ನಂದಿನಿಗೂ ರಾಜೇಶನಿಗೂ ಮದುವೆ ನಿಶ್ಚಯವಾಗಿತ್ತು. ಮುಂದಿನ ಶನಿವಾರ ಮದುವೆ. ಜೊತೆಗಾರರ ಬಳಗವೇನೂ ತುಂಬಾ ದೊಡ್ಡದಿಲ್ಲ. ಇಬ್ಬರು ಅನಾಥರಾದ ಕಾರಣ ಅವರವರ ಬದುಕನ್ನ ಕಟ್ಟಿಕೊಂಡಿದ್ದಾರೆ. ಜೊತೆ ನಿಂತ ಗೆಳೆಯರು ಪಕ್ಕದ ಮನೆಯ ಶಾಸ್ತ್ರಿಗಳು ಜೊತೆಗಿದ್ದಾರೆ. ಮದುವೆಗೆ ಎರಡು ದಿನ ಹಿಂದೆ ನಂದಿನಿಯ ಅತ್ಯಾಚಾರವಾಯಿತು. ಮಾಡಿದವರು ಊರು ಬಿಟ್ಟಿದ್ದಾರೆ. ಯಾರು ಅನ್ನೋದು ಆಕೆಗೆ ತಿಳಿಯಲೇ ಇಲ್ಲ. ಆಕೆ ಬದುಕು ಮುಗಿದು ಹೋಯಿತು ಅನ್ನುವ ನೋವಿನಲ್ಲಿದ್ದಾಗ ರಾಜೇಶ ಅವಳ ಪಕ್ಕದಲ್ಲಿ ಕುಳಿತು "ಅಡುಗೆ ಮಾಡುವಾಗ ಬಟ್ಟೆ ಕೊಳೆಯಾಗುತ್ತದೆ ಎನ್ನುವ ಕಾರಣಕ್ಕೆ ಮೇಲೊಂದು ವಸ್ತ್ರ ಕಟ್ಟಿಕೊಳ್ಳುತ್ತೇವೆ. ಎರಡನ್ನೂ ತೊಳೆಯಲೇ ಬೇಕು .ಹಾಗೆ ಇದು ನಿನಗರಿವಿಲ್ಲದೆ ಆಗಿ ಹೋದದ್ದು, ತೊಳೆದು ಶುಭ್ರವಾದರೆ ಸಾಕು. ನಿನ್ನನ್ನು ನಾನು ಒಪ್ಪಿಕೊಂಡಿದ್ದೇನೆ. ನೀನು ನನ್ನವಳು. ಅವಳ ಆಲೋಚನೆಗಳೆಲ್ಲವೂ ಹಾಗೇ ಬದಿಗೆ ಸರಿದು ಕಣ್ಣೀರು ಸೇರಿ ಬದುಕನ್ನ ಅಪ್ಪಿಕೊಂಡಳು. ಮದುವೆಯೂ ನಡೆಯಿತು. ಬದುಕು ಚೆನ್ನಾಗಿತ್ತು. ಇವರ ಮನೆಯ ಹಿಂದೆ ಬೆಳೆದ ಎರಡು ಪಪ್ಪಾಯಿ ಗಿಡಗಳ ಕೆಳಗಡೆ ಅತ್ಯಾಚಾರಿಗಳ ಹೆಣ ಹೂತು ಹಾಕಿದ್ದು ರಾಜೇಶನಿಗೆ ಬಿಟ್ಟು ಬೇರೆ ಯಾರಿಗೂ ತಿಳಿಯಲೇ ಇಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