ಅವ್ರನ್ನೂ ಕರ್ಕೊಂಡು ತುಂಬ್ರೀ...!
ಬಿಜಾಪುರದ ನಗರದಲ್ಲಿ ಕೆಲಸ ಮಾಡುತ್ತಿದ್ದ ಶೀನಿಯ ಮನೆಯ ಬೀದಿಯಲ್ಲೇ ಆತನ ಸಹಾಯಕನ ಮನೆ ಇತ್ತು. ಅದೊಂದು ದಿನ ಶೀನಿಯ ಕಚೇರಿ ಜೀಪು ರಿಪೇರಿಗೆ ಕೊಟ್ಟಿದ್ದರಿಂದ ಮಧ್ಯಾಹ್ನದ ಊಟ ಮಾಡಿ ಬರಲು ತನಗೆ ಡ್ರಾಪ್ ಕೊಡುವಂತೆ ಶೀನಿ. ಸಹಾಯಕನಿಗೆ ಕೇಳಿದ್ದ. ಅದರಂತೆ ಆತ ತನ್ನ ಸ್ಕೂಟರ್ ಮೇಲೆ ಶೀನಿಯನ್ನು ಮನೆಗೆ ಬಿಟ್ಟು - ಬಂದಿದ್ದ.
ಅರ್ಧ ಗಂಟೆ ನಂತರ ಮತ್ತೆ ಶೀನಿ ಸಹಾಯಕನ ” ಮನೆಗೆ ಬಂದಾಗ ಆತ, 'ಒಂದೈದು ಮಿನಿಟ್ ಕೂತೀರೀ ಈಗ ಬಂದೆ' ಎಂದು ಒಳಗೆ ಹೊಗಿದ್ದ. ಆಗ ಆತನ ಅರ್ಧಾಂಗಿ ರೂಮಿನಿಂದಲೇ ತನ್ನ ಪತಿಗೆ, ‘ರೀ.. ನಳಾ ಬಂದಾವ ನೀರು ತುಂಬಿ ಇಟ್ಟು ಹೋಗ್ರಿ.. ನನಗ ಯಾಕೋ ಸೊಂಟ ನೋಯ್ತಾ ಇದೆ' ಎಂದು ಹೇಳುತ್ತಿರುವುದು, ಅದಕ್ಕೆ ಪ್ರತಿಯಾಗಿ ಆಕೆಯ ಪತಿ. 'ಏಯ್ ಸುಮ್ಮಿರು ಅಲ್ಲಿ ನಮ್ಮ ಸಾಹೇಬ್ರು ಬಂದ ಕೂತಾರ' ಎಂದು ಹೇಳಿದಾಗ ಆಕೆ, ಅದೇ ಸ್ವರದಲ್ಲಿ 'ಅದಕ್ಕೇನಂತ ಅವ್ರನ್ನೂ ಕರ್ಕೊಂಡು ತುಂಬ್ರೀ..' ಎನ್ನುವ ಮಾತು ಶೀನಿ ಕಿವಿ ಮೇಲೆ ಬೀಳುತ್ತಿದ್ದಂತೆ ಸದ್ದಿಲ್ಲದೇ ಆ ಬಿಸಿಲಲ್ಲಿ ಕಚೇರಿಗೆ ನಡೆದು ಹೋಗಿದ್ದ.
-ಅರವಿಂದ ಜಿ. ಜೋಷಿ
***
ಅಪ್ರಿಯ ಹೋಲಿಕೆ!
ಸೊಸೆ ರೋದಿಸುತ್ತಲೇ ಮನೆಗೆ ಬಂದಳು.
ಗಾಬರಿಗೊಂಡ ಅತ್ತೆ ಕಾರಣ ಕೇಳಿದಳು.
'ಯಾಕಮ್ಮಾ, ಅಳ್ತಿದ್ದೀ... ಏನಾಯ್ತು?'
'ಅತ್ತೆ ನಾನು ತಾಟಕೀ ತರಹ ಇದ್ದೀನಾ?
'ಛೇ! ಯಾರು ಹೇಳಿದ್ದು?'
'ಮತ್ತೆ ನನ್ನ ಕಣ್ಣು ಕಪ್ಪೆಯಂತೆ ಹೊರಗೆ ಚಾಚಿದ್ಯಾ?'
'ನನ್ನ ಮೂಗು ದೊಣ್ಣೆ ಮೆಣಸಿನಕಾಯಿ ತರಹ ಗುಂಡಾಗಿದ್ಯಾ?'
'ಇಲ್ವೇ ಇಲ್ಲ ...'
'ಮತ್ತೆ ನಾ ಏನಾದ್ರೂ ಎಮ್ಮೆಯಂತೆ ಕಪ್ಪಗೆ, ದಪ್ಪ ಇದ್ದೀನಾ?'
'ಇಲ್ಲಮ್ಮಾ, ಯಾರು ಹಾಗಂದದ್ದು?'
'ಮತ್ಯಾಕೆ ನಮ್ಮ ಓಣಿಯವರೆಲ್ಲಾ
ಹಾಗೇಳೋದು... ನೀನು ನಿಮ್ಮತ್ತೆ ಧರಾನೇ ಇದ್ದೀ ಅಂತ...!' ಇದೀಗ ಅತ್ತೆ ಮೂರ್ಛೆ ಹೋಗಿದ್ದಾಳೆ!
-ಲತಾ ಹೆಗಡೆ
***
ಲಾಂಗ್ ಸ್ಟಾಪ್ ಗಾಡಿ!
