ಮಾವಿನ ಮರ ಕಣ್ಣೀರಿಳಿಸುತ್ತಿದೆ, ಜೋರು ಮಳೆಯಲ್ಲಿ ಅದ್ಯಾರಿಗೂ ಕಾಣದೇ ಇರೋದೆ ವಿಪರ್ಯಾಸ. ಬೇರುಗಳನ್ನ ನೆಲದ ಮೂಲೆ ಮೂಲೆಗೆ ಕಳುಹಿಸಿ ಒಳ್ಳೆಯ ಪೌಷ್ಟಿಕಾಂಶ ಪಡೆದು ಇಷ್ಟು ಸಮಯಕ್ಕಿಂತ ಹೆಚ್ವು ಮಾವಿನ ಹಣ್ಣುಗಳನ್ನ ಬಿಟ್ಟಿತ್ತು. ಎತ್ತರಕ್ಕೇರಿ ಕಷ್ಟ ಪಡಬಾರದೆಂದು ಹಣ್ಣಾದೊಡನೆ ಎಲ್ಲವನ್ನ. ನೆಲಕ್ಕೆ ಉದುರಿಸಿ ಆರಿಸಲು ಸಹಾಯ ಮಾಡಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಹಣ್ಣಾರಿಸಲು ಓಡಿ ಬರುತ್ತಿದ್ದ ಪುಟ್ಟ ಕಾಲುಗಳು ಊರು ಬಿಟ್ಟಿವೆ, ದೊಡ್ಡವರಿಗೆ ಪುರುಸೊತ್ತಿಲ್ಲ, ಅಲ್ಲದೇ ಮಾವಿನ ಕಾಯಿಯ ಮೇಲಿನ‌ ಆಸಕ್ತಿ ಕಡಿಮೆ ಆಗಿದೆ. ಹಾಗಾಗಿ ಎಲ್ಲ ಹಣ್ಣುಗಳು ಕೊಳೆತು ಮಣ್ಣು ಸೇರುತ್ತಿವೆ.  ಎಲ್ಲರ ಹೊಟ್ಟೆ ತುಂಬಿಸುವ ಆಸೆ ಮಣ್ಣು ಪಾಲಾಗಿದೆ ಹಾಗಾಗಿ ಮರ ಅಳುತ್ತಿದೆ. 

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