ಗೋಲಿ ನುಂಗು ಸರಿ ಹೋಗುತ್ತಿ!

ನಾನಾಗ ಗುಲ್ಬರ್ಗದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ನನ್ನ ಬಾವನ ಮಗಳು ಪೂಜಾ ಆಗ ತುಂಬಾ ಚಿಕ್ಕವಳು. ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ. ಅವಳಿಗೆ ರಜೆ ಇದ್ದುದ್ದರಿಂದ ಗುಲ್ಬರ್ಗಕ್ಕೆ ಬಂದಿದ್ದಳು. ರಜೆಯಲ್ಲಿ ಅವಳಿಗೆ ಜ್ವರ ಬಂದಿದ್ದರಿಂದ ಸಮೀಪದ ಡಾಕ್ಟರ್ ಬಳಿಗೆ ಕರೆದುಕೊಂಡು ಹೋಗಿದ್ದೆ. ಅವರು ಚೆಕ್ ಮಾಡಿ, 'ಎರಡು ದಿನ ಗೋಲಿ ನುಂಗು ಸರಿ ಹೋಗುತ್ತೆ' ಎಂದರು.

ಗೋಲಿ ನುಂಗಬೇಕು ಎನ್ನುವುದನ್ನು ಕೇಳಿ ಪೂಜಾ ಗಾಬರಿಯಾಗಿದ್ದಳು. ಆಸ್ಪತ್ರೆಯಿಂದ ಹೊರಬಂದಾಗ 'ಯಾರಾದರೂ ಗೋಲಿ ನುಂಗುತ್ತಾರಾ' ಎಂದು ಕೇಳಿದಳು. ಗುಲ್ಬರ್ಗಾದ ಕಡೆ ಮಾತ್ರೆಗೆ 'ಗೋಲಿ' ಎಂಬ ಪದ ಬಳಸುತ್ತಾರೆ ಎಂದು ಹೇಳಿದಾಗ ಪೂಜಾಳ ಮುಖದಲ್ಲಿ ನಗು ಮೂಡಿತು.

-ಬಿ. ಬಸವರಾಜ್

***

ಹಾವಿನ ಮಣ್ಣು ಬೇಕು!

ವಾರದ ಸಂತೆಯ ತರಕಾರಿ, ಹಣ್ಣು ಖರೀದಿಗೆ ಅಂಗನವಾಡಿ ಹೋಗುವ ನಮ್ಮ ನಾದಿನಿ ಮಗ ಶ್ರೀನಿಧಿ ಜೊತೆಗಿದ್ದ. ತರಕಾರಿ ಖರೀದಿ ತರುವಾಯ ಹೊರಟಾಗ ಆತ, ತನಗೆ ಹಾವಿನ ಮಣ್ಣು ಬೇಕು ಎಂದ. ಅದ್ಯಾಕೋ ನಿಂಗೆ? ಎಂದೆ. ತಿನ್ನಲಿಕ್ಕೆ ಎಂದನಾತ. ಹಾಗೆಲ್ಲಾ ಹಾವಿನ ಮಣ್ಣು ತಿನ್ನಬಾರದು, ಅದು ಮನುಷ್ಯ ತಿನ್ನುವುದಲ್ಲ ಎಂದೆ. ಅಲ್ಲೆಲ್ಲಾ ತಿಂತಾ ಇದಾರೆ. ಮತ್ತೆ ನೀನೇ ನೋಡು ಅಂದ. ಹೌದು! ರಾಶಿ ಹಾಕಿದ್ದ ಮಾವಿನ ಹಣ್ಣಿನ ರುಚಿ ನೋಡುತ್ತಿದ್ದರು ಜನ ಖರೀದಿಗೆ!.

ಸಂತೆಗೆ ಬರುವಾಗ ದಾರಿಯಲ್ಲಿ ಇದ್ದ ಬೃಹತ್ ಹುತ್ತದ ಬಗ್ಗೆ ಕೇಳಿದ್ದ ಆತ. ಗೆದ್ದಲು ಹುಳ ಕಟ್ಟಿದ ಮಣ್ಣು ಗೂಡಲ್ಲಿ (ಹುತ್ತ) ಹಾವು ಇರುತ್ತೆ ಎಂದಿದ್ದೆ. ಅದರಿಂದ ಆತನಲ್ಲಿ ಅದರ ಬಗ್ಗೆಯೇ ಯೋಚನೆ ಇತ್ತು. ಅದರಿಂದ ಆತ ತೊದಲು ನುಡಿಯಲ್ಲಿ ಮಾವಿನ ಹಣ್ಣನ್ನು ಹಾವಿನ ಮಣ್ಣು ಮಾಡಿದ್ದ!.

-ನಗರ ಗುರುದೇವ್ ಭಂಡಾರ್ಕರ್

***

ಹತ್ತು ಲಕ್ಷಕ್ಕೆ ಸಹಿ!

