ಆ ಊರಿನಲ್ಲಿ ಒಂದು ರಂಗಮಂದಿರವಿದೆ. ಆ ರಂಗ ಮಂದಿರ ನೆಮ್ಮದಿಯಾಗಿ ಉಸಿರಾಡಿದ ಒಂದು ದಿನವೂ ಇಲ್ಲ. ಅಲ್ಲಿ ಪ್ರತಿ ಹೊತ್ತು ಒಂದಲ್ಲ ಒಂದು ಕಾರ್ಯಕ್ರಮ ನಡಿತಾನೇ ಇರುತ್ತದೆ. ಆ ರಂಗ ಮಂದಿರವನ್ನು ನಿರ್ಮಿಸುವಾಗ ನಿರ್ಮಿಸುವ ಆಲೋಚನೆ ಮಾಡಿದವನಿಗೆ ಮಾತ್ರ ಗೊತ್ತಿತ್ತು ಊರು ಬದಲಾಗಬೇಕು ಅಂತ. ಮನೆಯಲ್ಲಿ ಸರಿಯಾಗಿ ಕೆಲಸ ಮಾಡದೆ, ಶಾಲೆಗೆ ತೆರಳದೇ, ಬೀದಿ ಅಲೆಯುತ್ತಿರುವ ಎಲ್ಲ ಯುವ ಮನಸ್ಸುಗಳು ಹೊಸತೊಂದು ಬದಲಾವಣೆಗೆ ನಾಂದಿ ಹಾಡಬೇಕಿತ್ತು. ಅದಕ್ಕಾಗಿ ರಂಗಮಂದಿರವನ್ನು ತುಂಬಾ ಪ್ರೀತಿಯಿಂದ ಕಟ್ಟಿದ. ಉದ್ಘಾಟನೆಯಾದ ನಂತರ ಒಂದು ದಿನವೂ ವೇದಿಕೆ ಉಸಿರಾಡುವುದಕ್ಕೂ ಇಲ್ಲದಂತೆ ಕಾರ್ಯಕ್ರಮಗಳನ್ನ ಆಯೋಜಿಸಿದ. ನೃತ್ಯಗಳು ಹಾಡುಗಳು ನಾಟಕ ಯಕ್ಷಗಾನ ತರಬೇತಿಗಳು ಹೀಗೆ ಒಂದಲ್ಲ ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದ. ಕೆಲವರಿದ್ದ ತಂಡ ಹಲವರಾದರು. ಬದಲಾವಣೆಯ ಕಡೆಗೆ ಮನಸ್ಸು ಮಾಡಿದರು. ಪ್ರತಿದಿನವೂ ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಜೊತೆಯಾಗುತ್ತಿದ್ದ ಮನಸ್ಸುಗಳು ಹೊಸತೊಂದು ಬದಲಾವಣೆ ಬೇಕು ಎನ್ನುವ ನಿರ್ಧಾರಕ ಬಂದು ಸ್ವಂತ ದುಡಿಮೆಯನ್ನು ಆರಂಭಿಸಿದರು. ಕೆಲವರು ಕೆಲಸಕ್ಕೆ ತೆರಳಿದರು, ಮನೆಯ ವಾತಾವರಣ ಬದಲಾಯಿತು. ಊರು ಮಾದರಿಯಾಯಿತು. ಇದಕ್ಕೆಲ್ಲ ಕಾರಣವಾದದ್ದು ಆ ರಂಗ ಮಂದಿರ. ನಾವು ನಮ್ಮೂರಿನಲ್ಲೂ ಕಟ್ಟಿಕೊಳ್ಳಬೇಕಾಗಿದೆ ಅಷ್ಟು ಅದ್ಭುತವಾದ ರಂಗಮಂದಿರವಲ್ಲದಿದ್ದರು ನಾವೆಲ್ಲರೂ ಸೇರುವಂತ ಒಂದು ಪುಟ್ಟ ಜಾಗ. ಒಂದಷ್ಟು ಹೊಸ ಆಲೋಚನೆಗಳು ಜೊತೆಗೆ ಸೇರಿದರೆ ನಾವು ಬದಲಾಗಬಹುದು. ಊರು ಬದಲಾಗಬಹುದು. ಊರಿನಲ್ಲಿ ಕಟ್ಟುವ ಮೊದಲು ಮನದಲ್ಲೊಂದು ರಂಗ ಮಂದಿರ ಕಟ್ಟಿ ಒಂದಷ್ಟು ಹೊಸ ಆಲೋಚನೆಗಳನ್ನ ಜೊತೆಗೆ ಸೇರಿಸಿ ಬದಲಾವಣೆಗೆ ಪ್ರಯತ್ನಿಸೋಣ ಏನಂತೀರಿ..?

-ಧೀರಜ್ ಬೆಳ್ಳಾರೆ

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