ಸಕಾರಣ!
ಸಿದ್ದೇಶಿ: ಲೋ ಮಲ್ಲೇಶಿ, ನಿನ್ನೆ ರಾತ್ರಿ ನಿಮ್ಮನೇಲಿ ಅಷ್ಟು ಗಲಾಟೆ ಯಾಕೋ? ಏನ್ಮಾಡ್ಡೆ?
ಮಲ್ಲೇಶಿ: ಅಯ್ಯೋ ಏನ್ಹೇಳೋದು ಸಿದ್ದೇಶಿ. ನಮ್ಮಪ್ಪಾ ಅಮ್ಮಂದೇ ಸಮಸ್ಯೆ ಕಣೋ
ಸಿದ್ದೇಶಿ: ಯಾಕೆ, ಏನಾಯ್ತು?
ಮಲ್ಲೇಶಿ: ಮೊನ್ನೆ ಸಂಘದವ್ರು ಆದರ್ಶ ದಂಪತಿಗಳು ಬಿರುದು ಕೊಟ್ಟು ಸನ್ಮಾನಿಸಿರೋದೇ ಪ್ರಮಾದ ಆಗಿದೆ ಕಣೋ.
ಸಿದ್ದೇಶಿ: ನಿಮ್ಮಪ್ಪಾ ಅಮ್ಮನ್ನ ಸನ್ಮಾನಿಸಿರೋದು ಹೆಮ್ಮೆ. ಸಂತಸ ಪಡೋ ವಿಷಯ ಅಲ್ವೇನೋ. ಅದರಲ್ಲಿ ಏನ್ ಸಮಸ್ಯೆ?
ಮಲ್ಲೇಶಿ: ಖುಷಿ ಪಡೋ ಬದ್ಲು ತಲೆ ಚಚ್ಕೊಳ್ಳೋ ಹಾಗಾಗಿದೆ. ಅವರನ್ನು ಯಾಕಾದ್ರೂ ಸನ್ಮಾನಿಸಿದ್ರೋ ಬಹುಮಾನ ದೊರೆತದ್ದೇ ನನ್ನಿಂದ ಅಂತ ಅಪ್ಪ, ನನ್ನಿಂದಲೇ ಅಂತ ಅಮ್ಮ! ಅರಚಾಟಕ್ಕೆ ನನಗೋ ನಿದ್ದೇನೇ ಇಲ್ಲ ಕಣೋ!
-ಲತಾ ಹೆಗಡೆ
***
ಹೀಗೊಂದು ಕಾರು ಸಾಲ!
ತಿಮ್ಮ ನಗರದ ಬ್ಯಾಂಕ್ ಮ್ಯಾನೇಜರ್ ಬಳಿ ಹೋಗಿ, 'ಸರ್, ನನ್ನ ಹೊಸ ಕಾರನ್ನು ಗಿರವಿ ಇರಿಸಿಕೊಂಡು ಹತ್ತು ಸಾವಿರ ರೂಪಾಯಿ ಸಾಲ ಬೇಕಿತ್ತು ಕೊಡಬಹುದೇ?' ಎಂದು ಕೇಳಿದ ಮ್ಯಾನೇಜರ್ ಕಾರನ್ನು ಬ್ಯಾಂಕಿನ ಗೋದಾಮಿನಲ್ಲಿರಿಸಿಕೊಂಡು ಅವನಿಗೆ ಸಾಲದ ಹಣ ನೀಡಿದರು.
ವಾರದ ಬಳಿಕ ತಿಮ್ಮ ಮತ್ತೆ ಬ್ಯಾಂಕಿಗೆ ಬಂದು ಬಡ್ಡಿಯೊಂದಿಗೆ ಸಾಲ ಮರಳಿಸಿ ಕಾರನ್ನು ಹಿಂದಕ್ಕೆ ಪಡೆದ ಮ್ಯಾನೇಜರ್ ಅಚ್ಚರಿಯಿಂದ, 'ಲಕ್ಷಾಂತರ ರೂಪಾಯಿ ಬೆಲೆಬಾಳುವ ಹೊಸ ಕಾರನ್ನು ನೀವು ಕೇವಲ ಹತ್ತು ಸಾವಿರ ರೂಪಾಯಿಗೆ ಗಿರವಿ ಇಡುವ ಅಗತ್ಯವೇನಿತ್ತು?' ಕೇಳಿದರು.
'ನಾನು ಪಟ್ಟಣಕ್ಕೆ ಹೊಸದಾಗಿ ಬಂದವನು, ಗೆಳೆಯರ ಜೊತೆಗೆ ಅವರ ಕಾರಿನಲ್ಲಿ ಊರು ಸುತ್ತಲು ಹೋಗುವಾಗ ನನ್ನ ಕಾರನ್ನು ಪಾರ್ಕಿಂಗ್ ಮಾಡಲು ಯೋಗ್ಯ ಸ್ಥಳ ಬೇರೆಲ್ಲಿಯೂ ಸಿಕ್ಕಿರಲಿಲ್ಲ' ಎಂದ ತಿಮ್ಮ
-ಪ. ರಾಮಕೃಷ್ಣ ಶಾಸ್ತ್ರಿ
***
ಜಗಳ ಜಾಸ್ತಿ ಆಗುತ್ತೆ!
