ಉಕ್ಕಿನ ಮನುಷ್ಯ...

ಸಮಾಜ ವಿಜ್ಞಾನದ ಮೇಷ್ಟ್ರು ರಮೇಶ್ ಎಂಟನೆಯ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ 'ಭಾರತದ ಉಕ್ಕಿನ ಮನುಷ್ಯ ಯಾರು? ಯಾಕೆ ಕರೆಯುತ್ತಾರೆ? ಎಂಬ ಪ್ರಶ್ನೆಯನ್ನು ಎರಡು ಅಂಕಕ್ಕೆ ನೀಡಿದ್ದರು.

ಆ ಪ್ರಶ್ನೆಗೆ ಮುರಳಿ ಎಂಬ ವಿದ್ಯಾರ್ಥಿ ಬರೆದ ಉತ್ತರ 'ಗುಜರಾತಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಮೂರು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ಇದು ಜಗತ್ತಿನ ಅತಿ ಎತ್ತರದ ಪ್ರತಿಮೆ ಆಗಿದೆ. ಏಕತೆಯ ಮೂರ್ತಿ ಎಂದು ಕರೆಯುವ ಈ ಪ್ರತಿಮೆಯನ್ನು ಉಕ್ಕಿನಿಂದ ನಿರ್ಮಾಣ ಮಾಡಿರುವುದರಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಉಕ್ಕಿನ ಮನುಷ್ಯ ಅಂತ ಕರೆಯುತ್ತಾರೆ. ಈ ಉಕ್ಕಿನ ಮನುಷ್ಯನ ಪ್ರತಿಮೆಯ ಬಗ್ಗೆ ಇನ್ನಷ್ಟು ಬರೆಯಬಹುದು. ಆದರೆ ಪ್ರಸ್ತುತ ಪ್ರಶ್ನೆಗೆ ಅಂಕಗಳು ಎರಡಕ್ಕೆ ಸೀಮಿತವಾಗಿರುವುದರಿಂದ ಇಷ್ಟು ಸಾಕು ಅಂತ ಎನಿಸುತ್ತಿದೆ ಎಂದು ಮುರಳಿ ಬರೆದಿದ್ದ.

-ಮಲ್ಲಿಕಾರ್ಜುನ ಸುರಧೇನುಪುರ

***

ಬಳೆ ತೊಟ್ಟ ಕೈ...

'ಬಳೆಗಳು ತೊಟ್ಟ ಕೈ ಪಾತ್ರೆಗಳನ್ನು ತೊಳೆದರೆ ಆ ಪಾತ್ರೆಗಳು ಪಳವಳ ಅಂತಿರ್ತವೆ' ಅಂದೆ ಹೆಂಡತಿಗೆ. 'ಸರಿ ಬಿಡಿ ನಾನೇ ಪಾತ್ರೆಗಳನ್ನು ತೊಳಿತೀನಿ' ಅಂದಳು.

ತೊಳೆಯೋದು ಸದ್ಯ ಪಾತ್ರೆಗಳನ್ನು ತಪ್ಪಿತು ಅಂತ ಖುಷಿ ಆಯಿತು. ಮರುದಿನ ನೋಡಿದರೆ... ಸಿಂಕ್ ಹತ್ತಿರ ವಿಮ್ ಬಾರ್ ಜೊತೆ ಇದ್ದವು ಕೆಲವು ಬಳೆಗಳು...!

-ವಿ. ಹೇಮಂತ ಕುಮಾರ್

***

ಸಕಾರಣ!

ಗೆಳತಿಯ ಮಗಳು ಅರಗಿಣಿಗೆ ಅಂಗನವಾಡಿಗೆ ಭರ್ತಿ ಮಾಡಿ ನಾಲ್ಕು ದಿನವಾಗಿತ್ತು. ದಿನವೂ ಅಲ್ಲಿನ ರಿಪೋರ್ಟ್ ಕೊಡುತ್ತಿದ್ದು, ಮಿಸ್ಸು 'ಗಿಣಿ ಗಿಣಿ ಎಂದು ಮುದ್ದು ಮಾಡುತ್ತಾರೆ ನಂಗೆ ಗೊತ್ತಾ?' ಅಂದಿದ್ದಳಂತೆ ಅವಳ ಅಮ್ಮನ ಬಳಿ.

