ಗಂಗಾ ಪಾನದ ಪ್ರಸಂಗ
ನಮ್ಮ ಪರಿಚಿತರೊಬ್ಬರ ಮನೆಗೆ ಸೀಮಂತಕ್ಕೆ ಹೋಗಿದ್ದೆವು. ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಗರ್ಭಿಣಿಗೆ ಉಡುಗೊರೆ ನೀಡಿ, ನಾನು ಮತ್ತು ನನ್ನ ಬೀಗಿತ್ತಿ ಇಬ್ಬರೂ ನೀರು ಕುಡಿಯಬೇಕೆಂದು ಅವರ ಅಡುಗೆ ಮನೆಗೆ ಹೋದೆವು. ಅಲ್ಲಿ ನಮಗೆ ಶೆಲ್ಫ್ ಮೇಲೆ ಬಿಸ್ ಲೇರಿ ಬಾಟಲಿಯಲ್ಲಿ, ಸ್ವಲ್ಪ ಖರ್ಚಾಗಿ ಉಳಿದ ನೀರು ಕಂಡಿತು. ಸರಿ, ಅಲ್ಲೇ ಇದ್ದ ನೆಂಟರ ವಾರಗಿತ್ತಿಗೆ 'ನಮಗೆ ಕುಡಿಯಲು ನೀರು ಬೇಕು' ಎಂದಾಗ ಆಕೆ ಆ ಬಾಟಲಿಯಲ್ಲಿದ್ದ ನೀರನ್ನು ಅಲ್ಲೇ ಇಟ್ಟಿದ್ದ ವೇಪರ್ ಲೋಟಕ್ಕೆ ಬಗ್ಗಿಸಿ ಕೊಟ್ಟರು.
ಸಿಹಿಯಾದ ಆ ನೀರನ್ನು ಕುಡಿದು ಬಾಯಾರಿಕೆ ತಣಿಸಿಕೊಂಡು ಆಕೆಗೆ ಧನ್ಯವಾದ ತಿಳಿಸಿ, ಆಚೆಗೆ ಬರಬೇಕು. ಅಷ್ಟರಲ್ಲಿ ಅಲ್ಲಿಗೆ ಮನೆಯ ಒಡತಿ ಬಂದರು. 'ಅಯ್ಯೋ, ಆ ಬಿಸ್ಲೇರಿ ಬಾಟಲಿಯಲ್ಲಿದ್ದ ನೀರು ಕುಡಿದ್ರಾ, ಅದು ಗಂಗೆ ನೀರು ನಾನೇ ಪುರೋಹಿತರಿಗೆ ಸ್ವಲ್ಪ ಬಗ್ಗಿಸಿ ಕೊಟ್ಟು ಉಳಿದಿದ್ದನ್ನು ಇಟ್ಟಿದ್ದೆ' ಎಂದರು. ಆಗ, ಸಾರಿ, ನಮಗೆ ತಿಳಿಯಲಿಲ್ಲ.
ನೀವು ಬ್ಯುಸಿ ಇದ್ರಿ ನಾವು ನೀರು ಕೇಳಿದಾಗ ನಿಮ್ಮ ವಾರಗಿತ್ತಿ ಲೋಟಗಳಿಗೆ ಬಗ್ಗಿಸಿ ಕೊಟ್ರು. ನಾವು ಕುಡಿದು ಪಾವನವಾದ್ವಿ ಎಂದಾಗ, 'ಪರ್ವಾಗಿಲ್ಲ. ಬಿಡಿ. ತಿಳಿಯದೇ ನೀವು ಗಂಗಾ ಪಾನ ಮಾಡಿ ಸಾವ ಕಳ್ಕೊಂಡ್ರಿ' ಎಂದು ಹೇಳಿದರೂ ಆಕೆಯ ಮುಖ ಮಾತ್ರ ಅನ್ಯಾಯವಾಗಿ ಗಂಗೆ ನೀರು ಖರ್ಚಾಯ್ತು ಎನ್ನುವ ಭಾವ ಕಾಣುತ್ತಿತ್ತು.
-ಗಾಯತ್ರಿ ಮೂರ್ತಿ
***
'ಸಾಲ' ಬೇಕು!
