ನಾನೇ ಮಾಡಿಸಿದ್ದು!
ನಮ್ಮ ಪಕ್ಕದ ಮನೆಯವನಿಗೊಂದು ಚಾಳಿ. ಏನೇ ಹೇಳಿದರೂ ತಾನೂ ಮಾಡಿದ್ದೇನೆ ಅಥವಾ ಮಾಡಿಸಿದ್ದೇನೆ ಅನ್ನುವುದು. ಊರಲ್ಲಿ ಏನೇ ಕಾರ್ಯ ಜರುಗಲಿ, ಅಲ್ಲೂ ತನ್ನದೊಂದು ಇರಲಿ ಎಂಬಂತೆ ವರ್ತಿಸುವುದು. ಯಾರೋ ತಮ್ಮ ಮನೆಯ ತೋಟದಲ್ಲಿ ಸ್ವಲ್ಪ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡ ಸುದ್ದಿ ಹೇಳಿದರೆ, ಕೂಡಲೇ ತಾನೂ ಅವನ್ನೆಲ್ಲ ಬಹಳ ಹಿಂದೆ ಮಾಡಿ ನೋಡಿಯಾಗಿದೆ ಎನ್ನುವುದು. 'ಯಾರಾದರೂ ಇನ್ನೊಬ್ಬರಿಗೆ ಉಪಕಾರ ಮಾಡಿದರೆ, ತಾನು ಇಂತಹ ಹಲವು ಜನರಿಗೆ ಉಪಕಾರ ಮಾಡಿದ್ದೇನೆ ಅನ್ನುವುದು. ತನಗೆ ಗೊತ್ತಿಲ್ಲ ಎಂಬುದು ಅವನ ಬಾಯಿಯಿಂದ ಬರುತ್ತಲೇ ಇರಲಿಲ್ಲ. ಇವನ್ನೆಲ್ಲ ಕೇಳುತ್ತಿದ್ದ ಪಕ್ಕದ ಮನೆಯವ, 'ಗುರುಮನೆಯಲ್ಲಿ ಕಳವು ಆಗಿ ಹೋಗಿದೆಯಂತೆ' ಅಂತ ಹೇಳಿದ ಕೂಡಲೇ, 'ಅದು ತಾನೇ ಮಾಡಿಸಿದ್ದು' ಅಂದುಬಿಡಬೇಕೆ!
-ಶಂಕರನಾರಾಯಣ ಭಟ್
***
ಹಾವು ಕಚ್ಚಿದಾಗ...!
ಗುಂಡ: ನಿನ್ನೆ ರಾತ್ರಿ ನಂಗೆ ಮನೆ ಮನೆ ದಾಟುವಾಗ ಹಾವು ಕಚ್ಚಿದ್ದಕ್ಕೆ ಕೆಳಗೆ ಬಂದೆ.
ಪುಂಡ: 'ಹೌದಾ, ನಿಂಗೇನೂ ಆಗಲಿಲ್ವಾ? ಆಮೇಲೆ ಏನು ಮಾಡಿದೆ' ಎಂದು ಕೇಳಿದ ಆತಂಕದಿಂದ.
ಗುಂಡ: ಮಾಡೋದೇನು, ಮತ್ತೆ ದಾಳ ಉರುಳಿಸಿದಾಗ, ಏಣಿ ಬಂದಿದ್ದಕ್ಕೆ ಹತ್ತಿ ಮೇಲೆ ಬಂದೆ...! ಎಂದಾಗ ಪುಂಡ ಸುಸ್ತಾದ.
-ವಿ.ವಿಜಯೇಂದ್ರ ರಾವ್
***
ಒಂದೇ ಗುಣ!
