ಇಲ್ಲ ನೋವಾಗಿದೆ, ತುಂಬಾ ನೋವಾಗಿದೆ. ನಾನಿದನ್ನ ಇಷ್ಟರವರೆಗೆ ಗಮನಿಸಿರಲಿಲ್ಲ. ಅಲ್ಲಾ ನಾವೇನು ತಪ್ಪು ಮಾಡಿದ್ದೇವೆ? ಇತ್ತೀಚಿಗೆ ಸರಕಾರದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಅನ್ನುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು ನಾವು ನ್ಯಾಯಯುತವಾಗಿ ನಮಗೆ ಬೇಕಾದನ್ನು ಕೇಳ್ತಾ ಇದ್ವಿ. ಆ ದಿನ ಪೊಲೀಸರ ಲಾಠಿ ಏಟನ್ನು ತಿನ್ನಬೇಕಾದ ಪರಿಸ್ಥಿತಿ ನಮ್ಮದಾಯಿತು. ಅಲ್ಲಿ ನಿಂತ ಎಲ್ಲರಿಗೂ ಸಮಾನತೆಯಲ್ಲಿ ಹೊಡೆತ ಸಿಕ್ಕಿತು ಆದರೆ ಇದೇ ಲಾಠಿ ಇತ್ತೀಚಿಗೆ ದೊಡ್ಡ ಶ್ರೀಮಂತರ ಮಗನೊಬ್ಬ ರಸ್ತೆಯಲ್ಲಿ ಕುಡಿದು ತೂರಾಡಿದಾಗ, ದೊಡ್ಡ ಅಧಿಕಾರಿಗಳ ಮಕ್ಕಳು ದಾಂದಲೆ ಎಬ್ಬಿಸಿದಾಗ, ಉನ್ನತ ವರ್ಗದವರ ಅಹಂಕಾರ ಹೆಚ್ಚಾಗಿ ಬೀದಿಬದಿಯ ರಂಪಾಟಗಳಾದಾಗ ಒಂದು ದಿನವೂ ಪೊಲೀಸರ ಲಾಠಿ ಅವರಿಗೆ ಬಡಿದದ್ದನ್ನು ನೋಡಲೇ ಇಲ್ಲ. ಹಾಗೇನಾದರೂ ಆಗಿಬಿಟ್ಟಿದ್ದರೆ ಪೊಲೀಸರ ಕೆಲಸವೇ ಕಳೆದುಕೊಂಡ ಪ್ರಕರಣಗಳೇ ತುಂಬಾ ಇವೆ. ಹೀಗಿರುವಾಗ ನಾವೇನು ತಪ್ಪು ಮಾಡಿದ್ದೇವೆ ಒಂದಾದರೆ ನಾವು ಬಡವರಾಗಿದ್ದು ತಪ್ಪು, ಅಥವಾ ನಮ್ಮ ಮನೆಯವರು ಸಾಮಾನ್ಯ ವರ್ಗದವರಾಗಿರುವುದು ತಪ್ಪು. ಪ್ರಜಾಪ್ರಭುತ್ವ ಸಮಾನತೆ ಎಲ್ಲವೂ ಒಂದೇ ಆಗಿರುವಾಗ ಈ ಬೇಧ ಭಾವ ಯಾಕೆ?. ನನಗೆ ಇದು ಅರ್ಥವಾಗುತ್ತಿಲ್ಲ ಯಾರಾದ್ರೂ ತಿಳಿದವರು ಒಮ್ಮೆ ಅರ್ಥಮಾಡಿಸಿಕೊಡಿ ಇಲ್ಲದಿದ್ದರೆ ಪ್ರತಿದಿನವೂ ಈ ಪ್ರಶ್ನೆ ತಲೆ ಒಳಗೆ ಕೊರೆಯುತ್ತಿರುತ್ತದೆ. ರಮೇಶ ತುಂಬಾ ದೈನ್ಯತೆಯಿಂದ ಪ್ರಶ್ನೆಯನ್ನು ಕೇಳಿದ್ದ ನನ್ನಲ್ಲಿ ಉತ್ತರವಿರಲಿಲ್ಲ. ತಿಳಿದವರು ನೀವಿದ್ದೀರ ಅವನಿಗೊಂದು ಉತ್ತರವನ್ನು ತಿಳಿಸಿಬಿಡಿ ಅವನಿಗೆ ಕಳುಹಿಸುತ್ತೇನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!