ಮಗಳು ನಿಖಿತಾ ಅಜ್ಜಿಯ ಬಳಿ ಹೋಗಿ ನನಗೆ ‘ಸಾಲ’ ಬೇಕು ಎಂದು ಮೌಖಿಕವಾಗಿ ಅರ್ಜಿ ಗುಜರಾಯಿಸಿದಳು!
“ನಾನೇನು ಸಾಲ ಕೊಡಲು ಫೈನಾನ್ಸ್, ಬ್ಯಾಂಕ್ ಅಲ್ಲ, ನಿನ್ನ ಅಪ್ಪ ಅಮ್ಮ ಬ್ಯಾಂಕಿನ ಉದ್ಯೋಗದಲ್ಲಿದ್ದಾರಲ್ಲ? ಅವರ ಬಳಿ ಕೇಳು' ಎಂದರು. 'ಇಲ್ಲ ಅವರೇ ಹೇಳಿದ್ದು, ನಿಮ್ಮ ಬಳಿ ಕೇಳಲು' ಎಂದಳು ಮಗಳು, 'ನೀವು ಕೋಣೆಯಲ್ಲಿ ಪಿಂಗಾಣಿ ಭರಣಿಯಲ್ಲಿ ತುಂಬಿಟ್ಟಿರುವ ‘ಸಾಲ’ ಅದು ಬೇಕು' ಎಂದಳು. ಕೊಂಕಣಿಗರು ಬಲಿತ ಹಲಸಿನ ಸೊಳೆ ಬಿಡಿಸಿ ಕೆಡದಿರಲು ಉಪ್ಪಿಗೆ ಹಾಕಿ ಸಂರಕ್ಷಿಸಿಡುತ್ತಾರೆ ಮುಂದೆ ಬಳಸಲು. ಮಳೆಗಾಲದಲ್ಲಿ ಪಲ್ಯ, ಫ್ರೈ ಮಾಡಲು; ತುಂಬಾ ರುಚಿ! ಅಂತಹ ಹಲಸಿನ ತೊಳೆಗೆ ಕೊಂಕಣಿ ಭಾಷೆಯಲ್ಲಿ 'ಸಾಲ (ಸಾಲ್)' ಎನ್ನುತ್ತಾರೆ. ಮಗಳ ಕನ್ನಡ ಕೊಂಕಣಿ 'ಸಾಲ'ವಾಗಿದ್ದು ಮನೆಯಲ್ಲಿ ಎಲ್ಲರಿಗೂ ನಗು ತರಿಸಿತು.
-ನಗರ ಗುರುದೇವ್ ಭಂಡಾರ್ಕರ್
***
ತಾತಾ ಅಲ್ಲ ಅಪ್ಪ!
ಗೆಳೆಯ ಶಂಕರನಿಗೆ ಬಹಳ ಬೇಗನೆ ತಲೆ ತುಂಬಾ ಬಿಳಿ ಕೂದಲು ಬಂದಿತ್ತು. ಅವನ ಮಡದಿ ಕೂದಲಿಗೆ ಬಣ್ಣ ಹಚ್ಚಿಕೊಳ್ಳಲು ಎಷ್ಟು ಒತ್ತಾಯಿಸಿದರೂ ಅವನು ಒಪ್ಪಿರಲಿಲ್ಲ.
ಅವನ ಮಡದಿ ಎರಡನೇ ಮಗುವಿನ ಹೆರಿಗೆಗೆಂದು ಆಸ್ಪತ್ರೆ ಸೇರಿದ್ದಳು. ಮಗುವಿನ ಜನನವಾಗಿ ವಾರ್ಡಿಗೆ ತಂದ ಕೂಡಲೇ ನರ್ಸ್ ಮಗುವನ್ನು ಹೊರಗೆ ತಂದು ಕಲ್ಲೇ ಕೂತಿದ್ದ ಶಂಕರನಿಗೆ ತೋರಿಸಿ, ನೋಡು ಮರೀ ನಿಮ್ಮ ತಾತನನ್ನು ನೋಡು' ಎಂದಳು. 'ತಾತಾ ಅಲ್ಲಾ ಸಿಟ್ಟರ್ ನಾನು ಆ ಮಗುವಿನ ತಂದೆ' ಎಂದು ಹೇಳಲು ಹೊರಟ ಶಂಕರನಿಗೆ, ಆ ನರ್ಸ್, 'ನಿಮ್ಮ ಮಗಳನ್ನು ನೋಡುವಿರಂತೆ ಬನ್ನಿ' ಎಂದು ಹೇಳಿದಾಗ ಪೆಚ್ಚಾಗಿ ಮಾತನಾಡದೇ ಹಿಂಬಾಲಿಸಿದ. ಒಳಗಡೆ ಹೋದಾಗ ಆ ನರ್ಸ್ ಶಂಕರನ ಮಡದಿಗೆ, 'ನೋಡ್ರಿ. ನಿಮ್ಮ ಮಗ ಅವರ ತಾತನನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾನೆ' ಎಂದಾಗ ಪೆಚ್ಚಾದ ಆಕೆ. 'ಅವರು ತಾತಾ ಅಲ್ಲಾ ಸಿಸ್ಟರ್. ಈ ಪಾಪೂನ ಅಪ್ಪ' ಎಂದಾಗ ಪೆಚ್ಚಾಗುವ ಸರದಿ ನರ್ಸ್ದಾಗಿತ್ತು.
