ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ

ಮುರಳಿ ನಾದದ ಜೇನಸವಿ ತುಂಬಿ ಸುರಿಸಿ;
ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ-
ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!
 
 
ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿ
ತಂಪು ತುಂಬಿಹ ಹರುಷದುಲಿಯೂದೆ ಕೊಳಲು;
ಮಂಪರೇರಿಸಿ ಮತ್ತೆ  ಸೆಳೆಯುತ್ತ ಬಗೆಬಗೆಯ-
-ಲಿಂಪುಗಳ ತೋರುತಲಿ ಮನವ ಪೆರ್ಚಿಸುತ! 



ಸಂಸ್ಕೃತ ಮೂಲ: 


 (ಲೀಲಾಶುಕನ ಕೃಷ್ಣಕರ್ಣಾಮೃತ-೬)
 
ಮುಕುಲಾಯಮಾನ ನಯನಾಂಬುಜಂ ವಿಭೋಃ
ಮುರಲೀ ನಿನಾದ ಮಕರಂದ ನಿರ್ಭರಂ |
ಮುಕುರಾಯಮಾಣಮೃದುಗಂಡಮಂಡಲಂ
ಮುಖಪಂಕಜಂ ಮನಸಿ ಮೇ ವಿಜೃಂಭತಾಂ || 
 
(ಲೀಲಾಶುಕನ ಕೃಷ್ಣಕರ್ಣಾಮೃತ-೩೬)
 
ಅಧೀರ ಬಿಂಬಾಧರ ವಿಭ್ರಮೇಣ 
ಹರ್ಷಾರ್ದ್ರ ವೇಣುಸ್ವರ ಸಂಪದಾ ಚ |
ಅನೇನ ಕೇನಾಪಿ ಮನೋಹರೇಣ
ಹಾ ಹಂತ ಹಾ ಹಂತ ಮನೋ ಧುನೋತಿ ||

-ಹಂಸಾನಂದಿ

(ಅನುವಾದಿಸುವಾದ ಸಲಹೆ ನೀಡಿದ ಗೆಳೆಯ ಎಂ.ಜಿ.ಹರೀಶ್ ಅವರಿಗೆ ವಂದನೆಗಳು)

 
ಕೊ: ನಾಳೆ ಬರುವ ಕೃಷ್ಣಾಷ್ಟಮಿಯ ಸಮಯಕ್ಕೆ ಅತಿ ಸುಂದರವಾದ ಎರಡು ಸಂಸ್ಕೃತ ಶ್ಲೋಕಗಳನ್ನು ಅನುವಾದಿಸಿ ಹಂಚಿಕೊಳ್ಳುವುದು ಬಹಳ ಸಂತಸ ತಂದ ಸಂಗತಿ. ___LINK_OPEN_href="http://sampada.net/blog/%E0%B2%95%E0%B3%8A%E0%B2%B3%E0%B2%B2%E0%B2%A8%E0%B3%82%E0%B2%A6%E0%B3%81%E0%B2%B5-%E0%B2%9A%E0%B2%A6%E0%B3%81%E0%B2%B0%E0%B2%A8%E0%B2%BE%E0%B2%B0%E0%B3%87-%E0%B2%AA%E0%B3%87%E0%B2%B3%E0%B2%AE%E0%B3%8D%E0%B2%AE/21/08/2011/32999" target="_blank"___ ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಜನಪ್ರಿಯ ರಚನೆ, ಹಾಗಾಗಿ ತಲೆಬರಹವನ್ನು ಹೀಗಿಟ್ಟದ್ದು.

ಕೊ.ಕೊ:  ಎಸೆ  ಎನ್ನುವುದು   ಶೋಭಿಸು ಎನ್ನುವ ಅರ್ಥದ ದೇಶ್ಯ ಪದ, ಹರಿದಾಸರು ತಮ್ಮ ರಚನೆಗಳಲ್ಲಿ ಬಳಸಿದ್ದಾರೆ; ಉದಾಹರಣೆಗೆ,   "ಶಶಿ ಮುಖದ ನಸುನಗೆಯ ಬಾಲೆ, ಎಸೆವ ಕರ್ಣದ ಮುತ್ತಿನ ಓಲೆ!" ಎನ್ನುವ ಅನುಪಲ್ಲವಿ ಇರುವ ಕನಕದಾಸರ ರಚನೆ "ವರವ ಕೊಡು ಎನಗೆ ವಾಗ್ದೇವಿ".

ಕೊ.ಕೊ.ಕೊ: ಪೆರ್ಚಿಸು = ಉಕ್ಕುವಿಕೆ, ಹೊರಸೂಸುವಿಕೆ , ಹಿಗ್ಗುವಿಕೆ  ಹೀಗೆಲ್ಲ ಅರ್ಥ ಬರುವ ಒಂದು ದೇಶ್ಯ ಪದ. "ಹಾ ಹಂತ ಹಾ ಹಂತ ಮನೋ ಧುನೋತಿ" ಎಂಬ ಸಾಲಿಗೆ ಕೃಷ್ಣನ ಸೊಬಗನ್ನು ಕಂಡು ಅಯ್ಯೋ ಅಯ್ಯೋ ಅದೇನು ಸೊಗಸು ಎಂದು ಉದ್ಗರಿಸುವ ಮನಸ್ಸಿಗೆ ಇದೇ ಸರಿಯಾದ ಭಾವವೆಂದು ಈ ಪದವನ್ನು ಬಳಸಿದೆ.

ಚಿತ್ರ: ಬೆಳವಾಡಿಯ ವೀರನಾರಾಯಣ ದೇವಾಲಯದಲ್ಲಿನ ವೇಣುಗೋಪಾಲ ಮೂರ್ತಿ. Picture Courtesy:  -  Dr Ronald Dengler who took the picture, and___LINK_OPEN_href="https://plus.google.com/107673414109398362564/photos?banner=pwa" target="_blank"___ Kathie Brobeck, for sharing the picture