ಮೆಹಂದಿ ಆಗೋಯ್ತು!

ಸಿಡ್ನಿಯಿಂದ ನಮ್ಮಣ್ಣನ ಮೊಮ್ಮಗಳು ಐದು ವರ್ಷದ ಅಂಜಲಿ, ತನ್ನ ಅಪ್ಪ-ಅಮ್ಮನೊಂದಿಗೆ ನಮ್ಮ ಮನೆಯ ಮದುವೆ ಸಮಾರಂಭಕ್ಕೆ ಬಂದಿದ್ದಳು. ಕನ್ನಡದಲ್ಲೇ ಚುರುಕಾಗಿ ಮಾತನಾಡುತ್ತಿದ್ದಳು.

ನನ್ನ ಗೆಳತಿಯೊಬ್ಬಳು ನನ್ನ ಬಳಿ 'ಮೆಹಂದಿ ಕಾರ್ಯಕ್ರಮ ಯಾವಾಗ?' ಎಂದು ಕೇಳಿದಾಗ, ಅಲ್ಲೇ ಇದ್ದ ಅಂಜಲಿ 'ನಮ್ಮ ಅಮ್ಮನ ಮೆಹಂದಿ ಇವತ್ತು ಆಗೋಯ್ತು' ಎಂದಳು. ಎಲ್ಲರೂ ಆಶ್ಚರ್ಯದಿಂದ ನೋಡಲು 'ನಮ್ಮಮ್ಮ ಇವತ್ತು ತಲೆಗೆ ಮೆಹಂದಿ ಹಚ್ಚಿಕೊಂಡು ಸ್ನಾನ ಮಾಡಿದ್ದಾಯ್ತು!' ಎಂದಾಗ, ಅಲ್ಲಿದ್ದವರೆಲ್ಲ ನಕ್ಕರು.

-ಎನ್‌ಪಿ. ಶೈಲಜ, ತಿಪಟೂರು

***

ಗುಂಡನ ಉಳಿತಾಯ ಯೋಜನೆ

'ಮಕ್ಕಳೇ ನಿಮಗೆಲ್ಲ ಉಳಿತಾಯ ಯೋಜನೆ ಬಗ್ಗೆ ತಿಳಿಸಿದ್ದೆ. ಅಮ್ಮ, ಅಪ್ಪನಿಗೆ ತೊಂದರೆಯಾಗದಂತೆ ಕಾಸುಕಾಸು ಕೂಡಿಡಬೇಕೆಂದು; ಅದು ಮುಂದೆ ನಿಮಗೇ ಉಪಯೋಗವಾಗುವುದೆಂದು ತಿಳಿಸಿದ್ದೆ. ಯಾರೆಲ್ಲಾ ಅದನ್ನು ಅನುಸರಿಸುತ್ತಿದ್ದೀರಿ?' ಎಂದು ಮೇಡಂ ಕೇಳಿದರು.

'ಹೌದು ಮೇಡಂ, ನಾವು, ನೀವು ಹೇಳಿದ ಹಾಗೆ ಅನುಸರಿಸುತ್ತಿದ್ದೇವೆ' ಅಂದ್ರು ಮಕ್ಕಳು. ಆದ್ರೆ ಸೈಲೆಂಟಾಗಿದ್ದ ಗುಂಡನನ್ನು 'ನೀನೇನಂತಿ ದಡ್ಡ ಗುಂಡಾ? ನಿನಗೆ ಸ್ವಲ್ಪಾನೂ ಬುದ್ದಿಯಿಲ್ಲ. ಎಲ್ಲದ್ರಲ್ಲೂ ಫೇಲ್ ಆಗ್ತಾ ಇರ್ತೀಯಾ? ಏನಾದ್ರೂ ಉಳಿತಾಯ ಮಾಡೋಕು ಅಂತ ಅಂಡ್ಕೊಂಡಿದೀಯಾ ಹೇಗೆ?' ಎಂದು ಮೇಡಂ ಕೇಳಿದರು.

'ಇಲ್ಲ, ಮೇಡಂ ಈಗ್ಲೆ ನನ್ನ ತಲೇಲಿರೊ ಬುದ್ದಿ ಖರ್ಚು ಮಾಡ್ಲಿಟ್ರೆ ಮುಂದೆ ಮುದುಕ ಆದಾಗ ಏನು ಗತಿ? ಅದಕ್ಕೇ ಸ್ವಲ್ಪ ಸ್ವಲ್ಪಾನೇ ಬುದ್ಧಿ ಖರ್ಚು ಮಾಡ್ತೀನಿ' ಅಂದಾಗ, ಮೇಡಂ 'ವಾಹ್... ಗುಂಡಾ ಮೆಚ್ಚಿದೆ ನಿನ್ನ ಬುದ್ಧಿವಂತಿಕೆ' ಅಂದ್ರು, ಜೊತೆಗೆ ಮಕ್ಕಳೆಲ್ಲಾ ನಗುವಿನಲ್ಲಿ ಮುಳುಗಿದ್ರು.

-ಸುಮನಾ, ಬೆಂಗಳೂರು

***

ಮೊಬೈಲ್ ಮಹಿಮೆ

ಪರಿಚಯಸ್ಥರಿಗೆ ಹಣವನ್ನು ಆನ್‌ಲೈನ್ ಮೂಲಕ ಕಳುಹಿಸಬೇಕಿತ್ತು. ಅವರ ಫೋನ್ ಸಮಸ್ಯೆ ಇದ್ದುದ್ದರಿಂದ ತಮ್ಮ ಪರಿಚಯಸ್ಥರಿಗೆ ಹಣ ರವಾನಿಸುವಂತೆ ತಿಳಿಸಿದರು.

