ಏನು ಹೇಳಿದ್ದಾರೆ?

ರಾತ್ರಿ ಹೊತ್ತು ಕುಡುಕನೊಬ್ಬ ತೂರಾಡುತ್ತ ರಸ್ತೆ ಮೇಲೆ ಹೋಗುತ್ತಿದ್ದ. ಎದುರಿಗೆ ಪೊಲೀಸನೊಬ್ಬ 'ಏನಯ್ಯಾ? ರಾತ್ರಿ ಇಷ್ಟು ಹೊತ್ತಿನಲ್ಲಿ ಸಿಕ್ಕಾಪಟ್ಟಿ ಕುಡಿದು ತೂರಾಡುತ್ತ ಹೋಗ್ತಾ ಇದ್ದೀಯಲ್ಲ... ಗಾಂಧೀಜಿ ಏನು ಹೇಳಿದ್ದಾರೆ ಗೊತ್ತಾ?' ಎಂದು ಕೇಳಿದ. ಕುಡುಕ 'ಏನು ಹೇಳಿದ್ದಾರೆ?' ಎಂದು ಕೇಳಿದ. ಪೊಲೀಸ್ 'ಕುಡಿತ ಮನುಷ್ಯನ ಮಹಾವೈರಿ ಅಂತ ಹೇಳಿದಾರೆ' ಎಂದ. ಕುಡುಕ 'ಅದೇ ಗಾಂಧೀಜಿ ಏನು ಹೇಳಿದ್ದಾರೆ ಗೊತ್ತಾ?' ಎಂದು ಕೇಳಿದ. ಪೊಲೀಸ್ ಕುತೂಹಲದಿಂದ 'ಏನು ಹೇಳಿದ್ದಾರೆ?' ಎಂದು ಪ್ರಶ್ನಿಸಿದ ಕುಡುಕ, 'ವೈರಿಗಳನ್ನು ಪ್ರೀತಿಸು ಎಂದು ಹೇಳಿದ್ದಾರೆ' ಎಂದ.

-ಎಂ.ಕೆ. ಮಂಜುನಾಥ್

***

ಓಲೆಯ ಚಿಂತೆ

ಶಾಲೆಯಲ್ಲಿ ಪೋಷಕರ ಸಭೆ ಇತ್ತು. ಪ್ರತಿಯೊಬ್ಬ ಪೋಷಕರ ದೂರುಗಳನ್ನು ಕೇಳಿ ಹೆಡ್ ಮಿಸ್ ತಲೆ ಗರಂ ಆಗಿತ್ತು. ಕೆಲವರು ಫೀ ಕಟ್ಟದೇ ಇದ್ದರೂ, 'ಇಲ್ಲ. ರೀ. ನಮ್ಮನೆಯವರು ಫೀಸು ಕಟ್ಟಿದ್ದಾರೆ' ಎಂದು ಹೆಡ್‌ ಮಿಸ್ ತಲೆ ತಿನ್ನುತ್ತಿದ್ದರು. ಆಗ ಅಂತವರಿಗೆಲ್ಲಾ ತರಾತುರಿಯಲ್ಲಿ ಸಾಕ್ಷಿ ತೆರೆದು ತೋರಿಸಬೇಕಿತ್ತು. ಮಧ್ಯಾಹ್ನ ಹೆಡ್‌ ಮಿಸ್ ವಾಶ್‌ ರೂಮಿಗೆ ಹೋಗಿ ತಮ್ಮ ಕ್ಯಾಬಿನ್‌ ಗೆ ಹೋಗುವಾಗ ಎರಡು ಹೆಜ್ಜೆ ಮುಂದೆ ಹೋದವರು ಮತ್ತೆ ಹಿಂದೆ ಬಂದು ನನ್ನತ್ತ ತಿರುಗಿ, 'ಸ್ವಲ್ಪ ಒಳಗೆ ಬರಿ' ಅಂದರು. 'ಅಯ್ಯೋ ಮತ್ತೇನೊ ತಾಪತ್ರಯ ಕಾದಿದೆ' ಅಂದುಕೊಂಡು ಒಳಗೆ ಹೋದೆ. 'ಝುಮುಕಿ ಹೊಸದಾ? ಎಷ್ಟಾಯ್ತು?' ಅಂದರು. ನಿರಾಳತೆಯ ನಡುವೆಯೇ, '11 ಗ್ರಾಮ್ ಇದೆ ಮೇಡಂ, 76 ಸಾವಿರ ಅಯ್ತು' ಅಂದೆ. 'ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಬೇರೆ ಚಿಂತೆ' ಅನ್ನೂ ಹಾಗೆ ನಮಗೆ ಓಲೆಯ ಚಿಂತೆ... ಇಬ್ಬರೂ ನಕ್ಕೆವು.

