ಚಿಕ್ಕಪ್ಪನ ಸಿಗರೇಟು

ಸುಮಾರು ವರುಷಗಳ ಹಿಂದಿನ ಮಾತು. ಒಮ್ಮೆ ನಮ್ಮ ತಾತಾ ಊರಿನಿಂದ, ಹೊನ್ನಾವರದಲ್ಲಿದ್ದ ನಮ್ಮ ಚಿಕ್ಕಪ್ಪನ ಮನೆಗೆ ಬಂದಿದ್ದರು. ತಾತಾನಿಗೆ ದಿನಾ ರಾತ್ರಿ ಒಂದು ಬರ್ಕಲೀ ಸಿಗರೇಟ್ (ಫಿಲ್ಟರ್ ರಹಿತ) ಸೇದುವ ಅಭ್ಯಾಸ ಇತ್ತು. ಒಂದು ದಿನ ನಮ್ಮ ತಾತಾ, ನಮ್ಮ ಚಿಕ್ಕಪ್ಪ ಮಾತನಾಡುತ್ತಾ ಕುಳಿತಿದ್ದಾಗ ಅಲ್ಲೇ ಇದ್ದ ನನಗೆ, ನಮ್ಮ ತಾತಾ ಸಿಗರೇಟ್ ತರಲು ಹೇಳಿದರು. ಅದಕ್ಕೆ ನಾನು, 'ಯಾವ ಸಿಗರೇಟ್ ತರಲಿ ತಾತಾ' ಎಂದೆ.

ಅದಕ್ಕೆ ತಾತನವರು 'ಅದೇ ಕಣೋ ಹಿಂದೆ ಕೆಂಪಗೆ (ಅಂದರೆ ಫಿಲ್ಟರ್) ಇರುತ್ತಲ್ಲಾ ಆ ಸಿಗರೇಟು' ಎಂದು ಹೇಳಿದರು. ಅದಕ್ಕೆ ನಾನು ಅಲ್ಲೇ ಇದ್ದ ಚಿಕ್ಕಪ್ಪನವರನ್ನು ತೋರಿಸಿ, 'ಅದೇ ಚಿಕ್ಕಪ್ಪ ಸೇದ್ತಾರಲ್ಲ ಆ ಸಿಗರೇಟಾ ತಾತಾ' ಎಂದೆ. (ನಮ್ಮ ಚಿಕ್ಕಪ್ಪ ಸಿಗರೇಟ್ ಸೇದುವ ವಿಚಾರ ನಮ್ಮ ತಾತನಿಗೆ ಗೊತ್ತಿರಲಿಲ್ಲ) ಪಾಪ ಅಲ್ಲೇ ಇದ್ದ ನಮ್ಮ ಚಿಕ್ಕಪ್ಪನ ಫಜೀತಿ ನೋಡಬೇಕಾಗಿತ್ತು.

-ಲಿಂಗದಹಳ್ಳಿ ಚಂದ್ರಶೇಖ‌ರ್

***

ರಜನೀ ಗಂಡ!

ಮೊಮ್ಮಗಳಿಗೆ ನನ್ನ ಕೈತೋಟದಲ್ಲಿ ಬೆಳೆದಿದ್ದ ಗಿಡಗಳ ಪರಿಚಯ ಮಾಡಿಕೊಡುತ್ತಿದ್ದೆ. ಕನ್ನಡ, ಇಂಗ್ಲಿಷ್ ಅಲ್ಲದೇ ಹಿಂದಿ ಶಬ್ದಗಳನ್ನು ಪರಿಚಯಿಸುತ್ತಿದ್ದೆ. ಸುಗಂಧರಾಜ ಗಿಡದಲ್ಲಿ ಹೂ ಅರಳಿ ನಿಂತಿತ್ತು. ಅದರ ಹಿಂದಿ ಹೆಸರು ರಜನೀಗಂಧ ಎಂದು ಪರಿಚಯಿಸಿದಾಗ ಮೊಮ್ಮಗಳು ಅಭಿಲಾಷ್ ಅಂತಾನಾ' ಎಂದು ಉದ್ಗಾರ ತೆಗೆದಳು.

