‘ಮರ ಮೇವು’: ಹೈನುಗಾರಿಕೆ ಮತ್ತು ಪ್ರಕೃತಿ ಪ್ರಿಯರಿಗೆ ಉಪಯುಕ್ತ ಪುಸ್ತಕ

ಡಾ. ಗಣೇಶ್ ಹೆಗಡೆ ನೀಲೇಸರ ಅವರು ಬೆಂಗಳೂರು ಪಶುವೈದ್ಯಕೀಯ ಕಾಲೇಜಿನಲ್ಲಿ 1996ರಲ್ಲಿ ಬಿ.ಎಸ್ಸಿ (ಬಿ.ವಿ.ಎಸ್ಸಿ) ಪದವಿ ಪಡೆದವರು. ನಂತರ 1999ರಲ್ಲಿ ಚೆನ್ನೈನ ನಾಮಕ್ಕಲ್ ಪಶುವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 'ಕುಕ್ಕಟ ವಿಜ್ಞಾನ'ದಲ್ಲಿ (Poultry Science) ಸ್ನಾತಕೋತ್ತರ ಪದವಿ ಹಾಗೂ ಪ್ರಾಣಿಗಳ ತುರ್ತು ಚಿಕಿತ್ಸೆ ಮತ್ತು ಜಾನುವಾರು ರೋಗ ಪರೀಕ್ಷೆ ಕುರಿತಾಗಿ ಎರಡು ಸ್ನಾತಕೋತ್ತರ ಡಿಪ್ಲೊಮಾಗಳನ್ನೂ ಪೂರೈಸಿದ್ದಾರೆ. ತಮ್ಮ ವಿಶಾಲ ವೈದ್ಯಕೀಯ ಅನುಭವದೊಂದಿಗೆ ಅವರು ಬರೆದಿರುವ "ಮರ ಮೇವು" ಪುಸ್ತಕವು, ಬಿ. ಜಿ. ಎಲ್. ಸ್ವಾಮಿ ಅವರ ಪ್ರಸಿದ್ಧ 'ಹಸುರು ಹೊನ್ನು' ಪುಸ್ತಕವನ್ನು ನೆನಪಿಸುವಂತಿದೆ.

ಈ ಕೃತಿಯನ್ನು ನದಿ ಪ್ರಕಾಶನದ ರಮಾ ಎಸ್. ರವರು ಪ್ರಕಟಿಸಿದ್ದಾರೆ. ಇಂತಹದೊಂದು ಅಪರೂಪದ ಪುಸ್ತಕವನ್ನು ಹೊರತರಬೇಕೆಂಬುದು ಅವರ ದಶಕಗಳ ಕನಸಾಗಿತ್ತು ಎಂದು ಅವರು ಬರೆಯುತ್ತಾರೆ. ನದಿ ಪ್ರಕಾಶನದ ರೂವಾರಿಗಳಾದ ಶ್ರೀಕಂಠ ಗಾಣದಾಳು ಹಾಗೂ ರಮಾರವರು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಮುಂಚೂಣಿಯಲ್ಲಿರುವವರು. ಕೃಷಿ, ವಿಜ್ಞಾನ ಮತ್ತು ನಿಸರ್ಗದ ಬಗ್ಗೆ ಅಪಾರ ಕಾಳಜಿ ಉಳ್ಳ ಈ ಕನಸುಗಾರರು, ಸುತ್ತಲೂ ಪರಿಸರದ ಹಸಿರನ್ನು ಬೆಳೆಸುತ್ತಾ ಎಲ್ಲರಿಗೂ ಒಳಿತಾಗಬೇಕೆಂಬ ಉದಾತ್ತ ಮನಸ್ಸಿನಿಂದ ಸಾಕಷ್ಟು ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ.

ಒಮ್ಮೆ ಗಾಣದಾಳು ಶ್ರೀಕಂಠರವರು ನನಗೆ ಸಿಕ್ಕಾಗ, ಇನ್ನೂ ಪ್ರಕಟವಾಗದ ಈ ಪುಸ್ತಕದ ಪ್ರತಿಯನ್ನು ಓದಲು ನೀಡಿದ್ದರು. ಕೊಟ್ಟ ದಿನವೇ ಕುಳಿತು ಓದಿ ಮುಗಿಸಿದೆ; ಓದುತ್ತಾ ಹೋದಂತೆ ಅತ್ಯಂತ ಆಸಕ್ತಿದಾಯಕವೆನಿಸಿತು.