-ಸುವರ್ಣಾ ಮಠ

***

ಮಾರ್ಕ್ಸ್ ಕಾರ್ಡ್

ಕೆಲಸದಿಂದ ಸುಸ್ತಾಗಿ ಮನೆಗೆ ಬಂದ ಪರಮೇಶಿ. ಕುರ್ಚಿ ಮೇಲೆ ಕುಳಿತು, 'ನೀರು ಕೊಡೆ' ಅಂದ. ಪತ್ನಿ ಅವನಿಗೆ ನೀರು ಕೊಟ್ಟು ಕಾಫಿ ಮಾಡಲು ಒಳಗೆ ಹೋದಳು. ಅಷ್ಟರಲ್ಲಿ ಟೀಪಾಯ್ ಮೇಲೆ ಇಟ್ಟಿದ್ದ ಮಾರ್ಕ್ಸ್ ಕಾರ್ಡ್ ಕಣ್ಣಿಗೆ ಬಿತ್ತು. ಪರಮೇಶಿ. ಕೆಂಡಾಮಂಡಲವಾದ, 'ನಾಚಿಕೆ ಆಗಲ್ವೇನೊ ನಿನಗೆ? ನಿನ್ನಂತವನು ನನ್ನ ಹೊಟ್ಟೇಲಿ ಹುಟ್ಟಿದ್ದಕ್ಕೆ ಅಸಹ್ಯ ಆಗ್ತಿದೆ ನಂಗೆ...' ಎಂದ ಕೂಗಾಡಿದ ಒಳಗಿದ್ದ ಪತ್ನಿ, 'ರೀ... ಸ್ವಲ್ಪ ಕೇಳಿ ಇಲ್ಲಿ' ಎಂದಾಗ, 'ಎಲ್ಲಾ ನೀ ಮುದ್ದು ಮಾಡಿದ್ದರ ಫಲ... ಸುಮ್ಮಿರು ನೀನು' ಎನ್ನುತ್ತ ಮಗನ ಕಡೆ ತಿರುಗಿ, 'ನೂರಕ್ಕೆ ನಾಲಕ್ಕು, ಐದು ಮಾರ್ಕ್ಸ್ ತಗೊಂಡಿದ್ದೀಯಲ್ಲ? ಬಡವ ರಾಸ್ಕಲ್...' ಮತ್ತೂ ರೇಗಿದ. ಪುನಃ ಪತ್ನಿ, 'ರೀ.. 'ಇಲ್ಲಿ ಸ್ವಲ್ಪ ಕೇಳಿ' ಎಂದಳು. 'ನೀ ಸ್ವಲ್ಪ ಬಾಯಿ ಮುಚ್ಚಿಕೊಂಡು ಇರ್ತಿಯಾ? ಇವನಿಗೆ ನಾವು ಕೊಡೊ ಸವಲತ್ತು ಜಾಸ್ತಿ ಆಗಿದೆ... ಅದಕ್ಕೇ ಹೀಗೆ ಸಾಧನೆ ಮಾಡ್ತಾ ಇದ್ದಾನೆ...' ಎಂದಿದ್ದೇ ತಡ ಆತನ ಪತ್ನಿ ಹೊರಗೆ ಬಂದು, 'ರೀ, ಬೆಳಿಗ್ಗೆ ನಿಮ್ಮ ಆಲ್ಮೇರಾ ಕ್ಲೀನ್ ಮಾಡುವಾಗ ಸಿಕ್ತು, ಅದು ನಿಮ್ದೇ ಕಣ್ರೀ ಮಾರ್ಕ್ಸ್ ಕಾರ್ಡು' ಎಂದಳು.

