ಅಪ್ಪ ಎದ್ದಿರುತ್ತಾರೆ!
ನನ್ನ ನಾಲ್ಕು ವರ್ಷದ ಮೊಮ್ಮಗಳನ್ನು ತರ್ಕದಲ್ಲಿ ಸೋಲಿಸುವುದು ಅಸಾಧ್ಯ ಎಂದರೆ ಅತಿಶಯೋಕ್ತಿಯಲ್ಲ. ನನ್ನ ಹೇಳಿಕೆಗೆ ಪುರಾವೆ ಒದಗಿಸುವಂತಿದೆ ಈ ಪ್ರಸಂಗ-
ಮೊಮ್ಮಗಳು ಅವಳ ಅಮ್ಮನೊಡನೆ ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದಾಗ ನಡೆದ ಘಟನೆ ಇದು. ಅಂದು ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದರು. ನನ್ನೊಡನಿದ್ದ ಮೊಮ್ಮಗಳು ಮಾತ್ರ ನಿದ್ದೆ ಮಾಡಲು ನಿರಾಕರಿಸುತ್ತಿದ್ದಳು. 'ನಮ್ಮಿಬ್ಬರನ್ನು ಬಿಟ್ಟು ಪ್ರಪಂಚದಲ್ಲಿ ಎಲ್ಲರೂ ಮಲಗಿದ್ದಾರೆ. ನಾವೂ ಮಲಗಿ ನಿದ್ದೆ ಮಾಡೋಣ' ಎಂದು ಅವಳನ್ನು ಪುಸಲಾಯಿಸಲು ಪ್ರಯತ್ನಿಸಿದೆ. 'ಇಲ್ಲ, ಅಮೆರಿಕದಲ್ಲಿರುವ ಅಪ್ಪ ಎದ್ದಿರುತ್ತಾರೆ. ಅಲ್ಲೀಗ ಬೆಳಗ್ಗೆ' ಎನ್ನುವ ಮೂಲಕ ನನ್ನ ಹೇಳಿಕೆಯನ್ನು ಹುಸಿಯಾಗಿಸಿ ತಾನು ವಿಜಯಿಯಾದಳು.
-ಮಂಜುನಾಥ ಡಿ.ಎಸ್
***
ಬುದ್ಧಿವಂತ ಪತ್ನಿ
ಪತಿಪತ್ನಿಯರಾದ ಶೀನಿ ಮತ್ತು ಪಮ್ಮಿಯ ನಡುವೆ ಯಾವುದೋ ಕಾರಣಕ್ಕೆ ಜಗಳ ಶುರು ಆಗಿ ಇಬ್ಬರೂ ಮಾತು ನಿಲ್ಲಿಸಿದ್ದರು. ಪಮ್ಮಿಗೆ ತುಂಬಾ ಬೇಜಾರಾಗಿತ್ತು.
ಪಮ್ಮಿ: ರೀ... ನಾನು ಹತ್ತು ಎಣಿಸುವುದರೊಳಗೆ ನೀವು ಮಾತನಾಡದೇ ಹೋದರೆ ನಾನು ವಿಷ ಸೇವನೆ ಮಾಡುವೆ ಎಂದವಳೇ ಎಣಿಕೆ ಶುರು ಮಾಡಿ "ಒಂದು..' ಎಂದಳು. ಶೀನಿ ಮಾತನಾಡಲಿಲ್ಲ. ಪಮ್ಮಿ- ಎರಡು.. ಶೀನಿ ಮತ್ತೂ ಏನೊಂದೂ ಮಾತನಾಡಲಿಲ್ಲ ಪಮ್ಮಿ- 'ರೀ... ಹೇಳಿ ಪ್ಲೀಸ್ ಎಂದು ಆಳುವುದಕ್ಕೆ ಆರಂಭಿಸಿದಳು ಶೀನಿ, ಅವಳು ಅಳುವುದನ್ನು ಕಂಡವ 'ಏಯ್... ಮೊದಲು ಎಣಿಕೆ ಮಾಡು ಆಮೇಲೆ...' ಎಂದು ಹೇಳಿದ್ದೇ ತಡ, ಪಮ್ಮಿ ಚಪ್ಪಾಳೆ ತಟ್ಟುತ್ತಾ 'ಸದ್ಯ ನೀವು ಮಾತಾಡಿದ್ರಲ್ಲಾ ಸಾಕು... ಇನ್ನು ನಾನು ಸಾಯಲ್ಲ' ಎಂದು ಹೇಳಿ ಕುಣಿಯತೊಡಗಿದಳು.
-ಅರವಿಂದ ಜಿ. ಜೋಷಿ
***
ಬಸ್ ಹೊಂಟಾತಿ!
ನಾನಾಗ ಕಲಬುರಗಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಸಮಯ ನಾನು ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿದ್ದೆ. ಸಿಟಿಗೆ ಹೋಗಲು ಸಿಟಿ ಬಸ್ ಸ್ಟ್ಯಾಂಡ್ನಲ್ಲಿ ಬಸ್ಗಾಗಿ ಕಾಯುತ್ತಿದ್ದೆ. ಬಹಳ ಹೊತ್ತಾದರೂ ಬಸ್ ಬರಲಿಲ್ಲ. ಜೊತೆಗಿದ್ದವರನ್ನು ಕೇಳಲಾಗಿ ಅವರು 'ಬಸ್ ಹೊಂಟಾತ' ಎಂದು ಹೇಳಿದರು.
