ನಾನೂ ಅಷ್ಟೇ!
ಮದುವೆಯಾದ ಮರುದಿನವೇ ಗಂಡ-ಹೆಂಡತಿ ಹೊಸ ಕಾರಿನಲ್ಲಿ ಪ್ರಯಾಣಕ್ಕೆ ಹೊರಟಿದ್ದರು. ಮಾತುಗಳ ಮಧ್ಯೆ ಗಂಡ, ಹೆಂಡತಿಗೆ 'ನಿನಗೆ ಅಡುಗೆ ಮಾಡಲು ಬರುತ್ತಾ' ಎಂದು ಕೇಳಿದ.
ಆಗ ಹೆಂಡತಿ, 'ಬರಲ್ಲ. ಆದರೆ, ಯುಟ್ಯೂಬ್ ನೋಡಿಕೊಂಡು ಅಡುಗೆ ಮಾಡುತ್ತೇನೆ' ಎಂದಳು.
ಆಗ ಗಂಡ 'ನಾನೂ ಅಷ್ಟೇ, ನನಗೂ ಕಾರ್ ಡೈವಿಂಗ್ ಬರಲ್ಲ. ಆದರೆ, ಯೂ ಟ್ಯೂಬ್ ನೋಡಿಕೊಂಡೇ ಡೈವ್ ಮಾಡ್ತಾ ಇರೋದು' ಎಂದ.
ಗಂಡನ ಮಾತು ಕೇಳಿ ಸುಸ್ತಾಗುವ ಸರದಿ ಹೆಂಡತಿಯದ್ದಾಗಿತ್ತು.
-ವಿ. ಹೇಮಂತ ಕುಮಾರ
***
ಗುಂಡನ ಲೆಕ್ಕಾಚಾರ
ಕಲಿಕೆಯಲ್ಲಿ ಹಿಂದುಳಿದಿದ್ದ ಗುಂಡನಿಗೆ ಟೀಚರ್ ಗಣಿತದ ಲೆಕ್ಕ ಕಲಿಸಿದ್ದರು. ಅದನ್ನು ಪರೀಕ್ಷೆ ಮಾಡಲೆಂದೇ 'ಗುಂಡಾ, ಎರಡರಲ್ಲಿ ಎರಡು ಕಳೆದರೆ ಎಷ್ಟು' ಎಂದು ಪ್ರಶ್ನಿಸಿದರು. ಆಗ ಗುಂಡ 'ನಾಲ್ಕು' ಎಂದು ಉತ್ತರಿಸಿದ ಆತನ ಉತ್ತರ ಕೇಳಿ ಸಿಟ್ಟಿಗೆದ್ದ ಟೀಚರ್ ತಾಳ್ಮೆಯಿಂದ ಮತ್ತೊಮ್ಮೆ 'ಸರಿಯಾಗಿ ಕೇಳಿಸಿಕೋ... ನಿನ್ನ ಹತ್ತಿರ ಎರಡು ಚಾಕಲೇಟ್ ಇದೆ. ನೀನು ಎರಡೂ ಚಾಕಲೇಟ್ ತಿಂದು ಬಿಡ್ತೀಯಾ. ಆಗ ನಿನ್ನ ಬಳಿ ಏನು ಉಳಿಯಿತು? ಎಂದು ಮರುಪ್ರಶ್ನಿಸಿದರು.
ಆಗ ಗುಂಡಾ ಅತ್ಮವಿಶ್ವಾಸದಿಂದ ‘ಚಾಕಲೇಟ್ ಪೇಪರ್’ ಎಂದು ಉತ್ತರಿಸಿದ. ಇದನ್ನು ಕೇಳಿ ಟೇಟರ್ ಸುಸ್ತು!
-ಕೆ.ವಿ.ರಾಜಲಕ್ಷ್ಮಿ
***
ಭಾವ ಚೆನ್ನಾಗಿದ್ದರೆ...