ನನಗೆ ಅರ್ಧವಾಗಲಿಲ್ಲ. ತಕ್ಷಣ ಅವರಮ್ಮ ವಿವರಿಸಿದಳು ಮೊಮ್ಮಗಳ ಅಪ್ಪನ ಕಸಿನ್ ಅಭಿಲಾಷ್, ಅವನ ಹೆಂಡತಿ ರಜನಿ. ಹೀಗಾಗಿ ರಜನೀಗಂಧವನ್ನು ರಜನೀಗಂಡ ಅಂತ ಕೇಳಿಸಿಕೊಂಡಿದ್ದಾಳೆ, ಅಷ್ಟೇ!

-ಶ್ರೀಧರ ಬಾಣಾವರ

***

ಬುರುಗೇ ಬರ್ಲಿಲ್ಲ

ದೂರದ ಊರಿನಿಂದ ವೆಂಕಿಯ ಚಿಕ್ಕಪ್ಪ ಆತನ ಮನೆಗೆ ಬಂದಿಳಿದಾಗ ರಾತ್ರಿ ಒಂಭತ್ತಾಗಿತ್ತು. ಉಭಯ ಕುಶಲೋಪರಿ, ಕ್ಷೇಮ ಸಮಾಚಾರ ಮಾತುಕತೆ ನಂತರ ಊಟದ ಕಾರ್ಯಕ್ರಮವೂ ಮುಗಿಯಿತು. ಮಲಗುವ ಮುನ್ನ ಹಲ್ಲುಜ್ಜಿ ಮಲಗುವುದು ವೆಂಕಿ ಚಿಕ್ಕಪ್ಪನ ಅಭ್ಯಾಸ. ಅದಕ್ಕೆಂದೇ ಅವರು ಬಾತ್ ರೂಮ್‌ಗೆ ಹೋಗುವಷ್ಟರಲ್ಲಿ ಕರೆಂಟ್ ಹೋಯಿತು.

ವೆಂಕಿ ತಂದುಕೊಟ್ಟ ಮಿಣಿಮಿಣಿ ಕ್ಯಾಂಡಲ್ ದೀಪದ ಸಹಾಯದಿಂದ ಅಂತೂ ಹಲ್ಲುಜ್ಜಿ ಆಚೆಗೆ ಬಂದ ಚಿಕ್ಕಪ್ಪ ವೆಂಕಿಗೆ 'ಏ... ವೆಂಕೀ ಅದ್ಯಾವ ಸೀಮೆ ಟೂತ್‌ ಪೇಸ್ಟೋ ಒಂಚೂರೂ ಬುರುಗೇ ಬರ್ಲಿಲ್ಲಾ ಮತ್ ವಾಸಸೀನೂ ಒಂದು ನಮೂನಿ ಇತ್ತು' ಎಂದಾಗ, ವೆಂಕಿ ಪಕ್ಕದಲ್ಲಿ ನಿಂತ ಪತ್ನಿ ಮುಖ ನೋಡತೊಡಗಿದ. ಅಷ್ಟೊತ್ತಿಗೆ ಕರೆಂಟ್ ಬಂತು. ಈಗ ತನ್ನ ಚಿಕ್ಕಪ್ಪ ಹೇಳಿದ ವಿಷಯ ಕನ್‌ಫರ್ಮ್ ಮಾಡಿಕೊಳ್ಳಲು ವೆಂಕಿ ಬಾತ್ ರೂಮಿನತ್ತ ಹೆಜ್ಜೆ ಹಾಕಿದ. ವಾಷ್ ಬೇಸಿನ್ ಮೇಲೆ ಚಿಕ್ಕಪ್ಪ ಬಳಸಿದ ಟೂತ್ ಬ್ರಷ್ ಪಕ್ಕ ತಾನು ಬೆಳಗ್ಗೆ ತಂದಿಟ್ಟ ಬೋರೋಲಿನ್ ಟ್ಯೂಬ್ ಕಂಡು ಮನದಲ್ಲೇ 'ಛೇ.. ಅದನ್ನು ವಾಪಸ್ ತೆಗೆದುಕೊಂಡು ಹೋಗಲು ಮರೆತಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಯ್ತು' ಎಂದುಕೊಳ್ಳುತ್ತ ಮೌನದಿಂದ ಬಂದು ತನ್ನ ರೂಮಿಗೆ ಹೋಗಿ ಸೇರಿದ.

