ಕೂದಲನ್ನು ಮಲಗಿಸಬೇಡ!

ಮೂರು ವರ್ಷದ ಮೊಮ್ಮಗ ಅರ್ಜುನ ಈಗಿನ್ನೂ ಕಲಿಯುತ್ತಿರುವ ಮುದ್ದು ಮಾತುಗಳಿಂದ ನಮ್ಮನ್ನು ರಂಜಿಸುವ ತುಂಟ. ಅವನಿಗೆ ತಲೆ ಸ್ನಾನ ಎಂದರೆ ಬೇಸರ, ಅಲರ್ಜಿ! ಮೊನ್ನೆ ಭಾನುವಾರ ನನ್ನ ಸೊಸೆ ಅವನಿಗೆ ಸ್ನಾನ ಮಾಡಿಸುವಾಗ ತಲೆಯ ಮೇಲೆ ನೀರು ಸುರಿಯುತ್ತಲೇ, 'ಅಮ್ಮಾ, ನನ್ನ ಕೂದಲನ್ನು ಮಲಗಿಸಬೇಡ, ಎದ್ದುಕೂಡಿಸು' ಎಂದು ರಚ್ಚೆಹಿಡಿದ. ಏನೆಂದು ಅರಿಯದೇ ಅವಳನ್ನು ವಿಚಾರಿಸಲು, 'ನೀರು ಸುರಿಯುತ್ತಲೇ ಕೂದಲು ತಲೆಗೆ ಮೆತ್ತಿ ಕೊಳ್ಳೋದನ್ನು ಮಲಗಿಸಬೇಡ' ಎಂಬರ್ಧದಲ್ಲಿ ಹೇಳಿದ್ದಳು. ಇದನ್ನರಿತು ಮನೆಯವರೆಲ್ಲಾ ಅವನ ವಿಭಿನ್ನ ವಿಚಾರಣೆಗೆ ನಕ್ಕೆವು. ಹಟ ಮರೆತು ತಾನೂ - ನಗುವಿನಲ್ಲಿ ಭಾಗಿಯಾದ ಆ ತುಂಟ!

-ಸ್ಮಿತಾ ಜೋಶಿ

***

ನಿಮ್ಮಮ್ಮ ಸ್ಟಾರ್ ಆಗಿದ್ದಾಳೆ

ಬಾಣಂತನಕ್ಕೆ ಮಗಳೊಂದಿಗೆ ಬಂದ ಐದು ವರ್ಷದ ನನ್ನ ಮೊಮ್ಮಗಳು ತುಂಬಾ ತುಂಟಿ. ನನ್ನೊಂದಿಗೆ ಮೊಮ್ಮಗಳು ಸಹಾ ‘ನಿನಗಾಗಿ’ ಧಾರಾವಾಹಿ ವೀಕ್ಷಿಸುತ್ತಿದ್ದಳು.

ಅವಳ ತುಂಟಾಟಕ್ಕೆ ಮನೆಯಲ್ಲಿ ಯಾರಾದರೂ ಬ್ರೇಕ್ ಹಾಕಲು ಮುಂದಾದ ತಕ್ಷಣ, 'ಅಮ್ಮಂಗೆ ಹೇಳ್ತಿನಿ...' ಎಂದು ತನ್ನ ತಾಯಿಯ ಬಳಿ ದೂರು ಹೇಳಲು ಹೋಗಿದ್ದಳು. ಈಚೆಗೆ ಧಾರಾವಾಹಿ ನೋಡ್ತಿದ್ದಾಗ ನನ್ನ ಕೈಯಲ್ಲಿದ್ದ ರಿಮೋಟನ್ನು ಮೊಮ್ಮಗಳು ಕಸಿದುಕೊಂಡು ಕಾರ್ಟೂನ್ ಚಾನಲ್ ಹಾಕಿದಳು.

