ಮಗಳ ಓದುವಿಕೆಗೆ ಹಣ ಹೊಂದಿಸುವುದಕ್ಕೆ ಆಗ್ತಾ ಇಲ್ಲ ಅನ್ನುವ ನೋವು ಅಮ್ಮನನ್ನ ಕಾಡ್ತಾ ಇದೆ. ಅಲ್ಲಿ ಇರುವವರಲ್ಲಿ ಕೇಳಿಕೊಂಡರೂ ಕೂಡ ಅಂತಹ ಬದಲಾವಣೆಯೇನೂ ಆಗಲೇ ಇಲ್ಲ. ಆದರೂ ಮಗಳ ಆಸೆಯನ್ನು ಕಟ್ಟಿ ಹಾಕಬಾರದು ಅನ್ನುವ ಉದ್ದೇಶವನ್ನಿಟ್ಟುಕೊಂಡು ಹೊಟ್ಟೆಗಟ್ಟಿ ಮಾಡಿದ್ರು, ದುಡಿಮೆಯ ಸಮಯ ಹೆಚ್ಚಿಸಿದರು ಹೀಗೆ ಸಾಲದ ಹೊರೆಯನ್ನ ಇನ್ನೂ ಹೆಗಲ ಮೇಲೆ ಹೊತ್ತುಕೊಂಡರು, ನಾಲಗೆ ಕಟ್ಟಿಹಾಕಿದರು. ಹೀಗೆ ಮಗಳ ಆಸೆಗಾಗಿ ಒಂದಷ್ಟು ತ್ಯಾಗಗಳಿಗೆ ಸಿದ್ದರಾದರು. ಮಗಳಿಗೆ ಅರ್ಥವಾಗುತ್ತಿಲ್ಲ ಅಮ್ಮನಿಗೆ ಆಗಾಗ ಹಸಿವೆಯಾಗುವುದಿಲ್ಲ ಸಿಕ್ಕಿದ್ದನ್ನು ತಿಂದಾಗ ಹೊಟ್ಟೆ ತುಂಬಿತು ಅಂತಾರೆ, ಮಲಗುವಾಗ ರಾತ್ರಿ ಒಂದಾದರೂ ಬೆಳಗ್ಗೆ 4:30ಗೆ ಏಳುತ್ತಾರೆ. ಒಂದು ಸಣ್ಣ ಕೆಲಸ ಹೇಳುವಾಗ ಮಾಡಕ್ಕಾಗದಿರೋ ನಾವು ಒಂದು ಕಡೆಯಾದರೆ ಹೇಳಿದ ಯಾವುದೇ ಕೆಲಸವನ್ನು ಒಂದು ಕ್ಷಣವೂ ನಿಲ್ಲದೆ ಮಾಡುವ ಅಮ್ಮ ಇನ್ನೊಂದು ಕಡೆ, ಹೀಗೆ ಅಮ್ಮನಿಗೆ ಸುಸ್ತಾಗುವುದಿಲ್ಲ, ಮೈ ಕೈ ನೋವು ಬರೋದಿಲ್ಲ ಹುಷಾರು ತಪ್ಪೋದಿಲ್ಲ. ಇಷ್ಟೆಲ್ಲ ಸಾಧ್ಯತೆಗಳು ಅಮ್ಮನಿಗೆ ಸಿದ್ದಿಸಿರುವ ವರ‌, ಅದು ಹೇಗೆ  ಅನ್ನೋದು ಮಗಳಿಗೆ ಕೊನೆಯವರೆಗೆ ಅರ್ಥವಾಗಲೇ ಇಲ್ಲ ಅಥವಾ ಮಗಳೇ ತಾಯಿಯಾಗುವಾಗ ತಾಯಿಯ ಬದುಕು ಅರ್ಥವಾಗಬಹುದೇನೋ?

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