ಕರಾವಳಿ ಮಲೆನಾಡಿನ ಜನರನ್ನು ಬಿಟ್ಟರೆ ಉಳಿದೆಡೆ ಕಾಳಿನ ಸಾರಿಲ್ಲದೆ ಊಟವೇ ಅಪೂರ್ಣ. ಅವರೇ ಕಾಳು ಬಳಸಿ ಮಾಡಿದ ಪದಾರ್ಥ ಇದ್ದರೆ ಊಟ ಸಂಪನ್ನ. ಅವರೇ ಕಾಳು ಮಾರಾಟ ಮಾಡದ ತರಕಾರೀ ಅಂಗಡಿಗಳಿಲ್ಲ. ಎಷ್ಟು ಸಣ್ಣ ಹೊಲ ಹೊಂದಿದವರೂ ನಾಲ್ಕಾರು ಅವರೆ ಕಾಯಿ ಸಸಿ ನೆಟ್ಟು ತಮ್ಮ ಬಳಕೆಗಾಗುವಷ್ಟು ಉತ್ಪಾದನೆ ಮಾಡುತ್ತಾರೆ.
ಅವರೇ ಕಾಯಿ ನಮ್ಮ ದೇಶದಲ್ಲಷ್ಟೇ ಅಲ್ಲ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಅತ್ಯಧಿಕ ಪ್ರಮಾಣದಲ್ಲಿ ಬಳಸಲ್ಪಡುತ್ತದೆ. ಈ ತರಕಾರಿಗೆ ತಲತಲಾಂತರದ ಇತಿಹಾಸವಿದ್ದು, ಆರೋಗ್ಯ ರಕ್ಷಣೆ ಮತ್ತು ಬುದ್ಧಿ ಚುರುಕಿಗೆ ಈ ಕಾಳು ರಾಮಬಾಣ.
ಅವರೆ ಗಿಡದ ಎಲೆ, ಅವರೆ ಸಿಪ್ಪೆ, ಹೂವು,ಅದರ ಕಾಂಡ ಎಲ್ಲವೂ ಉಪಯೋಗವಾಗುವಂತದ್ದು. ಹೆಚ್ಚಾಗಿ ಅವರೆ ಕಾಳನ್ನು ಮನುಷ್ಯ ಪದಾರ್ಥ ಮಾಡಲು ಬಳಕೆ ಮಾಡುತ್ತಾನೆ. ಉಳಿದ ಭಾಗಗಳನ್ನು ಪಶುಗಳಿಗೆ ಮೇವಾಗಿ ಬಳಕೆ ಮಾಡುತ್ತಾರೆ.
ಅವರೆ ಕಾಳಿನಲ್ಲಿ ಇರುವ ಪ್ರೋಟೀನುಗಳು ತಲೆ ಸುತ್ತುವುದು ತಲೆ ನೋವನ್ನು ಕಡಿಮೆ ಮಾಡುವ ಗುಣ ಪಡೆದಿವೆ. ಅವರೆ ಎಲೆಯನ್ನು ಜಜ್ಜಿ ಅದರ ವಾಸನೆಯನ್ನು ಮೂಸುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಮಗುವಿನ ಜನನ ಪ್ರಕ್ರಿಯೆ ಸರಾಗವಾಗಿ ನಡೆಯಲು ಅವರೆ ಕಾಳಿನ ಕಷಾಯ, ಸಾರು ಉಪಕಾರಿ. ಅವರೆ ಹೂವಿನ ಕಷಾಯವನ್ನು ಕುಡಿಯುವುದರಿಂದಲೂ ಜನನ ಪ್ರಕ್ರಿಯೆ ಸರಾಗವಾಗುತ್ತದೆ.
