ಬುದ್ಧಿವಂತರಿಗೆ ಮಾತ್ರ

ಆ ಹಾಸ್ಯಗೋಷ್ಠಿ ಸ್ಪರ್ಧೆಯಲ್ಲಿ ನಾಗೇಶನೂ ಭಾಗವಹಿಸಿದ್ದ. ಆ ಸ್ಪರ್ಧೆಯ ನಿಯಮದ ಪ್ರಕಾರ ಮೊದಲನೆಯ ವಾಕ್ಯದಲ್ಲಿಯೇ ಎಲ್ಲರನ್ನು ನಗಿಸಬೇಕು ಎಂಬುದಾಗಿತ್ತು. ಸ್ಪರ್ಧೆಯಲ್ಲಿ ಎಲ್ಲರೂ ಏನೇನೋ ಹಾಸ್ಯದ ವಿಷಯಗಳನ್ನು ಹೇಳಿದರು. ಆದರೆ ಯಾರೊಬ್ಬರೂ ನಗಲೇ ಇಲ್ಲ.

ಕೊನೆಗೆ ನಾಗೇಶನ ಸರದಿಯೂ ಬಂತು. ಆತ ವೇದಿಕೆ ಏರಿದವನೇ 'ನೋಡಿ ನಾನು ಹೇಳುವ ಹಾಸ್ಯದ ವಿಷಯ ಬುದ್ದಿವಂತರಿಗೆ ಮಾತ್ರವೇ ಅರ್ಧವಾಗುವುದು' ಎಂದು ಅವನು ಹೇಳಿದ್ದೇ, ಎಲ್ಲರೂ ಆ ಕ್ಷಣವೇ ಕ್ಷಣವೇ ಗಹಗಹಿಸಿ ನಗತೊಡಗಿದರು! 

-ಶಂಕರೇಗೌಡ ತುಂಬಕೆರೆ

***

ಅದು ಹೇಗೆ?

ಅಂದು ಮದುವೆಗೆ ಸಂಬಂಧಿಕರೊಬ್ಬರ ಹೋಗಬೇಕಾಗಿದ್ದ ಗುಂಡ ಎದುರಿಗೆ ಬಂದ ಆಟೊ ನಿಲ್ಲಿಸಿ, 'ಏನಪ್ಪಾ ಜಯನಗರಕ್ಕೆ ಬರುತ್ತೀಯಾ?' ಎಂದು ಕೇಳಿದ.

ಚಾಲಕ 'ಓ ಬನ್ನಿ ಸ್ವಾಮಿ! ಬರ್ತೇನೆ ಎಂದಾಗ, ಗುಂಡ 'ಎಷ್ಟು ಕೊಡಬೇಕಪ್ಪಾ?' ಎಂದು ಕೇಳಿದ. ಚಾಲಕ '350 ರೂಪಾಯಿ ಕೊಡಿ' ಎಂದ.

ಗುಂಡ- 'ಏನಪ್ಪಾ ಮೀಟರ್ ಹಾಕಿದರೆ 300 ರೂಪಾಯಿ ಆಗುತ್ತದೆ. ನೀನು ಜಾಸ್ತಿ ಕೇಳ್ತಾ ಇದೀಯಲ್ಲ. ನಾನು ಬೇಕಾದರೆ ನಿನ್ನನ್ನು ಫ್ರೀಯಾಗಿ ಕರೆದುಕೊಂಡು ಹೋಗ್ತೇನೆ' ಎಂದ. ಚಾಲಕ ಚಕಿತನಾಗಿ 'ಏನು ಫ್ರೀಯಾಗಿ ಕರೆದುಕೊಂಡು ಹೋಗ್ತಿರಾ? ಅದು ಹೇಗೆ?' ಎಂದು ಕೇಳಿದ. ಅದಕ್ಕೆ ಗುಂಡ 'ನೀನು ಹಿಂದಿನ ಸೀಟಿನಲ್ಲಿ ಕುಳಿತುಕೋ ಗೊತ್ತಾಗುತ್ತದೆ' ಎಂದ!

