ಮರಕ್ಕೆ ಕೂದಲು ಬಂತು

ನಮ್ಮನೆಯವರ ಐವತ್ತನೇ ಜನ್ಮ ದಿನದ ನೆನಪಿಗೆ ನಮ್ಮ ಮನೆಮುಂದೆ ಅಶೋಕ ವೃಕ್ಷಗಳನ್ನು ನೆಟ್ಟು, ಪಾಲನೆ ಪೋಷಣೆ ಮಾಡ್ತಾ ಬಂದಿದ್ದೆವು. ಅವು ಬೆಳೆದು ದೊಡ್ಡದಾದಂತೆ ವಿದ್ಯುತ್ ಕಂಬದ ವೈರ್. ಪಕ್ಕದ ಮನೆ ಚಾವಣಿಗೆ ಹಾಗೂ ಜನರ ಓಡಾಟಕ್ಕೆ ತೊಂದರೆ ಆಗುತ್ತಿತ್ತು. ಹಾಗಾಗಿ, ಆ ಮರದ ರೆಂಬೆಕೊಂಬೆ ಕತ್ತರಿಸಿದ್ದೆವು.

ದೀಪಾವಳಿಗೆ ಮನೆಗೆ ಬಂದಿದ್ದ ಮೊಮ್ಮಗಳು ವರ್ಣಿಕಾ, ಬೋಳಾದ ಮರವನ್ನು ನೋಡಿ. 'ನಾನು ಚಿಕ್ಕವಳಿದ್ದಾಗ ನನ್ನ ತಲೆ ಬೋಡಾ ಮಾಡಿದಂತೆ ಮರಕ್ಕೂ ಬೋಡಾ ಮಾಡಿದ್ದೀರಾ' ಎಂದಳು. ಅದಾಗಿ ಕೆಲವು ತಿಂಗಳ ನಂತರ ಕ್ರಿಸ್‌ಮಸ್‌ ಹಬ್ಬದ ರಜೆಗೆ ಬಂದಿದ್ದ ಮೊಮ್ಮಗಳು ಬೆಳೆದು ನಿಂತಿದ್ದ ಅಶೋಕ ಮರವನ್ನು ಗಮನಿಸಿ 'ಅರೆ, ಮರಕ್ಕೆ ಕೂದಲು ಬಂದಿವೆ' ಎಂದು ಹೇಳಿದಾಗ ಮನೆಯವರೆಲ್ಲಾ ನಕ್ಕಿದ್ದೇ ನಕ್ಕಿದ್ದು.

-ಅನುರಾಧ ಟಿ.

***

ಕರಗಲಾರದ ಆಸ್ತಿ...

ಗುಂಡ ತನ್ನ ಗೆಳೆಯರ ಬಳಗದ ಜೊತೆಗೆ ಒಂದು ರೆಸಾರ್ಟ್‌ ನಲ್ಲಿ ಬಹಳ ವರ್ಷಗಳ ನಂತರ ಭೇಟಿಯಾಗಿದ್ದನು. ಅವನ ಎಲ್ಲಾ ಗೆಳೆಯರು ಒಳ್ಳೆಯ ಉದ್ಯೋಗದಲ್ಲಿದ್ದು ನಿವೃತ್ತಿಯಾಗಿದ್ದರಿಂದ ಎಲ್ಲರೂ ತಮ್ಮ ಬಳಿ ಇರುವ ಆಸ್ತಿಯಾದ ಬಂಗಲೆ, ಮನೆ, ಫ್ಲ್ಯಾಟ್‌ ಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು.

ಆಗ ಗುಂಡ 'ಅದೇನ್ ಮಹಾ ಅಂತ ಕೊಚ್ಚಿಕೊಳ್ಳುತ್ತಿದ್ದೀರಾ, ನಮ್ಮ ಮನೆಯವರ ಒಬ್ಬೊಬ್ಬರ ಬಳಿಯೂ ಒಂದೊಂದು 'ಸಿಟಿ' ಇದೆ' ಎಂದನು. ಎಲ್ಲರೂ ಒಕ್ಕೊರಲಿನಿಂದ ಹಾಗಂದ್ರೆ ಏನೋ ಎಂದು ಕೇಳಿದಾಗ, 'ಅಂದರೆ ಒಬ್ಬೊಬ್ಬರಿಗೂ 'ಅಸಿಡಿಟಿ', 'ಒಬೇಸಿಟಿ' ಇದೆ' ಎಂದಾಗ, ಗೆಳೆಯರೆಲ್ಲ ಸುಸ್ತೋ ಸುಸ್ತು!

-ವಿ. ವಿಜಯೇಂದ್ರ ರಾವ್

***

ಆ ಕಾಲದ ಲಕ್ಷ್ಮಿ!