ನಾನು ಫೋನ್ ಸಂಭಾಷಣೆಯಲ್ಲಿದ್ದ ಕಾರಣ ಅವರು ಹೇಳಿದ ಹಾಗೇ, ನಾನು ಹಣ ಕಳುಹಿಸಬೇಕಾದ ಫೋನ್ ನಂಬರ್ ಅನ್ನು ಒಂದು ಹಾಳೆಯಲ್ಲಿ ಬರೆದುಕೊಂಡೆ.

ಫೋನ್‌ನಲ್ಲಿ ಸರಿಯಾಗಿ ಕಾಣದಿರುವುದನ್ನು ಜೂಮ್ ಮಾಡಿ ನೋಡಿದಂತೆ, ಹಾಳೆಯಲ್ಲಿ ಬರೆದ ನಂಬರ್ ಅನ್ನು ಜೂಮ್ ಮಾಡುತ್ತಾ ಹೋದೆ. ಏನೂ ಪರಿಣಾಮವೇ ಆಗಲಿಲ್ಲ. ಆಮೇಲೆ ಹೊಳೆಯಿತು. ಅದು ಫೋನ್ ಅಲ್ಲ. ಹಾಳೆ ಮೇಲಿರುವ ಅಂಕಿ ಎಂದು. ಫೋನ್ ನಮ್ಮ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ತಿಳಿದು ಹಣೆಗೆ ಕೈಕೊಟ್ಟು ಹಲ್ಕಿರಿದು ನಕ್ಕಿದ್ದೆ.

-ದೀಪಶ್ರೀ ಎಸ್, ಕೂಡ್ಲಿಗಿ

***

ಚೈನೀಸ್ ಕಣ್ಣು

ಈಚೆಗೆ ಎಲ್ಲೆಡೆ ಡೆಂಗಿ ಹೆಚ್ಚಾಗಿ ಗಾಯತ್ರಿಯೂ ಡೆಂಗಿ ಜ್ವರದಿಂದ ನರಳಿದ್ದಳು. ಜ್ವರ ಬಿಟ್ಟಿದ್ದರಿಂದ ಹಾಸಿಗೆಯಲ್ಲಿ ಮಲಗಿ ಗಾಯತ್ರಿ ವಿಶ್ರಾಂತಿ ಪಡೆಯುತ್ತಿದ್ದಾಗ ಮೊಮ್ಮಗಳು ಗುಡಿಯಾಳ ನೆನಪಿಸಿಕೊಳ್ಳುತ್ತಿದ್ದಳು.

ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಗುಡಿಯಾ ಏಕೆ ಫೋನ್ ಮಾಡಿಲ್ಲ ಎಂದು ಅಂದು ಕೊಳ್ಳುತ್ತಿರುವಾಗಲೇ ಮೊಮ್ಮಗಳ ವಿಡಿಯೊ ಕಾಲ್ ಧ್ವನಿಸಿತು.

ಹತ್ತು ವರ್ಷದ ಗುಡಿಯಾ ಡಾಕ್ಟರ್ ಆಗಬೇಕೆಂದು ಕನಸು ಕಾಣುತ್ತಿದ್ದ ಕಿಶೋರಿ, ವಿಡಿಯೊ ಕಾಲ್‌ನಲ್ಲಿ ಗುಡಿಯಾ, 'ಅಜ್ಜಿ ಹೇಗಿದ್ದೀರಿ. ನಿಮಗೆ ಡೆಂಗಿ ಆಗಿದೆಯಂತೆ. ಸೊಳ್ಳೆ ಹತ್ತಿರ ನೀವೇ ಹೋಗಿದ್ರಾ? ಹೇಗೆ ಕಚ್ಚಿಸಿಕೊಂಡಿರಿ? ಈಗ ಜ್ವರ ಇದೆಯಾ? ಒಂದೇ ಉಸುರಿಗೆ ಪ್ರಶ್ನೆಗಳು

ಇದಕ್ಕೆ ಪ್ರತಿಯಾಗಿ ಅಜ್ಜಿ, ಈಗ ಆರಾಮವಾಗಿ ಇರುವೆನು, ಜ್ವರ ಬಿಟ್ಟಿದೆ ಎಂದರು. ಚೀನೀಯರ ಕಣ್ಣುಗಳು ಚಿಕ್ಕವು ಎಂಬುದನ್ನು ಅರಿತಿದ್ದ ಮೊಮ್ಮಗಳು ಜ್ವರದಿಂದ ಬಳಲಿದ್ದ ಅಜ್ಜಿಯ ಕಣ್ಣುಗಳನ್ನು ನೋಡಿ,' ಜ್ವರ ಇಲ್ಲ ಆರಾಮು ಅನ್ನುತ್ತಿದ್ದೀರಾ. ಚೈನೀಸ್ ಕಣ್ಣು ಬಿಡುತ್ತಿದ್ದೀರಾ' ಎಂದಾಗ ಮೊಮ್ಮಗಳ ಮಾತಿಗೆ ಅಜ್ಜಿ ಗಾಯತ್ರಿ ಮನಸಾರೆ ನಕ್ಕರು.

-ಸುಧಾ ವಿ.ಆರ್.

ಚಿತ್ರ :ಗಣೇಶ ಆಚಾರ್ಯ

(ಡಿಸೆಂಬರ್ ೨೦೨೪ರ ‘ಮಯೂರ’ ಸಂಗ್ರಹಿತ)