ಬಿಎಂಡಬ್ಲ್ಯೂ ಅನುಭವ

ಹೊಸದಾಗಿ ಮದುವೆಯಾಗಿ ದೆಹಲಿಯಲ್ಲಿ ಸಂಸಾರ ಹೂಡಿದ್ದ ನನ್ನ ಗೆಳತಿಯ ಮಗಳು ಒಂದು ವರ್ಷದ ನಂತರ ಪತಿಯೊಡನೆ ತವರಿಗೆ ಬಂದಿದ್ದಳು. ಒಂದು ಸಂಜೆ ಅವರನ್ನು ಮಾತನಾಡಿಸಲು ಅವರ ಮನೆಗೆ ಹೋಗಿದ್ದೆ. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾ ದೂರದ ದೆಹಲಿಯಲ್ಲಿ ಸಂಸಾರ ಹೇಗೆ ನಡೆಯುತ್ತಿದೆ ಇತ್ಯಾದಿ ವಿಚಾರಿಸುತ್ತಿದ್ದೆ. ಅವಳ ಪತಿಗೆ ಕನ್ನಡ ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು. ನನ್ನ ಹತ್ತಿರ ಅವರ ದಿನಚರಿಯನ್ನು ಅವರದೇ ರೀತಿಯಲ್ಲಿ ಸಂತೋಷದಿಂದ ಹಿಂದಿಯಲ್ಲಿ ನನಗೆ ತಿಳಿಸುತ್ತಿದ್ದನು. ನನಗೆ ಸುಮಾರಾಗಿ ಹಿಂದಿ ಅರ್ಧ ಆಗುತ್ತಿತ್ತು.

ಅವನು ತಿಳಿಸಿದ್ದರಲ್ಲಿ ಒಂದು ಮಾತ್ರ ಅರ್ಧ ಆಗಲಿಲ್ಲ ಏನೆಂದರೆ 'ಅಂಟೀ..I like BMW and also expert in it. ಅದಕ್ಕಾಗಿ ನನ್ನ ಹೆಂಡತಿ ಖುಷಿ ಆಗಿರೋದು' ಎಂದಾಗ ನಾನೆಲ್ಲೋ ಅವರ ಹತ್ತಿರ ದೊಡ್ಡ BMW ಕಾರ್ ಇದೆ. ಅದಕ್ಕೆ ಖುಷಿ ಇರಬಹುದು ಎಂದುಕೊಂಡು ಅವಳಿಗೆ ಈ ಬಗ್ಗೆ ಕೇಳಿದಾಗ ಅವಳು ನಗುತ್ತಾ ತಿಳಿಸಿದ್ದು ಏನೆಂದರೆ 'ಮದುವೆಗೆ ಮೊದಲಿನಿಂದಲೂ ಅಡುಗೆ ಕೆಲಸ ಅವರೇ ಮಾಡಿಕೊಳ್ಳುತ್ತಿದ್ದರು. ಅದರಲ್ಲೂ ಪಾತ್ರೆ ತೊಳೆಯುವ ಕೆಲಸ (ಬರ್ತನ್ ಮಾಂಜನೇ ವಾಲೇ ಕಾಮ್) ಸಂಕ್ಷಿಪ್ತವಾಗಿ BMW. ಇದನ್ನು ಇಷ್ಟಪಟ್ಟು-ಮಾಡುತ್ತಾರೆ' ಎಂದಾಗ ಭಾಷಾ ಗೊಂದಲಗಳ ಮಧ್ಯೆಯೂ ಭಾವನೆಗಳ ವಿನಿಮಯಕ್ಕೆ ತೊಂದರೆ ಆಗಲಿಲ್ಲಾ ಎಂದು ಸಂತೋಷವಾಯಿತು.

-ಜಯಮಾಲಾ ಪೈ

***

ಲೆನಿನ್ ಕಾಲದ ಬಟ್ಟೆ ಬೇಡ!