ನಾನು ಇದೆಂಥಾ ಹುಡುಗಿ ಇದು. ಧಾರಾವಾಹಿ ನೋಡೋದಕ್ಕೆ ಬಿಡೋದಿಲ್ಲಾ' ಎಂದು ಸಿಟ್ಟಿನಿಂದ ಮೊಮ್ಮಗಳ ಕೈ ಹಿಡಿದು ರಿಮೋಟ್ ಹಿಂಪಡೆಯಲು ಮುಂದಾದೆ. ಆಗ ಮೊಮ್ಮಗಳು ಅಮ್ಮಂಗೆ ಹೇಳ್ತಿನಿ' ಎಂದು ಹೋಗುತ್ತಿದ್ದಂತೆ. -ನೀನು ನಿಮ್ಮಮ್ಮಂಗೆ ಹೇಳಿದ್ರೆ. 'ನಾನು ನನ್ನಮ್ಮಂಗೆ ಹೇಳ್ತಿನಿ (ನನ್ನ ತಾಯಿಗೆ) ಎಂದು ನನ್ನ ಹಾಯಿಯ ಫೋಟೋ ಕಡೆ ಕೈ ಮಾಡಿ ತೋರಿಸಿದೆ. ಅದಕ್ಕೆ ಮೊಮ್ಮಗಳು ‘ನಿಮ್ಮಮ್ಮ ಸ್ಟಾರ್ ಆಗಿದ್ದಾಳೆ’ ಎಂದು ಹೇಳಿದ್ದನ್ನು ಕೇಳಿ ಚಕಿತಳಾದೆ. ‘ಯಾರ ತಾಯಿ ಇಲ್ಲವೋ ಅವರು ನಕ್ಷತ್ರ ಆಗಿ ಆಕಾಶದಲ್ಲಿರುತ್ತಾರೆ’ ಎಂಬುದನ್ನು ಧಾರಾವಾಹಿಯಲ್ಲಿ ತಂದೆಯೊಬ್ಬ ಮಗಳಿಗೆ ಹೇಳಿದ್ದ.

-ಅನುರಾಧ ಟಿ

***

ಅಪ್ಪನಿಗೆ ತಕ್ಕ ಮಗ

ಬಿರು ಬೇಸಿಗೆಯ ಒಂದು ದಿನ, ಜಿಪುಣ ರಾಮಲಾಲ್ ಮನೆಗೆ ಒಬ್ಬ ಅತಿಥಿ ಬಂದಿದ್ದ. ಆತನನ್ನು ಸ್ವಾಗತಿಸಿದ ರಾಮಲಾಲ್ ಕೂರಲು ಹೇಳಿ, 'ಕುಡಿಯಲು ಏನು ತಗೋತೀರಿ' ಎಂದ.

ಅತಿಥಿ 'ಏನೂ ಬೇಡ ಒಂದು ಲೋಟ ಲಿಂಬೆ ಪಾನಕ ಸಾಕು' ಎಂದ. ರಾಮಲಾಲ್ ಮಗನಿಗೆ ಒಳಗೆ ಕರೆದು 'ಮಾರ್ಕೆಟ್‌ಗೆ ಹೋಗಿ ಒಳ್ಳೆ ಐದಾರು ನಿಂಬೆಹಣ್ಣು ತೆಗೆದುಕೊಂಡು ಬಾ' ಎಂದ. 'ಆಯಿತು' ಎಂದು ಹೋದ ಮಗ ಸುಮಾರು ಒಂದು ಗಂಟೆಯ ನಂತರ ಖಾಲಿ ಕೈಯಲ್ಲಿ ಹಿಂತಿರುಗಿದ್ದನ್ನು ಕಂಡ ರಾಮಲಾಲ್ 'ಯಾಕೆ ಖಾಲಿ ಕೈಯಲ್ಲಿ ಬಂದೆ' ಎಂದು ಪ್ರಶ್ನಿಸಿದಾಗ ಆತ 'ಅಯ್ಯೋ ಅಪ್ಪಾ.. ಎಲ್ಲಾ ಕಡೆ ಸುತ್ತಿದೆ.. ಎಲ್ಲೂ ನಿಂಬೆಹಣ್ಣು ಸಿಗ್ಲಿಲ್ಲ' ಎಂದ.

