ಯಾರು ಇಷ್ಟರವರೆಗೆ ಓದದ ಅವಳ ದೈನಂದಿನ ಡೈರಿಯೊಂದು ನನ್ನ ಕೈಗೆ ಸಿಕ್ಕಿಬಿಟ್ಟಿತ್ತು. ಓದಬಾರದೆಂದುಕೊಂಡರೂ ಕೂಡ ಏನಿರಬಹುದೆನ್ನುವ ಕುತೂಹಲದಲ್ಲಿ ಪುಟ ತಿರುಗಿಸಿದೆ. ದೈನಂದಿನ ಜೀವನದ ಕಥೆಗಳು ಬದುಕಿನ ವ್ಯಥೆಗಳು ನೋವು ನಲಿವುಗಳು ಸರಿ ತಪ್ಪುಗಳನ್ನ ದಾಟಿಕೊಂಡು ಮನಸಿಗೊಪ್ಪುವ ಸಾಲುಗಳು ಕಣ್ಣಿಗೆ ಕಂಡವು. "ನಾನು ಅವಳನ್ನ ತಿರುಗಿ ನೋಡಬೇಕಿತ್ತು, ಪ್ರತಿದಿನದ ಹಾಗೆ ಬೆಳಗ್ಗೆ ಎದ್ದು ಮನೆಯ ಕೆಲಸ ಮುಗಿಸಿ ಆಫೀಸ್ ಕೆಲಸಕ್ಕೆ ಹೊರಟು ಅಲ್ಲಿ ಸಂಜೆಯವರೆಗೆ ಬೆನ್ನು ಬಗ್ಗಿಸಿ ದುಡಿದು ಮನಸ್ಸಿಗೂ ದೇಹಕ್ಕೂ ಸುಸ್ತು ಮಾಡಿಕೊಂಡು ಮತ್ತೆ ಮನೆಯ ಕಡೆಗೆ ಧಾವಿಸಿ ಮನೆಯವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಾ ಸುಸ್ತಾಗಿ ಮಂಚದ ಮೇಲೆ ಬಿದ್ದಾಗ ನಿದ್ದೆಗೆ ಜಾರಿ ಮತ್ತೆ ಮರುದಿನ ಬೆಳಗ್ಗೆ ಅದೇ ದಿನಚರಿಯನ್ನ ಮುಂದುವರಿಸುವ ಅವಳು ಒಮ್ಮೆ ತಿರುಗಿ ನೋಡಬೇಕಿತ್ತು. ಅವಳೊಳಗೆ ಪುಟ್ಟ ಆಸೆಗಳು ಕನಸುಗಳು ಹೊಸ ಸಾಧ್ಯತೆಗಳನ್ನು ತಟ್ಟಿ ಎಬ್ಬಿಸಬೇಕಿತ್ತು, ಅವಳೊಂದಿಗೆ ಅವಳು ಕುಳಿತು ಮಾತನಾಡಬೇಕಿತ್ತು. ಅವಳು ಅವಳೊಂದಿಗೆ ಮನಸಿಟ್ಟು ಮಾತನಾಡಿದ್ದರೆ ಅವಳ ಬದುಕು ಅದ್ಭುತವಾಗುತ್ತಿತ್ತು. ಅವಳೊಂದಿಗೆ ಅವಳು ಮಾತನಾಡುವ ಅದ್ಭುತ ಕ್ಷಣಗಳನ್ನು ಕಳೆದುಕೊಂಡಿದ್ದಳು. ಪತ್ರ ಮುಗಿದಿತ್ತು ನಾನಾದರೂ ನನ್ನೊಂದಿಗೆ ಮಾತನಾಡುವ ಅಗತ್ಯ ಆ ಸಾಲುಗಳೇ ನನಗೆ ತಿಳಿಸಿ ಹೊರಟಿತ್ತು. ನನಗರ್ಥವಾದದ್ದನ್ನ ನಿಮಗೆ ದಾಟಿಸಿದ್ದೇನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!