ವರನ ಕಡೆಯವರು ವಧು ನೋಡಲು ಹೋದರು. ಪುರೋಹಿತರು ಹುಡುಗ ಹುಡುಗಿಯ ಜಾತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಹೇಳಿದರು. '36ಕ್ಕೆ 36 ಗುಣಗಳು ಹೊಂದುತ್ತವೆ'
ಹಾಗಾದರೆ ಈ ಮದುವೆ ಸಾಧ್ಯವಿಲ್ಲ ಎನ್ನುತ್ತಾ, ಹುಡುಗನ ಕಡೆಯವರು ಎದ್ದು ಹೊರಡಲನುವಾದರು. ಆಗ ಹುಡುಗಿಯ ಅಪ್ಪ ವಿಚಾರಿಸಿದರು, 'ಏನಾಯಿತು ಸ್ವಾಮಿ? ಎಲ್ಲಾ ಗುಣಗಳೂ ಹೊಂದುತ್ತವೆ; ಇದಕ್ಕಿಂತ ಒಳ್ಳೆಯ ಜೋಡಿ ಇನ್ನೆಲ್ಲಿ ಸಿಗುತ್ತದೆ?'
ಹುಡುಗನ ಅಪ್ಪ ತಟ್ಟನೆ ಉತ್ತರಿಸಿದರು. 'ನಮ್ಮ ಪುತ್ರನೇನೋ ನಾಲಾಯಕ್ ಇದ್ದಾನೆ. ಈಗ ಸೊಸೆಯನ್ನೂ ಅಂಥವಳನ್ನೇ ತರಲೇ!'
-ರಮಣ್ ಶೆಟ್ಟಿ ರೆಂಜಾಳ್
***
ಮಾಸ್ತಿಕಟ್ಟೆ ಕರೆಂಟ್ ಬೇಡ!
'ಹಿಂದಿನ ದಿನ ನಮ್ಮೂರಲ್ಲಿ ಹಳ್ಳಿಯ ಲೈಟ್ ಕಂಬ ಬದಲಾವಣೆಗೆ ಜೋಗದ (ಶರಾವತಿ) ಕರೆಂಟ್ ಲೈನ್ ಬದಲು, ಮಾಸ್ತಿಕಟ್ಟೆಯ (ವಾರಾಹಿ) ಲೈನ್ ಚಾರ್ಜ್ ಮಾಡಿದ್ದರು. ಅದರಿಂದ ವೋಲ್ವೇಜ್ ಡ್ರಾಪ್ ಆಗಿದ್ದು ಪಂಪ್ಸೆಟ್, ಗೈಂಡರ್ ಆನ್ ಆಗುತ್ತಿರಲಿಲ್ಲ.
ಎಲೆಕ್ನಿಷಿಯನ್ ನನ್ನ ಬಳಿ ಈ ಬಗ್ಗೆ ಹೇಳಿದ್ದನ್ನು ಅಜ್ಜಿ ಕೇಳಿಸಿಕೊಂಡಿದ್ದರು. ಮಾರನೇ ದಿನ ಮೆಸ್ಕಾಂ ಮೀಟರ್ ರೀಡರ್ ಮನೆಗೆ ಬಂದಾಗ ಅಜ್ಜಿ ಆತನ ಬಳಿ 'ನಮಗೆ ಯಾವುದೇ ಕಾರಣಕ್ಕೂ ಮಾಸ್ತಿಕಟ್ಟೆ ಕರೆಂಟ್ ಬೇಡ!: ಅದು ಸರಿಯಿಲ್ಲ. ಸಾಗರದ್ದೇ ಇರಲಿ; ಎಂಥಾ ಕಾಲ ಬಂತಪ್ಪಾ, ಕರೆಂಟಲ್ಲೂ ಮೋಸ!, ಎಂಜಿನಿಯರ್ಗೆ ಹೇಳು' ಎಂದಾಗ ಮೀಟರ್ ರೀಡರ್ ಜೊತೆ ನಾವೂ ನಕ್ಕೆವು.
-ನಗರ ಗುರುದೇವ್ ಭಂಡಾರ್ಕರ್
ಚಿತ್ರ :ಗಣೇಶ ಆಚಾರ್ಯ
(ಡಿಸೆಂಬರ್ ೨೦೨೪ರ ‘ಮಯೂರ’ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!