ವಿ ಆರ್ ತ್ರೀ ಲೇಟ್ !
ಅಂದು ಹತ್ತನೇ ತರಗತಿಯ ಜಿಲ್ಲಾಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಮೊದಲ ದಿನ ಪರೀಕ್ಷೆಯು ಒಂಬತ್ತು ಗಂಟೆ ಮೂವತ್ತು ನಿಮಿಷಕ್ಕೆ ಆರಂಭವಾಗಿತ್ತು. ಪರೀಕ್ಷೆಯ ನಿಯಮದಂತೆ ಅರ್ಧ ಗಂಟೆಯ ನಂತರ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಇರಲಿಲ್ಲ. ನಾನು ಪರೀಕ್ಷಾ ಕೊರಡಿಯ ಮೇಲ್ವಿಚಾರಕನಾಗಿ ಕರ್ತವ್ಯದಲ್ಲಿದ್ದೆ. ಹತ್ತು ಗಂಟೆಗೆ ಮೂವರು ವಿದ್ಯಾರ್ಥಿಗಳು ಬಂದರು.
ಬಾಗಿಲಲ್ಲಿ ನಿಂತ ಒಬ್ಬ' ಮೇ ಐ ಗೆಟ್ ಇನ್ ಸಾರ್’ ಅಂತ ಕೇಳಿಕೊಂಡ. ತಡವಾಗಿ ಬರೋರಿಗೆ ಅವಕಾಶ ಕೊಟ್ಟರೆ ಅದೇ ಚಾಳಿ ಇತರ ವಿದ್ಯಾರ್ಥಿಗಳಿಗೆ ಅಂಟುಜಾಡ್ಯದ ತರಹ ಹರಡುತ್ತದೆ ಅಂತ ಮನದಲ್ಲೇ ಅಂದುಕೊಂಡು ಖಡಕ್ ವಾರ್ನಿಂಗ್ ಕೊಡಬೇಕು ಅಂತ 'ಯು ಆರ್ ಟೂ ಲೇಟ್' ಅಂತ ಹೇಳಿದೆ. ಅದಕ್ಕೆ ಬಾಗಿಲಲ್ಲಿ ಇದ್ದ ಇನ್ನೊಬ್ಬ ವಿದ್ಯಾರ್ಥಿ 'ಸಾರಿ ಸಾರ್ ವಿ ಆರ್ ತ್ರೀ ಲೇಟ್' ಅಂತ ಮೂವರು ತಡವಾಗಿ ಬಂದಿದ್ದೇವೆ ಅಂತ ಹೇಳಿದ.
-ಮಲ್ಲಿಕಾರ್ಜುನ ಸುರಧೇನುಪುರ
***
ಅಜ್ಜಿಯ ಐಡಿಯಾ
ರಾತ್ರಿಯ ಹೊತ್ತು ಆ ಮನೆಯಲ್ಲಿ ಅಜ್ಜಿಯ ಹೊರತುಪಡಿಸಿ ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡ ಕಳ್ಳನೊಬ್ಬ. ಹೇಗೋ ಒಳಗೆ ಪ್ರವೇಶಿಸಿದ. ಕೈಗೆ ಸಿಕ್ಕಿದ್ದನ್ನು ದೋಚಿಕೊಂಡ. ಅದೇ ಸಮಯದಲ್ಲಿ ಆತನಿಗೆ ತುರ್ತಾಗಿ ಪ್ರಕೃತಿ ಕರೆಗೆ ಓಗೊಡಬೇಕಾಗಿ ಬಂತು.
ಕತ್ತಲೆಯಲ್ಲಿ ಆತ ಎಡವಿದ, ಯಾವುದೋ ವಸ್ತು ಬಿದ್ದ ಶಬ್ದಕ್ಕೆ ಅಜ್ಜಿಗೆ ಎಚ್ಚರವಾಗಿ ‘ಯಾರಪ್ಪ ನೀನು, ಏನು ಬೇಕಿತ್ತು' ಎಂದು ಕೇಳಿದಾಗ ಆ ಕಳ್ಳ, ಅಜ್ಜಿ ಎದುರು ಪುಟ್ಟ ಚಾಕು ಹಿಡಿದು, 'ಏ.. ಅಜ್ಜಿ ಟಾಯ್ಲೆಟ್ ಎಲ್ಲಿದೆ ಬೇಗ ಹೇಳು' ಎಂದ. ಆಗ ಅಜ್ಜಿ ತಾಳಪ್ಪಾ ಎನ್ನುತ್ತ ಎದ್ದು ಆತನಿಗೆ ಟಾಯ್ಲೆಟ್ ಬಳಿ ಕರೆದೊಯ್ದು 'ಇದೇ ನೋಡು' ಎನ್ನುವಷ್ಟರಲ್ಲಿ ಆತ ರಭಸದಿಂದ ಒಳಗೆ ಹೋಗಿ ಚಿಲಕ ಹಾಕಿ ಕೊಂಡ. ಇತ್ತ ಅಜ್ಜಿ 'ಹೊರಗಿನಿಂದ ಬಾಗಿಲ ಚಿಲಕ ಹಾಕಿ ಮನೆಯ ಎಲ್ಲ ಲೈಟ್ ಆನ್ ಮಾಡಿ 'ಕಳ್ಳ.. ಕಳ್ಳ' ಎಂದು ಬೊಬ್ಬೆ ಹಾಕಿ ಜನರನ್ನು ಸೇರಿಸಿ ಕಳ್ಳನನ್ನು ಹಿಡಿದು ಕೊಡುವಲ್ಲಿ ಸಫಲಳಾದಳು.
-ಅರವಿಂದ ಜಿ. ಜೋಷಿ
***
ಬಾರ್ ಕೋಲು!