-ಲಿಂಗದಹಳ್ಳಿ ಚಂದ್ರಶೇಖರ್
***
ಕಲಿಯುಗದ ಮಹತ್ವ
ಎಂಜಿನಿಯರಿಂಗ್ ಓದುತ್ತಿದ್ದ ಮಗ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ. ಸಂಜೆ ಅಪ್ಪ ಮತ್ತು ಮಗ ಟೀ ಕುಡಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಾ ಇದ್ದಾಗ ಮಗನಿಗೆ ಒಂದು ವಿಷಯದ ಬಗ್ಗೆ ಅನುಮಾನ ಬಂತು.
ಉತ್ತರಕ್ಕಾಗಿ ಕೂಡಲೇ ತಂದೆಗೆ ಪ್ರಶ್ನೆ ಮಾಡುತ್ತಾ, 'ಅಪ್ಪಾ...ಶ್ರೀರಾಮ ತನ್ನ ತಂದೆ ದಶರಥ ಮಹಾರಾಜನ ಮಾತು ಕೇಳಿ ಕೀರ್ತಿವಂತನಾದ. ಅದೇ ಪ್ರಹ್ಲಾದನು ತನ್ನ ತಂದೆ ಹಿರಣ್ಯಕಶಿಪುವಿನ ಮಾತನ್ನು ಕೇಳದೆಯೇ ಕೀರ್ತಿವಂತನಾದ' ಎಂದು ಹೇಳುತ್ತಾ ಮುಂದುವರೆದು, 'ಅಪ್ಪಾ ನಾವಿಬ್ಬರೂ ಗೆಳೆಯರಂತೆ ಇದ್ದೇವೆ. ಈಗ ಕೇಳಿ ನಾನು ಕೀರ್ತಿವಂತನಾಗಬೇಕಾದರೆ ನಿಮ್ಮ ಮಾತನ್ನು ಕೇಳಬೇಕೋ....ಬೇಡವೋ? ಎಂದ.
ಆಗ ತಂದೆಯು ಅಷ್ಟೇ ಶಾಂತವಾಗಿ ತಾರ್ಕಿಕವಾಗಿ 'ನೋಡು ಮಗನೇ. ಇದು ಸತ್ಯಯುಗವೂ ಅಲ್ಲಾ.. ಶ್ವೇತಾಯುಗವೂ ಅಲ್ಲಾ... ನಾವಿಬ್ಬರೂ ಇಂದು ಕಲಿಯುಗದಲ್ಲಿ ಇದ್ದೇವೆ. ಹಾಗಾಗಿ ನಾವಿಬ್ಬರೂ ನಿನ್ನ ಅಮ್ಮನ ಮಾತನ್ನು ಕೇಳಬೇಕು ಆಗ ಮಾತ್ರ ನೆಮ್ಮದಿ ಕೀರ್ತಿ ಎಲ್ಲವೂ ಸಿಗುತ್ತದೆ' ಎಂದಾಗ ಅಪ್ಪನ ಉತ್ತರಕ್ಕೆ ಮಗ ಶಾಕ್!
-ಜಯಮಾಲಾ ಫೈ
ಕಲೆ: ಗಣೇಶ ಆಚಾರ್ಯ
(ಜುಲೈ ೨೦೨೬ರ ‘ ಮಯೂರ’ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!