ಪುಟ್ನಂಜ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ನಂತರ ಆತನ ಆಪ್ತಮಿತ್ರ ನಂಜ ಇನ್ಮುಂದೆ ನೀನು ಒಳೊಳ್ಳೆ ಬಟ್ಟೆ ಹಾಕಬೇಕು ಸ್ಥಾನಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಅಂತ ಹುರಿದುಂಬಿಸಿದ. ಅದಕ್ಕೆ ತಲೆಯಾಡಿಸಿದ ಪುಟ್ನಂಜ ಇಬ್ಬರು ನಗರದ ಪ್ರತಿಷ್ಠಿತ ಮಾಲ್‌ಗೆ ಬಂದರು. ಅಲ್ಲಿನ ನೌಕರ ಲಿನನ್ ಶರ್ಟ್ ಬಟ್ಟೆಗಳನ್ನು ಇವರ ಮುಂದೆ ಹರಡುತ್ತಾ 'ಸಾರ್, ಇದು ವಿಐಪಿಗಳು, ರಾಜಕಾರಣಿಗಳು ಹಾಕ್ತಾರೆ. ಇದು ಅಪ್ಪಟ ಲಿನನ್, ನಿಮಗೆ ಸೂಪರ್ ಆಗಿ ಕಾಣುತ್ತೆ ಸಾರ್' ಎಂದ. ಅದಕ್ಕೆ ಪುಟ್ನಂಜ 'ಲೆನಿನ್ ಕಾಲದ ಬಟ್ಟೆಗಳು ಬ್ಯಾಡ, ನಮ್ ಕಾಲದ ಬಟ್ಟೆಗಳ ತೋರ್ಸು' ಅಂತ ಹೇಳಿದಾಗ ಅಂಗಡಿಯವನು ಸುಸ್ತು!

-ಮಲ್ಲಿಕಾರ್ಜುನ ಸುರಧೇನುಪುರ

***

ಲೋಕೇಶ ಬರಲಿಲ್ಲ!

ಹಳ್ಳಿಯಿಂದ ಮಂಗಳೂರಿನ ಬಸ್ ನಿಲ್ದಾಣಕ್ಕೆ ಬಂದಿಳಿದ ಗೋಪಿ ಗೆಳೆಯ ಹರೀಶನಿಗೆ ಫೋನ್ ಮಾಡಿ ತಾನು ಬಂದಿರುವ ಸುದ್ದಿ ತಲುಪಿಸಿದ ಹಾಗೇ ಆತನ ಮನೆಗೆ ಬರುವ ದಾರಿ ತಿಳಿದಿಲ್ಲವೆಂದೂ, ಬಸ್ ನಿಲ್ದಾಣಕ್ಕೆ ಅಗಮಿಸಿ ಕರೆದುಕೊಂಡು ಹೋಗುವಂತೆಯೂ ತಿಳಿಸಿದ.

ಆದರೆ ಹರೀಶ ತನ್ನ ಅಂಗಡಿಯಲ್ಲಿ ಗ್ರಾಹಕರಿರುವುದರಿಂದ ಬರಲು ಅಸಾಧ್ಯವೆಂದು ಅರುಹಿ, 'ಲೊಕೇಶನ್ನ ಕಳಿಸುವೆ, ಅಂಗಡಿಗೆ ಬಾ' ಎಂದ. ಗೋಪಿ ಸರಿಯೆಂದ. ನಾಲ್ಕು ಗಂಟೆ ಕಾದರೂ ಗೋಪಿ ಅಂಗಡಿಗೆ ಬಾರದ್ದರಿಂದ ಅನುಮಾನಗೊಂಡ ಹರೀಶ ಸ್ವಯಂ ಬಸ್ ನಿಲ್ದಾಣಕ್ಕೆ ಬಂದಾಗ ಗೋಪಿಯಿನ್ನೂ ಅಲ್ಲೇ ಕಾಯುತ್ತಿದ್ದ!