ಪಕ್ಕದ ಮನೆ ನಳಿನಿ ಮತ್ತು ಅವಳ ಗಂಡನ ಜಗಳ ತಾರಕಕ್ಕೇರಿತ್ತು. ಇದನ್ನು ಕೇಳಿಸಿಕೊಂಡ ಲಲಿತಾ ತನ್ನ ಗಂಡ ಮಹೇಶನಿಗೆ 'ರೀ ಅವರು ಯಾಕೋ ಜಗಳ ಆಡುತ್ತಿದ್ದಾರೆ, ನೀವು ಹೋಗಿ ಸಮಾಧಾನ ಮಾಡಿ ಜಗಳ ಬಿಡಿಸಿ ಬನ್ನಿ' ಎಂದಳು.
ಅದಕ್ಕೆ ಮಹೇಶ 'ಈಗ ನಾನು ಹೋದರೆ ಅವರು ಮತ್ತಷ್ಟು ಜೋರಾಗಿ ಜಗಳ ಮಾಡುತ್ತಾರೆ' ಎಂದ. ಆಗ ಆಕೆ 'ಅ ನೀವು ಹೋದರೆ ಏಕೆ ಜಗಳ ಜಾಸ್ತಿ ಮಾಡುತ್ತಾರೆ?' ಎಂದಳು.
ಅದಕ್ಕೆ ಅವನು 'ಹೌದು ಕಣೇ. ನಾನು ನಿನ್ನೆ ಅವರ ಮನೆಗೆ ಹೋಗಿ ಬಂದಿದ್ದಕ್ಕೆ ಈಗ ಅವರು ಜಗಳ ಮಾಡುತ್ತಾ ಇರೋದು' ಎಂದ!
-ಶಂಕರೇಗೌಡ ತುಂಬಕೆರೆ
***
ನಾಯಿ ಯಾರು?
ಪದ್ದಿ ಮತ್ತು ಗುಂಡನದು ಆದರ್ಶ ದಾಂಪತ್ಯ. ಇಂಥದರಲ್ಲಿ ಗುಂಡ ಸಹವಾಸದಿಂದ ಕುಡಿಯುವುದನ್ನು ಕಲಿತ. ಇದು ಪದ್ದಿಗೆ ಇಷ್ಟವಾಗಲಿಲ್ಲ. ಕುಡಿಯುವುದನ್ನು ಬಿಡಿಸಲು ಪರಿಪರಿಯಾಗಿ ಪ್ರಯತ್ನಿಸಿದಳು. ಏನೇ ಮಾಡಿದರೂ ಗುಂಡ ಕುಡಿಯುವುದನ್ನು నిಲ್ಲಿಸಲಿಲ್ಲ.
ಒಂದು ದಿನ ಪದ್ದಿ ಗುಂಡನ ಎದುರಿನಲ್ಲಿಯೇ ಮನೆಯಲ್ಲಿ ಸಾಕಿದ ನಾಯಿಗೆ ಅದರ ಪ್ಲೇಟಿನಲ್ಲಿ ಗುಂಡ ಕುಡಿದು ಉಳಿಸಿದ್ದ ವಿಸ್ಕಿಯನ್ನು ಹಾಕಿದಳು. ನಾಯಿ ಅದನ್ನು ಮೂಸಿ ನೋಡಿ ಹಿಂದಕ್ಕೆ ಸರಿಯಿತು. ವಿಸ್ಕಿಯನ್ನು ಚೆಲ್ಲಿ ಪ್ಲೇಟನ್ನು ತೊಳೆದು ಅದರಲ್ಲಿ ಹಾಲನ್ನು ಹಾಕಿ ನಾಯಿಯ ಮುಂದೆ ಇಟ್ಟಳು. ನಾಯಿ ಹಾಲನ್ನು ಕುಡಿಯತೊಡಗಿತು. 'ನೋಡಿದ್ರಾ! ಇದರಿಂದ ನಿಮಗೇನು ಅರ್ಥವಾಯಿತು?' ಎಂದಳು ಪದ್ದಿ.
'ವಿಸ್ಕಿ ಕುಡಿಯದವರು ನಾಯಿಗೆ ಸಮ ಅಂತ ಅರ್ಥ' ಕೂಲಾಗಿ ಗುಂಡ ಹೇಳಿದ. ಕೇಳಿದ ಪದ್ದಿ ಶಾಕ್!
-ಭೋಜರಾಜ ಸೊಪ್ಪಿಮಠ
ಕಲೆ: ಗಣೇಶ ಆಚಾರ್ಯ
(‘ಮಯೂರ’ ಸೆಪ್ಟೆಂಬರ್ ೨೦೨೫ರಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!