ಅಜ್ಜಿಗೆ 'ಪಾನಿಪುರಿ' ಆಗಿದೆ!

ಐದು ವರ್ಷದ ಮೊಮ್ಮಗಳನ್ನು ಮನೆ ಹತ್ತಿರದ ಪಾರ್ಕಿಗೆ ಕರೆದುಕೊಂಡು ಹೋಗಿದ್ದೆ. ಇದ್ದಕ್ಕಿದ್ದಂತೆ ಭಾರೀ ಮೋಡಗಳೊಂದಿಗೆ ಕತ್ತಲಾವರಿಸಿ ಮಳೆ ಸಹ ಬರಲಾರಂಭಿಸಿತು. ಅಲ್ಲಿಯೇ ಪಾರ್ಕಿನಲ್ಲಿ ಶೀಟ್ ಹಾಕಿದ್ದ ಎತ್ತರದ ವೇದಿಕೆ ಮೇಲೆ ಹೋಗಿ ನಿಂತಾಗ...

ನಾಲೈದು ಮಹಿಳೆಯರಿದ್ದ ಗುಂಪಿನಲ್ಲಿದ್ದ ಅಜ್ಜಿ, ನನ್ನೊಂದಿಗೆ ನಿಂತಿದ್ದ ಮೊಮ್ಮಗಳನ್ನು ತನ್ನೆಡೆಗೆ ಕರೆದುಕೊಂಡರು. ಆಕೆಯನ್ನು ಕುಳ್ಳಿರಿಸಿ ಮಾತನಾಡುತ್ತಾ ಸಲುಗೆಯಿಂದ ಮೊಮ್ಮಗಳ ಕೈಯಲ್ಲಿದ್ದ ಮೊಬೈಲಿನಲ್ಲಿ ಫೋಟೊ ನೋಡ್ತಾ ಇವು ಯಾರು? ಇವು ಯಾರು? ಎಂದು ಕೇಳಿದರು.

'ಇವರು ಅಜ್ಜ... ಅಪ್ಪಾ...' ಎಂದೆಲ್ಲಾ ಹೇಳ್ತಾ ಇದ್ದಂತೆ, ಅವಳ ಅಜ್ಜಿಯ ಪಾದಕ್ಕೆ ಗಾಯ ಆಗಿರುವ ಫೋಟೊ ಬಂದೊಡನೆ.. ಅಜ್ಜಿಗೆ ಪಾನಿಪೂರಿ ಆಗೈತೆ ಎಂದಳು. ಈ ವಿಷಯ ಪ್ರಶ್ನೆ ಕೇಳಿದ ಅಜ್ಜಿಗೆ ಅರ್ಧ ಆಗಲಿಲ್ಲ. ಆಗ ನಾನು ಇವಳ ಅಜ್ಜಿಯ ಕಾಲಿನ ಮೇಲೆ ಬಿಸಿ ಬಿಸಿ ನೀರು ಬಿದ್ದಿದ್ದರಿಂದ ಚರ್ಮದ ಮೇಲೆ ನೀರು ತುಂಬಿದ ಗುಳ್ಳೆಗಳು ಊದಿಕೊಂಡಿದ್ದವು. ಅವು ನೋಡಲು ಪಾನಿಪೂರಿಯಂತೆ ಕಂಡಿದ್ದರಿಂದ ಈ ಮೊಮ್ಮಗಳು ಅಜ್ಜಿಕಾಲು 'ಪಾನಿಪೂರಿ' ಅಂತ ಕರೆಯುತ್ತಾಳೆ ಎಂದು ಹೇಳಿದಾಗ ಎಲ್ಲರೂ ನಕ್ಕಿದ್ದೇ ನಕ್ಕಿದ್ದು.

-ರಘುನಾಥರಾವ್‌ ತಾಪ್ಪೆ

***

ನಾನು ಸೇದಿದರೆ?

ಗೂರಲು ಕೆಮ್ಮಿನಿಂದ ವಿಪರೀತವಾಗಿ ಬಳಲುತ್ತಿದ್ದ ಗುಂಡ ತಡೆಯಲಾರದೆ ಕೊನೆಗೆ ತನ್ನ ಪರಿಚಿತ ವೈದ್ಯರಲ್ಲಿಗೆ ಓಡಿದ. ಕೂಲಂಕಷವಾಗಿ ಅವನನ್ನು ಪರೀಕ್ಷಿಸಿದ ವೈದ್ಯರು ಒಂದೆರಡು ಮಾತ್ರೆ ಮತ್ತು ಸಿರಪ್ಪನ್ನು ಬರೆದು ಕೊಡುತ್ತ 'ಅಂದ ಹಾಗೆ ನಿಮಗೆ ಸಿಗರೇಟು ಸೇದುವ ಚಟವಿದೆಯೇ? ದಿನಕ್ಕೆ ಎಷ್ಟು ಸೇದುತ್ತೀರಾ?' ಎಂದು ಕೇಳಿದರು.

ಗುಂಡ 'ಹೌದು ಡಾಕ್ಟೇ ದಿನಕ್ಕೆ ಒಂದು ಪ್ಯಾಕ್ ಸೇದುತ್ತೇನೆ' ಎಂದ.

ಅವರು ಅದನ್ನು ಆದಷ್ಟು ಕಡಿಮೆ ಮಾಡಲು ಹೇಳಿದಾಗ ಗುಂಡ 'ಡಾಕ್ಟ್ರೇ, ಸಿಗರೇಟು ಸೇದುವುದರಿಂದ ಕ್ಯಾನ್ಸರ್ ಬರುತ್ತದಂತೆ ಹೌದಾ?' ಎಂದು ಪ್ರಶ್ನಿಸಿದ. ಅವರು 'ಹೌದು. ಅದು ತುಂಬಾ ಅಪಾಯಕಾರಿ' ಎಂದರು.

