ಸೊಳ್ಳೆ

ಅನಿವಾರ್ಯ ಕಾರಣಗಳಿಂದ ಅಂದು ರಾತ್ರಿ ಒಬ್ಬಳೇ ಬೆಂಗಳೂರಿಗೆ ರೈಲು ಪ್ರಯಾಣ ಮಾಡಬೇಕಾಗಿ ಬಂತು. ನಮ್ಮ ಯಜಮಾನರು ನನ್ನನ್ನು ರೈಲು ಹತ್ತಿಸಿ ಮನೆಗೆ ಮರಳಿದರು. ರೈಲಿನ ತುಂಬಾ ಮನುಷ್ಯರಿಗಿಂತ ಹೆಚ್ಚು ಸೊಳ್ಳೆಗಳೇ ತುಂಬಿಕೊಂಡಿದ್ದವು. ಸ್ವಲ್ಪ ಹೊತ್ತಿನ ನಂತರ ಮತ್ತೆ ಫೋನ್ ಮಾಡಿ’ ರೈಲು ಬಿಟ್ಟಿತಾ?’ ಎಂದು ಕೇಳಿದರು. ನಾನು ‘ಸೊಳ್ಳೆ, ಸೊಳ್ಳೆ’ ಎಂದು ಕೊಂಕಣಿಯಲ್ಲಿ ಹೇಳಿದೆ. ನನ್ನ ಎದುರಿನ ಸೀಟಿನಲ್ಲಿ ಕೂತಿದ್ದ ಅಜ್ಜಿಯೊಬ್ಬರು ನಾನು ಫೋನ್ ಇಡುತ್ತಿದ್ದಂತೆ, ‘ಹೌದಮ್ಮ, ಸೊಳ್ಳೆ ಜಾಸ್ತಿ ಇವೆ, ಆದ್ರೂ ಇಷ್ಟು ಸಣ್ಣ ವಿಷಯಾನ ಯಜಮಾನರಿಗೆ ಹೇಳ್ತಿಯಾ? ಅಂದರು. ‘ರೈಲು ಸೊಳ್ಳೆ ಅಂದ್ರೆ ಕೊಂಕಣಿ ಭಾಷೆಯಲ್ಲಿ ರೈಲು ಹೊರಟಿತು ಅಂತ ಅರ್ಥ’ ಎಂದು ಅಜ್ಜಿಗೆ ತಿಳಿಹೇಳಿದೆ !

-ಜಯಮಾಲಾ ಪೈ

***

ತುಪ್ಪ ಬೇಕು… ತುಪ್ಪ…

ಅಪರೂಪಕ್ಕೆ ವಿಜಯನಗರದಲ್ಲಿರುವ ಗೆಳೆಯನ ಮನೆಗೆ ಹೋಗಿದ್ದೆ. ನಾವು ಇನ್ನೇನು ಮಾತುಕತೆ ಶುರು ಮಾಡಬೇಉ ಅಷ್ಟರಲ್ಲಿ ನಾಲ್ಕು ವರ್ಷದ ಅವನ ಮೊಮ್ಮಗ ‘ತುಪ್ಪ ಬೇಕು… ತುಪ್ಪ..’ ಎಂದು ಒಂದೇ ಸಮನೆ ಹಠ ಮಾಡತೊಡಗಿದ. ಮನೆಯವರೆಲ್ಲಾ ಏನು ಪ್ರಯತ್ನ ಮಾಡಿದರೂ ಅವನನ್ನು ಸಮಾಧಾನ ಮಾಡಲು ಆಗುತ್ತಿರಲಿಲ್ಲ. ಮನೆಯಲ್ಲಿರುವ ಚಾಕೊಲೇಟು, ಬಿಸ್ಕತ್ತುಗಳನ್ನೆಲ್ಲಾ ಅವನ ಮುಂದೆ ತಂದು ಹಾಕಿದರೂ ಅವನ ತುಪ್ಪದ ಅಳು ನಿಲ್ಲಲಿಲ್ಲ. ಕೊನೆಗೆ ನಾನು ಸುಮ್ಮನಿರಲಾರದೆ ‘ಪಾಪ ಮಗು ಅಷ್ಟೊಂದು ಕೇಳ್ತಾಇದೆ. ಒಂದೆರಡು ಚಮಚ ತುಪ್ಪ ಕೊಡೋದಲ್ವೇ? “ಎಂದೆ. ಅದಕ್ಕೆ ಗೆಳೆಯ ನಗುತ್ತಾ ‘ಅಯ್ಯೋ ಅವನು ಕೇಳ್ತಾ ಇರೋದು ಆ ತುಪ್ಪ ಅಲ್ಲ ಮಾರಾಯ. ಅವನು ತನ್ನ ಚಿಕ್ಕಪ್ಪನನ್ನು ತುಪ್ಪ ಅಂತ ಕರೀತಾನೆ. ಅವನ ಚಿಕ್ಕಪ್ಪ ಈಗ ಆಫೀಸಿಗೆ ಹೋಗಿದ್ದಾನೆ. ಎಲ್ಲಿಂದ ತರೋದು?’ ಎಂದ. ಬೆಪ್ಪಾಗುವ ಸರದಿ ನನ್ನದಾಗಿತ್ತು.

