ವನವಾಸಕ್ಕೆಂದು ಕಾಡಿಗೆ ಹೋದನು
ಸಮಾಜ ವಿಜ್ಞಾನದ ಮೇಷ್ಟ್ರು ರಮೇಶ್, ವಿದ್ಯಾರ್ಥಿಗಳಿಗೆ ಬೋಧಿಸುವಾಗ, 'ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅರ್ಧ ಉತ್ತರ ಅದರಲ್ಲೇ ಇರುತ್ತದೆ. ಹಾಗಾಗಿ ಪ್ರಶ್ನೆಯನ್ನು ಒಂದಲ್ಲ. ಎರಡು ಬಾರಿ ಓದಿ ಅರ್ಥೈಸಿಕೊಳ್ಳಿ' ಎಂದು ಆಗಾಗ ಹೇಳುತ್ತಿದ್ದರು.
ಎಂಟನೇ ತರಗತಿಯ ರಮ್ಯಾ ಅದನ್ನೇ ಮನನ ಮಾಡಿಕೊಂಡಿದ್ದಳು. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿದ್ದ. 'ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ' ಎಂದು ನಾಲ್ಕು ಪ್ರಶ್ನೆಗಳ ಕೇಳಲಾಗಿತ್ತು. ಅದರಲ್ಲಿ ಮೊದಲನೆಯ ಪ್ರಶ್ನೆ 'ಶ್ರೀ ರಾಮಚಂದ್ರನು ಕಾಡಿಗೆ ಏಕೆ ಹೋದನು?' ಎಂಬ ಪ್ರಶ್ನೆಗೆ 'ಶ್ರೀ ರಾಮಚಂದ್ರನು ವನವಾಸಕ್ಕೆಂದು ಕಾಡಿಗೆ ಹೋದನು' ಅಂತ ರಮ್ಯಾ ಅತ್ಯಂತ ಸ್ಪುಟವಾಗಿ ಉತ್ತರ ಬರೆದಿದ್ದಳು!
-ಮಲ್ಲಿಕಾರ್ಜುನ ಎಸ್ ಬಿ.
***
ಕುಜ ದೋಷ
ನಾನು ಆ ದಿನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈ ಮುಗಿದು, ಪ್ರದಕ್ಷಿಣೆ ಹಾಕಿ ನಂತರ ಹಾಗೇ ಸುಮ್ಮನೇ ಕುಳಿತಿದ್ದೆ. ಭಕ್ತರು ಸಹ ಹೆಚ್ಚು ಇರಲಿಲ್ಲ. ಆಗ ನನ್ನ ಪರಿಚಯದ ಪಕ್ಕದ ವಠಾರದ ಮಹಿಳೆಯೊಬ್ಬರು ದೇವಸ್ಥಾನದ ಒಳಗೆ ಬಂದವರೇ ಸೀದಾ ಪುರೋಹಿತರನ್ನು ಪ್ರಶ್ನೆ ಮಾಡುತ್ತಿದ್ದರು.
'ಏನು ಪುರೋಹಿತರೇ, ನನ್ನ ಗಂಡ ಈ ಪಾಟಿ ಕುಡಿದು ಸದಾ ಜಗಳ ಆಡುತ್ತಿರುತ್ತಾರೆ. ನೀವು ಜಾತಕ ಸರಿಯಾಗಿ ನೋಡಿರಲಿಲ್ಲವಾ?' ಎಂದಾಗ ಪುರೋಹಿತರು ಶಾಂತವಾಗಿ 'ಜಾತಕ ನೋಡಿ ಅವರಿಗೆ 'ಕುಜ' ದೋಷ ಇದೆ ಅಂದಿದ್ದೆ ಅಲ್ಲವಾ' ಎಂದರು. ಕೂಡಲೇ ಆ ಮಹಿಳೆ 'ಕುಜ' ದೋಷ ಅಂದರೇನು ಎಂದು ಪ್ರಶ್ನಿಸಿದ್ದಕ್ಕೆ ಪುರೋಹಿತರು, 'ಅದೇ ತಾಯಿ, ಕುಡಿದು ಜಗಳವಾಡುವ ದೋಷ ಅಂತ. ಸಣ್ಣದಾಗಿ 'ಕುಜ' ದೋಷ ಅನ್ನುತ್ತೇವೆ. ಅದಕ್ಕೆಲ್ಲಾ ಪರಿಹಾರ ನಿಮ್ಮ ಕೈಯಲ್ಲೇ ಇದೆ ಎನ್ನಬೇಕೆ? ಅವರಿಬ್ಬರ ಸಂಭಾಷಣೆ ಕೇಳಿದ ನನಗೆ ನಮಸ್ತು!
