ಆ ಊರಿನಲ್ಲಿ ಒಂದು ಬಸ್ ನಿಲ್ದಾಣ ಒಂದಷ್ಟು ವರ್ಷಗಳ ಹಿಂದೆ ಊರಿನ ಪ್ರತಿಯೊಬ್ಬರು ಅಲ್ಲಿ ನಿಂತು ತಮ್ಮ ಬದುಕಿನ ದಾರಿಗಳನ್ನ ಪ್ರತಿದಿನವೂ ನೋಡಿಕೊಳ್ಳುವವರು. ಕಷ್ಟ ಸುಖ ನೋವು ನಲಿವು ಮೋಸ ಎಲ್ಲವೂ ಒಳಗಿನ ಮಾತು ಕಥೆಯಿಂದ ಶುರುವಾಗಿ ಬೆಳೆದು ನಿಲ್ಲುತ್ತಿತ್ತು. ಪ್ರತಿಯೊಬ್ಬರ ಬದುಕನ್ನ ನೋಡಿದ ಖುಷಿ ಆ ಬಸ್ ಸ್ಟ್ಯಾಂಡಿಗೆ ಸಿಕ್ತಾ ಇತ್ತು. ದಿನಗಳು ಕಳೆದ ಹಾಗೆ ಆ ನಿಲ್ದಾಣದೊಳಕ್ಕೆ ಪಯಣಿಸುವ ಕಾಲುಗಳು ಮನಸ್ಸುಗಳು ಕಡಿಮೆಯಾಗುತ್ತಾ ಹೋದವು. ಪ್ರೀತಿಸುವ ಪುಟ್ಟ ಹೃದಯಗಳು ದೂರವಾಗುವುದಕ್ಕೆ ಶುರುವಾದವು. ಮುಖ ಮುಖ ನೋಡಿ ಮಾತನಾಡುತ್ತಿದ್ದವರು ಕೈಯಲ್ಲೊಂದು ಮೊಬೈಲ್ ಬಂದ ಕಾರಣ ಎಲ್ಲರೂ ಮೌನಕ್ಕೆ ಜಾರಿಬಿಟ್ಟರು. ಈಗೀಗ ನಿಲ್ದಾಣದತ್ತ ಮುಖ ಮಾಡುವವರಿಲ್ಲದೆ ಧೂಳು ತುಂಬಿ, ಬಣ್ಣವಿಲ್ಲದೆ ಕಸಗಳು ತುಂಬಿಕೊಂಡು ಗಲೀಜಾಗಿ ಬಿಟ್ಟು ಯಾರು ಹತ್ತಿರ ಬರದಂತಾಗಿ ಬಿಟ್ಟಿದೆ. ಆ ಬಸ್ ನಿಲ್ದಾಣಕ್ಕೆ ತನ್ನನ್ನ ತಾನು ಕೊಡವಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವಚ್ಛ ಶುಭ್ರವಾಗಿ ಒಂದಷ್ಟು ಜನ ಹಾದು ಹೋಗಲೆಂದು ಆಸೆ ಆದರೆ ಅವರವರು ಅವರವರ ಗಾಡಿಯಲ್ಲಿ ತೆರಳುವ ಕಾರಣ ಊರಿಗೆ ಬಸ್ಸು ಬರುವುದು ನಿಂತುಬಿಟ್ಟಿದೆ ಬಸ್ ನಿಲ್ದಾಣ ಏಕಾಂಗಿಯಾಗಿದೆ. ಈಗಲೂ ಮತ್ತದೇ ದಿನಗಳು ಮರುಕಳಿಸಬಹುದೆಂದು ಕಾಯುತ್ತಿದೆ ಆದರೆ ಮತ್ತದೇ ದಿನಗಳು ಮರಳಿ ಬರುವ ದಿನಗಳು ಮರೀಚಿಕೆ ಅನ್ನಿಸುತ್ತಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