ಒಬ್ಬ ಮಂತ್ರಿ ಜ್ಯೋತಿಷಿ ಹತ್ತಿರ ಹೋಗಿ. 'ನನ್ನ ಮಗ ಪಿಯುಸಿ ಓದುತ್ತಿದ್ದಾನೆ. ಅವನ ಮುಂದಿನ ಭವಿಷ್ಯ ಏನಾಗಬಹುದು' ಎಂದು ಕೇಳಿದ. ಜ್ಯೋತಿಷಿ ಮಂತ್ರಿ ಮಗನ ಜಾತಕ ಪರಿಶೀಲಿಸಿ, ಹೇಗಿದ್ದರೂ ದುಡ್ಡು ಕೊಟ್ಟು ವೈದ್ಯಕೀಯ ಸೀಟು ಪಡೆಯುತ್ತಾರೆ ಎಂದು ಭಾವಿಸಿ, 'ಮುಂದೆ ನಿಮ್ಮ ಮಗ ವೈದ್ಯನಾಗುತ್ತಾನೆ' ಎಂದು ಹೇಳಿದ.

ಇದನ್ನು ಕೇಳಿದ ಮಂತ್ರಿ ಖುಷಿಯಾಗಿ, ತನ್ನ ಮಡದಿಯನ್ನು ಕರೆದು ಜ್ಯೋತಿಷಿಗೆ ಹತ್ತು ಲಕ್ಷ ರೂಪಾಯಿಯ ಚೆಕ್ ಕೊಡಿಸಿದ. ಚೆಕ್ ಪಡೆದ ಜ್ಯೋತಿಷಿ ಅದನ್ನು ಪರಿಶೀಲಿಸಿ, 'ಈ ಚೆಕ್‌ನಲ್ಲಿ ನಿಮ್ಮ ಸಹಿಯೇ ಇಲ್ಲವಲ್ಲ' ಎಂದಾಗ, ಮಂತ್ರಿ 'ನನ್ನ ಮಗ ಪಾಸಾಗುವುದೇ ಕಷ್ಟ. ಅದರಲ್ಲಿ ನೀವು ವೈದ್ಯನಾಗುತ್ತಾನೆ ಎಂದು ಹೇಳಿದ್ದೀರಿ. ಅವನಿಗೆ ವೈದ್ಯಕೀಯ ಸೀಟು ಸಿಕ್ಕಾಗ ನಿಮಗೆ ಕೊಟ್ಟಿರುವ ಚೆಕ್‌ ಗೆ ಸಹಿ ಹಾಕಿ ಕೊಡುತ್ತೇನೆ' ಎಂದು ಹೇಳಿದಾಗ ಜ್ಯೋತಿಷಿ ತಲೆ ತಿರು ಬೀಳುವೊಂದೇ ಬಾಕಿ.

-ವೇಣುಗೋಪಾಲ್ ಸಿ

***

ಸೂರ್ಯನಿಗೂ ಶೀತ ಆಗಿರಬೇಕು!

ನನ್ನ ನಾಲ್ಕು ವರ್ಷದ ಮೊಮ್ಮಗಳು ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದಳು. ಆ ದಿನ ವಾತಾವಾರಣವೂ ಅಷ್ಟು ಅನುಕೂಲಕರವಾಗಿರಲಿಲ್ಲ. ಚುಮುಚುಮು ಚಳಿಯೂ ಇತ್ತು. ಕಾರ್ಮೋಡ ಕವಿದಿತ್ತು. ಆದ್ದರಿಂದ ಅವಳನ್ನು ಅಂದು ಶಿಶುಪಾಲನಾ ಕೇಂದ್ರಕ್ಕೆ ಕಳಿಸದಿರಲು ನಿರ್ಧರಿಸಿದೆವು.

ತಡವಾಗಿ ಎದ್ದ ಮೊಮ್ಮಗಳನ್ನು ಹುರಿದುಂಬಿಸಲು. 'ನೀನೇ ಮೊದಲು ಎದ್ದಿರುವೆ ಪುಟ್ಟಿ; ಸೂರ್ಯ ಇನ್ನೂ ಎದ್ದೇ ಇಲ್ಲ' ಎಂದೆ. 'ಸೂರ್ಯನಿಗೂ ಶೀತ ಆಗಿರಬೇಕು! ಅದಕ್ಕೇ ಇನ್ನೂ ಎದ್ದಿಲ್ಲ' ಎಂದು ಥಟ್ಟನೆ ಉತ್ತರಿಸಿದ ಅವಳ ಸಮಯ ಪ್ರಜ್ಞೆ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು.

-ಮಂಜುನಾಥ ಡಿ.ಎಸ್

***

ಕಲೆ: ಗಣೇಶ ಆಚಾರ್ಯ

(ಫೆಬ್ರವರಿ ೨೦೨೫ರ ‘ಮಯೂರ’ ಸಂಗ್ರಹ)