ನಮ್ಮ ಬ್ಯಾಂಕಿನ ಗ್ರಾಹಕ ರೈತ ಆ ಊರಿನ ಏಕೈಕ ಎತ್ತಿನ ಗಾಡಿ ಹೊಂದಿರುವಾತ. ಅಂದು ಬ್ಯಾಂಕಿಗೆ ಎತ್ತಿನ ಗಾಡಿ ಸಮೇತ ಬಂದವರು ಆವರಣದಲ್ಲಿ ನಿಲ್ಲಿಸಿ, ಪಾಸ್‌ಬುಕ್ ಎಂಟ್ರಿ ಮಾಡಲು ಕೊಟ್ಟಿದ್ದರು. ಗ್ರಾಹಕ ಸ್ನೇಹಿ, ಸ್ವಮುದ್ರಣದ ಯಂತ್ರ ಸ್ಥಾಪಿಸಿದ್ದು ಪಾಸ್‌ಬುಕ್ ಗ್ರಾಹಕರೇ ಎಂಟ್ರಿ ಮಾಡಿಕೊಳ್ಳಬೇಕಿತ್ತು. ಪಾಸ್‌ಬುಕ್‌ಗೆ ಕೋಡ್' ಲಗತ್ತಿಸಿಕೊಡಬೇಕಾಗಿತ್ತು. ಕುಳಿತುಕೊಳ್ಳಿ 'ಬಾರ್ ಕೋಡ್ ಬೇಕು' ಎಂದೆ.
ತಕ್ಷಣ ಆ ರೈತ ಬ್ಯಾಂಕಿನ ಆವರಣದಲ್ಲಿ ನಿಲ್ಲಿಸಿದ್ದ ತನ್ನ ಎತ್ತಿನ ಗಾಡಿ ಬಳಿ ಹೋಗಿ ಅದರಲ್ಲಿದ್ದ 'ಬಾರು ಕೋಲು' ತಂದು ನನ್ನ ಎದುರು ಇಟ್ಟು, 'ತಕ್ಕೊಳ್ಳಿ ಬಾರ್ ಕೋಲ್!' ಎಂದಾಗ ಅವರು ಬಾರ್ ಕೋಡ್ ಅನ್ನು ಬಾರ್ ಕೋಲಾಗಿಸಿದ್ದು ಕಂಡು ನಗು ಬಂತು!. ಆಮೇಲೆ ಅವರು 'ಬ್ಯಾಂಕಿನ ಆವರಣದಲ್ಲಿ ಬಿಡಾಡಿ ದನಗಳ ಕಾಟ, ಓಡಿಸಲು ನೀವು ಬಾರ್ ಕೋಲ್ ಕೇಳಿರಬೇಕು ಎಂದು ತಂದು ಕೊಟ್ಟೆ' ಅಂದರು.
-ಪೂರ್ಣಿಮಾ ಎಚ್.ಎನ್
***
ನಾನ್ ವೆಜ್ ಇರಬೇಕವ್ವ!
ನಮ್ಮ ಅಜ್ಜಿ ಅನಕ್ಷರಸ್ಥಳು. ಆಧುನಿಕ ಕಾಲದ ಇಂಗ್ಲಿಷ್ ಭಾಷಾ ಜ್ಞಾನವಂತೂ ಎಳ್ಳುಕಾಳಿನಷ್ಟೂ ಇಲ್ಲ. ಮನೆಯ ಸಣ್ಣ ಮಕ್ಕಳು ಮಾತಾಡುವ ಇಂಗ್ಲಿಷ್ ಭಾಷೆಯನ್ನು ಅವಲೋಕಿಸಿ, ತಾನೂ ಮಾತಾಡುವ ಉಮೇದು ಅವಳಿಗೆ. ಒಮ್ಮೆ ನಮ್ಮ ಮಗಳು ಶಾಲೆಗೆ ಹೋಗಬೇಕಾದರೆ ಯಾವುದೋ ವಿಷಯಕ್ಕೆ ಕಿರಿಕಿರಿ ಮಾಡಿ ಅಳತೊಡಗಿದಳು. ಸಿಟ್ಟಿಗೆದ್ದ ನಾನು ಅವಳ ಕೆನ್ನೆಗೆ ಎರಡು ಏಟು ಕೊಟ್ಟೆ.
ಆಗ ನಮ್ಮಜ್ಜಿ 'ಸಾಲಿ ಓದಾಕಿ ತಟಗು ನಾನ್‌ವೆಜ್ ಇಲ್ಲ ಅಂದ್ರ ಹೆಂಗವ್ವ' ಅಂದಳು. ಅಳುತ್ತಿದ್ದ ಮಗಳು ಗಹಗಹಿಸಿ ನಗತೊಡಗಿದಳು. ನನಗೆ ವಿಚಿತ್ರ ಎನಿಸಿ ಯಾಕೆಂದು ಕೇಳಿದೆ. ಅಜ್ಜಿ 'ನಾಲೇಜ್' ಅನ್ನೋದಕ್ಕೆ 'ನಾನ್‌ವೆಜ್' ಅನ್ನುತ್ತಿದ್ದಾಳೆ ಎಂದು ಮತ್ತೆ ನಕ್ಕಳು. ಪುಣ್ಯ ಅನ್ನು ಆಕಿ 'ಗ್ಯಾರೇಜ್' ಅಂದಿಲ್ಲಲ್ಲ ಎಂದೆ. ನನ್ನ ಮಾತಿಗೂ ಅವಳು ನಗತೊಡಗಿದಳು.
-ಶಿ.ಕಾ. ಬಡಿಗೇರ
ಕಲೆ: ಗಣೇಶ ಆಚಾರ್ಯ
(‘ಮಯೂರ’ ಮಾರ್ಚ್ ೨೦೨೫ರ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!