ಮಂಗ ಇಳಿ!
ಇತ್ತೀಚೆಗೆ ನಾವು ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ನಡೆದ ಒಂದು ತಮಾಷೆ ಘಟನೆ. ಕಾಶ್ಮೀರದಲ್ಲಿ ಬೇರೆ ಬೇರೆ ಸ್ಥಳಗಳನ್ನು ನೋಡಲು ನಾವು ಒಂದು ಮಿನಿ ಬಸ್ಸಿನಲ್ಲಿ ಹೋಗಿದ್ದೆವು. ಪ್ರತಿಯೊಂದು ಸ್ಥಳದಲ್ಲೂ ಇಳಿದು ನೋಡಿ ಹಿಂತಿರುಗಿ ಬರುತ್ತಿದ್ದೆವು. ಒಮ್ಮೆ ನನ್ನ ಮೊಮ್ಮಗಳು ನಿತ್ಯಾ. ಬಸ್ಸಿನಿಂದ ಇಳಿಯದೇ ಎಲ್ಲೋ ನೋಡುತ್ತಾ ಕುಳಿತಿದ್ದಳು. ನಾನು ಅವಳಿಗೆ 'ಏಯ್ ಮಂಗ ಇಳಿ!' ಎಂದು ಗದರಿಸಿ ಹೇಳಿದೆ.
ಮುಂದಿನ ಸ್ಥಳದಲ್ಲಿ ಬಸ್ಸು ನಿಂತಾಗ ನಮ್ಮ ಬಸ್ಸಿನ ಡೈವರ್ ನನ್ನ ಮೊಮ್ಮಗಳಿಗೆ 'ಏಯ್ ಮಂಗ ಇಲಿ! ಎಂದು ಹೇಳಿದ. ಅದನ್ನು ಕೇಳಿದ ನಾವೆಲ್ಲರೂ ಬಿದ್ದುಬಿದ್ದು ನಕ್ಕೆವು. ಅದನ್ನು ನೋಡಿ ಡೈವರ್ ಗಾಬರಿಯಾಗಿ ಯಾಕೆ ಎಂದು ಕೇಳಿದ. ಕನ್ನಡ ಭಾಷೆ ಗೊತ್ತಿಲ್ಲದ ಆ ಕಾಶ್ಮೀರದ ಡೈವರ್ ಆಕೆಯ ಹೆಸರು 'ಮಂಗ' ಎಂದುಕೊಂಡಿದ್ದ. ಆಗ ನನ್ನ ಅಳಿಯ ಆಕೆಯ ಹೆಸರು ಮಂಗ ಅಲ್ಲ, ಕನ್ನಡದಲ್ಲಿ ಮಂಗ ಅಂದರೆ ಬಂದರ್ ಎಂದು ಅರ್ಧ ಎಂದು ಡೈವರ್ಗೆ ಹಿಂದಿಯಲ್ಲಿ ತಿಳಿಸಿ ಹೇಳಿದಾಗ ಆತನ ಜೊತೆ ಮತ್ತೊಮ್ಮೆ ನಗುವ ಸರದಿ ನಮ್ಮದಾಗಿತ್ತು.
-ವಾಣಿಶ್ರೀ ಸಾಹುಕಾರ್
***
ತೊಟ್ಟಿಲು ಇಲ್ಲದ ಆಸ್ಪತ್ರೆ
ಪಕ್ಕದ ಮನೆಯ ಗೆಳತಿಯ ಅಜ್ಜಿ ತಮ್ಮ ಮೊಮ್ಮಗಳನ್ನು ನೋಡಲು ಹತ್ತಿರದ ಹಳ್ಳಿಯಿಂದ ಅವರ ಮನೆಗೆ ಬಂದಿದ್ದರು. ವಿಷಯ ತಿಳಿದ ನಾನು ಅಜ್ಜಿಯನ್ನು ಮಾತನಾಡಿಸಿ ಬರಲು ಒಂದು ಸಂಜೆ ಅವರ ಮನೆಗೆ ಹೋಗಿದ್ದೆ. ಅದೇ ಸಮಯಕ್ಕೆ ಪೇಪರ್ ಓದುತ್ತಿದ್ದ ನನ್ನ ಗೆಳತಿ ತನ್ನ ಅಜ್ಜಿಗೆ ಅಜ್ಜಿ... ನಿಮ್ಮ ಹಳ್ಳಿ ಗೌಡರ ಮಗನಿಗೆ ಗಂಡು ಮಗು ಆಯ್ತಂತೆ! ಪೇಪರ್ ನಲ್ಲಿ ಹಾಕಿದ್ದಾರೆ' ಎಂದು ಹೇಳಿದಳು.
ಇದನ್ನು ಕೇಳಿದ ಅಜ್ಜಿ ಖುಷಿ ಆಗುವ ಬದಲು ಗಾಬರಿಯಿಂದ, 'ಅಯ್ಯೋ ದೇವರೇ, ಅದ್ಯಾವ ಬಡತನ ಬಂತು ನಮ್ಮ ಗೌಡರಿಗೆ? ಹೋಗಿ ಹೋಗಿ ತೊಟ್ಟಿಲು ಇಲ್ಲದ ಆಸ್ಪತ್ರೆಗೆ ಸೊಸೆಯನ್ನು ಸೇರಿಸಿ. ಈಗ ನೋಡಿದರೆ ಮಗುವನ್ನು ಪೇಪರ್ ಗೆ ಹಾಕಿದ್ದಾರೆ' ಎಂದು ಬೊಬ್ಬೆ ಹಾಕಿದರು. ಆಗ ನನ್ನ ಗೆಳತಿ ತಾನು ವಿಷಯ ತಿಳಿಸಿದ ರೀತಿ ಅಪಾರ್ಥಕ್ಕೆ ಅವಕಾಶ ಮಾಡಿಕೊಟ್ಟ ಅರಿವಾಗಿ ಕೂಡಲೇ, 'ಅಲ್ಲ' ಅಜ್ಜಿ, ಗಂಡು ಮಗು ಹುಟ್ಟಿದ ವಿಷಯ ಪೇಪರ್ನಲ್ಲಿ ಪ್ರಕಟಿಸಿದ್ದಾರೆ. ಮಗುವನ್ನು ಅಲ್ಲಾ' ಎಂದಾಗ ಅಜ್ಜಿ ನಿಟ್ಟುಸಿರುಬಿಟ್ಟರು.