ಸಾಮಾನ್ಯವಾಗಿ ರೈತರಿಗೆ ಮತ್ತು ಹೈನುಗಾರಿಕೆ ಮಾಡುವವರಿಗೆ ಜಾನುವಾರುಗಳಿಗೆ ದಿನನಿತ್ಯದ ಮೇವು ಹೊಂದಿಸುವುದೇ ಒಂದು ದೊಡ್ಡ ತಲೆನೋವು. ಹೀಗಿರುವಾಗ, ನಮ್ಮ ಸುತ್ತಮುತ್ತಲಿನ ಮರಗಳ ಹಸಿರು ಎಲೆಗಳೇ ಮೇವಾಗಬಲ್ಲವು ಎನ್ನುವ ವಿಷಯವೇ ಅತ್ಯಂತ ರೋಚಕವಾದದ್ದು. ಯಾವ ಹಸು ಯಾವ ಸೊಪ್ಪನ್ನು ಇಷ್ಟಪಟ್ಟು ತಿನ್ನುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ತಿನ್ನಿಸಿಯೇ ನೋಡಬೇಕು. ಆದರೆ, ಯಾವ ಯಾವ ಮರಗಳ ಎಲೆಗಳು ಪ್ರಾಣಿಗಳಿಗೆ ಉಪಯುಕ್ತ ಹಾಗೂ ಪೌಷ್ಟಿಕ ಎನ್ನುವುದನ್ನು ವೈಜ್ಞಾನಿಕವಾಗಿ, ತಜ್ಞರಿಂದ ತಿಳಿದುಕೊಂಡರೆ ಹೈನುಗಾರಿಕೆ ಮಾಡುವವರಿಗೆ ಅಪಾರ ಪ್ರಯೋಜನವಾಗುತ್ತದೆ.

ನನಗೆ ಗಿಡ-ಮರಗಳ ಬಗ್ಗೆ ಸದಾ ಓದುವ ಹುಚ್ಚಿದ್ದರೂ, ಹೈನುಗಾರಿಕೆಯ ಅನುಭವವಿಲ್ಲದ ಕಾರಣ ನಮ್ಮ ಸುತ್ತಮುತ್ತಲಿನ ಎಷ್ಟೋ ಮರಗಳ ಎಲೆಗಳನ್ನು ಮೇವಾಗಿ ಬಳಸಬಹುದು ಎನ್ನುವ ವಿಷಯ ಈ ಪುಸ್ತಕ ಓದುವವರೆಗೂ ಸಂಪೂರ್ಣವಾಗಿ ತಿಳಿದಿರಲಿಲ್ಲ. ಗಿಡ-ಮರಗಳ ಪ್ರೇಮಿಗಳಿಗೆ ಈ ಪುಸ್ತಕ ಪ್ರಕೃತಿಯನ್ನು ನೋಡುವ ಹೊಸ ದೃಷ್ಟಿಕೋನವನ್ನೇ ನೀಡುತ್ತದೆ. ನಾವು ದಿನವೂ ನೋಡುವ, ಗುರುತಿಸುವ ಹಾಗೂ ಇತರರಿಗೆ ಹೇಳುವ ಮರಗಳು ಈ ಪುಸ್ತಕದ ಪುಟಗಳಲ್ಲಿ ಹೊಸ ರೂಪದಲ್ಲಿ ನಮ್ಮ ಮುಂದೆ ಬಂದು ನಿಲ್ಲುತ್ತವೆ.