ಅಂದು ಅಮ್ಮ ಮಗಳು ನಮ್ಮಲ್ಲಿಗೆ ಬಂದಾಗ ಗಿಣಿಗೆ ಹಸಿವಾಗಿತ್ತೆಂದು ತಿಂಡಿ ಕೊಟ್ಟೆ. ಅವಳು ತಿನ್ನುವಾಗ ಅಂಗನವಾಡಿ ಬಗ್ಗೆ ವಿಚಾರಿಸಿದೆ ಏನೇನು ಹೇಳಿ ಕೊಡ್ತಾರೆ? ಆಟ, ಪಾಠ ಯಾವುದು? ಊಟಕ್ಕೆ? ಮುಂತಾಗಿ.

ತಿಂಡಿ ತಿನ್ನುತ್ತಾ ಅಲ್ಲಿನ ಬೆಳಗಿನ ಪ್ರಾರ್ಥನೆ, ಪಾರದ ಬಗ್ಗೆ ಹೇಳುತ್ತಾ, ಒಂದೇ ಸಮನೆ ಜೋರಾಗಿ ಅಳಲು ಶುರುಮಾಡಿದಳು. 'ತಿಂಡಿ ಕಾರ ಆಯ್ತಾ? ಮೆಣಸು ತಿಂದೆಯಾ? ಇನ್ನೂ ಬೇಕಾ? ಮುಂತಾಗಿ ವಿಚಾರಿಸಿದನು. ಅದಕ್ಕವಳು. 'ನಂಗೆ ದಿನವೂ ಮುದ್ದು ಮಾಡುವ ಮಿಸ್ಸು ಇವತ್ತು ಬೈದರು. ಬಾಲ ಬಿಡ್ತೀಯಾ? ಕೊಡ್ತೀನಿ ನೋಡು' ಎಂದರು. ನೀವು ಕೊಟ್ಟ ತಿಂಡಿ ಚೆನ್ನಾಗಿದೆ. ಅದಕ್ಕೆ ಅತ್ತಿದ್ದಲ್ಲ ನಾನು, ತಿಂತಾ ಇದೀನಿ ನೋಡಿ' ಎಂದು, ಮಿಸ್ಸಿನ ಬಗ್ಗೆ ಪುಕಾರು ಹೇಳಿತು. ಸದ್ಯ ನಾವು ಬಚಾವಾಗಿದ್ದೆವು!.

-ಪೂರ್ಣಿಮಾ ಎಚ್‌.ಎನ್‌.

***

ನಿನ್ನನ್ನು ಬಿಟ್ಟು ಹೋಗ್ತವೆ

ಅಕ್ಕನ ಮಗಳು ಹೆರಿಗೆಗಾಗಿ ಅಕ್ಕನ ಮನೆಗೆ ತನ್ನ ನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಬಂದಿದ್ದಳು. ನಾನೂ ಅಕ್ಕನ ಸಹಾಯಕ್ಕಾಗಿ ಅವರ ಮನೆಗೆ ಹೋಗಿದ್ದೆ. ಹೆರಿಗೆಗೆ ಇನ್ನೂ ಒಂದು ತಿಂಗಳು ಬಾಕಿ ಇತ್ತು. ಅಂದು ಸಂಜೆ ಅಕ್ಕನ ಮಗಳನ್ನು ತಪಾಸಣೆಗಾಗಿ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಬೇಕಾಗಿತ್ತು. ಎಲ್ಲರೂ ಹೊರಡಲು ತಯಾರಿ ನಡೆಸಿದ್ದೆವು. ನಾವು ಮೂರು ಜನ ರೆಡಿಯಾದರೂ, ಅಕ್ಕನ ಮಗಳು ಇನ್ನೂ ರೆಡಿಯಾಗಿರಲಿಲ್ಲ.

ಅವಳಿಗಾಗಿ ಕಾಯುತ್ತಾ ಕುಳಿತುಕೊಂಡಿದ್ದೆವು. ಆಗ ಅಕ್ಕನ ಮಗಳ ಮಗಳು 'ಅಮ್ಮಾ…  ನೀನು ಬೇಗ ಬರದಿದ್ದರೆ ನಿನ್ನನ್ನು ಬಿಟ್ಟು ಹೋಗುತ್ತೇವೆ ನೋಡು ಎಂದಳು. ನಮಗೆಲ್ಲರಿಗೂ ಜೋರಾಗಿ ನಗು ಬಂತು.

-ಸು. ವಿಜಯಲಕ್ಷ್ಮಿ

ಚಿತ್ರ :ಗಣೇಶ ಆಚಾರ್ಯ

(‘ಮಯೂರ’ ಡಿಸೆಂಬರ್ ೨೦೨೪ ಸಂಚಿಕೆಯಿಂದ ಆಯ್ದದ್ದು)