-ಜಯಮಾಲಾ ಪೈ
***
ಯಾರು ಜಿಪುಣ?
ಅಂದು ಶೀನಿ ಕಚೇರಿಯಿಂದ ಬಂದವನೇ ತುಂಬಾ ತಲೆನೋವು ಎಂದು ಮಲಗಿದ್ದ. ಮಲಗಿದರೂ ತಲೆನೋವು ಕಡಿಮೆ ಆಗದಾಗ, ಹೊರಗಡೆ ಆಡುತ್ತಿದ್ದ ತನ್ನ ಏಳು ವರ್ಷದ ಮಗ ಗೋಪಿಯನ್ನು ಕೂಗಿ 'ಗೋಪೀ.. ಹೋಗಿ ಪಕ್ಕದ ಮನೆ ಅಂಕಲ್ ಹತ್ರ ಮೆಂಥೋ ಪ್ಲಸ್ ಇಸ್ಕೊಂಡು ಬಾರೋ' ಎಂದ.
'ಆಯ್ತು ಅಪ್ಪ' ಎನ್ನುತ್ತ ಹೋದ ಗೋಪಿ ಎರಡೇ ನಿಮಿಷದಲ್ಲಿ ಬಂದವ, ' ಅಪ್ಪಾ ಅಂಕಲ್ ಹತ್ರ ಅದು 'ಇಲ್ವಂತೆ' ಎಂದ. ಆಗ ಶೀನಿ 'ಹೋಗ್ಲಿ ಬಿಡು ಆ ಜಿಪುಣ ಏನು ಕೊಟ್ಟಾನು.. ಒಂದು ಕೆಲಸ ಮಾಡು ಅದು ನನ್ನ ಬೀರುವಿನ ಮೇಲ್ಗಡೆ ಬಲಭಾಗದಲ್ಲಿ ಇದೆ ತಂದುಕೊಡು' ಎಂದ. ಗೋಪಿ ಹೋಗಿ ಅದನ್ನು ತಂದು ಕೊಟ್ಟು, 'ಇವರಲ್ಲಿ ಯಾರು ಜಿಪುಣರು?' ಎಂದು ತನ್ನಷ್ಟಕ್ಕೆ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾ ಮತ್ತೆ ಆಟಕ್ಕೆ ಹೋದ.
-ಅರವಿಂದ ಜಿ. ಜೋಷಿ
***
ಜಸ್ಟ್ ಬಿಗ್ ಬಾಸ್ಕೆಟ್
'ಆಯ್ಕೆನೋ ಗುಂಡಾ ಎಷ್ಟು ಹೊತ್ತು? ಇನ್ನೂ ರೆಡಿಯಾಗೋಕೆ ಟೈಂ ಆಯ್ತು ಅಪ್ಪ, ಅಣ್ಣ, ತಂಗಿ ಎಲ್ಲಾ ಕಾಯ್ತಾ ಇದ್ದಾರೆ' ಅಂದ್ರು ಅಮ್ಮ.
'ಆಯ್ತಾಯ್ತು ಜಸ್ಟ್ ಬಿಗ್ ಬಾಸ್ಕೆಟ್ ಅಷ್ಟೇ' ಅಂದ ಗುಂಡ. 'ಅದೇನೋ ಹಾಗಂದ್ರೇ.. ನಾನು ಯಾವ ಬಿಗ್ ಬಾಸ್ಕೆಟ್ಟೂ ಆರ್ಡರ್ ಕೊಟ್ಟಿಲ್ಲವಲ್ಲ. ಈಗ ಹೊರಡಬೇಕು ಅಷ್ಟೇ' ಅಂದ್ರು ಅಮ್ಮ. ಆಗ ಗುಂಡಾ 'ಅಯ್ಯೋ ಅಮ್ಮ, ಅಷ್ಟೂ ಗೊತ್ತಾಗಲ್ಲಾ ಜಸ್ಟ್ ಬಿಗ್ ಬಾಸ್ಕೆಟ್ ಅಂದ್ರೆ ಜಸ್ಟ್ ಹತ್ತು ನಿಮಿಷ' ಅಂತ ಅರ್ಧ ಅಷ್ಟೇ ಅಂದ. ಟಿ.ವಿಯಲ್ಲಿ ನೋಡು, ಅದೇ ಜಾಹೀರಾತು. ಹತ್ತು ನಿಮಿಷಕ್ಕೆ ಹೊಸ ಹೆಸರೇ 'ಬಿಗ್ ಬಾಸ್ಕೆಟ್' ಅಂತ ಬರ್ತಿರುತ್ತೆ ಎಂದು ಗುಂಡಾ ಅಂದಾಗ, 'ವಾವ್ ಗುಂಡಾ. ಚೆನ್ನಾಗಿ ಹೇಳ್ದೆ ನೋಡು' ಅಂತ ಅಮ್ಮ ನಕ್ಕರು.
-ಸುಮನಾ
***
ಕಲೆ: ಗಣೇಶ ಆಚಾರ್ಯ
(‘ಮಯೂರ’ ಮೇ ೨೦೨೫ರ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!