ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು ಎನ್ನುವುದು ಹಳೆಯ ಮಾತು. ಈಗಂತೂ ಹಲವಾರು ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ. ಬಹಳಷ್ಟು ವಿದೇಶೀ ಹಣ್ಣುಗಳು ನಮ್ಮ ದೇಶದಲ್ಲೇ ಬೆಳೆಯುತ್ತಿವೆ. ರಾಂಬುಟಾನ್, ಡ್ರಾಗನ್ ಫ್ರುಟ್, ಸ್ಟ್ರಾಬೆರಿ ಮೊದಲಾದ ಹಣ್ಣುಗಳು ದೇಶದಲ್ಲೇ ಬೆಳೆಯುತ್ತಿರುವುದರಿಂದ ಕಡಿಮೆ ಬೆಲೆಗೆ ತಾಜಾ ಹಣ್ಣುಗಳು ಸಿಗುತ್ತಿವೆ. ನಾವು ಈ ಹಿಂದೆ ಕೆಂಪು ಬಣ್ಣದ ಸೇಬನ್ನು ಮಾತ್ರ ಸೇವಿಸುತ್ತಿದ್ದೆವು. ಆದರೆ ಇತ್ತೀಚೆಗೆ ಹಸಿರು ಸೇಬು (ಗ್ರೀನ್ ಆಪಲ್) ನಿಯಮಿತವಾಗಿ ಮಾರುಕಟ್ಟೆಗೆ ಬರುತ್ತಿದೆ. ಇದರಲ್ಲಿ ಆರೋಗ್ಯಕಾರಿ ಪೌಷ್ಟಿಕಾಂಶಗಳು ಎಷ್ಟಿವೆ ಗೊತ್ತೇ?

ಹಸಿರು ಸೇಬು ನೋಡಲು ಹಣ್ಣಾಗದ ಕೆಂಪು ಸೇಬಿನಂತೆ ಕಾಣಿಸಿದರೂ, ಇದು ಸೇಬಿನದ್ದೇ ಮತ್ತೊಂದು ಪ್ರಜಾತಿ. ಇದಕ್ಕೆ ಅತ್ಯಂತ ಸುಮಧುರವಾದ ವಾಸನೆ ಇದ್ದು, ಮನಮೋಹಿಸುವಂತಿದೆ. ಹಸಿರು ಸೇಬು ತಿನ್ನುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು. ಹಸಿರು ಸೇಬುಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ಹೇರಳವಾಗಿವೆ. ಇದರ ಜೊತೆಗೆ ಹಸಿರು ಸೇಬುಗಳಲ್ಲಿ ಉತ್ತಮ ಫೈಬರ್ ಅಂಶವನ್ನು ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತವೆ. ಹಸಿರು ಸೇಬುಗಳನ್ನು ತಿನ್ನುವುದರಿಂದ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. 

ಹಸಿರು ಸೇಬುಗಳ ಸೇವನೆ ನಮ್ಮ ಹೊಟ್ಟೆಯನ್ನು ಸ್ವಸ್ಥವಾಗಿಡಲು ನೆರವಾಗುತ್ತದೆ. ಹಸಿರು ಸೇಬುಗಳು ಬಹಳಷ್ಟು ಫೈಬರ್ (ನಾರು)ಅಂಶವನ್ನು ಹೊಂದಿರುವುದರಿಂದ ಇದನ್ನು ಜ್ಯೂಸ್ ಮಾಡಿ ಕುಡಿಯುವುದಕ್ಕಿಂತಲೂ ನೇರವಾಗಿ ಜಗಿದು ತಿನ್ನುವುದು ಬಹಳ ಆರೋಗ್ಯಕರ. ಇದರಿಂದ ಮಲಬದ್ಧತೆಯ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ. ಈ ಹಣ್ಣಿನ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅತಿಸಾರದ ಸಮಸ್ಯೆ ಇದ್ದರೆ ಅದೂ ಗುಣವಾಗುತ್ತದೆ. ಕರುಳಿನ ಸಮಸ್ಯೆಯಿದ್ದಲ್ಲಿ ಹಸಿರು ಸೇಬಿನ ಸೇವನೆಯಿಂದ ಗುಣವಾಗುತ್ತದೆ. ಮಧುಮೇಹದ ಅಪಾಯವನ್ನೂ ದೂರಮಾಡುತ್ತದೆ.

ದಿನಕ್ಕೆ ಒಂದಾದರೂ ಹಸಿರು ಸೇಬನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಕಾರಿಯಾಗುತ್ತದೆ. ಹಸಿರು ಸೇಬಿನಲ್ಲಿ ಅಡಗಿರುವ ಯಾವ ಜೀವಸತ್ವವು ಆರೋಗ್ಯದಾಯಕವಾಗಿದೆ ಎನ್ನುವ ಬಗ್ಗೆ ವಿಜ್ಞಾನಿಗಳು ಇನ್ನೂ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಈ ವಿಚಾರದಲ್ಲಿ ಅಧಿಕ ಸಂಶೋಧನೆಗಳು ನಡೆದಲ್ಲಿ ಹಸಿರು ಸೇಬಿನ ಇನ್ನಷ್ಟು ಉಪಕಾರಿ ಅಂಶಗಳು ಬೆಳಕಿಗೆ ಬಂದಾವು.

ಹಸಿರು ಸೇಬಿನ ನಿಯಮಿತ ಸೇವನೆಯಿಂದ ಬೊಜ್ಜಿನ ಪ್ರಮಾಣ ಕಡಿಮೆಯಾಗುತ್ತದೆ. ತೂಕವನ್ನು ಇಳಿಸುವ ಮನಸ್ಸಿದ್ದಲ್ಲಿ ಹಸಿರು ಸೇಬನ್ನು ಸೇವಿಸಬಹುದು. ಕಡಿಮೆ ಕ್ಯಾಲೋರಿ ಮತ್ತು ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಸಿರು ಸೇಬಿನಲ್ಲಿ ವಿಟಮಿನ್ ಕೆ ಇದ್ದು, ಇದರಿಂದ ರಕ್ತದ ಪರಿಚಲನೆ ಸರಾಗವಾಗುತ್ತದೆ. ನಮ್ಮ ದೇಶದಲ್ಲಿ ಹಸಿರು ಸೇಬು ಕೃಷಿ ಅಷ್ಟಾಗಿ ಕಂಡು ಬರದಿದ್ದರೂ, ಭವಿಷ್ಯದಲ್ಲಿ ಹಸಿರು ಸೇಬು ಕೃಷಿ ಜನಪ್ರಿಯವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈಗ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಸಿಗುತ್ತಿರುವ ಹಸಿರು ಸೇಬು ಮುಂದಿನ ದಿನಗಳಲ್ಲಿ ಕೈಗೆಟಕುವ ದರದಲ್ಲಿ ಸಿಗುವ ಆಶಾಭಾವನೆ ಇದೆ. ಏನದರಾಗಲಿ, ಅನುಕೂಲತೆ ಇದ್ದಲ್ಲಿ ಆಗಾಗ ಹಸಿರು ಸೇಬನ್ನು ತಿನ್ನುತ್ತಾ ಆರೋಗ್ಯವನ್ನು ಕಾಪಾಡಿಕೊಳ್ಳಿ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