ಹೀಗೆ ಮೊನ್ನೆ ನಮ್ಮ ಹಳ್ಳಿಯಲ್ಲೊಂದು ಸಮಾರಂಭಕ್ಕೆ ಹೋಗಿದ್ದಾಗ ನೆಂಟರಿಷ್ಟರೆಲ್ಲ ಒಬ್ಬೊಬ್ಬರಾಗಿ ಬರುತ್ತಿದ್ದರು. ಮೊದಲು ಬಂದವರು ಆಗಾಗ ಬರುತ್ತಿದ್ದವರನ್ನು, 'ಈಗ ಬಂದಿರಾ? ಹೇಗೆ ಬಂದಿರಿ, ತಿಂಡಿ ತಿನ್ನಿ,’ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಹೀಗಿರುವಾಗ ಬೆಂಗಳೂರಿನಿಂದ ಬಂದವರೊಬ್ಬರನ್ನು. 'ಈಗ ಬಂದಿರಾ, ಮಗಳು ಬರಲಿಲ್ಲವಾ' ಎಂದು ಕೇಳಿದರು.
ಆಗ ಅವರು 'ಅಯ್ಯೋ ನಾನು ಚನ್ನರಾಯಪಟ್ಟಣದಲ್ಲಿ ಇಳಿದು ಮಗಳನ್ನ ಕರೆದುಕೊಂಡು ಬರೋಣ ಅಂತಿದ್ದೆ. ನೋಡಿದ್ರೆ ನಾನು ಹತ್ತಿದ್ದು 'ಲಾಂಗ್ ಸ್ಟಾಪ್' ಗಾಡಿ. ಚನ್ನರಾಯಪಟ್ಟಣದಲ್ಲಿ ನಿಲ್ಲಿಸಲಿಲ್ಲ. ಲಾಂಗ್ ಸ್ಟಾವಪ್ ಗಾಡಿ ತಿಂಡಿಗೆ ಯಾವ್ದೋ ಹೊಟ್ಲು ಮುಂದೆ ನಿಲ್ಲಿದ್ ಬುಟ್ರೆ ಎಲ್ಲೂ ನಿಲ್ಲಿಸ್ಲಿಲ್ಲ. ಯಾಕಂದ್ರೆ ಅದು 'ಲಾಂಗ್ ಸ್ಟಾಪ್ ಗಾಡಿ ಅಂತಲ್ಲ' ಎಂದು ಅವರು ಮತ್ತೆ ಮತ್ತೆ ಹೇಳುವಾಗ ನಾವೂ ಕೂಡ ದನಿಗೂಡಿಸಿ,
'ಹುಂ ಆಂಟಿ ಲಾಂಗ್ ಸ್ಟಾಪ್ ಗಾಡಿನ ಎಲ್ಲೂ ನಿಲ್ಸಲಾ ಬಿಡಿ!' ಎಂದೆವು. ಬಂದ ನಗುವನ್ನು ತಡೆಯುತ್ತಾ. 'ನಾನ್ ಸ್ಟಾಪ್' ಗಾಡಿ ಅವರ ಬಾಯಲ್ಲಿ 'ಲಾಂಗ್ ಸ್ಟಾಪ್' ಆಗಿತ್ತು.
-ರಾಜೇಶ್ವರಿ ಹುಲ್ಲೇನಹಳ್ಳಿ
***
ಪ್ರಬಂಧ ನಿಮ್ಮದೇ
ಎಮ್ಮೆ ಮೇಲಿನ ಪ್ರಬಂಧಕ್ಕೆ ಪಕ್ಕದ ಮನೆ ಹುಡುಗನಿಗೆ ಮೊದಲ ಬಹುಮಾನ ದೊರೆಯಿತು. ತಿಮ್ಮನ ಮಗನಿಗೆ ಏನೂ ಸಿಗಲಿಲ್ಲ.
ತಿಮ್ಮ ಮಗನನ್ನು ತರಾಟೆಗೆ ತೆಗೆದುಕೊಂಡು. 'ಈಗಲಾದರೂ ಅರ್ಥವಾಯಿತಾ? ಹಿರಿಯರ ಮಾರ್ಗದರ್ಶನ ಬೇಕು ಅನ್ನುವುದು ಇದಕ್ಕೆ. ನನ್ನ ಬಳಿ ಕೇಳಿಕೊಂಡು ಪ್ರಬಂಧ ಬರೆದಿದ್ದರೆ ನಿನಗೇ ಮೊದಲ ಬಹುಮಾನ ಬರುತ್ತಿತ್ತು' ಎಂದು ಕಿವಿ ಹಿಂಡಿದ. ಆಗ ಮಗ 'ಇಲ್ಲಪ್ಪ, ನಾನು ನಿಮ್ಮ ಹಳೆಯ ಪ್ರಬಂಧ ನೋಡಿಯೇ ಬರೆದದ್ದು. ನಾನು ಸ್ವಂತ ಬರೆದ ಪ್ರಬಂಧವನ್ನು ಪಕ್ಕದ ಮನೆ ಹುಡುಗನಿಗೆ ಕೊಟ್ಟಿದ್ದೆ' ಎಂದಾಗ, ತಿಮ್ಮನಿಗೆ ಏನು ಹೇಳಬೇಕೋ ತಿಳಿಯದಾಯಿತು.
-ಪ. ರಾಮಕೃಷ್ಣ ಶಾಸ್ತ್ರಿ
(ಜುಲೈ ೨೦೨೬ರ ‘ ಮಯೂರ’ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!