ಹರೀಶ ಕಾರಣ ಕೇಳಲು, 'ಕಾದು ಕಾದು ಸುಸ್ತಾಯ್ತು....ಆದರೆ ನೀನು ಕಳಿಸಿರುವ ಆ ಲೋಕೇಶ ಇನ್ನೂ ಬರಲಿಲ್ಲ ಮಾರಾಯ' ಎಂದ ಗೋಪಿ. 'ಮೊಬೈಲ್‌ನಲ್ಲಿ ಲೊಕೇಶನ್ ಕಳಿಸುತ್ತೇನೆ ಎಂದಿದ್ದೆ ನಾನು. ನಿನ್ನ ಮೊಬೈಲ್ ನೋಡಿದರೆ ಗೊತ್ತಾಗುತ್ತದೆ' ಎಂದು ಹರೀಶ ವಿವರಿಸಿದಾಗ, 'ಅದೇನೋ, ಮೊಬೈಲಲ್ಲಿ ಅದೆಲ್ಲಾ ನೋಡೋಕೆ ಬರಲ್ಲಾ ಕಣಯ್ಯಾ' ಎಂದು ತಲೆ ಕೊಡವುತ್ತಾ ಗೋಪಿ, ಹರೀಶನನ್ನು ಹಿಂಬಾಲಿಸಿದ!

-ರಮಣ್ ಶೆಟ್ಟಿ ರೆಂಜಾಳ್

***

ವ್ಯತ್ಯಾಸ ಅಷ್ಟೇ

ಪಿಂಕಿ ತನ್ನ ಪೋಷಕರೊಂದಿಗೆ ಊಟಕ್ಕೆ ನಾರ್ತ್ ಇಂಡಿಯನ್ ರೆಸ್ಟೋರೆಂಟಿಗೆ ಹೋಗಿದ್ದಳು. ಭರ್ಜರಿ ಊಟದ ನಂತರ ಕೈ ತೊಳೆದುಕೊಳ್ಳಲು ಫಿಂಗರ್ ಬೌಲ್ ತಂದಿಟ್ಟಿದ್ದರು. ಒಮ್ಮೆಲೇ ಪಿಂಕಿ ಜೋರಾಗಿ ಚೀರಿದಳು. 'ಹುಲಿ...ಹುಲಿ..' ಎಂದು ಕೂಗಿದಳು. ಕುಳಿತಿದ್ದವರೆಲ್ಲ ಬೆದರಿ ಎದ್ದೆನೋ ಬಿದ್ದೆನೋ ಎಂಬಂತೆ ಹೋಟೆಲಿನ ಹೊರಗೋಡಿದರು. ಹೋಟೆಲ್ ಮ್ಯಾನೇಜರ್ ವೇಲುಸ್ವಾಮಿ ಪಿಸ್ತೂಲ್ ಹಿಡಿದು ಟೇಬಲ್ ಬಳಿ ಬಂದು 'ಎಲ್ಲಿ ಹುಲಿ ? ಎಲ್ಲಿ..?' ಎಂದ. ಬೌಲ್ ಒಳಗಿನ ನಿಂಬೆ ತುಂಡು ಬಾಯಿಗಿಟ್ಟುಕೊಂಡು ಅದರ ಹುಳಿಗೆ ಸಿಂಡರಿಸಿ ಪಿಂಕಿ ಕೂಗಿದ್ದಳು! ಅವಳು 'ಳ' ಬದಲು 'ಲ' ಎಂದು ಉಚ್ಚರಿಸುವುದನ್ನು ತಿಳಿದು ಮ್ಯಾನೇಜರ್ 'ನಗಲಾರಂಭಿಸಿದ.

-ಕೆ. ಶ್ರೀನಿವಾಸರಾವ್

ಕಲೆ: ಗಣೇಶ ಆಚಾರ್ಯ

(ಫೆಬ್ರವರಿ ೨೦೨೫ರ ‘ಮಯೂರ’ ಸಂಗ್ರಹಿತ)