ಡಾ. ಗಣೇಶ್ ಹೆಗಡೆಯವರು ಇಲ್ಲಿ ಕೇವಲ 'ಯಾವ ಎಲೆಗಳನ್ನು ತಿನ್ನಿಸಬಹುದು' ಎಂದು ಮಾತ್ರ ಹೇಳಿಲ್ಲ; ಅದರ ಜೊತೆಗೆ ಯಾವ ಎಲೆಗಳನ್ನು ತಿನ್ನಿಸಬಾರದು ಹಾಗೂ ತಿನ್ನಿಸಬಾರದೆನ್ನಲಾದ ವಿಷಕಾರಿ ಸೊಪ್ಪುಗಳ ಬಗ್ಗೆಯೂ ವಿವರವಾಗಿ ಬರೆದಿದ್ದಾರೆ. ಅಕಸ್ಮಾತ್ ಜಾನುವಾರುಗಳು ಅಂತಹ ಸೊಪ್ಪನ್ನು ತಿಂದರೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಏನು ಎಂಬುದನ್ನೂ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಅನುಬಂಧ-೨ರಲ್ಲಿ ಈ ಮರಗಳು ಯಾವ ಭೌಗೋಳಿಕ ಪ್ರದೇಶದಲ್ಲಿ ಬೆಳೆಯುತ್ತವೆ ಎಂಬುದರ ಸ್ಪಷ್ಟ ಪರಿವಿಡಿಯಿದೆ. ಪುಸ್ತಕದ ಕೊನೆಯಲ್ಲಿ ನೀಡಿರುವ ವರ್ಣರಂಜಿತ ಚಿತ್ರಸಂಪುಟ (Photo gallery) ಗಿಡ-ಮರಗಳನ್ನು ಸುಲಭವಾಗಿ ಗುರುತಿಸಲು ನೆರವಾಗುತ್ತದೆ.

ಮನುಷ್ಯರ ಆಹಾರ ಮತ್ತು ಪೋಷಕಾಂಶಗಳ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿರುವ ಈ ಕಾಲದಲ್ಲಿ, ನಮ್ಮ ದೈನಂದಿನ ಜೀವನದ ಪ್ರಮುಖ ಅಂಗವಾದ ಹೈನುಗಾರಿಕೆ ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ಬೇಕಾದ ಪೌಷ್ಟಿಕಾಂಶದ ಬಗ್ಗೆ ಈ ಪುಸ್ತಕ ದೊಡ್ಡ ಮಟ್ಟದ ಸಂವಾದಕ್ಕೆ ನಾಂದಿ ಹಾಡಲಿಕ್ಕೂ ಸಾಕು. ಇದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಲುಪಿದರೆ ನಮ್ಮ ರಾಜ್ಯದ ಹೈನುಗಾರಿಕೆ ಕ್ಷೇತ್ರ ಇನ್ನಷ್ಟು ಉತ್ತಮ ಸ್ಥಿತಿಗೆ ತಲುಪುವುದರಲ್ಲಿ ಅನುಮಾನವಿಲ್ಲ.

ಕೈಯಲ್ಲಿ ಹಿಡಿದು ಸುಲಭವಾಗಿ ಓದಬಹುದಾದ, ಪ್ರತಿಯೊಬ್ಬ ರೈತರು, ಹೈನುಗಾರಿಕೆ ನಡೆಸುತ್ತಿರುವವರು, ಪ್ರಕೃತಿ ಪ್ರೇಮಿಗಳು ಹಾಗೂ ಗ್ರಂಥಾಲಯಗಳು ಹೊಂದಿರಲೇಬೇಕಾದ ಅತ್ಯಂತ ಉಪಯುಕ್ತ ಹೊತ್ತಿಗೆ ಇದು. ನಿಮ್ಮ ಪುಸ್ತಕದ ಕಪಾಟಿನಲ್ಲಿ ಸದಾ ಇಟ್ಟುಕೊಳ್ಳಲು ಯೋಗ್ಯವಾದ ಈ ಕೃತಿಯನ್ನು ತಪ್ಪದೇ ಓದಿ.

ಪುಸ್ತಕವನ್ನು ಖರೀದಿಸಲು: ಈ ಪುಸ್ತಕವನ್ನು ‘ಪುಸ್ತಕ ಸಂಪದ’ದಲ್ಲಿ ಕೊಂಡು ನೇರವಾಗಿ ನಿಮ್ಮ ಮನೆಗೆ ಸುಲಭದಲ್ಲಿ ತರಿಸಿಕೊಳ್ಳಬಹುದಾಗಿದೆ. ಅಲ್ಲದೆ ಪುಸ್ತಕದ ಬೆಲೆಯ ಒಂದು ಅಂಶ ‘ಸಂಪದ’ದ ಬೆಳವಣಿಗೆಗೆ ಸಿಗುವುದು. ತಪ್ಪದೆ ಈ ಉಪಯುಕ್ತ ಪುಸ್ತಕವನ್ನು ಇಂದೇ ಆರ್ಡರ್ ಮಾಡಿ.