ಅಷ್ಟಕ್ಕೇ ಸುಮ್ಮನಿರದ ಆತನ ಅಪ್ಪ, 'ಅದ್ದರಿ ಇಷ್ಟೊತ್ತು ಸುತ್ತಿ ಬಂದೆಯಲ್ಲ ನಿನ್ನ ಚಪ್ಪಲಿ ಎಷ್ಟು ಸವೀತು ಗೊತ್ತಾ' ಎಂದು ಕೇಳಿದಾಗ ಮಗರಾಯ, "ಅಪ್ಪಾ ನಾನು ಅತಿಥಿಯ ಚಪ್ಪಲಿ ಹಾಕ್ಕೊಂಡು ಹೋಗಿದ್ದೆ' ಎಂದು ಉತ್ತರಿಸಿದಾಗ, ರಾಮಲಾಲ್ ಒಳಗೊಳಗೇ, 'ಅಪ್ಪನಿಗೆ ತಕ್ಕ ಮಗ' ಎಂದುಕೊಂಡ.

-ಅರವಿಂದ ಜಿ.ಜೋಷಿ

***

ಫಿಂಗರಲೆಸ್ ಚಹಾ!

ಚಹಾ ಕುಡಿಯಲು ಹೋದಾಗ ನಡೆದ ಪ್ರಸಂಗ. ನಾನು ನನ್ನ ಸ್ನೇಹಿತ ಚಹಾ ಕುಡಿಯಲು ಅಂಗಡಿಗೆ ಹೋಗಿದ್ವಿ. ಗಾಜಿನ ಗ್ಲಾಸುಗಳಲ್ಲಿ ಚಹಾ ನೀಡಿದರು. ಕುಡಿಯುತ್ತಾ ಕುಳಿತೆವು. ನಮ್ಮ ಎದುರಿಗೆ ಕೂತ ವ್ಯಕ್ತಿ 'ಅಣ್ಣಾ ಒಂದು ಫಿಂಗರಲೆಸ್ ಚಹಾ ಕೊಡು' ಎಂದರು.

ಶುಗರ್‌ಲೆಸ್ ಚಹಾ ಕೇಳಿದ್ವಿ. ಇದೇನಿದು ಫಿಂಗರಲೆಸ್ ಚಹಾ ಅಂದುಕೊಂಡೆ. 'ಆಯ್ತಣ್ಣಾ ಗ್ಲಾಸಲ್ಲಿನ ಚಹಾಕ್ಕೆ ಬೆರಳು ತಾಕದ ಹಾಗೆ ತಂದುಕೊಡ್ತೀನಿ' ఎంబ ಉತ್ತರ బంతు ಮೂರ್ನಾಲ್ಕು ಚಹಾದ ಗ್ಲಾಸು ಒಮ್ಮೆಲೆ ಒಂದೇ ಕೈಯಲ್ಲಿ ತರುವಾಗ ಕೆಲವೊಮ್ಮೆ ಕೈಬೆರಳುಗಳು ಚಹಾದಲ್ಲಿ ಮುಳುಗುವುದರಿಂದ ಹಾಗೆ ಮಾಡಬೇಡ ಎಂಬ ಅರ್ಧದಲ್ಲಿ ಹೇಳಿದ್ದಾರೆಂದು ತಿಳಿಯಿತು. ನಾವೂ ಹಾಗೆಯೇ ಹೇಳಬೇಕಾಗಿತ್ತೆಂದು ನಕ್ಕೆವು.

- ನರಸಿಂಹಾರೆಡ್ಡಿ ಯಂಕಾಮೋಳ

ಚಿತ್ರ :ಗಣೇಶ ಆಚಾರ್ಯ

(ಮಯೂರ ನವೆಂಬರ್ ೨೦೨೪ರ ಸಂಚಿಕೆಯಿಂದ ಸಂಗ್ರಹಿತ)