ವೇದಿಕೆಯ ಮೇಲೆ ಭಾವಪರವಶನಾಗಿ ಭಾಷಣ ಮಾಡುತ್ತಿದ್ದ ನಂಜುಂಡಯ್ಯನವರು, 'ನಮ್ಮೆಲ್ಲಾ ಕಷ್ಟ-ಕಾರ್ಪಣ್ಯಗಳಿಗೆ ನಮ್ಮ ನಮ್ಮ ಮನಸ್ಸೇ ಕಾರಣ. 'ಯದ್ಭಾವಂ ತದ್ಭವತಿ' ಅಂದರೆ ನಮ್ಮ ಮನಸ್ಸಿನ ಭಾವನೆಗಳು ಹೇಗೆ ಇರುತ್ತವೆಯೋ ಹಾಗೇ ನಮ್ಮ ದಿನಚರಿ ಇರುತ್ತದೆ. ನಮ್ಮ ದಿನಚರಿ ಹೇಗೆ ಇರುತ್ತದೆಯೋ ಅದರ ಸುತ್ತ ಆರೋಗ್ಯ, ಐಶ್ವರ್ಯ. ಸಂಬಂಧಗಳು ಗಿರಕಿ ಹೊಡೆಯುತ್ತ ಇರುತ್ತವೆ. ಹಾಗಾಗಿ ಭಾವ ಚೆನ್ನಾಗಿರಬೇಕು ಏನಂತೀರಿ' ಅಂತ ಸಭಿಕರತ್ತ ಪ್ರಶ್ನಾರ್ಥಕ ಭಾವದ ನೋಟ ಬೀರಿದರು. ಆಗ ತಕ್ಷಣವೇ ಎದ್ದು ನಿಂತ ಸಭಿಕರೊಬ್ಬರು 'ಹೌದು ಸ್ವಾಮಿ. ಭಾವ ಚೆನ್ನಾಗಿದ್ದರೆ ಅಕ್ಕನೂ ಚೆನ್ನಾಗಿ ಇರ್ತಾಳೆ' ಎಂದಾಗ ಸಭಿಕರೆಲ್ಲರೂ ನಗೆಗಡಲಲ್ಲಿ ಮುಳುಗಿದರು.
-ಮಲ್ಲಿಕಾರ್ಜುನ ಸುರಧೇನುಪುರ
***
ಇಷ್ಟು ವರ್ಷವಾದರೂ ಅರ್ಥವಾಗಲಿಲ್ಲ
ಸೌಂದರ್ಯ ಸ್ಪರ್ಧೆಯೊಂದರಲ್ಲಿ ವಿಜೇತಳಾಗಿದ್ದ ಮೇನಕಾ ಅವರ ಬಗ್ಗೆ ಪ್ರಕಟವಾಗಿದ್ದ ಸಂದರ್ಶನ ಓದುತ್ತಿದ್ದ ಗೌತಮ, ಅಲ್ಲೇ ಇದ್ದ ಹೆಂಡತಿ ಲಲಿತಾ ಕಡೆ 'ನೋಡಿ 'ನೋಡೇ. ಈಕೆ ಹೇಳಿದ್ದಾಳೆ ಒಮ್ಮೊಮ್ಮೆ ಸೌಂದರ್ಯವತಿಯರಿಗೆ ಮೂರ್ಖ ಗಂಡ ಸಿಗುತ್ತಾನೆ' ಎಂದ.
ಆಗ ತಕ್ಷಣವೇ ಲಲಿತಾ. ಗಂಡನ ಕಡೆಗೆ ತಿರುಗಿ 'ಬಿಡೀ ಆಕೆಯೇನು ಹೇಳಬೇಕು. ಇಷ್ಟು ವರ್ಷವಾದರೂ ನೀವು ನನ್ನನ್ನು ಅರ್ಧ ಮಾಡಿಕೊಳ್ಳಲಿಲ್ಲವಲ್ಲ. ನಿಮಗೇನು ಹೇಳಬೇಕು ಅಂತಲೇ ತಿಳಿಯುವುದಿಲ್ಲ' ಎಂದಳು.
ಹೆಂಡತಿಯ ಮಾತು ಕೇಳಿದ ಗೌತಮ ಮರು ಮಾತನಾಡದೇ ಸುಮ್ಮನಾದ.
-ಶಂಕರೇಗೌಡ ತುಂಬಕೆರೆ
ಕಲೆ: ಗಣೇಶ್ ಆಚಾರ್ಯ
(‘ಮಯೂರ’ ಮೇ ೨೦೨೫ರಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!