ಕೇಶವನ ತಪಸ್ಸಿಗೆ ಮೆಚ್ಚಿ ದೇವಿ ಲಕ್ಷ್ಮಿ ಪ್ರತ್ಯಕ್ಷವಾಗಿ 'ಏನು ಬೇಕು ಕೇಳು' ಎಂದಳು. 'ನನಗೆ ಐದು ಗೋಣಿಚೀಲದಷ್ಟು ಹಣ ಬೇಕು' ಎಂದ ಕೇಶವ. ತಕ್ಷಣವೇ ಆತನ ಮುಂದೆ ಹಣ ತುಂಬಿದ ಐದು ಗೋಣಿಚೀಲಗಳು ಕಾಣಿಸಿಕೊಂಡವು.

ಕೇಶವ ಸಂತೋಷದಿಂದ ಮನೆಗೆ ತೆಗೆದುಕೊಂಡು ಹೋಗಿ, ಆ ಗೋಣಿಚೀಲಗಳನ್ನು ತೆರೆದು ನೋಡಿದಾಗ ಎಲ್ಲವೂ 1000 ಹಾಗೂ 2000 ಚಲಾವಣೆಯಲ್ಲಿ ಇಲ್ಲದ ನೋಟುಗಳು. ಕೇಶವನಿಗೆ ನಿರಾಶೆಯಾಗಿ ಮತ್ತೆ ಲಕ್ಷ್ಮಿಯನ್ನು ಪ್ರಾರ್ಥಿಸಿದ.

ಆಕೆ ಪ್ರತ್ಯಕ್ಷಳಾಗಿ 'ಮತ್ತೇನು ನಿನ್ನ ಬೇಡಿಕೆ' ಎಂದಾಗ, 'ಮಾತೆ ನೀನು ದಯಪಾಲಿಸಿರುವ ನೋಟುಗಳು ಚಲಾವಣೆಯಲ್ಲಿ ಇಲ್ಲದ ಹಳೆಯ ನೋಟುಗಳು' ಎಂದನು.

'ಹೌದು ಅದು ನನಗೂ ಗೊತ್ತು. ಆದರೆ, ನಿನಗೆ ಒಂದು ವಿಷಯ ಗೊತ್ತಿಲ್ಲ. ನಾನು ಆ ನೋಟುಗಳು ಇದ್ದ ಕಾಲದಲ್ಲಿದ್ದ ಲಕ್ಷ್ಮಿ' ಎಂದು ಹೇಳಿ ಮಾಯವಾದಳು.

-ಶಂಕರೇಗೌಡ ತುಂಬಕೆರೆ

***

ಮೆಹಂದಿ ಚಟ್ನಿ !

'ಇವತ್ತು ನೀನು ಮಾಡಿದ ಚಟ್ನಿ ರುಚಿಯೇ ಇಲ್ಲ. ಆದರೆ, ನೀನು ಏನಂತಿಯೋ ಅಂತ ಕಷ್ಟಪಟ್ಟು ತಿಂದೆ' ಎಂದ ಗಂಡ. 'ರೀ.. ಸತ್ಯ ಹೇಳಿ, ತಮಾಷೆ ಮಾಡ್ತಿಲ್ಲ ತಾನೇ' ಎಂದಳು ಹೆಂಡತಿ. 'ನಿಜವಾಗೂ ಚಟ್ನಿ ರುಚಿ ಇರಲಿಲ್ಲ ಕಣೇ' ಎಂದು ಪುನರುಚ್ಚರಿಸಿದ ಗಂಡ. 'ಅಲ್ಲ ರೀ. ನಾನಿವತ್ತು ಚಟ್ನಿಯನ್ನೇ ಮಾಡಿಲ್ಲ. ಮತ್ತೆ ಅದು ಹೇಗೆ ತಿಂದ್ರಿ' ಮರುಪ್ರಶ್ನಿಸಿದಳು ಹೆಂಡತಿ, 'ಅರೆ, ಮಿಕ್ಸಿ ಪಕ್ಕ ಚಿಕ್ಕ ಪಾತ್ರೆಯಲ್ಲಿ ನೀನೇ ಇಟ್ಟಿದ್ದೆಯಲ್ಲ.. ಹಸಿರು ಚಟ್ನಿ ಅದನ್ನೇ ನಾನು ತಿಂದಿದ್ದು' ಎಂದ ಗಂಡ. 'ಅಯ್ಯೋ ರಾಮ!, ಅದು ಚಟ್ನಿ ಅಲ್ಲ ರೀ... ನಾನು ಕೂದಲಿಗೆ ಹಾಕಲು ಕಲಸಿಟ್ಟ ಮದರಂಗಿ ಪುಡಿಯ ಪೇಸ್ಟ್ ಕಣ್ರೀ' ಎಂದು ಹೆಂಡತಿ ಹೇಳಿದಾಗ, ಗಂಡ ಸುಸ್ತಾದ!

-ವಾಣಿಶ್ರೀ ಕೊಂಚಾಡಿ

ಕಲೆ: ಗಣೇಶ ಆಚಾರ್ಯ

(ಮಾರ್ಚ್ ೨೦೨೫ರ ‘ಮಯೂರ’ ಸಂಗ್ರಹಿತ)