-ಎಂ.ಕೆ.ಮಂಜುನಾಥ್

***

ಫಿಟ್ ಆಂಡ್ ಫೈನ್…

ಸುಮಾರು ಹತ್ತು ವರ್ಷಗಳ ಹಿಂದೆ ಮನೆಯ ಕಾರ್ಯಕ್ರಮಕ್ಕೆ ನನ್ನ ಆಪ್ತ ಮಿತ್ರ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರನ್ನೂ ಆಹ್ವಾನಿಸಿದ್ದೆ. ಅಂದು ಅವರೊಂದಿಗೆ ಆತನ ಅಜ್ಜ - ಅಜ್ಜಿ ಬಂದಿದ್ದರು. ಆಗ ಅಜ್ಜನಿಗೆ ಸುಮಾರು ಎಂಬತ್ತು ವರ್ಷ ಆಗಿತ್ತೇನೋ, ಮಾತು ಮಾತಿನ ನಡುವೆ ಅವರು ‘see even at this age, I am fit and fine… ನನ್ನ ನೆನಪಿನ ಶಕ್ತಿಯೂ ಚೆನ್ನಾಗಿದೆ’ ಎಂದು ಸೆಲ್ಫ್ ಬೂಸ್ಟ್ ಮಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿ ಕೇಳಿ ಅವರ ಪಕ್ಕದಲ್ಲಿದ್ದ ಅಜ್ಜಿ, ಗೊತ್ತು ಸುಮ್ನಿರಿ. ಅದಕ್ಕೇ ಏನೋ ಮಹಾರಾಯ್ರು… ದಿನದಲ್ಲಿ ಒಂದು ಬಾರಿಯಾದ್ರೂ ‘ತಾವು ಯಾರು? ಎಂದು ನನ್ನನ್ನ ಕೇಳ್ತೀರಿ’ ಎಂದು ಗೇಲಿ ಮಾಡಿದಾಗ ನಮಗೊ ಅಚ್ಚರಿ!

-ಅರವಿಂದ ಜಿ. ಜೋಷಿ

***

ಹಿಡೀರಿ…

ದಾರಿಯಲ್ಲಿ ಒಬ್ಬ ಮಹಿಳೆ 'ಹಿಡೀರಿ... ಹಿಡೀರಿ...' ಎಂದು ಕೂಗುತ್ತಾ ಒಬ್ಬನ ಹಿಂದೆ ಓಡುತ್ತಿದ್ದಳು. ಇದನ್ನು ಗಮನಿಸಿದ ಪೊಲೀಸ್ ಪೇದೆ ಓಡಿ ಹೋಗಿ ಆತನನ್ನು ಹಿಡಿದು ನಾಲ್ಕು ಬಾರಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಮಹಿಳೆ 'ಸಾರ್ ಹೊಡಿಬೇಡಿ... ಅವರನ್ನು ಬಿಟ್ಟು ಬಿಡಿ.... ಎಂದಳು. ನೀನೇ ಅಲ್ಲವೇನಮ್ಮ?' ಎಂದ ಪೊಲೀಸ್. 'ಸರ್ ಅವರು ನನ್ನ ಗಂಡ, ಮುಂದೆ ಬಸ್ ನಿಂತಿದೆ ಓಡಿ ಹೋಗಿ ಸೀಟು ಹಿಡಿರಿ ಅಂತ ಅವರನ್ನ ಮುಂದೆ ಓಡಿಸಿ ನಾನು ಹಿಂದೆ ಓಡ್ತಾ ಇದ್ದೀನಿ’ ಎಂದಾಗ ಪೋಲೀಸ್ ಸುಸ್ತೋ ಸುಸ್ತು !

-ಶಂಕರೇಗೌಡ ತುಂಬಕೆರೆ

***

(ಮಾರ್ಚ್ ೨೦೨೪ರ ‘ಮಯೂರ’ ದಿಂದ ಸಂಗ್ರಹಿತ)