-ಅರವಿಂದ ಜಿ. ಜೋಷಿ

***

ಮಾಲಿನಿಯ ನಿಯಂತ್ರಣ!

ಮಂಡಳಿಯ ವಾಯುಮಾಲಿನ್ಯ ನಿಯಂತ್ರಣ ಕಾರ್ಯಕ್ರಮಕ್ಕಾಗಿ ಅಧ್ಯಕ್ಷರು ಒಂದು ಪತ್ರ ಸಿದ್ಧಪಡಿಸಿ ಲಕೋಟೆಯಲ್ಲಿ ಇಟ್ಟು. ಅದನ್ನು ತಮ್ಮ ಶಿಷ್ಯನ ಹತ್ತಿರ ಕೊಟ್ಟು ಅಲ್ಲೇ ಹತ್ತಿರದಲ್ಲಿ ಇದ್ದ ಕಚೇರಿಗೆ ತಲುಪಿಸಲು ಹೇಳಿದರು.

ಶಿಷ್ಯ ಕಚೇರಿಯ ಹೆಸರು ಮರೆಯದಂತೆ ಒಂದು ಚೀಟಿಯಲ್ಲಿ ಬರೆದುಕೊಂಡು ಹೋದನು. ಒಂದೆರಡು ಗಂಟೆಯ ನಂತರ ಸಣ್ಣ ಮುಖದೊಂದಿಗೆ ವಾಪಸ್ ಬಂದ ಶಿಷ್ಯ. ಅಧ್ಯಕ್ಷರಿಗೆ ಲಕೋಟೆಯನ್ನು ವಾಪಸ್ ಕೊಟ್ಟಾಗ ಕೋಪದಿಂದ ಕಾರಣ ಕೇಳಿದಾಗ ಅವನ ಉತ್ತರ ಕೇಳಿ ನಮಗೆಲ್ಲಾ ಆಶ್ಚರ್ಯವಾಯಿತು.

ಅವನು ತಾನು ಬರೆದ ಚೀಟಿಯನ್ನು ಜನಗಳಿಗೆ ತೋರಿಸಿ 'ಈ ಕಚೇರಿ ಎಲ್ಲಿ ಇದೆ' ಎಂದು ಕೇಳಿದಾಗ ಕೆಲವರು ಅವನನ್ನು ನೋಡಿ ನಕ್ಕರೆ ಇನ್ನು ಕೆಲವರು 'ಮಾಲಿನಿ ನಿನ್ನ ಹೆಂಡತಿಯಾ? ಭಾರಿ ಜೋರಾ...' ಇತ್ಯಾದಿ ಪ್ರಶ್ನೆ ಕೇಳಿ ಇಂತಹ ಕಚೇರಿ ಇಲ್ಲೆಲ್ಲೂ ಇಲ್ಲಾ ಎಂದರಂತೆ. ಅದಕ್ಕಾಗಿ ಬೇಸರಮಾಡಿಕೊಂಡು ವಾಪಸ್ ಬಂದೆ ಎಂದು ಆ ಶಿಷ್ಯ ತಿಳಿಸಿದನು.

ಅಧ್ಯಕ್ಷರೂ ಮತ್ತು ಅಲ್ಲಿದ್ದ ನಾವೂ ಎಲ್ಲಾ ಆ ಚೀಟಿಯಲ್ಲಿ ಏನು ಬರೆದುಕೊಂಡಿದ್ದಾನೆ ಎಂದು ನೋಡಲು 'ವೈಯು ಮಾಲಿನಿಯ ನಿಯಂತ್ರಣ ಮಂಡಳಿ' ಎಂದು ಬರೆದುಕೊಂಡಿದ್ದನ್ನು ನೋಡಿ. ಬರವಣಿಗೆಯ ಅಭಾಸದಿಂದ ಆದ ಅನರ್ಥಕ್ಕೆ ನಗುವ ಸರದಿ ನಮ್ಮೆಲ್ಲರದಾಯಿತು.

-ಜಯಮಾಲಾ ಪೈ

ಕಲೆ: ಗಣೇಶ ಆಚಾರ್ಯ

(ಜನವರಿ ೨೦೨೫ರ ಸಂಚಿಕೆಯಿಂದ ಸಂಗ್ರಹಿತ)