ಮುಟ್ಟಿನ ತೊಂದರೆ ನಿವಾರಿಸುವಲ್ಲಿ ಅವರೆ ಕಾಳಿನ ಬಳಕೆ ಪರಿಣಾಮಕಾರಿ. ಅವರೆ ಹೂವನ್ನು ತಮ್ಮ ನಿತ್ಯ ಆಹಾರದೊದನೆ ಮಿಶ್ರಣ ಮಾಡಿ ಸೇವಿಸುವುದರಿಂದ ತಿಂಗಳ ಚಕ್ರ ಸರಿ ಹೊಂದುತ್ತದೆ. ಹೆಂಗಸರಿಗೆ ಸೊಂಟದ ಭಾಗಕ್ಕೆ ರಕ್ತ ಸಂಚಾರ ಜಾಸ್ತಿಯಾಗುವಂತೆ ಮಾಡಿ ಶಕ್ತಿ ಕೊಡುತ್ತದೆ. ಹೊಟ್ಟೆಯ ತೊಂದರೆ ಕಡಿಮೆ ಮಾಡಲು, ಭೇದಿ, ಹೊಟ್ತೆ ನೋವು, ಹೊಟ್ಟೆ ಉಬ್ಬರ, ಇರುವವರು ಅವರೆ ಕಾಳು ಬಳಸಿದರೆ ಒಳ್ಳೆಯದು. ಈ ಸಮಸ್ಯೆ ನಿವಾರಣೆಯಾಗುತ್ತದೆ.
ಹಾವು ಕಡಿದಾಗ ವಿಷ ಏರದಂತೆ ತಡೆಯಲು ಸಹ ಅವರೆ ಎಲೆಯನ್ನು ಜಜ್ಜಿ ವಿನೇಗರ್ ಜೊತೆ ಸೇರಿಸಿ ಪೇಸ್ಟ್ ಮಾಡಿ ಕಚ್ಚಿದ ಜಾಗಕ್ಕೆ ಕಟ್ಟುವುದರಿಂದ ವಿಷ ಏರುವುದು ತಗ್ಗುತ್ತದೆ.
ತರಕಾರಿಯಾಗಿ ಅವರೆಯ ಎಳೆ ಸಿಪ್ಪೆಯನ್ನು ಚೆನ್ನಾಗಿ ತುಂಡು ಮಾಡಿ ಪಲ್ಯ ಮಾಡಬಹುದು. ಅವರೆ ಕಾಳು ಅತ್ಯಧಿಕ ಪ್ರೋಟೀನು ಕಬ್ಬಿಣಾಂಶ, ಮೆಗ್ನೀಶಿಯಂ, ಪಾಸ್ಪರಸ್ ಸತು, ಮತ್ತುಉ ಹೇರಳವಾದ ವಿಟಮಿನ್ ಬಿ ಒಳಗೊಂಡಿರುತ್ತದೆ.
ಅವರೆಯಲ್ಲಿ ಸಹಜವಾಗಿ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ. ಹೃದಯ ತೊಂದರೆ ಉಳ್ಳವರು ಅವರೇ ಕಾಳನ್ನು ಆಗಾಗ ಬಳಕೆ ಮಾಡುತ್ತಿರಬೇಕು.
ಟಾನ್ಸಿಲ್ ಊತ ಅಥವಾ ಕಿವಿಯ ಊತ ತಡೆಯಲು ಸಹ ಅವರೆ ಸಿಪ್ಪೆಯ ರಸ ತೆಗೆದು ಉಪ್ಪು ಸೇರಿಸಿ ಬಳಸಬೇಕು. ಹಸುಗಳ ಕಣ್ಣು ಮತ್ತು ಶ್ವಾಸ ಕೋಶ ತೊಂದರೆ ನಿವಾರಣೆಗೆ ಅವುಗಳಿಗೆ ತಿನ್ನಲು ಅವರೆ ಸಸ್ಯವನ್ನು ಕೊಡುವುದು ಸಹಕಾರಿ. ಇದು ಒಳ್ಲೆಯ ಪ್ರೋಟೀನು ಒಳಗೊಂಡ ಕಾರಣ ಹಾಲು ಹೆಚ್ಚುತ್ತದೆ. ಆರೋಗ್ಯ ಉತ್ತಮವಾಗುತ್ತದೆ. ಆ ಹಾಲನ್ನು ಬಳಸುವವರಿಗೂ ಇದರ ಪ್ರಯೋಜನ ದೊರೆಯುತ್ತದೆ.
