕೇತ ಮೂರೂವರೆ ವರ್ಷದವನು ತುಂಬಾ ತರಲೆ. ತುಂಟ. ಮಾತನಾಡಲು ಆಗ ಕಲಿತಿದ್ದ. ಅವನ ತುಂಟಾಟಕ್ಕೆ ಬೇಸತ್ತು ಅವನ ಅಪ್ಪ ಗದರಿದ್ದಾನೆ. ಎಲ್ಲರ ಮುಂದೆ ಅಪ್ಪ ಬೈದಿದ್ದಕ್ಕೆ ಅವಮಾನದಿಂದ ತಲೆ ತಗ್ಗಿಸಿಕೊಂಡು, ಮುಖ ಊದಿಸಿ ತೋಟದ ಮಾಲಿಯ ಮನೆಗೆ ಹೋಗಿ 'ನಮ್ಮಪ್ಪ ನನಗೆ ಬೈತಾರೆ. ನಾನು ನಿಮ್ಮ ಮನೆಯಲ್ಲಿ ಇರ್ತೀನಿ. ನನ್ನನ್ನು ನೋಡ್ಕೊತೀರಾ' ಅಂತ ಕೇಳಿದ್ದಾನೆ. ಇದನ್ನು ಆ ಮಾಲಿಯ ಹೆಂಡತಿ ಎಲ್ಲರ ಮುಂದೆ ಹೇಳಿದಾಗ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದರಂತೆ.
-ಪುಷ್ಪಾ ಹಾಲಭಾವಿ, ಧಾರವಾಡ
***
ಅವನ್ನೂ ಕರ್ಕೊಂಡು
ಬಿಜಾಪುರದ ನಗರದಲ್ಲಿ ಕೆಲಸ ಮಾಡುತ್ತಿದ್ದ ಶೀನಿಯ ಮನೆಯ ಬೀದಿಯಲ್ಲೇ ಆತನ ಸಹಾಯಕನ ಮನೆ ಇತ್ತು. ಅದೊಂದು ದಿನ ಶೀನಿಯ ಕಚೇರಿ ಜೀಪನ್ನು ರಿಪೇರಿಗೆ ಕೊಟ್ಟಿದ್ದರಿಂದ ಮಧ್ಯಾಹ್ನದ ಊಟ ಮಾಡಿ ಬರಲು ತನಗೆ ಡ್ರಾಪ್ ಕೊಡುವಂತೆ ಶೀನಿ, ಸಹಾಯಕನಿಗೆ ಕೇಳಿದ್ದ. ಅದರಂತೆ ಆತ ತನ್ನ ಸ್ಕೂಟರ್ ಮೇಲೆ ಶೀನಿಯನ್ನು ಮನೆಗೆ ಬಿಟ್ಟು ಬಂದಿದ್ದ. ಅರ್ಧ ಗಂಟೆ ನಂತರ ಮತ್ತೆ ಶೀನಿ ಸಹಾಯಕನ ಮನೆಗೆ ಬಂದಾಗ ಆತ, 'ಒಂದೈದು ಮಿನಿಟ್ ಕೂತಿರಿ. ಈಗ ಬಂದೆ' ಎಂದು ಒಳಗೆ ಹೋಗಿದ್ದ ಆಗ ಆತನ ಅರ್ಧಾಂಗಿ ರೂಮಿನಿಂದಲೇ ತನ್ನ ಪತಿಗೆ 'ರೀ, ನಳಾ ಬಂದಾವ ನೀರು ತುಂಬಿ ಇಟ್ಟು ಹೋಗಿ. ನನಗ ಯಾಕೋ ಸೊಂಟಾ ನೋಯ್ತಾ ಇದೆ' ಎಂದು ಹೇಳುತ್ತಿರುವುದು, ಅದಕ್ಕೆ ಪ್ರತಿಯಾಗಿ ಆಕೆಯ ಪತಿ 'ಏಯ್ ಸುಮ್ಮಿರು ಅಲ್ಲಿ ನಮ್ಮ ಸಾಹೇಬ್ರು ಬಂದ್ ಕೂತಾರ' ಎಂದು ಹೇಳಿದಾಗ ಆಕೆ ಅದೇ ಸ್ವರದಲ್ಲಿ 'ಅದಕ್ಕೇನಂತ ಅವ್ರನ್ನೂ ಕರ್ಕೊಂಡು ತುಂಬೀ...' ಎನ್ನುವ ಮಾತು ಶೀನಿ ಕಿವಿ ಮೇಲೆ ಬಿತ್ತು ಅವ ಸದ್ದಿಲ್ಲದೇ ಆ ಬಿಸಿಲಲ್ಲಿ ಕಚೇರಿಗೆ ನಡೆದು ಹೋದ.
-ಅರವಿಂದ ಜಿ.ಜೋಷಿ
ಕಲೆ: ಗಣೇಶ ಆಚಾರ್ಯ
(ಮಯೂರ ಅಕ್ಟೋಬರ್ ೨೦೨೪ರ ಸಂಚಿಕೆಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!