ಬಹಳ ಹೊತ್ತಿನಿಂದ ಇಲ್ಲೇ ಕಾಯುತ್ತಾ ಇದ್ದೇನೆ. ಯಾವಾಗ ಬಸ್ ಹೋಯಿತು ನಾನು ನೋಡಲೇ ಇಲ್ಲವಲ್ಲ ಎಂದುಕೊಂಡು ಬಸ್ ಯಾವಾಗ ಹೋಯಿತು ಎಂದಾಗ, ಅವರು 'ಅಲ್ಲಿ ಬಸ್ ಹೊಂಟಾತಲಿ' ಎಂದು ನಮ್ಮ ಕಡೆಗೆ ಬಸ್ ಅನ್ನು ತೋರಿಸಿದರು.
ಬಳ್ಳಾರಿ ಜಿಲ್ಲೆಯವನಾದ ನನಗೆ ಬಸ್ ಬರುತ್ತಿರುವುದಕ್ಕೆ ಹೊಂಟಾತಲ್ರೀ ಎಂದು ಹೇಳುತ್ತಾರಲ್ಲ ಎಂದು ತಿಳಿದು ನಗುಬಂತು. ಹಾಗೇ ಮಳೆ ಬರುವುದಕ್ಕೂ ಇಲ್ಲಿ ಮಳೆ ಹೊಂಟಾತಲ್ರೀ ಎನ್ನುತ್ತಾರೆಂದು ನಂತರ ತಿಳಿಯಿತು..
-ಬಿ. ಬಸವರಾಜ
***
ರಾತ್ರಿಯೆಲ್ಲ ನಿದ್ದೆ ಬರಲ್ಲ
ಪತಿ ಆಕಸ್ಮಿಕ ಅಪಘಾತದಲ್ಲಿ ನಿಧನರಾದಾಗ, ಆತನ ಪತ್ತಿ ನೂರು ಜನರಿಗೆ ಕೇಳುವಂತೆ ಜೋರಾಗಿ ಅಳುತ್ತಿದ್ದಳು. ಆಗ ಅಕ್ಕಪಕ್ಕದ ಜನರೆಲ್ಲ ಬಂದು 'ಏನಮ್ಮ, ಹೀಗೆ ಜೋರಾಗಿ ಅಳುತ್ತಾ ಇದ್ದೀಯಾ ಏನಾಗಿದೆ?' ಎಂದು ಕೇಳಿದಾಗ, ಪತ್ತಿ 'ನನ್ನ ಪತಿ ಅಪಘಾತದಲ್ಲಿ ನಿಧನರಾಗಿದ್ದಾರೆ. ಅದಕ್ಕೆ ಅಳ್ತಾ ಇದ್ದೇನೆ' ಎಂದಳು.
ಆಗ ಅಕ್ಕಪಕ್ಕದವರು 'ಅಲ್ಲಮ್ಮ. ನಿನಗೆ ಬುದ್ದಿ ಇದೆಯಾ ವರ್ಷದ ೩೬೫ ದಿನವೂ ಗಂಡನೊಡನೆ ಬೆಳಗ್ಗೆ ರಾತ್ರಿ ಜಗಳ ಆಡ್ತಾಯಿದ್ದೆಯಲ್ಲ ಅದು ಏರಿಯಾದ ಜನರಿಗೆಲ್ಲ ಗೊತ್ತಿದೆ. ಈಗ ಅಳ್ತಾ ಇದ್ದೀಯಾ' ಎಂದರು.
ಪತ್ನಿ. 'ಗಂಡನ ಜೊತೆ ದಿನವೂ ಜಗಳವಾಡದಿದ್ದರೆ ನನಗೆ ನಿದ್ದೆ ಇಲ್ಲ. ಮನಃಶಾಂತಿ ಇಲ್ಲ. ತವರು ಮನೆಗೆ ಬೆಳಗ್ಗೆ ಹೋದರೂ ತಪ್ಪದೇ ಸಂಜೆ ವೇಳಗೆ ಮನೆಗೆ ಜಗಳವಾಡಲು ಬರ್ತಾ ಇದ್ದೆ. ಈಗ ನಾನು ಯಾರ ಜೊತೆ ಜಗಳ ಆಡಲಿ. ಜಗಳವಾಡದಿದ್ದರೆ ನಿದ್ದೆ ಬರಲ್ಲ. ಅದಕ್ಕೆ ನಾನು ಅಳ್ತಾ ಇದ್ದೇನೆ' ಎಂದಾಗ ಈ ಮಾತನ್ನು ಕೇಳಿದ ಅಕ್ಕಪಕ್ಕದವರು ಆಶ್ಚರ್ಯಪಟ್ಟರು.
-ವೇಣುಗೋಪಾಲ್ ಸಿ.
ಕಲೆ: ಗಣೇಶ ಆಚಾರ್ಯ
(‘ಮಯೂರ’ ಎಪ್ರಿಲ್ ೨೦೨೫ರ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!