-ಎಂ.ಕೆ. ಮಂಜುನಾಥ್

***

ಬ್ಯೂಟಿಪಾರ್ಲರ್ ಮಹಿಮೆ

ನಂಜ ಮದುವೆ ಆಗಿ ಹದಿನೈದು ದಿನಗಳಾಗಿತ್ತು. ಹೆಂಡತಿ ಜತೆ ಬ್ಯೂಟಿಪಾರ್ಲ‌ರ್ ಗೆ ಬಂದಿದ್ದ. ಹೆಂಡತಿ ಪಾರ್ಲರ್ ಒಳಗೆ ಹೋಗಿದ್ದರೆ, ಈತ ವೇಟಿಂಗ್ ರೂಂನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಕುಳಿತಿದ್ದ. ಒಂದು ಗಂಟೆ ಆದಮೇಲೆ ಮಹಿಳೆಯೊಬ್ಬರು ನಂಜನ ಬಳಿಗೆ ಬಂದು ‘ಬರ್ತೀರಾ’ ಎಂದು ಕೇಳಿದಳು.

ತಕ್ಷಣವೇ ನಂಜ ಆ ಮಹಿಳೆಯನ್ನು ನೋಡಿ ಗಾಬರಿಯಿಂದ 'ಅಯ್ಯೋ ನಾನು ಅಂಥವನಲ್ಲ. ನನಗೆ ಮದುವೆ ಆಗಿದೆ. ನನ್ನ ಹೆಂಡತಿ ಪಾರ್ಲರ್ ಒಳಗೆ ಇದ್ದಾಳೆ' ಎಂದ.

ಆಗ ಆ ಮಹಿಳೆ ನಗುತ್ತಾ 'ಸುಮ್ನೆ ಬನ್ನಿ. ನಾನೇ ನಿಮ್ಮ ಹೆಂಡತಿ' ಅಂದಳು!

-ವಿ. ಹೇಮಂತ ಕುಮಾರ್

***

ಇದೇನು ಮಹಾತಪ್ಪು?

'ನೋಡಪ್ಪಾ, ಅಮ್ಮ ಸುಮ್‌ ಸುಮ್ಮನೆ ಬೈತಿದಾಳೆ' ಅಂದ ಗುಂಡ.

'ಯಾಕಪ್ಪಾ 'ಏನಾಯ್ತು?' ಅಂದ ಅಪ್ಪ. ಆಗ ಗುಂಡ 'ಇವತ್ತು ರಿಪೋರ್ಟ್ ಕಾರ್ಡ್ ಕೊಟ್ರಪ್ಪಾ, ಏನೋ ಒಂದು 'ಸಣ್ಣ ತಪ್ಪು' ಮಾಡಿದ್ದೆ. ಅದನ್ನು ನೋಡಿ ಕೋಪ ಮಾಡ್ಕೊಂಡಿದಾಳೆ ಅಮ್ಮ ಎಂದ.

ಮಗನ ಮಾತು ಕೇಳಿ ಅಪ್ಪ 'ಹೌದಾ ಎಲ್ಲಿ ರಿಪೋರ್ಟ್ ಕಾರ್ಡ್ ನೋಡೋಣ’ ಎಂದ. ಗುಂಡ ಕೊಟ್ಟ ರಿಪೋರ್ಟ್ ಕಾರ್ಡ್ ನೋಡಿದ ಅಪ್ಪ 'ಏನೋ ಇದು. ಇದು ಸಣ್ಣ ತಪ್ಪಾ? ಎಲ್ಲ ವಿಷಯಗಳಲ್ಲೂ ಸೊನ್ನೆ ತಗೊಂಡಿದ್ದೀಯಲ್ಲೋ' ಅಂತ ಕೆಂಡಾಮಂಡಲವಾದ. 

'ಅಯ್ಯೋ ನೀವೂ ತಪ್ಪು ತಿಳಿದ್ರಿ ನೋಡಿ. ಸೊನ್ನೆ ತೊಗೊಳೋದು ಹೆಮ್ಮೆಯ ವಿಷಯ, ಸೊನ್ನೆ ಎನ್ನೋದು ನಮ್ಮ ಹೆಮ್ಮೆಯ ಆರ್ಯಭಟನ ಆವಿಷ್ಕಾರ. ಅಲ್ವೇ ದೊಡ್ಡಪ್ಪ' ಎಂದ ಗುಂಡ. ಅದನ್ನು ಕೇಳಿದ ದೊಡ್ಡಪ್ಪ, ಅಪ್ಪ, ಅಮ್ಮ ಎಲ್ಲರೂ ನಗುವಿನಲ್ಲಿ ಮುಳುಗಿದರು.

-ಸುಮನಾ

ಕಲೆ: ಗಣೇಶ ಆಚಾರ್ಯ

(ಎಪ್ರಿಲ್ ೨೦೨೫ರ ‘ಮಯೂರ’ ಸಂಗ್ರಹಿತ)