ಅದಕ್ಕೆ ಗುಂಡ ಮತ್ತೆ ನಾನು ಸೇದಿದರೆ ಹೊಗೆ ಬರುತ್ತದಲ್ಲಾ ಯಾಕೆ?' ಎಂದು ಕೇಳಿದ. ವೈದ್ಯರು ಕಕ್ಕಾಬಿಕ್ಕಿಯಾಗಿದ್ದರು.

-ಮಂಜುನಾಥ ಎಂ.ಕೆ.

***

ನವ್ಯಚಿತ್ರ

ಕೇಶವ ಸ್ನೇಹಿತ ನಾಣಿಗೆ ನವ್ಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿದ್ದಕ್ಕೆ ಅಭಿನಂದನೆ ಹೇಳುತ್ತಾ, 'ಅಲ್ಲ ನಾಣಿ ನಿನಗೆ ಪ್ರಥಮ ಬಹುಮಾನ ಬಂದಿರುವುದೇನೋ ಸರಿ. ಆದರೆ ಆ ಚಿತ್ರ ಮಾತ್ರ ನನಗೇನೂ ಸ್ವಲ್ಪವೂ ಅರ್ಥವಾಗಲಿಲ್ಲ. ಆ ಚಿತ್ರದ ನಿಗೂಢತೆಯಾದರೂ ಏನು?' ಎಂದ.

ಅದಕ್ಕೆ ನಾಣಿ 'ಆ ಚಿತ್ರ ನನಗೆ ಅರ್ಥವಾಗಿದ್ದರೆ ತಾನೇ ನಿನಗೆ ಹೇಳೋದು. ಅದನ್ನೇನೂ ನಾನು ಬರೆದಿರಲಿಲ್ಲ. ನನ್ನ ಪುಟ್ಟ ಮಗಳು ನಾನು ಇಟ್ಟಿದ್ದ ಬಿಳಿ ಹಾಳೆಯ ಮೇಲೆ ಇಂಕು ಚೆಲ್ಲಿ ಬಿಟ್ಟಿದ್ದಳು. ನಾನು ಮರೆತು, ಬರೆದಿದ್ದ ಚಿತ್ರದೊಂದಿಗೆ ಅದನ್ನು ಕಳಿಸಿಬಿಟ್ಟಿದ್ದೆ ಅಷ್ಟೇ' ಎಂದಾಗ ಕೇಶವನಿಗೆ ಸುಸ್ತೋ ಸುಸ್ತು!

-ಶಂಕರೇಗೌಡ ತುಂಬಕೆರೆ

***

ಸೋಲೋ ಕಾಂಪಿಟೇಷನ್

ಅವತ್ತು ಕಿಟ್ಟಿ ಶಾಲೆಯ ವಾರ್ಷಿಕ ಕಾರ್ಯಕ್ರಮಗಳ ವಿಧ ರೀತಿಯ ಸ್ಪರ್ಧೆಗಳಿಗೆಂದು ಹೊರಡುತ್ತಿದ್ದ. ಅಮ್ಮ-ಅಪ್ಪನಿಗೆ ನಮಸ್ಕರಿಸಿ, ಅಜ್ಜಿಗೂ ನಮಸ್ಕಾರ ಮಾಡಿದಾಗ ಅಜ್ಜಿ ಕೇಳಿದ್ರು. 'ಏನೇನು ಕಾಂಪಿಟೇಷನ್ ಇದೆ ಕಿಟ್ಟಿ? ನೀನು ಆಗಲೇ ಕೆಲವು ಸ್ಪರ್ಧೆಗಳಲ್ಲಿ ಗೆದ್ದಿದ್ದೀಯಾ ಅಲ್ವಾ' ಅಂದ್ರು..

'ಇಲ್ಲಜ್ಜಿ, ಅದು ಗ್ರೂಪ್ ಕಾಂಪಿಟೀಷನ್, ಇದು ಸೋಲೋ ಸ್ಪರ್ಧೆ. ಅಂದಾಗ ಅಜ್ಜಿ ಅಂದ್ರು.. ಏ... ಅದೆಂಥದೋ..ಸ್ಪರ್ಧೆ ಇಡೋದೇ ಗೆಲ್ಲೋಕೆ ಅಂತ. ಸೋಲೋಕೆ ಯಾಕೋ ಸ್ಪರ್ಧೆ ಇಡಬೇಕು ಅಂದಾಗ. ಅಪ್ಪ, ಅಮ್ಮ, ಕಿಟ್ಟಿ ಎಲ್ಲರೂ ನಗೆಗಡಲಿನಲ್ಲಿ ಮುಳುಗಿದರು. ಆ ನಂತರ ಕಿಟ್ಟಿ ಸೋಲೋ ಅರ್ಥವನ್ನು ಬಿಡಿಸಿ ಹೇಳಿದ, ಅಜ್ಜಿ ಸೋಲೋ ಅಂದ್ರೆ ಒಬ್ಬರೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಅಂತ.. ಸೋಲೋದು ಅಂತಲ್ಲ ಅಂದಾಗ ಅಜ್ಜಿನೂ ಮನಸಾರೆ ನಕ್ಕರು.

-ಸುಮನಾ

ಕಲೆ: ಗಣೇಶ ಆಚಾರ್ಯ

(‘ಮಯೂರ’ ಜನವರಿ ೨೦೨೫ರ ಸಂಚಿಕೆಯಿಂದ ಸಂಗ್ರಹಿತ)