ದೇಹದಲ್ಲಿ ಗ್ಲೂಕೋಸ್ ಅಂಶ ಸಮತೋಲನಕ್ಕೆ ಸಹ ಅವರೆ ಫಲಕಾರಿ. ಅವರೇ ಕಾಲಿನಿಂದ ಮಾಡಿದ ಅಡುಗೆ ತಿಂದರೆ ಹೊಟ್ಟೆ ಬೇಗ ತುಂಬುತ್ತದೆ. ಬೇಗ ಹಸಿವೆ ಆಗುವುದಿಲ್ಲ. ಜೀರ್ಣ ಆಗುತ್ತದೆ. ಆ ಕಾರನದಿಂದ ರಕ್ತಕ್ಕೆ ಗ್ಲೂಕೋಸ್ ಅಂಶ ನಿಧಾನವಾಗಿ ಬಿಡುಗಡೆಯಾಗುತ್ತದೆ. ಸಕ್ಕರೆ ಮಟ್ಟ ಕಾಪಾಡಿಕೊಳ್ಳಲು ಸಹಕಾರಿ. ಹೆಂಡದ ಅಟ ಇಳಿಸಲಿಕ್ಕೂ ಸಹ ಅವರೇ ಕಾಳಿನ ಕಷಾಯ ಸೇವನೆ ಫಲಕಾರಿಯಂತೆ.
ಅವರೆ ಎಲೆ ಮತ್ತು ಹೂವನ್ನು ಜಜ್ಜಿ ಅಕ್ಕಿ ಹಿಟ್ಟು ಮತ್ತು ಅರಶಿನ ಜೊತೆ ಮಿಶ್ರಣ ಮಾಡಿ ಚರ್ಮ ರೋಗ ಇರುವ ಕಡೆ ಹಚ್ಚಿದರೆ ಶಮನ ಆಗುತ್ತದೆ. ಗುಪ್ತಾಂಗದ ಸೋಂಕು ನಿವಾರಣೆಗೆ: ಕೆರೆತ, ಉರಿ ಇರುವ ಗುಪ್ತಾಂಗದ ಸಮಸ್ಯೆಗೆ ಅವರೆ ಎಲೆಯ ಕಷಾಯ ತಯಾರಿಸಿ ಕೆರೆತ ಅಥವಾ ಉರಿ ಇರುವ ಭಾಗವನ್ನು ತೊಳೆಯಬೇಕು.
ಕುರು ಅಥವಾ ಗೆಡ್ಡೆ ನಿವಾರಣೆಗೆ ಅವರೇ ಎಲೆಯ ಕಷಾಯ ಉತ್ತಮ. ಎಲೆಯನ್ನು ಜಜ್ಜಿ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಕುರು ಅಥವಾ ಗಡ್ಡೆ ಇರುವ ಜಾಗಕ್ಕೆ ಹಚ್ಚಬೇಕು. ಉಪಾಹಾರದ ಜೊತೆಗೆ ಅವರೆಯನ್ನು ಬಳಸಿ ತಿಂದಾಗ ಹೊಟ್ಟೆ ಬೇಗ ತುಂಬುತ್ತದೆ. ತೂಕ ಕಡಿಮೆ ಮಾಡುತ್ತದೆ. ಅವರೆಯನ್ನು ಬೇಯಿಸಿ, ಹುರಿದು ವಿವಿಧ ಅಡುಗೆಯಲ್ಲಿ ಬಳಕೆ ಮಾಡುವ ಕ್ರಮ ನೂರಾರು ವರ್ಷಗಳಿಂದ ರೂಢಿಯಲ್ಲಿದ್ದು ಈ ಬೆಳೆಯ ಕುರಿತಂತೆ ಬಹಳಷ್ಟು ಸಂಶೋಧನೆಗಳೂ ಆಗಿವೆ. ಇದರಲ್ಲಿ ವರ್ಷವಿಡೀ ಬೆಳೆಯಬಹುದಾದ ತಳಿಗಳೆಂದರೆ ಎಚ್ ಎ -೩ ಮತ್ತು ಎಚ್ ಎ -೪. ಕೃಷಿಕರು ಈ ತಳಿಗಳನ್ನು ಬೆಳೆಸಿದರೆ ವರ್ಷವಿಡೀ ಫಸಲನ್ನು ಗಳಿಸಬಹುದು. (ಚಿತ್ರ ೨ ಮತ್ತು ೩)
ಮಾಹಿತಿ: ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!