-ಜಯಮಾಲಾ ಪೈ
***
ರೈಲು ಬಿಡೇಡ
‘ಏ.. ಬರ್ತೀಯೇನೋ ಗುಂಡ ನನ್ನ ಜೊತೆ ನನ್ನ ರೈಲು ಪ್ರಯಾಣಕ್ಕೆ' ಅಂದ ಮಂಜ
‘ಏಯ್, ಏನೋ ನೀನು ಹೇಳೋದು ನಿನ್ನ ರೈಲು ಅಂತ.. ಸಾಕು ನೀನು ರೈಲು ಬಿಟ್ಟದ್ದು, ನನ್ನ ರೈಲು ಪ್ರಯಾಣ ಅಂತ ಅಲ್ಲ. ರೈಲಿನಲ್ಲಿ ನನ್ನ ಪ್ರಯಾಣ’ ಅಂತ ಹೇಳಬೇಕು ಕಣೋ.
ಅಂಬಾನಿಯಂಥ ಅನೇಕ ಶ್ರೀಮಂತರು ಪ್ರೈವೇಟ್ ಜೆಟ್ ಓನರ್ಸ್ ಇರ್ತಾರೆ. ಪ್ರೈವೇಟ್ ಹೆಲಿಕಾಪ್ಟರ್ ಒಡೆಯರು ಇರ್ತಾರೆ, ಅದ್ರೆ ರೈಲು ವಿಭಾಗ ಮಾತ್ರ ಇನ್ನೂ ಸರಕಾರದ್ದೇ ಕಣೋ, ಇನ್ನೂ ಪ್ರೈವೇಟ್ ರೈಲು ಒಡತನ ಯಾರಿಗೂ ಕೊಟ್ಟಿಲ್ಲ ಕಣೋ. ನನ್ನ ಹತ್ತಿರ ರೈಲು ಬಿಡಬೇಡ ಅಂದ ಗುಂಡ. ಮಂಜಣ್ಣ ಸುಸ್ತಾದ.
-ಸುಮನಾ
***
ನೆಕ್ಲೇಸ್…
‘ಆಶಾಢ ಸೇಲ್’ ಎಂದು ಸೀರೆ ಅಂಗಡಿಗೆ ಶಾಪಿಂಗ್ ಮಾಡಲು ಗೆಳತಿಯರೆಲ್ಲಾ ಹೋಗಿದ್ದೆವು. ಆ ಅಂಗಡಿಯಲ್ಲಿ ರಾಶಿ ರಾಶಿ ಸೀರೆಗಳನ್ನೆಲ್ಲಾ ತೆಗೆಸಿ ಹಾಕಿ, 'ಇನ್ನೂ ಹೊಸ ಡಿಸೈನ್ ಯಾವುದೂ ಬಂದಿಲ್ಲವೇನ್ರಿ' ಎಂದು ಕೇಳಿದಾಗ, ಸೀರೆ ತೋರಿಸುವ ಹುಡುಗ 'ಏಯ್, ಈ ಅಂಟಿಗಳಿಗೆ ನೆಕ್ಲೆಸ್ ತಾರೋ' ಎಂದು ಮತ್ತೊಬ್ಬನಿಗೆ ಕೂಗಿ ಹೇಳಿದ. ನಾವೆಲ್ಲ ಕಕ್ಕಾಬಿಕ್ಕಿಯಾದೆವು ಆ ಹುಡುಗ ಹೊಸದಾಗಿ ತಂದಿಟ್ಟ ಸೀರೆ ಬಾಕ್ಸ್ ತೆಗೆದು 'ಇವು ನೆಕ್ಲೆಸ್ ಸೀರೆ ನೋಡ್ರಿ ಅಂಟೀ, ಇದನ್ನು ಉಟ್ಟರೆ ನೆಕ್ಲೆಸ್ ಹಾಕುವುದೇ ಬೇಕಿಲ್ಲ' ಎಂದಾಗ ಎಲ್ಲರೂ ತಬ್ಬಿಬ್ಬು.
-ನಳಿನಿ ಟಿ. ಭೀಮಪ್ಪ, ಧಾರವಾಡ
ಕಲೆ: ಗಣೇಶ ಆಚಾರ್ಯ
(ನವೆಂಬರ್ ೨೦೨೪ರ ‘ಮಯೂರ’ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!