ಮಳೆ ತುಂಬಾ ಜೋರಾಗಿತ್ತು. ಮಾನಸನಿಗೆ ಮನೆ ತಲುಪಬೇಕಿತ್ತು. ಇದ್ದ ಒಂದು ಸಣ್ಣ ಕೊಡೆಯಲ್ಲಿ ತನ್ನ ಮೈ ಅಕ್ಕಪಕ್ಕ ಒದ್ದೆ ಆಗ್ತಾಯಿದ್ರು ಬ್ಯಾಗನ್ನು ಗಟ್ಟಿ ಹಿಡಿದುಕೊಂಡು ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದಳು. ಬೀಡನಗುಡ್ಡೆ ದಾಟಿ ಚಿಟ್ಪಾಡಿ ತಲುಪುವಷ್ಟರಲ್ಲಿ ಮಳೆ ಅವಳನ್ನು ಒದ್ದೆಯಾಗಿಸುವುದಕ್ಕಂತಲೇ ಬಿರುಸನ್ನ ಹೆಚ್ಚು ಮಾಡ್ತಾ ಹೋಯ್ತು. ಆಗಲೇ ಹನುಮಾನ್ ಗ್ಯಾರೇಜ್ ಪಕ್ಕದಲ್ಲಿ ಪುಟ್ಟ ಕೂಗೊಂದು ಕೇಳಿ ಬಂತು. ಚರಂಡಿಯಲ್ಲಿ ಹರಿದು ಹೋಗುತ್ತಿದ್ದ ಕೆಂಪು ನೀರಿನಲ್ಲಿ ಪುಟ್ಟ ನಾಯಿಮರಿಯೊಂದು ಜೀವವನ್ನು ಉಳಿಸುವುದಕ್ಕೆ ಸುತ್ತ ನೋಡುತ್ತಾ ತೇಲುತ್ತಿತ್ತು. ಮೊದಲೇ ಪ್ರಾಣಿ ಎಂದರೆ ಜೀವ ಅನ್ನುತ್ತಿದ್ದ ಮಾನಸ ಪುಟ್ಟಮರಿಯನ್ನ ಎತ್ತಿಕೊಂಡು ಎದೆಗವುಚಿಕೊಂಡಳು. ನಾಯಿಮರಿಗೆ ಹೋದ ಜೀವ ಬಂದಂತಾಯಿತು. ಮಾನಸಳಿಗೆ ಆ ನಾಯಿಯನ್ನು ಏನು ಮಾಡುವುದು ತಿಳಿಯದೇ ಮನೆಗೆ ತಂದುಬಿಟ್ಟಳು. ಮನೆಯಲ್ಲಿ ಅಪ್ಪನಿಗೋ ನಾಯಿ ಮರಿಯನ್ನು ಕಂಡರಾಗದವರು ಸಾರ್ಥಕತೆಯ ಭಾವ ತೋರಿಸಿ ಮನೆ ಸದಸ್ಯನಾಗಿ ಸ್ವೀಕರಿಸುವುದಕ್ಕೆ ಅಪ್ಪನಿಗೆ ಮೊಬೈಲ್ ನಲ್ಲಿ ಮೆಸೇಜ್ ಹೋಯಿತು. ಅಪ್ಪನ ಸಿಟ್ಟಿನ ನಡುವೆಯೂ ಹಾಲು‌ ಕುಡಿದ ಕಾರಣ ಆ ದಿನದಿಂದ ನಾಯಿಮರಿ ಮನೆಯ ಸದಸ್ಯನಾಯಿತು. ವರ್ಷಗಳು ದಾಟಿ ಮಾನಸ ಉನ್ನತ ಶಿಕ್ಷಣಕ್ಕಾಗಿ ಊರು ಬಿಟ್ಟರೂ ನಾಯಿ ಮನೆಯವರನ್ನ ಬಿಡದೆ ಬೆಂಗಾವಲಾಗಿ ಜೊತೆ ನಿಂತಿತು. ಈಗಲೂ ಜೋರು ಮಳೆ ಬಂದಾಗ ನಾಯಿ ಮನೆ ಒಳಗೆ ಹೋಗಿ ಕಿಟಕಿಯಿಂದ ಮಳೆಯನ್ನೇ ನೋಡುತ್ತಾ ತನ್ನ ಬದುಕಿನ ಎಲ್ಲ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದೆ. ತನ್ನನ್ನು ಉಳಿಸಿದಕ್ಕೆ ಮನೆಯವರ ಮುಖವನ್ನು ನೋಡಿ ನಗುತ್ತಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