-ಅರವಿಂದ ಜಿ. ಜೋಷಿ

***

ಆರೋಗ್ಯದ ಗುಟ್ಟು

ಅಂದು ರಮೇಶನ ಮನೆಯಲ್ಲಿ ಮಡದಿಯಿಂದ ಪ್ರವಚನ ಸಾಗಿತ್ತು.  ‘ರೀ ನೀವು ದಿನಾ ಹೀಗೆ ಕುಡಿದು ಬಂದ್ರೆ ನಿಮ್ಮ ಆರೋಗ್ಯ ಏನಾಗಬೇಡ? ಎಷ್ಟು ಹೇಳಿದ್ರೂ ಸಂಜೆಯಷ್ಟೊತ್ತಿಗೆ ಎಲ್ಲಾ ಮರೆತು ಹೋಗುತ್ತೆ ಅಲ್ವಾ? ಏನಾದ್ರೂ ಹೆಚ್ಚು  ಕಡಿಮೆ ಆದ್ರೆ ಯಾರು ಬರ್ತಾರೆ ನಮ್ಮ ಸಹಾಯಕ್ಕೆ?' ಅಂತೆಲ್ಲಾ ಅವಳು ಭಾಷಣ ಮಾಡುವಾಗ ಆತನ ಸ್ನೇಹಿತ ನಾಣಿ ಬಂದ. ಆತ ಬಹಳವೇ ಸಪೂರವಾಗಿ ಹೋಗಿದ್ದ. 'ಏನೊ ನಾಣಿ? ಹೀಗಾಗಿದ್ದೀಯ? ಯಾಕೆ? ಹುಷಾರಿಲ್ವೇನೊ?' ಎಂದು ಈತ ವಿಚಾರಿಸಹತ್ತಿದ. ನಾಣಿ, 'ಹು ಕಣೋ, ಯಾಕೊ ಪದೇ ಪದೇ ಆರೋಗ್ಯ ಹದಗೆಡ್ತಾ ಇದೆ... ' ಎಂದು ಅವಲತ್ತುಕೊಂಡ. ರಮೇಶ, 'ನೀನು ಗುಂಡು ಹಾಕೋನೂ ಅಲ್ಲ. ಪಾಪ, ಟೀ-ಕಾಫಿ ಕುಡಿಯೋಕೇ ಹೆದರುತ್ತೀಯ.. ಎಂದಾಗ ನಾಣಿ, 'ಹೌದು ರಮೇಶ, ಅದಕ್ಕೇ ಆರೋಗ್ಯ ಹೀಗೆ ಅಂತ ಕಾಣುತ್ತೆ' ಎಂದಾಗ ರಮೇಶ ಖುಷಿಯಾಗಿ ಹೆಂಡತಿ ಕಡೆ ತಿರುಗಿ, 'ನೋಡೆ. ಕುಡೀದೇ ಇದ್ರೂ ಹೇಗಾಗಿದ್ದಾನೆ ನೋಡು' ಎಂದ.

-ಶಂಕರೇಗೌಡ ತುಂಬಕೆರೆ

***

ಕಲೆ: ಗಣೇಶ ಆಚಾರ್ಯ (ಎಪ್ರಿಲ್ ೨೦೨೪ ‘ಮಯೂರ’ ಸಂಗ್ರಹಿತ)